ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ, ಪರಿಸರಕ್ಕೆ ಪೂರಕ ಯೋಜನೆ ಇರಲಿ

ಸಂವಾದ ಕಾರ್ಯಕ್ರಮದಲ್ಲಿ ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಅಭಿಪ್ರಾಯ
Last Updated 23 ನವೆಂಬರ್ 2015, 20:33 IST
ಅಕ್ಷರ ಗಾತ್ರ

ಬೆಂಗಳೂರು: ‘ರಸ್ತೆ ಸೇರಿದಂತೆ ಇತರ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಸರ್ಕಾರವು ವನ್ಯಜೀವಿ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪೂರಕ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದುವರೆಯಬೇಕು’ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಅಭಿಪ್ರಾಯಪಟ್ಟರು.

‘ವನ್ಯ’, ‘ಕಾನನ’, ‘ವನಜಾಗೃತಿ’ ಹಾಗೂ ‘ಐರಾಪ್ರೊ’ ಸಹಭಾಗಿತ್ವದಲ್ಲಿ ಸೋಮವಾರ ನಗರದಲ್ಲಿ ಆಯೋಜಿಸಿದ್ದ  ‘ರಸ್ತೆ ಸೌಕರ್ಯಗಳ ಪರಿಣಾಮ ಮತ್ತು ಅವಕಾಶ’ ಕುರಿತ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

‘ಅರಣ್ಯ ಪ್ರದೇಶದಲ್ಲಿ ರಸ್ತೆ ಸೇರಿದಂತೆ ಇತರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಪೂರ್ವದಲ್ಲಿ ವನ್ಯಜೀವಿ ತಜ್ಞರು, ಪರಿಸರವಾದಿಗಳು ಹಾಗೂ ಅದಕ್ಕೆ ಸಂಬಂಧಿಸಿದವರ ಜೊತೆ ಸಮಾಲೋಚಿಸಬೇಕು. ಇದರಿಂದ ಭವಿಷ್ಯದಲ್ಲಿ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಬಹುದು’ ಎಂದರು.

‘ಅರಣ್ಯದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಿದರೆ ವನ್ಯಜೀವಿಯ ಜೊತೆಗೇ ಅಲ್ಲಿರುವ ಜನ ಸಮುದಾಯಗಳ ಮೇಲೂ ಪರಿಣಾಮ ಬೀರುತ್ತದೆ. ಇದಕ್ಕೆ ಅಂಡಮಾನ್‌ ನಿಕೋಬಾರ್‌ ಉತ್ತಮ ನಿದರ್ಶನ. ಅರಣ್ಯದಲ್ಲಿ ರಸ್ತೆ ನಿರ್ಮಿಸಿರುವ ಕಾರಣ ಅಲ್ಲಿರುವ ಅಳಿವಿನಂಚಿನ ಕುಟುಂಬಗಳ ಮೇಲೂ ಪರಿಣಾಮ ಬಿದ್ದಿದೆ’ ಎಂದು ವಿವರಿಸಿದರು.

‘ಅಭಿವೃದ್ಧಿ ಹೆಸರಿನಲ್ಲಿ ಇಡೀ ಜಗತ್ತಿನಾದ್ಯಂತ ಅತ್ಯಂತ ವೇಗವಾಗಿ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. 2.5 ಕೋಟಿ ಕಿ.ಮೀ ಹೊಸ ರಸ್ತೆ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಹಲವು ಸಂಸ್ಥೆಗಳಿಂದ ಹಣಕಾಸಿನ ನೆರವು ಹರಿದು ಬರುತ್ತಿದೆ’ ಎಂದರು.

‘ಅಮೆರಿಕ, ಭಾರತ, ಚೀನಾ, ರಷ್ಯಾ ಸೇರಿದಂತೆ ಆರು ರಾಷ್ಟ್ರಗಳಲ್ಲಿ 6.4 ಕೋಟಿ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಭಾರತವೊಂದರಲ್ಲೆ 4.7 ಕೋಟಿ ಕಿ.ಮೀ  ರಸ್ತೆ ಇದೆ’ ಎಂದು ತಿಳಿಸಿದರು. ‘ವನ್ಯಜೀವಿ ಸಂರಕ್ಷಣೆಯ ನಿಟ್ಟಿನಲ್ಲಿ ಮೈಸೂರು–ಮಾನಂದವಾಡಿ (10 ಕಿ.ಮೀ) ಮತ್ತು ಮೈಸೂರು–ಗೋಣಿಕೊಪ್ಪ–ಕುಟ್ಟಾ (35 ಕಿ.ಮೀ) ನಡುವೆ ನಿರ್ಮಿಸಿರುವ ಪರ್ಯಾಯ ರಸ್ತೆಗಳು ಮಾದರಿಯಾಗಿವೆ. ಇವುಗಳನ್ನು ಕ್ರಮವಾಗಿ ₹18 ಮತ್ತು ₹70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ’ ಎಂದರು.

‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಣಿಗಳಿಗೆ ವಾಹನಗಳಿಂದ  ಅಪಾಯ ಇದೆ. 2008ರಿಂದ 2015ರ ವರೆಗೆ ಒಟ್ಟು 45 ಚಿರತೆಗಳು ಸಾವನ್ನಪ್ಪಿವೆ. ಬಂಡೀಪುರದಲ್ಲಿ ರಾತ್ರಿ ವಾಹನ  ಸಂಚಾರ ನಿಷೇಧಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಹೋರಾಟ ಮುಂದುವರೆದಿದೆ’ ಎಂದು ತಿಳಿಸಿದರು.

ವಕೀಲರಾದ ಅನು ಚೆಂಗಪ್ಪ ಮಾತನಾಡಿ, ‘ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ವಾದ ಮಾಡಲು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಸುದ್ದಿಗಳು ಬಹಳ ನೆರವಿಗೆ ಬಂದವು. ಹಾಗಾಗಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದು’ ಎಂದರು.

‘ವರದಿಗಾರರ ಮೇಲೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಸುದ್ದಿಯ ಆಳಕ್ಕೆ ಇಳಿದು, ಅದರ ವಸ್ತುನಿಷ್ಠತೆ ಪರಿಶೀಲಿಸಿ ವರದಿ ಮಾಡಬೇಕು’ ಎಂದು ಸಲಹೆ ಮಾಡಿದರು.

‘ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ವನ್ಯಜೀವಿಗಳು ಯಾವ ರೀತಿಯ ಸಮಸ್ಯೆ ಎದುರಿಸುತ್ತವೆ ಎನ್ನುವುದನ್ನು ನ್ಯಾಯಮೂರ್ತಿಗಳಿಗೆ ಮೊದಲ ಬಾರಿ ತಂತ್ರಜ್ಞಾನದಿಂದ ಮನವರಿಕೆ ಮಾಡಿಕೊಡಲಾಯಿತು. ಇದರಲ್ಲಿ ಸಂಜಯ್‌ ಗುಬ್ಬಿ ಮತ್ತು ಅವರ ತಂಡದ ಪಾತ್ರದ ಬಹಳ ದೊಡ್ಡದು’ ಎಂದರು.

‘ಪ್ರಜಾವಾಣಿ’ ಪತ್ರಿಕೆ ಸಂಪಾದಕರಾದ ಕೆ.ಎನ್‌. ಶಾಂತಕುಮಾರ್‌ ಮಾತನಾಡಿ, ‘ಮಾನವ ಮತ್ತು ಪ್ರಾಣಿ ಸಂಘರ್ಷದಲ್ಲಿ ಮನುಷ್ಯ ಸತ್ತರೆ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸುತ್ತವೆ. ಅದೇ ಪ್ರಾಣಿಗಳು ಸತ್ತರೆ ಅದನ್ನು ನಿರ್ಲಕ್ಷಿಸುತ್ತವೆ. ಈ ಮನಸ್ಥಿತಿ ಬದಲಾಗಬೇಕು’ ಎಂದು ಹೇಳಿದರು.

‘ಪ್ರಾಂತೀಯ ಟಿ.ವಿ ಚಾನೆಲ್‌ಗಳಿಗೆ ಟಿಆರ್‌ಪಿಯೇ ಎಲ್ಲಕ್ಕಿಂತ ಮುಖ್ಯವಾಗಿದೆ. ಹಾಗಾಗಿ ಅವುಗಳು ಟಿಆರ್‌ಪಿ ಆಧಾರಿತ ಟಿ.ವಿ ಪತ್ರಿಕೋದ್ಯಮ ಮಾಡುತ್ತಿವೆ. ವನ್ಯಜೀವಿ, ಪರಿಸರ ಸಂಬಂಧಿತ ಕಾರ್ಯಕ್ರಮ ಪ್ರಸಾರ ಮಾಡಿದರೆ ಟಿಆರ್‌ಪಿ ಬರುವುದಿಲ್ಲ ಎನ್ನುವ ಕಾರಣಕ್ಕಾಗಿ ಇಂತಹ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ’ ಎಂದು ಸಭಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್‌ ಮಾತನಾಡಿ, ‘ರಾಜ್ಯದಲ್ಲಿ ಮಾನವ–ಪ್ರಾಣಿ ಸಂಘರ್ಷ ಹೆಚ್ಚಿನ ಪ್ರಮಾಣದಲ್ಲಿ ಇದೆ. ಅದರಲ್ಲೂ ಆನೆ–ಮಾನವ ಸಂಘರ್ಷ ಹೆಚ್ಚು’ ಎಂದರು.

ಇದೇ ವೇಳೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಕ್ಕೆ ಸಂಬಂಧಿಸಿದ ‘ಫೈಂಡಿಂಗ್‌ ದಿ ಮಿಡ್ಲ್‌ ಪಾತ್‌’ ದೃಶ್ಯಚಿತ್ರ ಪ್ರದರ್ಶನ ಮಾಡಲಾಯಿತು. 7.5 ನಿಮಿಷದ ಈ ಚಿತ್ರವನ್ನು ರಾಮ್‌ ಅಲ್ಲೂರಿ ನಿರ್ಮಾಣ ಮಾಡಿದ್ದಾರೆ.
*
ವನ್ಯಜೀವಿ ಸಂರಕ್ಷಣೆ ವಿಷಯ ಟ್ವೆಂಟಿ20 ಪಂದ್ಯದಂತೆ ಅಲ್ಲ. ಅದು ಟೆಸ್ಟ್‌ ಪಂದ್ಯಕ್ಕಿಂತಲೂ ದೀರ್ಘವಾದುದು. ಇಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದುದು ಮುಖ್ಯ.
ಸಂಜಯ್‌ ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT