ಕೃ ಷಿ ಹೊರತುಪಡಿಸಿದರೆ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡಿರುವ ಕ್ಷೇತ್ರ ಸಿದ್ಧ ಉಡುಪು ಉದ್ಯಮ. ನೇರವಾಗಿ 3.50 ಕೋಟಿ ಜನರಿಗೆ ಉದ್ಯೋಗ ಒದಗಿಸಿದೆ. ದೇಶದ ಒಟ್ಟಾರೆ ರಫ್ತಿನಲ್ಲಿ ಈ ವಲಯದ ಪಾಲು ಶೇ 11ರಷ್ಟಿದೆ. ಅಲ್ಲದೇ ‘ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ’ಗೆ (ಜಿಡಿಪಿ) ಶೇ 4ರಷ್ಟು ಕೊಡುಗೆಯನ್ನೂ ನೀಡುತ್ತಿದೆ.
ಚಿಕ್ಕ ಚಿಕ್ಕ ಘಟಕಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ರಾಜ್ಯದಲ್ಲಿರುವ ಸಿದ್ಧ ಉಡುಪು ತಯಾರಿಕಾ ಘಟಕಗಳ ಸಂಖ್ಯೆ ನಾಲ್ಕು ಸಾವಿರ ದಾಟಬಹುದು. ಇದರಲ್ಲಿ 2500ಕ್ಕೂ ಹೆಚ್ಚು ಘಟಕಗಳು ಬೆಂಗಳೂರಿನಲ್ಲಿಯೇ ನೆಲೆಗೊಂಡಿದ್ದು, ಸುಮಾರು ಎಂಟು ಲಕ್ಷ ಜನರಿಗೆ ಉದ್ಯೋಗ ಒದಗಿಸಿದೆ. ವಾರ್ಷಿಕ ₨30 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತದ ಸಿದ್ಧ ಉಡುಪುಗಳು ರಾಜ್ಯದಿಂದ ಅಮೆರಿಕ, ಯುರೋಪ್ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತಾಗುತ್ತವೆ. ಈ ಉದ್ಯಮ ಸ್ಥಳೀಯ ಮಾರುಕಟ್ಟೆಗಿಂತ ರಫ್ತು ವಹಿವಾಟನ್ನೇ ಮುಖ್ಯವಾಗಿ ನೆಚ್ಚಿಕೊಂಡಿದೆ ಎನ್ನುತ್ತಾರೆ ಕರ್ನಾಟಕ ಹೊಸೈರಿ ಅಂಡ್ ಗಾರ್ಮೆಂಟ್ ಅಸೋಷಿಯೇಷನ್‌ನ ಮಾಜಿ ಅಧ್ಯಕ್ಷ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ಸ್ಥಳೀಯ ಸಂಘಟನೆ ಸಮಿತಿ ಸಹ ಅಧ್ಯಕ್ಷ ಪಿ.ಎಚ್.ರಾಜ್‌ಪುರೋಹಿತ್.
ಬ್ರಿಟಿಷರ ಕಾಲದಲ್ಲಿ ಭಾರತ ಪ್ರವೇಶಿಸಿದ ಸೂಟು ಈ ಮೊದಲು ಉನ್ನತ ಸ್ತರದ ಅಧಿಕಾರಿ ವರ್ಗದಲ್ಲಿ ಮಾತ್ರವೇ ಕಾಣ ಬರುತ್ತಿತ್ತು. ದಿನಕಳೆದಂತೆ ಕಾರ್ಪೊರೇಟ್ ಪ್ರಪಂಚದಲ್ಲಿ ಗಮನ ಸೆಳೆಯಲಾರಂಭಿಸಿತು. ನಂತರದಲ್ಲಿ ಕಂಪೆನಿಗಳ ಕಾರ್ಯನಿರ್ವಹಣೆ ಕ್ಷೇತ್ರದಲ್ಲಿ ಪುರುಷ, ಮಹಿಳೆ ಎಂಬ ಭೇದವಿಲ್ಲದೆ ಎಲ್ಲ ಅಧಿಕಾರಿಗಳ ದಿನನಿತ್ಯದ ಧಿರಿಸೇ ಆಗಿಬಿಟ್ಟಿತು. ಹೀಗೆ ಸೀಮಿತವಾದ ಬಳಕೆಯಲ್ಲಷ್ಟೆ ಇದ್ದ ‘ಸೂಟು’ ನಂತರದ ದಿನಗಳಲ್ಲಿ ಮಧ್ಯಮ ವರ್ಗದವರ ಬದುಕಿನಲ್ಲೂ ಪ್ರಮುಖ ಪಾತ್ರ ವಹಿಸಲಾರಂಭಿಸಿತು. ಆಧುನಿಕ ಜೀವನಶೈಲಿಯ ಭಾಗವಾಯಿತು.
ಸೂಟಿಗೆ ಹೆಚ್ಚಿದ ಬೇಡಿಕೆ
ಇತ್ತೀಚಿನ ದಿನಗಳಲ್ಲಿ ಮದುವೆ, ಜನ್ಮದಿನೋತ್ಸವ, ವಿಶೇಷ ಸಮಾರಂಭಗಳಲ್ಲಿ ಪುರುಷರ ವೇಷಭೂಷಣದಲ್ಲಿ ‘ಸೂಟು’ ಪ್ರಮುಖ ಪಾತ್ರ ವಹಿಸುತ್ತಿದೆ. ಮದುವೆ ಆರತಿ ಅಕ್ಷತೆ ವೇದಿಕೆಯಲ್ಲಿ ನಿಂತ ಮಧುಮಗನಷ್ಟೇ ಅಲ್ಲ, ಬಂದು ಬಳಗದವರಲ್ಲಿ, ಅತಿಥಿಗಳಲ್ಲಿ, ಸಮಾರಂಭದಲ್ಲಿ ನೆರೆದವರ ಮಧ್ಯೆಯೂ ಸೂಟುಧಾರಿಗಳು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿಯೇ ಕಾಣಸಿಗುತ್ತಾರೆ. ಮಹಾ ನಗರಗಳಲ್ಲಿಯಷ್ಟೇ ಅಲ್ಲ, ಸಣ್ಣ ನಗರಗಳಲ್ಲಿಯೂ ವಿಶೇಷ ಸಮಾರಂಭಗಳಿಗಾಗಿ ಶರ್ಟ್, ಪ್ಯಾಂಟ್, ಬೆಲ್ಟ್, ಟೈ ಧರಿಸಿದರೆ ಪುರುಷ ವೇಷಭೂಷಣ ಪೂರ್ಣಗೊಂಡಂತೆ ಅಲ್ಲ. ಅಲ್ಲಿ ಸೂಟು ಸಹ ಇರಬೇಕು ಎಂಬಂತಾಗಿದೆ.
ಹಾಗಾಗಿಯೇ ಸಿದ್ಧ ಉಡುಪು ಕ್ಷೇತ್ರದಲ್ಲಿಯೂ ಸೂಟಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದೆ. ಈವರೆಗೂ ದೊಡ್ಡ ನಗರಗಳ ಷೋರೂಂಗಳಲ್ಲಿ ಸಿದ್ಧವಾಗಿ ಇಟ್ಟಿರುತ್ತಿದ್ದ ಸೂಟುಗಳನ್ನು ಖರೀದಿಸುವುದು ಸಾಮಾನ್ಯವಾಗಿತ್ತು. ನಿಗದಿತ ಅಳತೆಯ ಈ ಸೂಟುಗಳು ವಿವಿಧ ದೇಹಾಕಾರದ ಪುರುಷರಿಗೆ ಹೊಂದಿಕೊಳ್ಳದೇ ಇದ್ದರೂ ಖರೀದಿಸಿ ಧರಿಸುವುದು ಅನಿವಾರ್ಯವೂ ಆಗಿತ್ತು.
ತೆಳ್ಳನೆ ದೇಹದವರು, ಗಿಡ್ಡ ಆಕೃತಿಯವರು, ತುಸು ಹೊಟ್ಟೆ ಉಬ್ಬಿದವರು ತಮ್ಮ ದೇಹಾಕಾರಕ್ಕೆ ಒಪ್ಪದ ಸೂಟು ಧರಿಸಿದಾಗ ಬೆನ್ನ ಹಿಂದೆ
ನಗುವವರೂ ಇದ್ದಾರೆ. ಸೂಟು ಧರಿಸಲೇಬೇಕು ಎಂಬ ಆಸೆಯ ಬೆನ್ನುಬಿದ್ದವರು ಇಂತಹ ತಮಾಷೆಯ ಪ್ರಸಂಗಗಳನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿತ್ತು.
ಆದರೆ, ಈಗ ಈ ಸಮಸ್ಯೆಗೆ ಪರಿಹಾರ ಸಿಗುತ್ತಿದೆ. ಈವರೆಗೆ ‘ಸಿದ್ಧ ಉಡುಪು’ ವಿಭಾಗದಲ್ಲಿಯೇ ಇದ್ದ ‘ಸೂಟು’ ಆಕೃತಿ, ವಿನ್ಯಾಸ ಬದಲಾಗಿದೆ. ಪ್ರತಿಯೊಬ್ಬರ ದೇಹಕ್ಕೂ, ಅವರ ದೇಹದ ಅಗಲ, ಎತ್ತರ, ಗಾತ್ರಕ್ಕೆ ತಕ್ಕಂತೆ, ಅವರಿಗೆ ಇಷ್ಟವಾಗುವಂತೆ ಸೂಟುಗಳನ್ನೂ ಅಳತೆ ಕೊಟ್ಟು ಹೊಲಿಸಿಕೊಳ್ಳಬಹುದಾಗಿದೆ.
ಟೈಲರ್‌ಮನ್ ಪ್ರವೇಶ
ಜವಳಿ ಖರೀದಿ ವಿಷಯ ಬಂದಾಗ ಈಗ ಗ್ರಾಹಕರ ಮುಂದೆ ವಿಶಾಲ ಶ್ರೇಣಿಯ ಆಯ್ಕೆಗಳಿವೆ. ಸಿದ್ಧ ಉಡುಪನ್ನೇ ಖರೀದಿಸುವುದು ಅಥವಾ ಬಟ್ಟೆಯನ್ನು ಖರೀದಿಸಿ ಹೊಲಿಸುವುದು ಎರಡೂ ಚಾಲ್ತಿಯಲ್ಲಿರುವ ಸಾಮಾನ್ಯ ವಿಧಾನಗಳು.
ಈಗ ಹೊಲಿಗೆ ಹಾಕಬೇಕಾದ ಅಗತ್ಯವೇ ಇಲ್ಲದ (stitchless) ಶರ್ಟ್‌ಗಳೂ ಸಹ ಈಗ ಮಾರುಕಟ್ಟೆಗೆ ಬಂದಿವೆ! ತರಹೇವಾರಿ ಬ್ರಾಂಡೆಡ್ ಉಡುಪುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅನೇಕರು ಬಟ್ಟೆ ಖರೀದಿಸಿ, ಹೊಲಿಸಿ ತೊಡುವುದನ್ನೇ ಹೆಚ್ಚು ಇಷ್ಟಪಡುತ್ತಾರೆ. ವಿಶೇಷವಾಗಿ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಬಳಸುವ ‘ಸೂಟ್’ ವಿಚಾರಕ್ಕೆ ಬಂದಾಗ ಹೆಚ್ಚಿನವರು ಸಿದ್ಧವಾಗಿರುವುದನ್ನು ಖರೀದಿಸುವುದಕ್ಕೆ ಬದಲಾಗಿ ಹೊಲಿಸುವುದಕ್ಕೇ ಆದ್ಯತೆ ನೀಡುತ್ತಾರೆ. ಇದಕ್ಕೆ ಮುಖ್ಯ ಕಾರಣ ದೇಹದ ಆಕಾರ, ಭುಜದ ವಿಸ್ತಾರಕ್ಕೆ ಒಪ್ಪುವ ಅಳತೆ ಮತ್ತು ವಿನ್ಯಾಸ.
‘ಸೂಟುಗಳು ವ್ಯಕ್ತಿಯ ಸರಾಸರಿ ಅಳತೆ ಆಧರಿಸಿ ತಯಾರಾಗುತ್ತವೆ. ಆದರೆ, ಇದು ಎಲ್ಲರ ಶರೀರಕ್ಕೆ ಒಪ್ಪುವುದಿಲ್ಲ. ಒಪ್ಪಿದರೂ ಬೆಲೆ ಮತ್ತು ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ’ ಎನ್ನುತ್ತಾರೆ ಬೆಂಗಳೂರಿನ ‘ಟೈಲರ್‌ಮನ್’ ಸಂಸ್ಥೆಯ ಸಹ ಸಂಸ್ಥಾಪಕರಾದ ವಿದ್ಯಾ ನಟರಾಜ್ ಮತ್ತು ಗೌತಮ್ ಗೋಲ್ಚಾ.
ಗಿರಾಕಿ ಬಯಸಿದಂತೆ ಉಡುಪು ತಯಾರಿಸಿ ಕೊಡುವ ಅಥವಾ ಹೊಲಿದುಕೊಡುವ ದರ್ಜಿಗೆ ‘ಬಿಸ್ಪೋಕ್’ (Bespoke) ಟೈಲರ್ ಎನ್ನುತ್ತೇವೆ. ‘ಟೈಲರ್‌ಮನ್’ ಇಂಥದೊಂದು ಸ್ಟಾರ್ಟ್‌ಅಪ್ ಕಂಪೆನಿ. ಸೂಟ್ಸ್ ತಯಾರಿಕೆ ‘ಟೈಲರ್‌ಮನ್’ನ ವಿಶೇಷ.
‘ಶರ್ಟ್ ಇರಲಿ, ಪ್ಯಾಂಟ್ ಇರಲಿ ಅಥವಾ ಸೂಟೇ ಆಗಿರಲಿ, ನಾವು ಧರಿಸುವ ಬಟ್ಟೆ ನಮ್ಮ ದೇಹಕ್ಕೆ ಅಚ್ಚುಕಟ್ಟಾಗಿ ಒಪ್ಪುವಂತಿರಬೇಕು. ಹೀಗಾಗಿ ‘ಒಂದೇ ಅಳತೆ ಎಲ್ಲರಿಗೂ ಹೊಂದಿಕೆಯಾಗುತ್ತದೆ’ (one-- size fits all policy) ಎಂಬ ಸಿದ್ಧ ಉಡುಪು ತಯಾರಿಕಾ ಕಂಪೆನಿಗಳ ಸೂತ್ರದಲ್ಲಿ ನಮಗೆ ನಂಬಿಕೆ ಇಲ್ಲ. ಕೆಲವೊಮ್ಮೆ ನಾವು ಖರೀದಿಸಿದ ಶರ್ಟಿನ ಕೈ ಉದ್ದವಾಗಿರುತ್ತವೆ. ಕಾಲರ್ ಬಿಗಿದುಕೊಂಡಿರುತ್ತದೆ. ಎಲ್ಲ ಸರಿ ಇದ್ದರೆ ಎದೆಭಾಗದಲ್ಲಿ ಬಿಗಿಯಾಗಿರುತ್ತದೆ. ಹೀಗೆ ಏನಾದರೊಂದು ಲೋಪ ಇದ್ದೇ ಇರುತ್ತದೆ. ಹೀಗಾಗಿ ಗ್ರಾಹಕ ಖರೀದಿಸಿದ ಉಡುಪನ್ನು ಇನ್ಮೊಮ್ಮೆ ಸ್ಥಳೀಯ ದರ್ಜಿಯ ಬಳಿಗೆ ತೆಗೆದುಕೊಂಡು ಹೋಗಿ ತಮ್ಮ ದೇಹಕ್ಕೆ ಒಪ್ಪುವ ಹಾಗೆ ಸರಿ ಹೊಂದಿಸಿಕೊಳ್ಳುವ ಅಥವಾ ಕೆಲವೆಡೆ ಆಕಾರವನ್ನೇ ಬದಲಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಪುರುಷರ ಸಿದ್ಧ ಉಡುಪು (menswear) ಉದ್ಯಮದಲ್ಲಿನ ಈ ಸಮಸ್ಯೆಗಳೇ ನಮಗೆ ‘ಟೈಲರ್‌ಮನ್’ ಕಂಪೆನಿ ಸ್ಥಾಪಿಸಲು ಪ್ರೇರಣೆ’ ಎನ್ನುತ್ತಾರೆ ವಿದ್ಯಾ.
ಟೈಲರ್‌ಮನ್ ವೈಶಿಷ್ಟ್ಯ
ಹೆಸರೇ ಸೂಚಿಸುವಂತೆ ಗ್ರಾಹಕ ಬಯಸಿದಂತೆ ಬಟ್ಟೆ ಹೊಲಿದು ಕೊಡುವ ಕಂಪೆನಿ ಟೈಲರ್‌ಮನ್. ವರ್ಷದ ಹಿಂದೆ ಪ್ರಾರಂಭವಾದ ಈ ಕಂಪೆನಿ ಬೆಂಗಳೂರಿನಲ್ಲಿ ನಾಲ್ಕು (ಕಮರ್ಷಿಯಲ್ ಸ್ಟ್ರೀಟ್, ಜಯನಗರ, ವೈಟ್‌ಫೀಲ್ಡ್, ಬನ್ನೇರುಘಟ್ಟ ರಸ್ತೆ) ಮತ್ತು ಚೆನ್ನೈನಲ್ಲಿ (ವೆಲಚೇರಿ, ನುಂಗಂಬಾಕ್ಕಂ) ಎರಡು ಮಳಿಗೆಗಳನ್ನು ಹೊಂದಿದೆ. ಗ್ರಾಹಕರು ನೇರವಾಗಿ ಟೈಲರ್‌ಮನ್ ಮಳಿಗೆಗೆ ಭೇಟಿ ನೀಡಿ ತಮ್ಮ ದೇಹಕ್ಕೊಪ್ಪುವಂತೆ ಸೂಟ್ ಹೊಲಿಸಿಕೊಳ್ಳಬಹುದು ಅಥವಾ ಕಂಪೆನಿಯ ವೆಬ್ ಸೈಟ್‌ಗೆ (www.tailorman.com) ಭೇಟಿ ನೀಡುವ ಮೂಲಕ ತಮಗಿಷ್ಟದ ವಿನ್ಯಾಸವನ್ನು ಆಯ್ಕೆ ಮಾಡಿ, ಹೊಲಿಗೆ ಅಳತೆಯನ್ನು ತಾವೇ ಖುದ್ದಾಗಿ ದಾಖಲಿಸಬಹುದು. ಮಳಿಗೆಗೆ ಭೇಟಿ ನೀಡಲು ಸಮಯವಿಲ್ಲದವರು ಮನವಿ ಮಾಡಿಕೊಂಡರೆ, ನಿಪುಣ ದರ್ಜಿಯೊಬ್ಬರು ಅವರ ಮನೆ/ಕಚೇರಿಗೇ ಬಂದು ಅಳತೆ ತೆಗೆದುಕೊಂಡು ಹೋಗುತ್ತಾರೆ(ಬೆಂಗಳೂರು ಮತ್ತು ಚೆನ್ನೈನಲ್ಲಿ ಮಾತ್ರ ಈ ಸೇವೆ ಲಭ್ಯ).
‘ಒಂದು ವೇಳೆ ಹೊಲಿದ ಸೂಟು ಗ್ರಾಹಕರಿಗೆ ಇಷ್ಟವಾಗದೇ ಇದ್ದಲ್ಲಿ 30 ದಿನದೊಳಗೆ ವಾಪಸ್ ಮಾಡಬಹುದು. ಯಾಕೆ ಮರಳಿಸುತ್ತಿದ್ದೀರಾ? ಎಂಬ ಒಂದೇ ಒಂದು ಪ್ರಶ್ನೆಯನ್ನೂ ಕಂಪೆನಿ ಕೇಳುವುದಿಲ್ಲ. ಗ್ರಾಹಕರಿಗೆ ಹೆಚ್ಚುವರಿಯಾಗಿ ಯಾವುದೇ ಸಣ್ಣ ಪುಟ್ಟ ಬದಲಾವಣೆ ಬೇಕಿದ್ದರೂ ಉಚಿತವಾಗಿ ಮಾಡಿಕೊಡುತ್ತೇವೆ. ದೇಶದ ಸಿದ್ಧ ಉಡುಪು ಉದ್ಯಮದಲ್ಲಿ ಇದೊಂದು ವಿಭಿನ್ನವಾದ ಪ್ರಯೋಗ’ ಎನ್ನುತ್ತಾರೆ ಗೌತಮ್ ಗೋಲ್ಚಾ.
ಜಾಕೆಟ್, ಬ್ಲೇಜರ್, ಶರ್ಟ್, ಪ್ಯಾಂಟ್, ವೆಸ್ಟ್‌ಕೋಟ್ ಸೇರಿದಂತೆ ಕಾರ್ಪೊರೇಟ್, ಪಾರ್ಟಿ ವೇರ್ ಮತ್ತು ಸಂಜೆವೇಳೆಯ ವಿಶೇಷ ಕಾರ್ಯಕ್ರಮಗಳಿಗೆ ತೊಡುವ ಟಕ್ಸಿಡೊ ಸೂಟುಗಳನ್ನು ಟೈಲರ್‌ಮನ್ ತಯಾರಿಸುತ್ತದೆ. ಈ ಸೂಟುಗಳ ಬೆಲೆ ₨9 ಸಾವಿರದಿಂದ ₨2 ಲಕ್ಷದವರೆಗೆ ಇದೆ.
‘ಪ್ರಪಂಚದ ವಿವಿಧೆಡೆ ಆಯ್ದ ಗಿರಣಿಗಳಿಂದ ಗರಿಷ್ಠ ಗುಣಮಟ್ಟದ ಬಟ್ಟೆಗಳನ್ನು ಆಮದು ಮಾಡಿಕೊಂಡು ಸೂಟುಗಳನ್ನು ಹೊಲಿಯಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ ಸಿದ್ಧ ಉಡುಪು ಕಂಪೆನಿಗಳಿಗೂ ಸೂಟ್ ಪೂರೈಸಲಾಗುತ್ತದೆ. ಹೊಲಿಗೆಗೆ ಬಳಸುವ ನೂಲಿನಿಂದ ಹಿಡಿದು ಬಟನ್‌ವರೆಗೆ ಪ್ರತಿಯೊಂದು ವಿಷಯದಲ್ಲೂ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತದೆ. ‘ಡಿಜಿಟಲ್ ಕಟ್ಟಿಂಗ್’ ತಂತ್ರಜ್ಞಾನದ ಮೂಲಕ ಸೂಟುಗಳನ್ನು ಹೊಲಿಯಲಾಗುತ್ತದೆ. ಹೀಗಾಗಿ ಅಳತೆಯಲ್ಲಿ ಕೂದಲೆಳೆಯ ವ್ಯತ್ಯಾಸವೂ ಇರುವುದಿಲ್ಲ’ ಎನ್ನುತ್ತಾರೆ ಗೌತಮ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.