ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಕ್ಸಮರಕ್ಕೆ ವಿರಾಮ

ಇಂದು ಮನೆ ಮನೆಗೆ ಪ್ರಚಾರ
Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಮಂಗಳವಾರ ಸಂಜೆ 6ಕ್ಕೆ ಅಂತ್ಯ­ಗೊಂಡಿದ್ದು, ರಾಜಕೀಯ ಮುಖಂಡರ ವಾಕ್ಸಮರಕ್ಕೆ ತೆರೆ ಬಿದ್ದಿದೆ.

ಕಳೆದ ಎರಡು ವಾರಗಳಿಂದ ವಿವಿಧ ಪಕ್ಷಗಳ ನಾಯಕರು ಪರಸ್ಪರ ಕೆಸರೆ­ರಚಾಟದಲ್ಲಿ ತೊಡಗಿದ್ದರು. ಈ ಸಂದರ್ಭ­ದಲ್ಲಿ ಅಭಿವೃದ್ಧಿ, ರಾಜ್ಯ ಮತ್ತು ಕ್ಷೇತ್ರಗಳ ಸಮಸ್ಯೆಗಳಿಗಿಂತ ಹೆಚ್ಚಾಗಿ ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಪ್ರತ್ಯಾರೋಪ ನಡೆಸಿದ್ದೇ ಜಾಸ್ತಿ. ಬಹಿರಂಗ ಪ್ರಚಾರ ಮುಕ್ತಾಯ­ದೊಂದಿಗೆ ಅವರ ವಾಗ್ಯುದ್ಧಕ್ಕೂ ವಿರಾಮ ದೊರೆತಂತಾಗಿದೆ.

ಮಂಗಳವಾರವೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರಚಾರಸಭೆ, ಬೈಕ್‌ ರ‌್ಯಾಲಿ, ಪಾದ­ಯಾತ್ರೆ, ರೋಡ್‌ ಷೋಗಳಲ್ಲಿ ಭಾಗಿಯಾಗಿದ್ದರು. ಚಲನಚಿತ್ರ ನಟ, ನಟಿಯರೂ ಸಹ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಕೈಗೊಂಡರು.

ಕಾಂಗ್ರೆಸ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಮ­ಗಳೂರು, ಹಾವೇರಿ ಮತ್ತು ಹುಬ್ಬಳ್ಳಿಯಲ್ಲಿ ಪ್ರಚಾರ ಸಭೆ, ‘ರೋಡ್‌ ಷೋ’ಗಳಲ್ಲಿ ಭಾಗವಹಿಸಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಮೂರು ಕಡೆಗಳಲ್ಲೂ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಕೊರಟಗೆರೆ, ತುಮಕೂರು ಮಧುಗಿರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮುದ್ದಹನುಮೇಗೌಡರ ಪರ ಮತ ಯಾಚಿಸಿ­ದರು. ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕೂಡ ಸ್ವಕ್ಷೇತ್ರ ಗುಲ್ಬರ್ಗದಲ್ಲಿದ್ದರು. ಗುರುಮಠಕಲ್‌ ಮತ್ತು ಗುಲ್ಬರ್ಗದಲ್ಲಿ ಅವರು ಮತ ಯಾಚಿಸಿದರು.

ದಾವಣಗೆರೆಯಲ್ಲಿ ಅಂಬರೀಷ್‌: ವಸತಿ ಸಚಿವ ಎಂ.ಎಚ್.ಅಂಬರೀಷ್‌ ಅವರು ಮಂಗಳವಾರ ದಾವಣ­ಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ ಪರ ‘ರೋಡ್‌ ಷೋ’ ನಡೆಸಿದರು. ಅವರ ರೋಡ್‌ ಷೋ ಮತ್ತು ಸಭೆಗೆ ಭಾರಿ ಸಂಖ್ಯೆಯ ಜನ ಸೇರಿದ್ದರು.

ಬಿಜೆಪಿ: ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಬಿಟ್ಟರೆ ಪಕ್ಷದ ಬಹುತೇಕ ಅಭ್ಯರ್ಥಿ­ಗಳು ಮತ್ತು ಮುಖಂಡರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲೇ ಇದ್ದು ಅಂತಿಮ ಹಂತದ ಪ್ರಚಾರ ನಡೆಸಿದರು. ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಕೂಡ ತಮ್ಮ ಕ್ಷೇತ್ರ ಬಿಟ್ಟು ಕದಲಲಿಲ್ಲ. ಅವರ ಪರ ಹುಬ್ಬಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಯಡಿಯೂರಪ್ಪ ಭಾಗವಹಿಸಿದ್ದರು.

ಲಾಠಿ ಪ್ರಹಾರ: ತೆಲುಗು ಚಿತ್ರ ನಟ ಹಾಗೂ ಜನಸೇನಾ ಪಕ್ಷದ ವರಿಷ್ಠ ಪವನ್‌ ಕಲ್ಯಾಣ್‌ ಅವರು ಕೋಲಾರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿಜೆಪಿ ಪರ ಮಿಂಚಿನ ಪ್ರಚಾರ ನಡೆಸಿ­ದರು. ಅವರ ಅಭಿಮಾನಿಗಳು ಎರಡೂ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ­ದ್ದರಿಂದ ನೂಕಾಟ, ತಳ್ಳಾಟ ಆಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ರುಚಿ ಕೂಡ ತೋರಿಸಿದರು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದ ಬೃಹತ್‌ ಬೈಕ್‌ ರ್‌್್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗ­ಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿ ಸಿದ್ದ­ರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ­ಕುಮಾರ್‌ ಅವರು ಬೈಕ್‌ ರ‌್ಯಾಲಿ ಮೂಲಕ ತಮ್ಮ ಕ್ಷೇತ್ರದಲ್ಲಿ ಅಂತಿಮ ಹಂತದ ಪ್ರಚಾರ ನಡೆಸಿದರು. ವಿಜಯನಗರದ ರ‌್ಯಾಲಿ ಮುಗಿಸಿ­ಕೊಂಡು ಆದಿಚುಂಚನಗಿರಿ ಮಠಕ್ಕೂ ಅನಂತಕುಮಾರ್‌ ಭೇಟಿ ನೀಡಿದ್ದರು. ಅವರಿಗೆ ಮುಖಂಡರಾದ ಆರ್‌. ಅಶೋಕ, ವಿ.ಸೋಮಣ್ಣ ಮತ್ತಿತರರು ಸಾಥ್‌ ನೀಡಿದರು.

ಕೆ.ಎಸ್‌.ಈಶ್ವರಪ್ಪ ಮತ್ತು ಆರ್‌. ಅಶೋಕ ಅವರು ಕ್ರಮವಾಗಿ ಶಿವಮೊಗ್ಗ ಮತ್ತು ಬೆಂಗಳೂರು ನಗರದ ವಿವಿಧ ಕಡೆ ನಡೆದ ಬಿಜೆಪಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು.

ಜೆಡಿಎಸ್‌: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇ­ಗೌಡ ಮೈಸೂರು, ಅರಸೀಕೆರೆ, ಪಿರಿಯಾಪಟ್ಟಣದಲ್ಲಿ ಪ್ರಚಾರ ನಡೆಸಿದರು.
‘ನನ್ನ ಮೇಲೆ ಯಾವುದೇ ಕಳಂಕ ಇಲ್ಲ. ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರೇ ಈ ವಿಷಯ­ವನ್ನು ಬಹಿರಂಗ ವಾಗಿ ಹೇಳಿದ್ದಾರೆ’ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರ­ಸ್ವಾಮಿ ಅವರು ಕನಕಪುರ, ರಾಮ­ನಗರದಲ್ಲಿ ಮತಯಾಚಿಸಿದರು. ಚಿಕ್ಕಬಳ್ಳಾಪುರ, ಗೌರಿ­ಬಿದನೂರು ನಡೆದ ರೋಡ್‌ಷೋನಲ್ಲಿ ಭಾಗವಹಿಸಿ­ದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ 10ರಿಂದ 12 ಸ್ಥಾನಗಳು ದೊರೆಯಲಿವೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

100ಕ್ಕೂ ಹೆಚ್ಚು ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಪರ 100ಕ್ಕೂ ಹೆಚ್ಚು ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಮತ ಯಾಚಿಸಿದ್ದಾರೆ.

ಎಡಗೈ ಹೆಬ್ಬೆರಳಿಗೆ ಶಾಯಿ
ಬೆಂಗಳೂರು:
ಈ ಸಲ ಲೋಕಸಭಾ ಚುನಾವಣೆ­ಯಲ್ಲಿ ಮತದಾರರ ಎಡಗೈ ಹೆಬ್ಬೆರಳಿಗೆ ಶಾಯಿ ಗುರುತು ಮಾಡಲಾಗುತ್ತದೆ.

ಹಲವು ಚುನಾವಣೆ­ಗಳಲ್ಲಿ ಹಾಕಿರುವ ಶಾಯಿ ಇನ್ನೂ ಅಳಿಸಿಲ್ಲ. ಹೀಗಾಗಿ ಗೊಂದಲಕ್ಕೆ ಆಸ್ಪದ ಇರ­ಬಾ­ರದೆಂದು ಲೋಕಸಭಾ ಚುನಾವಣೆ­ಯಲ್ಲಿ ಎಡಗೈ ಹೆಬ್ಬೆರಳಿಗೆ ಗುರುತು ಮಾಡಲು ತೀರ್ಮಾನಿ­ಸ­­ಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿ­ಕಾರಿ ಅನಿಲ್‌ಕುಮಾರ್‌ ಝಾ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT