ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದನ; ಜೀವನಾಂಶ

ನಿಮಗಿದು ತಿಳಿದಿರಲಿ
Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪತಿ ಪತ್ನಿಯರ ಜಗಳ ಉಂಡು ಮಲಗುವವರೆಗೆ ಎಂಬ ಗಾದೆಯೇ ಇದೆ. ಹಾಗೆಯೇ ಆಗುವುದಾದರೆ ಸಂತೋಷ. ಆದರೆ ಈ ಜಗಳ ಅದನ್ನೂ ದಾಟಿ ಮುಂದುವರೆಯುವ ಸಂದರ್ಭಗಳಿಗೇನೂ ಕೊರತೆ ಇಲ್ಲ. ಈ ಜಗಳ ಅನೇಕ ಕಾರಣಗಳಿಗಾಗಿ ಪ್ರಾರಂಭವಾಗಬಹುದು ಮತ್ತು ಮುಂದುವರಿಯಬಹುದು ಮತ್ತು ಜೀವನವನ್ನು ನರಕ ಪ್ರಾಯವಾಗಿಸಬಹುದು. ಜೀವನವನ್ನು ಅಸಹನೀಯವನ್ನಾಗಿಸುವುದು ಕೇವಲ ಜಗಳವೊಂದೇ ಅಲ್ಲ. ಅನೇಕ ಕಾರಣಗಳಿಗಾಗಿ ಜೀವನ ಅಸಹನೀಯ ಎಂಬಂಥ ಸಂದರ್ಭಗಳನ್ನು ಪತಿ ಪತ್ನಿಯರು ತಮ್ಮ ವೈವಾಹಿಕ ಜೀವನದಲ್ಲಿ ಎದುರಿಸುತ್ತಾರೆ. ಮಹಿಳೆಯರಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಗಂಡನ ವರ್ತನೆ, ಅವನ ದುರಭ್ಯಾಸಗಳು, ಅವನ ಅನೈತಿಕ ಜೀವನ, ಅವನ ಕ್ರೌರ್ಯ, ಅದರಿಂದಾಗಿ ದೇಹಕ್ಕೆ ಹಾಗೂ ಮನಸ್ಸಿಗೆ ಉಂಟಾಗುವ ಹಿಂಸೆ..

ಇವೆಲ್ಲದರಿಂದ ಜೀವನ ಎಷ್ಟು ದುರ್ಭರವಾಗುತ್ತದೆಂದರೆ ಎಷ್ಟೋ ಹೆಣ್ಣುಮಕ್ಕಳು ಎಷ್ಟೋ ಸಂದರ್ಭಗಳಲ್ಲಿ ಜೀವನಕ್ಕೆ ಮುಕ್ತಾಯ ಹಾಡುವುದೊಂದೇ ಉಳಿದಿರುವ ಮಾರ್ಗ ಎಂದು ಆತ್ಮಹತ್ಯೆಗೆ ಶರಣಾಗಿಬಿಡುತ್ತಾರೆ. ಇದು ಸರಿಯಾದ ಕ್ರಮವಲ್ಲ. ಈಸಬೇಕು ಇದ್ದು ಜೈಸಬೇಕು. ಜೀವನ ಅಮೂಲ್ಯವಾದದ್ದು. ಆದರೆ, ಅಂಥ ಗಂಡನಿಂದ ವಿಚ್ಛೇದನ ಪಡೆದು ಸಮಾಜದ ಹಾಗೂ ಬಂಧುಗಳ ಕೆಂಗಣ್ಣಿಗೆ ಗುರಿಯಾಗುವ ಧೈರ್ಯವಿರುವುದಿಲ್ಲ. ಹಾಗೆಂದು ಅಂಥ ಗಂಡನ ಜೊತೆ ಜೀವಿಸುವುದೂ ಸಾಧ್ಯವಿರುವುದಿಲ್ಲ. ಹಾಗಾಗಿ ಸಾವಿಗೆ ಶರಣಾಗುವುದು ಒಂದೇ ದಾರಿಯೆಂದು ಅವರಿಗೆ ಕಂಡರೆ ಆಶ್ಚರ್ಯವಿಲ್ಲ. ಗಂಡನಿಂದ ವಿಚ್ಛೇದನ ಪಡೆದರೆ ಮಾತ್ರ ಜೀವನಾಂಶ ದೊರೆಯುತ್ತದೆ, ಇಲ್ಲದಿದ್ದರೆ ದೊರೆಯುವುದಿಲ್ಲ ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಇದೆ. ಆದರೆ ಇದು ಸರಿಯಲ್ಲ. ಕಾನೂನು ಅವರ ನೆರವಿಗಿದೆ. ಅಂಥ ಹೆಣ್ಣು ಮಕ್ಕಳು ವಿಚ್ಛೇದನ ಪಡೆಯದೆಯೇ ಗಂಡನಿಂದ ಪ್ರತ್ಯೇಕವಾಗಿ ವಾಸಿಸಲು ಮತ್ತು ಜೀವನಾಂಶವನ್ನು ಪಡೆಯಲು ಸಹ ಕಾನೂನು ಅವಕಾಶ ಮಾಡಿ ಕೊಡುತ್ತದೆ. ಇದು ಮಹಿಳೆಯರಿಗೆ ಮಾತ್ರ ಇರುವ ಅವಕಾಶ.

ಜೀವನಾಂಶವನ್ನು ನಿರ್ಧರಿಸುವಾಗ ಸಾಮಾನ್ಯವಾಗಿ ಈ ಮುಂದಿನ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಲಾಗುತ್ತದೆ. ಅವೆಂದರೆ- ಜೀವನಾಂಶ ಪಡೆಯುವವರಿಗೆ ಇರುವ ಹಣಕಾಸು ನೆರವಿನ ಅಗತ್ಯ; ಜೀವನಾಂಶ ನೀಡುವವರಿಗೆ ಅದನ್ನು ನೀಡಲು ಇರುವ ಹಣಕಾಸಿನ ಸಾಮರ್ಥ್ಯ; ಜೀವನಾಂಶ ಪಡೆಯುವವರ ಮತ್ತು ಅದನ್ನು ನೀಡುವವರ ವಯಸ್ಸು ಮತ್ತು ಆರೋಗ್ಯ; ವಿವಾಹ ಊರ್ಜಿತವಿದ್ದ ಕಾಲದಲ್ಲಿ ಆಕೆಗೆ ರೂಢಿಯಾಗಿದ್ದ ಜೀವನ ಶೈಲಿ ಮತ್ತು ಜೀವನ ಮಟ್ಟ; ಪತಿ ಪತ್ನಿಯರಿಗೆ ಸಂಪಾದನೆ ಮಾಡಲು ಇರುವ ಸಾಮರ್ಥ್ಯ; ಮತ್ತು ಜೀವನಾಂಶ ಪಡೆಯುವವರು ಕುಟುಂಬಕ್ಕಾಗಿ ಮಾಡಿದ ಹಣಕಾಸು ಸ್ವರೂಪದ್ದಲ್ಲದ ಯಾವುವೇ ಕೊಡುಗೆಗಳು. ಇಲ್ಲಿ ಇನ್ನು ಮುಂದೆ ಕೊಟ್ಟಿರುವ ಕಾರಣಗಳಿಗಾಗಿ ಜೀವನಾಂಶ ಕೇಳಲು ಅವಕಾಶವಿದೆ, ಅವೆಂದರೆ, ಸರಿಯಾದ ಕಾರಣವಿಲ್ಲದೇ ಮತ್ತು ಹೆಂಡತಿಯ ಒಪ್ಪಿಗೆಯಿಲ್ಲದೇ ಅಥವಾ ಅವಳ ಇಚ್ಛೆಗೆ ವಿರುದ್ಧವಾಗಿ ಗಂಡ ಹೆಂಡತಿಯನ್ನು ತೊರೆದರೆ, ಉದ್ದೇಶ ಪೂರ್ವಕವಾಗಿ ಅವಳನ್ನು ನಿರ್ಲಕ್ಷಿಸಿದರೆ, ಗಂಡನ ಕ್ರೌರ್ಯದಿಂದಾಗಿ ತನ್ನ ಜೀವಕ್ಕೆ ಅಪಾಯವಾಗಬಹುದು ಎಂಬ ಸಕಾರಣವಾದ ಭಯ ಅವಳ ಮನಸ್ಸಿನಲ್ಲಿ ಉಂಟಾಗುವಂತೆ ಗಂಡ ನಡೆದುಕೊಂಡರೆ, ಗಂಡ ಸಾಂಕ್ರಾಮಿಕ ಸ್ವರೂಪದ ಕುಷ್ಟರೋಗದಿಂದ ನರಳುತ್ತಿದ್ದರೆ. ಹೆಂಡತಿಯಿರುವ ಮನೆಗೇ ಉಪಪತ್ನಿಯನ್ನು ತಂದು ಇರಿಸಿಕೊಂಡರೆ ಅಥವಾ ತಾನೇ ಹೋಗಿ ಅವಳ ಮನೆಯಲ್ಲೇ ಹೆಚ್ಚು ಕಾಲ ಇದ್ದರೆ ಅಥವಾ ಹಿಂದೂ ಧರ್ಮವನ್ನು ತ್ಯಜಿಸಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ, ಪತ್ನಿ ಗಂಡನನ್ನು ತೊರೆದು ಪ್ರತ್ಯೇಕವಾಗಿ ವಾಸಿಸಬಹುದು ಮತ್ತು ಅಂಥ ಸಂದರ್ಭದಲ್ಲಿ ಆಕೆ ಗಂಡನಿಂದ ಜೀವನಾಂಶ ಪಡೆಯಲು ಕಾನೂನಿನ ಪ್ರಕಾರ ಹಕ್ಕುಳ್ಳವಳಾಗಿರುತ್ತಾಳೆ.

ಈ ಕಾರಣಗಳಲ್ಲದೆ ಇತರ ಯಾವುದೇ ಸಮರ್ಥನೀಯ ಕಾರಣವಿದ್ದರೂ ಅವಳಿಗೆ ಈ ಹಕ್ಕು ಇರುತ್ತದೆ. (ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ,1956).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT