ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ನರ್‌ ಅಬ್ಬರಕ್ಕೆ ಆಫ್ಘನ್‌ ತಬ್ಬಿಬ್ಬು

ಕ್ರಿಕೆಟ್‌: 417 ರನ್‌ ಗಳಿಸಿದ ಆಸ್ಟ್ರೇಲಿಯಾ ವಿಶ್ವದಾಖಲೆ, ಮಿಂಚಿದ ಸ್ಮಿತ್‌, ಮೆರೆದಾಡಿದ ಮ್ಯಾಕ್ಸ್‌ವೆಲ್‌
Last Updated 4 ಮಾರ್ಚ್ 2015, 19:58 IST
ಅಕ್ಷರ ಗಾತ್ರ

ಪರ್ತ್‌ (ಪಿಟಿಐ/ಐಎಎನ್‌ಎಸ್‌): ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಕೇವಲ 133 ಎಸೆತಗಳಲ್ಲಿ 178 ರನ್‌ ಗಳಿಸಿದರು. ಇದರಿಂದ ಆಸ್ಟ್ರೇಲಿಯಾ ತಂಡ ವಿಶ್ವ ದಾಖಲೆ ಬರೆಯಿತು. ಜೊತೆಗೆ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ಎದುರು ದಾಖಲೆಯ ಗೆಲುವು ಪಡೆಯಿತು.

ವಾಕಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆಫ್ಘನ್‌ ತಂಡ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ತವರಿನ ಅಂಗಳದಲ್ಲಿ ಮೊದಲು ಬ್ಯಾಟ್‌ ಮಾಡಲು ಸಿಕ್ಕ ಅವಕಾಶವನ್ನು ಕಾಂಗರೂ ನಾಡಿನ ಬಳಗ ಚೆನ್ನಾಗಿ ಬಳಸಿಕೊಂಡಿತು. ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 417 ರನ್‌ ಗಳಿಸಿತು. ಇದು ವಿಶ್ವಕಪ್‌ನಲ್ಲಿ ದಾಖಲಾದ ಒಟ್ಟು ಗರಿಷ್ಠ ಮೊತ್ತವೆನಿಸಿದೆ. 2007ರ ಟೂರ್ನಿಯಲ್ಲಿ ಭಾರತ ತಂಡ ಬರ್ಮುಡಾ ಎದುರು 413 ರನ್‌ ಕಲೆ ಹಾಕಿದ್ದು ಹಿಂದಿನ ದಾಖಲೆಯಾಗಿತ್ತು.

ಚೊಚ್ಚಲ ವಿಶ್ವಕಪ್‌ ಆಡುತ್ತಿರುವ ಆಫ್ಘನ್‌ ತಂಡಕ್ಕೆ ಈ ಗುರಿ ಬೆಟ್ಟದಂತೆ ಕಂಡಿತು. ಆಸ್ಟ್ರೇಲಿಯಾ ಇನಿಂಗ್ಸ್‌ ಮುಗಿಯುವ ವೇಳೆಗಾಗಲೇ ಹೈರಾಣಾಗಿದ್ದ ಈ ತಂಡ 37.3 ಓವರ್‌ಗಳಲ್ಲಿ 142 ರನ್‌ ಗಳಿಸಿ ಆಲೌಟ್‌ ಆಯಿತು. ಆತಿಥೇಯರಿಗೆ 275 ರನ್‌ ಗೆಲುವು ಲಭಿಸಿತು. ಏಕದಿನ ಮಾದರಿಯಲ್ಲಿ ಆಸ್ಟ್ರೇಲಿಯಾ  ಪಡೆದ ಅತಿ ಹೆಚ್ಚು ಅಂತರದ ಗೆಲುವು ಇದಾಗಿದೆ.

ವಾರ್ನರ್‌ ಅಬ್ಬರ: ಆಸ್ಟ್ರೇಲಿಯಾ ಆರಂಭದಲ್ಲಿಯೇ ಆ್ಯರನ್‌ ಫಿಂಚ್ (4) ವಿಕೆಟ್‌ ಕಳೆದುಕೊಂಡಿತು. ಮೂರನೇ ಓವರ್‌ನಲ್ಲಿ ವಿಕೆಟ್‌ ಉರುಳಿಸಿದ ಶಾಪೂರ್‌ ಜದ್ರಾನ್‌ ಆಫ್ಘನ್‌ ತಂಡದ ಸಂಭ್ರಮಕ್ಕೆ ಕಾರಣರಾದರು. ಆದರೆ, ಭರವಸೆಯ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಮತ್ತು ಸ್ಟೀವನ್‌ ಸ್ಪಿತ್‌ ಅಬ್ಬರದ ಆಟದ ಮುಂದೆ ಎದುರಾಳಿ ತಂಡ ಮಂಕಾಗಿ ಹೋಯಿತು.

ಆಸ್ಟ್ರೇಲಿಯಾ ಮೊದಲ 25 ಓವರ್‌ಗಳು ಪೂರ್ಣಗೊಂಡಾಗ 151 ರನ್‌ಗಳನ್ನು ಗಳಿಸಿತ್ತು. ನಂತರದ 25 ಓವರ್‌ಗಳಲ್ಲಿ ರನ್‌ ಹೊಳೆ ಹರಿಸಿತು. ನಾಲ್ಕು ಬಾರಿ ಟ್ರೋಫಿ ಗೆದ್ದಿರುವ ಕಾಂಗರೂಗಳ ನಾಡಿನ ತಂಡ ಕೊನೆಯ 60 ಎಸೆತಗಳಲ್ಲಿ 118 ರನ್‌ಗಳನ್ನು ಕಲೆ ಹಾಕಿದ್ದು ಇದಕ್ಕೆ ಸಾಕ್ಷಿ.

ವಾರ್ನರ್‌ ಮತ್ತು ಸ್ಮಿತ್‌ ಅವರು ಎರಡನೇ ವಿಕೆಟ್‌ಗೆ 260 ರನ್‌ಗಳ ಜೊತೆಯಾಟವಾಡಿದರು. 133 ಎಸೆತಗಳನ್ನು ಎದುರಿಸಿದ ವಾರ್ನರ್‌ 178 ರನ್‌ ಬಾರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ  ಅವರು ಗಳಿಸಿದ ನಾಲ್ಕನೇ ಶತಕವಿದು. ಎಡಗೈ ಬ್ಯಾಟ್ಸ್‌ಮನ್‌ ವಾರ್ನರ್‌ ಬೌಂಡರಿ (19) ಮತ್ತು ಸಿಕ್ಸರ್‌ (5) ಮೂಲಕವೇ ಆಫ್ಘನ್‌ ಬೌಲರ್‌ಗಳ ಬೆವರಿಳಿಸಿದರು. ಬೌಂಡರಿ, ಸಿಕ್ಸರ್‌ಗಳಿಂದಲೇ  106 ರನ್‌ ಬಾರಿಸಿದರು. ವಾರ್ನರ್‌ ಅಬ್ಬರ ಹೇಗಿತ್ತು ಎನ್ನುವುದಕ್ಕೆ ಈ ಅಂಕಿಅಂಶವೇ ಸಾಕ್ಷಿ. ಜೊತೆಗೆ, ಈ ಸಲದ ವಿಶ್ವಕಪ್‌ನಲ್ಲಿ ವೈಯಕ್ತಿಕ ಹೆಚ್ಚು ರನ್‌ ಗಳಿಸಿದ ಎರಡನೇ ಆಟಗಾರ ಎನ್ನುವ ಕೀರ್ತಿ ತಮ್ಮದಾಗಿಸಿಕೊಂಡರು. ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಕ್ರಿಸ್‌ ಗೇಲ್ ಗಳಿಸಿದ್ದ 215 ರನ್‌ ಮೊದಲ ಗರಿಷ್ಠ ಸ್ಕೋರು ಆಗಿದೆ.

ವಾರ್ನರ್ ವೇಗವಾಗಿ ರನ್‌ ಗಳಿಸುವ ಜೊತೆಗೆ ಸ್ಮಿತ್‌ಗೆ ಉತ್ತಮ ಬೆಂಬಲ ನೀಡಿದರು. ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಸ್ಮಿತ್‌ ಆಫ್ಘನ್‌ ಎದುರು 98 ಎಸೆತಗಳಲ್ಲಿ 95 ರನ್‌ ಗಳಿಸಿದರು. 42.5ನೇ  ಓವರ್‌ನಲ್ಲಿ ಶಾಪೂರ್‌ ಜದ್ರಾನ್‌ ಎಸೆತವನ್ನು ಮಿಡ್‌ ಆಫ್‌ ಬಳಿ ಬಾರಿಸಿದ್ದನ್ನು ನಜೀಬುಲ್ಲಾ ಸೊಗಸಾಗಿ ಹಿಡಿತಕ್ಕೆ ಪಡೆದು ಸ್ಮಿತ್‌ ಶತಕ ಗಳಿಸುವ ಆಸೆಗೆ ಅಡ್ಡಿಯಾದರು.

ಮ್ಯಾಕ್ಸ್‌ವೆಲ್‌ ಮೆರೆದಾಟ: ಆರಂಭಿಕ ಬ್ಯಾಟ್ಸ್‌ಮನ್‌ಗಳ ವೇಗದ ಆಟದ ಜೊತೆಗೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಬ್ಬರವನ್ನು ನಿಯಂತ್ರಿಸಲು ಎದುರಾಳಿ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ವಿರುದ್ಧ ಅರ್ಧಶತಕ ಗಳಿಸಿದ್ದ ಮ್ಯಾಕ್ಸ್‌ವೆಲ್‌  ಇಲ್ಲಿ ಕೇವಲ 39 ಎಸೆತಗಳಲ್ಲಿ 88 ರನ್‌ ಬಾರಿಸಿದರು. ಆರು ಬೌಂಡರಿ ಮತ್ತು 7  ಸಿಕ್ಸರ್‌ ಸಿಡಿಸಿ ತಂಡದ ಒಟ್ಟು ಮೊತ್ತ 400ರ ಗಡಿ ದಾಟಲು ಕಾರಣರಾದರು.
ಕುಸಿತ: ಮಿಷೆಲ್‌ ಸ್ಟಾರ್ಕ್‌, ಜೋಶ್‌ ಹಜ್ಲೆವುಡ್, ಮಿಷೆಲ್‌ ಜಾನ್ಸನ್‌ ಅವರಂಥ ಶ್ರೇಷ್ಠ ವೇಗದ ಬೌಲರ್‌ಗಳ ದಾಳಿಯನ್ನು ಎದುರಿಸಲು ಆಫ್ಘನ್‌ ತಂಡಕ್ಕೆ ಸಾಧ್ಯವಾಗಲಿಲ್ಲ.

ಈ ತಂಡ ಮೊದಲ ನೂರು ರನ್‌ ಗಳಿಸುವ ಒಳಗಾಗಿಯೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕೊನೆಯ 39 ರನ್‌ ಗಳಿಸುವ ಅಂತರದಲ್ಲಿ ಐದು ವಿಕೆಟ್‌ ಕಳೆದುಕೊಂಡು ಸೋಲಿನ ಪ್ರಪಾತಕ್ಕೆ ಬಿದ್ದಿತು. ನಜೀಬುಲ್ಲಾ ಜದ್ರಾನ್‌ (24) ಮತ್ತು ಸಮೀವುಲ್ಲಾ ಶೆನ್ವಾರಿ (17) ಆಫ್ಘನ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿದರು. ಟಾಸ್‌ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡು ಎಡವಟ್ಟು ಮಾಡಿದ ಆಫ್ಘನ್‌ ತಂಡ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಸುರಿಸಿದ ರನ್‌ ಮಳೆಯಲ್ಲಿ ತೋಯ್ದು ಹೋಯಿತು. ಈ ತಂಡ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಪಡೆದಿದೆ.

ಗರಿಷ್ಠ ರನ್‌ ಜೊತೆಯಾಟ
ಡೇವಿಡ್‌ ವಾರ್ನರ್‌ ಮತ್ತು ಸ್ಟೀವನ್‌ ಸ್ಮಿತ್‌ ಅವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 260 ರನ್‌ ಗಳಿಸಿದರು. ಈ ಮೂಲಕ ಅವರು ರಿಕಿ ಪಾಂಟಿಂಗ್‌ ಮತ್ತು ಶೇನ್ ವಾಟ್ಸನ್‌ ದಾಖಲೆ ಅಳಿಸಿ ಹಾಕಿದರು. ಇವರು 2009ರಲ್ಲಿ ಸೆಂಚೂರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಅಜೇಯ 252 ರನ್‌ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT