ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸದ ದಾರಿಯಲ್ಲಿ...

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

ವೃತ್ತಿಯಿಂದ ಎಂಜಿನಿಯರ್ ಆಗಿರುವ, ವೃತ್ತಿ ಕಾರಣವಾಗಿಯೇ ದೇಶ ಸುತ್ತುವ ಬೆಂಗಳೂರಿನ ವಿಕಾಸ ಹೆಗಡೆ ಅವರ ಚಂದದ ಬ್ಲಾಗು `ವಿಕಾಸ ವಾದ~ (http://vikasavada.blogspot.in). ವೃತ್ತಿಯಿಂದ ಎಂಜಿನಿಯರ್ ಹಾಗೂ ಊರು ಬೆಂಗಳೂರು ಎನ್ನುವ ಎರಡು ಸಂಗತಿಗಳಿಗಷ್ಟೇ ವಿಕಾಸ್ ತಮ್ಮ ಪರಿಚಯವನ್ನು ಮುಗಿಸಿಬಿಟ್ಟಿದ್ದಾರೆ.

ಬ್ಲಾಗಿನಲ್ಲಿ ತಮ್ಮದೊಂದು ಫೋಟೊ ಕೂಡ ಅವರು ಹಾಕಿಕೊಂಡಿಲ್ಲ. ಬ್ಲಾಗಿಗರ ಫೋಟೊ ಜಾಗದಲ್ಲಿ ಇರುವುದು ಮುದ್ದು ಮುದ್ದು ಮಗುವಿನ ಫೋಟೊ. ಕೊಳಗ ಹೋಲುವ ದಬರಿಗೆಯೊಂದರಲ್ಲಿ ತರಕಾರಿಗಳನ್ನೆಲ್ಲ ಹರಡಿಕೊಂಡು ಕೂತ ಪಾಪು! ಮಗುವಿನ ಚಿತ್ರ ನೋಡಿ `ವಿಕಾಸವಾದ~ ಶೈಶವಾವಸ್ಥೆಗೆ ನಿಂತುಬಿಟ್ಟಿತೇ ಎನ್ನುವಂತಿಲ್ಲ. ಬ್ಲಾಗಿನ ಬರಹಗಳ ಹರಹು ನೋಡಿದರೆ `ವಿಕಾಸ~ ಸಾಕಷ್ಟು ವಿಸ್ತಾರವಾಗಿದೆ. ಹಾಂ, ಅವರು ಐದು ವರ್ಷಗಳಿಂದ ಬ್ಲಾಗ್ ಬರೆಯುತ್ತಿದ್ದಾರೆ ಎನ್ನುವುದೇ `ವಿಕಾಸವಾದ~ದ ಚಲನಶೀಲತೆಗೆ ಸಾಕ್ಷಿ.

ಯಾವುದಾದರೂ ಊರಿಗೆ ಹೋದಾಗ ಅಲ್ಲಿನ ವಿಶೇಷ ಏನು ಅನ್ನುವುದನ್ನು ತಿಳಿದುಕೊಳ್ಳುವುದು ನನ್ನ ಅಭ್ಯಾಸ ಎಂದು ವಿಕಾಸ ಬರಹವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲಿಗವರು ಅಲೆಮಾರಿ ಎಂದಾಯಿತು.

ಅದಕ್ಕೆ ತಕ್ಕನಾಗಿ ಒಳನಾಡು ಹೊರನಾಡಿನ ಅನೇಕ ಪ್ರದೇಶಗಳ ಕುರಿತ ಬರಹಗಳು ಬ್ಲಾಗಿನಲ್ಲಿವೆ. ಬರ್ಲಿಂಗ್ಟನ್, ನಯಾಗರ ಜಲಪಾತ, ನಯಾಗರ ಪರಿಸರದ ದ್ರಾಕ್ಷಿ ತೋಟಗಳು ಹಾಗೂ ವೈನ್, ಶೃಂಗೇರಿಯ ಮೂಗುತಿ ಮೀನು- ಹೀಗೆ, ಸಾಕಷ್ಟು ವಿಷಯಗಳ ಬಗ್ಗೆ ಅವರು ಬರೆದಿದ್ದಾರೆ. `ದಿಢೀರ್ ದೋಸೆ ಮಾಡುವುದು ಹೇಗೆ?~

ಎನ್ನುವಂಥ ಬರಹವನ್ನೂ ದಾಖಲಿಸಿದ್ದಾರೆ. ತಾವು ನೋಡಿದ ಸಿನಿಮಾ ಬಗ್ಗೆ ಟಿಪ್ಪಣಿಯನ್ನೂ ತಮಗಿಷ್ಟವಾದ ಕಥೆಯ ಅನುವಾದವನ್ನೂ ಅವರು ಸಹೃದಯರೊಂದಿಗೆ ಹಂಚಿಕೊಳ್ಳಬಲ್ಲರು.

ವಿಕಾಸರ ಬರವಣಿಗೆಯ ಸೊಗಸಿಗೆ ಉದಾಹರಣೆಯಾಗಿ `ತಿರುಗಿ ಕೆಟ್ಟರೂ ಪರವಾಗಿಲ್ಲ...~ ಬರಹದ ತುಣುಕನ್ನು ನೋಡಬಹುದು:ಹಿಂದಿನ ವರ್ಷ ಕೆನಡಾದಲ್ಲಿ ತಣ್ಣಗೆ ಕುಳಿತು ನೆಟ್ ಚಾಟ್ ಮಾಡುತ್ತಿದ್ದಾಗ ಗೆಳತಿಯೊಬ್ಬಳು `ಅಲಾಸ್ಕಾಗೆ ಹೋಗಿ ಬಂದ್ಯಾ?~
 
ಅಂತ ಕೇಳಿದ್ದಳು. ಭೂಮಿ ಮೇಲಿನ ಸುಂದರ ಪ್ರದೇಶಗಳಲ್ಲಿ ~ಅಲಾಸ್ಕಾ~ ಕೂಡ ಒಂದು ಅಂತ ಹೇಳುತ್ತಾರೆ. ಕೆನಡಾ ದೇಶದ ಗಡಿಗೆ ತಾಗಿಕೊಂಡಿದ್ದರೂ ಕೂಡ ನಾನಿದ್ದ ಊರಿನಿಂದ ಅದು ಬಹಳ ದೂರ ಇತ್ತು. ಜೊತೆಗೆ ಅದು ಯು.ಎಸ್.ಎ. ದೇಶಕ್ಕೆ ಸೇರುವ ಪ್ರದೇಶ. ನನಗೆ ಯು.ಎಸ್. ವೀಸಾ ಕೂಡ ಇರಲಿಲ್ಲ.

ಇದ್ದರೂ ಸಮಯ ಮತ್ತು ಹಣ ಬಹಳ ಖರ್ಚಾಗುತ್ತಿದ್ದುದರಿಂದ ಅಲಾಸ್ಕಾಗೆ ಹೋಗಿಬರಲು ಆಗುತ್ತಿರಲೂ ಇಲ್ಲ. ಅದನ್ನೇ ಹೇಳಿದರೆ, `ಅಷ್ಟು ದೂರ ಹೋಗಿ ಅಲಾಸ್ಕಾಗೆ ಹೋಗಲಿಲ್ಲ ಅಂದಮೇಲೆ ನೀನು ಅಲ್ಲಿಗೆ ಹೋಗಿದ್ದೇ ವೇಸ್ಟ್~ ಅಂದಳು. ನಾನೂ ಸುಮ್ಮನಿರದೇ, `ನೀನು ಕಾಶ್ಮೀರಕ್ಕೆ ಹೋಗಿದ್ದೀಯಾ?~ ಅಂತ ಕೇಳಿದೆ.
 
ಅವಳು ಇಲ್ಲ ಅಂದಳು. ಹಾಗಿದ್ದಮೇಲೆ ನೀನು ಇಪ್ಪತ್ತೈದು ವರ್ಷದಿಂದ ಭಾರತದಲ್ಲಿ ಇರುವುದೇ ವೇಸ್ಟ್ ಅಂದು ಅವಳನ್ನು ಸುಮ್ಮನಾಗಿಸಿದೆ. ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಒಮ್ಮೆ ಬೇರೆ ದೇಶದ ಕ್ಲೈಂಟ್ ಒಬ್ಬಳು ಬಂದಿದ್ದಳು. ಭಾರತಕ್ಕೆ ಅದು ಅವಳ ಮೊದಲ ಭೇಟಿ. ಅವಳು ಬರುವಾಗಲೇ ಯಾವ ರೀತಿ ಪ್ಲಾನ್ ಮಾಡಿಕೊಂಡು ಬಂದಿದ್ದಳು ಅಂದರೆ, ಇಲ್ಲಿ ಇದ್ದಿದ್ದು ಒಂದು ವಾರವೇ ಆದರೂ ಒಂದೇ ದಿನದಲ್ಲಿ ವಿಮಾನದಲ್ಲಿ ಹೋಗಿ ತಾಜ್‌ಮಹಲ್ ನೋಡಿಕೊಂಡು ಬಂದಿದ್ದಳು! `

ನಾವೆಲ್ಲಾ ಇದೇ ದೇಶದಲ್ಲೇ ಹುಟ್ಟಿ ಇಲ್ಲೇ ಇದ್ದರೂ ಆ ಕಡೆ ತಲೆಯೂ ಹಾಕಲಾಗಿಲ್ಲ, ನೀನು ಒಂದೇ ದಿನದಲ್ಲಿ ಒಬ್ಬಳೇ ಹೋಗಿ ನೋಡಿಕೊಂಡು ಬಂದೆ~ ಅಂತ ಅವಳಿಗೆ ಶಭಾಶ್ ಹೇಳಿದ್ದೆವು.

ನಾನು ಹಿಂದಿನ ವರ್ಷ ಇದೇ ಸಮಯದಲ್ಲಿ ಇನ್ನು ಒಂದು ವರ್ಷದ ಒಳಗಾಗಿ ಕರ್ನಾಟಕದಲ್ಲಿ ನನ್ನ ಆಸಕ್ತಿಯ ಕೆಲವು ಮುಖ್ಯವಾದ ಸ್ಥಳಗಳಿಗೆಲ್ಲಾ ಹೋಗಬೇಕು ಅಂದುಕೊಂಡಿದ್ದೆ. ಆದರೆ ಅದು ಆಗಲಿಲ್ಲ. ಅದರ ಬಗ್ಗೆ ಹೀಗೆಯೇ ಪ್ಲಾನ್ ಮಾಡುತ್ತಾ ಇಷ್ಟು ವರ್ಷಗಳಲ್ಲಿ ಎಲ್ಲೆಲ್ಲಿ ಹೋಗಿದ್ದೇನೆ ಅಂತ ಯೋಚಿಸುತ್ತಿದ್ದೆ.

ನಾನು ಭಾರತದ ನಾಲ್ಕು ದಕ್ಷಿಣ ರಾಜ್ಯಗಳಿಗಷ್ಟೇ ಹೋಗಿದ್ದೇನೆ. ಅದೂ ಅಲ್ಲಿ ಕೆಲವು ಊರುಗಳಷ್ಟೇ! ಕರ್ನಾಟಕವನ್ನೇ ತೆಗೆದುಕೊಂಡರೆ, ಇಲ್ಲಿನ ಮೂವತ್ತು ಜಿಲ್ಲೆಗಳಲ್ಲಿ ಬೀದರ್, ಕಲ್ಬುರ್ಗಿ, ವಿಜಾಪುರ, ಬೆಳಗಾವಿ, ರಾಯಚೂರು, ಕೊಪ್ಪಳ, ಗದಗ, ಯಾದಗಿರಿ ಜಿಲ್ಲೆಗಳನ್ನೇ ಹೊಕ್ಕಿಲ್ಲ! ಬೆಂಗಳೂರಿನ ಹತ್ತಿರ ಇರುವ ಎಷ್ಟೋ ಸ್ಥಳಗಳಿಗೆ ಹೋಗಬೇಕು ಅಂದುಕೊಳ್ಳುತ್ತಲೇ ವರ್ಷಗಳು ಕಳೆದುಹೋಗಿವೆ! ನನ್ನ ತವರು ಜಿಲ್ಲೆ ಶಿವಮೊಗ್ಗ, ಉತ್ತರಕನ್ನಡಗಳಲ್ಲೇ ಎಷ್ಟೊಂದೆಲ್ಲಾ ಸ್ಥಳಗಳು ಬಾಕಿ ಇವೆ.

ಇಲ್ಲಿ ಸ್ಥಳಗಳು ಅಂದರೆ ನಮ್ಮ ಆಸಕ್ತಿಗೆ ಸಂಬಂಧಿಸಿದ ಯಾವುದಾದರೂ ಆಯಿತು. ಕೆಲವರಿಗೆ ಐತಿಹಾಸಿಕ ಸ್ಥಳಗಳು ಆಸಕ್ತಿಯದ್ದಾದರೆ, ಮತ್ತೆ ಕೆಲವರಿಗೆ ನಿಸರ್ಗವೇ ಪುಣ್ಯಕ್ಷೇತ್ರ! ಆದರೆ ಆಸಕ್ತಿಗಳೇ ಇರದಿದ್ದರೆ ಮಾತ್ರ ಇದೆಲ್ಲಾ ಅರ್ಥವಾಗುವುದಿಲ್ಲ. ಪ್ರತಿಯೊಂದು ಪ್ರದೇಶಗಳಲ್ಲೂ ಆ ಜನ, ಜೀವನ, ಭಾಷೆ, ಹವಾಮಾನ, ಪ್ರಕೃತಿ, ಸಂಸ್ಕೃತಿ ಎಲ್ಲವೂ ಅನುಭವಗಳೇ ಹೌದು. ಹಾಗೆ ಎಲ್ಲಾ ಕಡೆ ಹೋಗಲು ಎಲ್ಲರಿಗೂ ಸಾಧ್ಯವೂ ಇಲ್ಲ ಅಂದುಕೊಂಡರೂ ಒಂದಂತೂ ನಿಜ. ತಿರುಗಿ ಕೆಟ್ಟರೂ ಪರವಾಗಿಲ್ಲ, ಕೂತು ಕೆಡಬಾರದು! ...”.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT