ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವಗಳಿಗೆ ಕಣ್ಣು ತೆರೆಯಲಿ

Last Updated 20 ಮೇ 2014, 19:30 IST
ಅಕ್ಷರ ಗಾತ್ರ

ಈ  ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಎಡ ಪಕ್ಷಗಳು ಪೂರ್ಣ ಮೂಲೆಗೊತ್ತರಿಸಿಹೋಗಿವೆ. ಸಿಪಿಐ(ಎಂ), ಸಿಪಿಐ, ಆರ್ಎಸ್‌ಪಿ ಹಾಗೂ ಫಾರ್ವರ್ಡ್ ಬ್ಲಾಕ್ ಪಕ್ಷಗಳ ಒಟ್ಟು ಮತಗಳ ಪಾಲು 2009ರ ಚುನಾವಣೆ ವೇಳೆಯಲ್ಲಿ ಶೇ 7ರಷ್ಟಿತ್ತು. ಈಗ ಇದು ಶೇ 4.5ಕ್ಕೆ ಇಳಿದಿದೆ. 2004ರ ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳು 61 ಸ್ಥಾನಗಳನ್ನು ಗಳಿಸಿದ್ದವು. 2009ರಲ್ಲಿ ಇವು 24 ಸ್ಥಾನಗಳಾದವು.

ಈ ವರ್ಷದ ಚುನಾ­ವಣೆ­ಯಲ್ಲಂತೂ  10 ಸ್ಥಾನಗಳಿಗೆ ಕುಸಿದುಹೋಗಿದೆ. ಪಶ್ಚಿಮ ಬಂಗಾಳದಲ್ಲಿ  34 ವರ್ಷಗಳ ಕಾಲ ನಿರಂತರವಾಗಿ ಎಡಪಕ್ಷಗಳ ಸರ್ಕಾರದ ಆಡಳಿತ ಪ್ರಶ್ನಾತೀತ­ವಾಗಿ ಮುಂದುವರಿದಿತ್ತು. ಆದರೆ ಈ ಲೋಕಸಭೆ ಚುನಾವಣೆ­ಯಲ್ಲಿ ಪ.ಬಂಗಾಳದ 42 ಸ್ಥಾನಗಳ ಪೈಕಿ ಸಿಪಿಐ (ಎಂ) ಗೆ ಗೆಲ್ಲಲಾಗಿರು­ವುದು ಎರಡು ಸ್ಥಾನಗಳನ್ನು ಮಾತ್ರ.

ಅದರಲ್ಲೂ ಸಿಪಿಐ (ಎಂ)ನ ಹಿರಿಯ ನಾಯಕ ಬಸುದೇವ ಆಚಾರ್ಯ ಹಾಗೂ  ಸಿಪಿಐ ಎಂಪಿ ಪ್ರಬೋಧ್ ಪಾಂಡಾ ಅವರಂತಹವರು ರಾಜಕೀಯಕ್ಕೆ ಮೊದಲ ಬಾರಿ ಪ್ರವೇಶ ಮಾಡು­ತ್ತಿರುವ ಮೂನ್ ಮೂನ್ ಸೇನ್ ಹಾಗೂ ಸಂಧ್ಯಾ ರಾಯ್ ಅವರಂತಹ­ವರಿಂದ ಸೋಲುಂಡಿದ್ದಾರೆ.

2009ರ ಲೋಕಸಭೆ ಚುನಾವಣೆಯಲ್ಲೇ ಪಶ್ಚಿಮ ಬಂಗಾಳದ ಎಡ ಪಕ್ಷಗಳ ಸ್ಥಾನಗಳು 2004ರಲ್ಲಿ ಗಳಿಸಿದ್ದ 35 ಸ್ಥಾನಗಳಿಂದ 15ಕ್ಕೆ ಕುಸಿದಿದ್ದವು. ರೈತರು, ಕಾರ್ಮಿಕರ ಹಿತ ಕಾಯುವ ಸಿದ್ಧಾಂತಗಳನ್ನು ಎಡ ಪಕ್ಷಗಳು ಪ್ರತಿಪಾದಿಸುತ್ತವೆ. ಹೀಗಿದ್ದೂ ಸಿಂಗೂರ್ ಹಾಗೂ ನಂದಿಗ್ರಾಮಗಳಲ್ಲಿ ನಡೆದ ಹೋರಾಟಗಳು, ಸಿದ್ಧಾಂತಗಳ ಬಗ್ಗೆ ಕಮ್ಯುನಿಸ್ಟ್ ಪಕ್ಷದ ಬದ್ಧತೆಯನ್ನು ಜನ ಪ್ರಶ್ನಿಸುವಂತಾಯಿತು.

ಕೇರಳದಲ್ಲಿ 20 ಲೋಕಸಭಾ ಸ್ಥಾನಗಳ ಪೈಕಿ ಕೇವಲ 8 ಸ್ಥಾನಗಳನ್ನು   ಮಾತ್ರ ಗೆದ್ದುಕೊಳ್ಳುವುದು ಎಲ್‌ಡಿಎಫ್‌ಗೆ ಸಾಧ್ಯವಾಗಿದೆ. ಕಳೆದ  ಲೋಕಸಭೆ ಚುನಾವಣೆಯಲ್ಲೇ ಎಡ ಪಕ್ಷಗಳು ಪ್ರಸ್ತುತತೆ ಕಳೆದು­ಕೊಳ್ಳುತ್ತಿರುವ ಸೂಚನೆ ಸಿಕ್ಕಿದ್ದರೂ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ಮುಂದು­ವರಿಸಿದ್ದು ಎದ್ದು ಕಾಣುವ ಅಂಶ.

1989ರಲ್ಲಿ ಸೋವಿಯೆತ್ ಒಕ್ಕೂಟದ ಪತನದ ನಂತರ ಹೊಸ ಸಿದ್ಧಾಂತಗಳು ಜಗತ್ತಿನಲ್ಲಿ ಪ್ರಾಧಾನ್ಯ ಸಾಧಿಸಿವೆ. ಈ ಹೊಸ ಸವಾಲುಗಳಿಗೆ ಎಡ ಪಕ್ಷಗಳು ಸ್ಪಂದಿಸಿಲ್ಲ.  ಈ ವಿಚಾರದಲ್ಲಿ ಎಡ ಪಕ್ಷಗಳಿಗೆ ಇದ್ದ ಅವಕಾಶವನ್ನು ಆಮ್ ಆದ್ಮಿ ಪಕ್ಷ ಬಳಸಿಕೊಂಡಿತು. ಈ ಬಾರಿಯ ಚುನಾವಣೆ ಪ್ರಚಾರದ ವೇಳೆ ಜನರ ಮನದಾಳಗಳಿಗೆ ಇಳಿಯು­ವಂತಹ ರಾಷ್ಟ್ರೀಯ ಕಾರ್ಯಸೂಚಿಗಳನ್ನೂ ಎಡ ಪಕ್ಷಗಳು ಮುಂದಿಡಲಿಲ್ಲ.

ತೃತೀಯ ರಂಗ ಅಥವಾ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ಕೊಡುವ ವಿಚಾರಗಳಷ್ಟೇ ಒಂದಷ್ಟು ಚರ್ಚೆಯಾದವು.  ‘ಕ್ರಾಂತಿ’ಯ ಕನಸಲ್ಲೇ ಕಳೆದುಹೋಗುವ ಮುಂಚೆ ಸವಕಲಾಗಿರುವ ಸಿದ್ಧಾಂತ ಹಾಗೂ ಕಾರ್ಯಕ್ರಮಗಳಿಗೆ ಹೊಸ ಚೈತನ್ಯ ನೀಡಬೇಕಿದೆ.  ಈ   ಕ್ಲಿಷ್ಟದಾಯಕ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದಲ್ಲಿ ಮಾತ್ರ ಜನರ ವಿಶ್ವಾಸವನ್ನು ಮರಳಿ ಗೆಲ್ಲುವುದು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT