ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಪದಚ್ಯುತಿ ನಿರ್ಣಯ ಚರ್ಚೆಗೆ ನಕಾರ

ಅಡ್ವೊಕೇಟ್‌ ಜನರಲ್‌ ಸಲಹೆ ಆಧರಿಸಿ ಕಾಗೋಡು ನಿರ್ಧಾರ
Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಳಗಾವಿ: ಲೋಕಾಯುಕ್ತ  ನ್ಯಾಯಮೂರ್ತಿ ವೈ.ಭಾಸ್ಕರರಾವ್‌ ಅವರ ಪದಚ್ಯುತಿಗೆ ಒತ್ತಾಯಿಸಿ ಪ್ರತಿಪಕ್ಷಗಳು ಮಂಡಿಸಿರುವ ನಿರ್ಣಯದ ಚರ್ಚೆಗೆ  ಯಾವುದೇ ಅವಕಾಶವಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಸೋಮವಾರ ಸದನದಲ್ಲಿ ಪ್ರಕಟಿಸಿದರು.

‘ಪ್ರತಿಪಕ್ಷಗಳು ಮಂಡಿಸಿರುವ ನಿರ್ಣಯಕ್ಕೆ ಅಗತ್ಯ ಸಂಖ್ಯೆಯ ಶಾಸಕರು ಸಹಿ ಮಾಡಿಲ್ಲ. ಹೀಗಾಗಿ ಅದನ್ನು ಚರ್ಚೆಗೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. ಆದರೆ, ಈ ವಿಷಯವನ್ನು ಬೇರೆ ರೂಪದಲ್ಲಿ ತಂದರೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.

ಸರ್ಕಾರದ ಕೆಲ ಅಧಿಕಾರಿಗಳನ್ನು ಲೋಕಾಯುಕ್ತರ ಮಗ ಅಶ್ವಿನ್ ರಾವ್ ಮತ್ತಿತರರು ಲೋಕಾಯುಕ್ತರ ಅಧಿಕೃತ ನಿವಾಸಕ್ಕೆ ಕರೆಸಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಬಯಲಿಗೆ ಬಂದ ನಂತರ ಲೋಕಾಯುಕ್ತರ ಪದಚ್ಯುತಿಗೆ ಅನುಮತಿ ಕೋರಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದ್ದರು. ಇದೇ ರೀತಿ ಪರಿಷತ್ ನಲ್ಲೂ ಸಭಾಪತಿಯವರಿಗೆ ಮನವಿ ಸಲ್ಲಿಸಲಾಗಿತ್ತು.

ಈ ಕುರಿತು ಕಾನೂನು ಅಭಿಪ್ರಾಯ ಪಡೆಯಲು ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಅವರನ್ನು ಸ್ಪೀಕರ್ ಇಲ್ಲಿಗೇ ಕರೆಸಿದ್ದರು. ಅವರ ಸಮ್ಮುಖದಲ್ಲೇ ವಿಧಾನಮಂಡಲದ ಉಭಯ ಸದನಗಳ ಜಂಟಿ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. ಎ.ಜಿ. ಅಭಿಮತ: 'ಈಗಿನ ಪರಿಸ್ಥಿತಿಯಲ್ಲಿ ಪದಚ್ಯುತಿ ನಿರ್ಣಯವನ್ನು ಚರ್ಚೆಗೆ ಅಂಗೀಕರಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ, ಬೇರೆ ರೂಪದಲ್ಲಿ ಚರ್ಚಿಸಲು ಯಾವುದೇ ಅಡ್ಡಿ ಇಲ್ಲ' ಎಂದು ರವಿವರ್ಮ ಕುಮಾರ್ ಅಭಿಪ್ರಾಯಪಟ್ಟರು ಎನ್ನಲಾಗಿದೆ.

ಏಕೆ ಆಗಲ್ಲ?: 'ನ್ಯಾಯಮೂರ್ತಿಗಳ ವಿಚಾರಣೆ ಕಾಯ್ದೆಯಲ್ಲಿ ನ್ಯಾಯಮೂರ್ತಿಗಳ ಪದಚ್ಯುತಿಗೆ ಸಂಸತ್ತಿನ ಕನಿಷ್ಠ 100 ಮತ್ತು ರಾಜ್ಯಸಭೆಯ 50 ಸದಸ್ಯರು ಸಹಿ ಮಾಡಿದ್ದ ಮನವಿ ಪತ್ರವನ್ನು ಆಯಾ ಸದನಗಳ ಅಧ್ಯಕ್ಷರಿಗೆ ಕೊಡಬೇಕು ಎಂದು ಹೇಳಲಾಗಿದೆ. ಇದನ್ನೇ ರಾಜ್ಯಕ್ಕೂ ಅನ್ವಯ ಮಾಡಿದರೆ ವಿಧಾನಸಭೆಯ ಕನಿಷ್ಠ 100 ಮತ್ತು ಪರಿಷತ್ತಿನ 50 ಸದಸ್ಯರು ಸಹಿ ಮಾಡಿ ಸಭಾಧ್ಯಕ್ಷರುಗಳಿಗೆ ಕೊಡಬೇಕಾಗುತ್ತದೆ.

ಆ ನಂತರ ಆರೋಪಗಳ ಕುರಿತು ವಿಚಾರಣೆಗೆ ಸಮಿತಿ ರಚಿಸುವಂತೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಬೇಕು. ಆದರೆ, ಈಗ ಪ್ರತಿಪಕ್ಷಗಳು ಕೊಟ್ಟಿರುವ ಮನವಿ ಪತ್ರದಲ್ಲಿ ವಿಧಾನಸಭೆಯ 57 ಮತ್ತು ವಿಧಾನ ಪರಿಷತ್ತಿನ 33 ಸದಸ್ಯರು ಮಾತ್ರ ಸಹಿ ಮಾಡಿದ್ದಾರೆ. ಹೀಗಾಗಿ ಈ ಮನವಿಯನ್ನು ಚರ್ಚೆಗೆ ಅಂಗೀಕರಿಸುವುದಕ್ಕೆ ಬರುವುದಿಲ್ಲ' ಎಂದು ರವಿವರ್ಮ ಕುಮಾರ್ ವಿವರಿಸಿದರು.

'ನ್ಯಾಯಮೂರ್ತಿಗಳ (ವಿಚಾರಣೆ) ಕಾಯ್ದೆ  ಪ್ರಕಾರವೇ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರನ್ನು ಪದಚ್ಯುತಿ ಮಾಡಬೇಕು ಎಂದು ಲೋಕಾಯುಕ್ತ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಈ ಒಂದು ಅಂಶದಿಂದಾಗಿ ಲೋಕಾಯುಕ್ತರ ಪದಚ್ಯುತಿ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ಇಲ್ಲದಂತಾಗಿದೆ' ಎಂಬುದನ್ನೂ ಅವರು ಸಭೆ ಗಮನಕ್ಕೆ ತಂದರು. ಲೋಕಾಯುಕ್ತರ ಪದಚ್ಯುತಿ ನಿರ್ಣಯದ ಮೇಲೆ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ನೀಡದೇ ಇರುವುದರಿಂದ ಬೇರೆ ರೂಪದಲ್ಲಿ ಆ ವಿಷಯವನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳು ತೀರ್ಮಾನಿ
ಸಿವೆ. ಆ ಮೂಲಕವೇ ಲೋಕಾಯುಕ್ತರ ರಾಜೀನಾಮೆಗೆ ಒತ್ತಡ ಹೇರುವ ಪ್ರಯತ್ನ ಮಾಡಲಿವೆ ಎಂದು ಮೂಲಗಳು ತಿಳಿಸಿವೆ.

ತಿದ್ದುಪಡಿಗೆ ಮನವಿ: ತಾಂತ್ರಿಕ ಕಾರಣಗ ಳಿಂದ ಲೋಕಾಯುಕ್ತರ ಪದಚ್ಯುತಿಗೆ ಅವಕಾಶ ಇಲ್ಲದಂತಾಗಿರುವ ಕಾರಣ, ಕಾಯ್ದೆಗೆ ತಿದ್ದುಪಡಿ ಮಾಡಬೇಕೆನ್ನುವ ಬೇಡಿಕೆ ಪ್ರತಿಪಕ್ಷಗಳಿಂದ ಬಂತು ಎನ್ನಲಾಗಿದೆ. ಇದನ್ನು ಸಮಗ್ರವಾಗಿ ಪರಿಶೀಲಿಸಲು ಜಂಟಿ ಸದನ ಸಮಿತಿ ರಚಿಸುವಂತೆಯೂ ಸಭಾಧ್ಯಕ್ಷರು ಸಲಹೆ ನೀಡಿದರು.ಲೋಕಾಯುಕ್ತರ ಪದಚ್ಯುತಿಯನ್ನು ನ್ಯಾಯಮೂರ್ತಿಗಳ ವಿಚಾರಣೆ ಕಾಯ್ದೆ ಪ್ರಕಾರ ಮಾಡಬೇಕು ಎನ್ನುವ ಅಂಶವನ್ನು ತೆಗೆದು, ಪರ್ಯಾಯ ಮಾರ್ಗ ಹುಡುಕುವ ಬಗ್ಗೆಯೂ ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ.

ಮಾಹಿತಿ ಕೇಳಿದ ರಾಜ್ಯಪಾಲ
ಬೆಂಗಳೂರು: ಲೋಕಾಯುಕ್ತರ ಪದಚ್ಯುತಿಗೆ ಬೇಡಿಕೆ  ಹೆಚ್ಚಾಗುತ್ತಿದ್ದಂತೆ, ಪ್ರಕರಣಕ್ಕೆ ಸಂಬಂಧಿಸಿ ಪೂರ್ಣ ಮಾಹಿತಿ ನೀಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ಸರ್ಕಾರ ದೃಢಪಡಿಸಿಲ್ಲ. ‘ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್‌  ಅವರ ಪದಚ್ಯುತಿ ವಿಚಾರ ರಾಜ್ಯಪಾಲರಿಗೆ ಬಿಟ್ಟದ್ದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಿಗ್ಗೆ ಹೇಳಿದ್ದರು.

ವಿಷಯ ಕೈಬಿಡುವುದಿಲ್ಲ: ಎಚ್ ಡಿಕೆ
ಬೆಳಗಾವಿ: 'ಲೋಕಾಯುಕ್ತ ಸಂಸ್ಥೆಯ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ನಾನು ಮತ್ತು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ವಿಧಾನಸಭೆಯಲ್ಲಿ ಮಂಗಳವಾರ ಪುನಃ ಪ್ರಸ್ತಾಪಿಸುತ್ತೇವೆ' ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಲೋಕಾಯುಕ್ತರ ಪದಚ್ಯುತಿಗೆ ಸಂಬಂಧಿಸಿದ ಕಾನೂನು ತಿದ್ದುಪಡಿಗೆ ಸದನ ಸಮಿತಿ ರಚಿಸುವಂತೆ ಸಭಾಧ್ಯಕ್ಷರನ್ನು ಕೋರಿದ್ದೇವೆ. ಇದಕ್ಕೆ ಸಭಾಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ' ಎಂದು ತಿಳಿಸಿದರು. ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಲ್ಲೇ ಭ್ರಷ್ಟಾಚಾರ ನಡೆದಿರುವ ಮಾತುಗಳು ಕೇಳಿಬಂದಿರುವಾಗ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT