ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಕಳ್ಳರ ಬಂಧನ: 204 ಬೈಕ್‌ ಜಪ್ತಿ

ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ
Last Updated 27 ಆಗಸ್ಟ್ 2014, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಳವು ಮಾಡಿದ ಬೈಕ್‌ಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಐದು ಮಂದಿಯನ್ನು ಬಂಧಿ­ಸಿರುವ ಜಗಜೀವನ್‌ರಾಂನಗರ ಪೊಲೀಸರು, ₨ 1 ಕೋಟಿ ಮೌಲ್ಯದ 204 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

‘ಮಾಗಡಿ ರಸ್ತೆಯ ಯೋಗರಾಜ್‌ ಅಲಿ­ಯಾಸ್ ರಾಜ್‌ (33),  ಪಾದರಾಯ­ನಪುರದ ಮಹಮದ್ ಸಾದಿಕ್ (21), ಮುಬಾರಕ್ (19), ಸಲ್ಮಾನ್ (20) ಹಾಗೂ ಇರ್ಫಾನ್ (19) ಎಂಬುವರನ್ನು ಬಂಧಿಸಲಾಗಿದೆ’ ಎಂದು  ನಗರ ಪೊಲೀಸ್ ಕಮಿಷನರ್ ಎಂ.ಎನ್‌.ರೆಡ್ಡಿ ತಿಳಿಸಿದರು.

‘ಏಳನೇ ತರಗತಿವರೆಗೆ ಓದಿರುವ ಯೋಗರಾಜ್, ಮೂಲತಃ ಮಾಗಡಿಯ ಸಾವನದುರ್ಗದವನು.  ಸಾರ್ವಜನಿಕ ಸ್ಥಳಗಳಲ್ಲಿ ತನ್ನ ಸಹಚರರ ಮೂಲಕ ಬೈಕ್‌ ಕಳವು ಮಾಡಿಸುತ್ತಿದ್ದ ಆತ, ನಂತರ ಆ ವಾಹನಗಳಿಗೆ ತಾನೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಜಾಲದ ಬಗ್ಗೆ ಮಾಹಿತಿ ಪಡೆದ ಸಿಬ್ಬಂದಿ, ಸಾದಿಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಅವರು ಹೇಳಿದರು.

ಕೆಲಸ ಹುಡುಕಿಕೊಂಡು 12 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಯೋಗರಾಜ್, ರಾಜಾಜಿನಗರದ ಆರ್‌ಟಿಒ ಕಚೇರಿ ಬಳಿ ದಲ್ಲಾಳಿಯಾಗಿದ್ದ. ಸವಾರರಿಂದ ಹಣ ಪಡೆದು ಸುಲಭವಾಗಿ ಚಾಲನಾ ಪರವಾನಗಿ (ಡಿಎಲ್) ಮಾಡಿಸಿ­ಕೊಡುತ್ತಿದ್ದ ಆತ, ಕ್ರಮೇಣ ವಾಹನಗಳ ದಾಖಲೆಗಳನ್ನು ನಕಲು ಮಾಡುವುದನ್ನು ಕರಗತ ಮಾಡಿಕೊಂಡ. ನಂತರ ಅಗ್ರಹಾರ ದಾಸರಹಳ್ಳಿಯಲ್ಲಿ ಹಳೇ ವಾಹನಗಳನ್ನು ಮಾರಾಟ ಮಾಡುವ ವೃತ್ತಿ ಆರಂಭಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯಕ್ಕೆ ಇಳಿದಿದ್ದ ಯೋಗ­ರಾಜ್, ಬೈಕ್‌ಗಳನ್ನು ಕಳವು ಮಾಡು­ವುದಕ್ಕಾಗಿಯೇ ಸಾದಿಕ್, ಮುಬಾ­ರಕ್, ಸಲ್ಮಾನ್ ಹಾಗೂ ಇರ್ಫಾನ್ ಅವರ­ನ್ನೊಳಗೊಂಡ ತಂಡ ಕಟ್ಟಿ­ಕೊಂಡಿದ್ದ. ಅವರು ಕದ್ದು ತರುವ ಪ್ರತಿ ಬೈಕ್‌ಗೆ ₨ 5 ಸಾವಿರ ಕೊಡುತ್ತಿದ್ದ ಆತ, ನಂತರ ನಕಲಿ ದಾಖಲೆ ಸೃಷ್ಟಿಸಿ ₨ 30 ರಿಂದ ₨ 40 ಸಾವಿರಕ್ಕೆ ಮಾರುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಯೋಗರಾಜ್ ವಿರುದ್ಧ ಶಂಕರಪುರ, ವಿಜಯನಗರ, ಕಾಮಾಕ್ಷಿಪಾಳ್ಯ, ಗಿರಿನಗರ ಹಾಗೂ ಚನ್ನರಾಯಪಟ್ಟಣ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಬಂಧಿತನಾಗಿ ಜೈಲಿಗೆ ಹೋಗಿದ್ದ ಈತ, ಬಿಡುಗಡೆಯಾದ ಬಳಿಕವೂ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದ ಎಂದರು.

ನಕಲಿ ನೋಂದಣಿ ಫಲಕ: ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಿದ ಹಾಸನ, ಮಂಡ್ಯ, ಕೋಲಾರ, ಚಿಕ್ಕಮಗಳೂರು ಸೇರಿದಂತೆ ಹೊರ ಜಿಲ್ಲೆಗಳ ನೋಂದಣಿ ಸಂಖ್ಯೆವುಳ್ಳ ಬೈಕ್‌ಗಳನ್ನು ಗುರುತಿಸುತ್ತಿದ್ದ ಯೋಗರಾಜ್, ‘ಬೆಂಗಳೂರು ಒನ್‌’­ನಿಂದ ಆ ವಾಹನದ ವಿವರಗಳನ್ನು ಪಡೆದು­ಕೊಳ್ಳುತ್ತಿದ್ದ. ನಂತರ ಆ ನೋಂದಣಿ ಸಂಖ್ಯೆಗೆ ಅನುಗುಣವಾಗಿ ಕದ್ದ ಬೈಕ್‌ನ ಎಂಜಿನ್‌ ಮತ್ತು ಚಾರ್ಸಿ ಸಂಖ್ಯೆಯನ್ನು ನಮೂದಿಸಿ ನಕಲಿ ಆರ್‌.ಸಿ.ಪುಸ್ತಕ ತಯಾರಿಸುತ್ತಿದ್ದ. ಬಳಿಕ ಆರ್‌.ಸಿ.ಪುಸ್ತಕಗಳಿಗೆ ತಾನೇ ಆರ್‌ಟಿಒ ಅಧಿಕಾರಿಯ ಸಹಿ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಂತರ ಅಸಲಿ ದಾಖಲೆಗಳು ಎಂದು ನಂಬಿಸಿ ಕೋಲಾರ, ಮಂಡ್ಯ, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಜನರಿಗೆ ಬೈಕ್‌ಗಳನ್ನು ಮಾರಾಟ ಮಾಡಿದ್ದ. ನಕಲಿ ಆರ್‌.ಸಿ ಪುಸ್ತಕದಿಂದ ಈ ಜಿಲ್ಲೆಗಳ ಆರ್‌ಟಿಒ ಕಚೇರಿಗಳಲ್ಲಿ ಸ್ಮಾರ್ಟ್‌ ಕಾರ್ಡ್‌ಗಳು ವಿತರಣೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ಪತ್ತೆ ಹಚ್ಚಿದ ಇನ್‌ಸ್ಪೆಕ್ಟರ್‌  ಆರ್‌.ವಸಂತ್‌­ಕುಮಾರ್, ಎಸ್‌ಐ ಆಂಜಿನಪ್ಪ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಗಜೇಂದ್ರ, ಸತೀಶ್, ಕೃಷ್ಣ, ದೇವರಾಜ್,ಬಸಪ್ಪ ಡಾಂಗೆ, ಗುಣಶೇಖರ್, ಪರಮೇಶ್ವರ್‌­ನಾಯಕ್‌, ವೆಂಕಟೇಶ್‌ಮೂರ್ತಿ, ಜಯ­ರಾಮ್‌, ಮಲ್ಲು, ವೆಂಕಟೇಶ್‌ಮೂರ್ತಿ ಅವರಿಗೆ ಕಮಿಷನರ್‌ ಅಭಿನಂದಿಸಿದ್ದಾರೆ.

ಪೊಲೀಸರಿಗೂ ವಂಚನೆ
ಸೂಲಿಬೆಲೆ ಠಾಣೆಯ ನಾಲ್ವರು ಪೊಲೀಸರಿಗೂ ಯೋಗರಾಜ್‌ ವಂಚಿಸಿದ್ದಾನೆ. ಅಸಲಿ ದಾಖಲೆಗಳು ಎಂದು ನಂಬಿ ಅವರು ಸಹ ಬೈಕ್‌ಗಳನ್ನು ಖರೀದಿ ಮಾಡಿದ್ದಾರೆ. ಹೀಗೆ ಸಂಪಾದಿಸಿದ ಹಣದಲ್ಲಿ ತಾವರೆಕೆರೆ ಬಳಿ ಅರ್ಧ ಎಕರೆ ಜಮೀನು ಹಾಗೂ ನಗರದಲ್ಲೂ ನಾಲ್ಕು ನಿವೇಶನಗಳನ್ನು ಪಡೆದಿದ್ದಾನೆ.

ರೈತರ ಪ್ರತಿಭಟನೆ
‘ಬೈಕ್‌ಗಳನ್ನು ಮಾರಾಟ ಮಾಡಿದ್ದ ಯೋಗರಾಜ್, ಗ್ರಾಹಕನ ಹೆಸರು ಹಾಗೂ ಮೊಬೈಲ್‌ ಸಂಖ್ಯೆಯನ್ನು ಡೈರಿಯಲ್ಲಿ ಬರೆದಿಟ್ಟಿದ್ದ. ಆ ಡೈರಿಯನ್ನು ವಶಕ್ಕೆ ಪಡೆದು ಗ್ರಾಹಕರನ್ನು ಹುಡುಕಿಕೊಂಡು ಹೊರಟೆವು. ಆರೋಪಿಯಿಂದ ಬೈಕ್‌ ಖರೀದಿಸಿದ್ದ ಮಂಡ್ಯ ಜಿಲ್ಲೆಯ ರೈತರು, ವಾಹನಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಲು ನಿರಾಕರಿಸಿ ಪ್ರತಿಭಟನೆ ನಡೆಸಿದರು. ಆದರೆ, ಕಳವು ವಾಹನಗಳನ್ನು ಖರೀದಿ ಮಾಡುವುದೂ ಅಪರಾಧವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿದ ಬಳಿಕ ಅವರು ಬೈಕ್‌ಗಳನ್ನು ವಶಕ್ಕೆ ಒಪ್ಪಿಸಿದರು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಬೈಕ್‌ ಜಪ್ತಿಯಲ್ಲಿ ದಾಖಲೆ
‘ಜಗಜೀವನ್‌ರಾಂನಗರ ಠಾಣೆ ಸಿಬ್ಬಂದಿಯು ಪ್ರಕರಣವೊಂದರಲ್ಲಿ 204 ಬೈಕ್‌ಗಳನ್ನು ಜಪ್ತಿ ಮಾಡುವ ಮೂಲಕ ರಾಜ್ಯ ಪೊಲೀಸ್‌ ಇಲಾಖೆ-ಯಲ್ಲಿ ದಾಖಲೆ ಬರೆದಿದ್ದಾರೆ. ಈ ಹಿಂದೆ ಮಂಡ್ಯ ಪೊಲೀಸರು 103 ಬೈಕ್‌ಗಳನ್ನು ಜಪ್ತಿ ಮಾಡುವ ಮೂಲಕ ಅಗ್ರ ಸ್ಥಾನದಲ್ಲಿದ್ದರು. ಆರೋಪಿ ಯೋಗರಾಜ್‌ನಿಗೆ ಸಾರಿಗೆ ಇಲಾಖೆಯ ನೌಕರರು ನೆರವು ನೀಡಿರುವ ಅನುಮಾನವಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಯಲಿದೆ’
– ಎಂ.ಎನ್‌.ರೆಡ್ಡಿ ನಗರ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT