ವಿಜಾಪುರ: ಸೂಫಿ ಸಂತರು, ಶರಣರು ಆಗಿಹೋದ ಭಾವೈಕ್ಯದ ನೆಲೆವೀಡು. ಜಗತ್ತಿನ ಅಚ್ಚರಿ, ಆದಿಲ್ಶಾಹಿಗಳ ಕಾಲದ ವಾಸ್ತು ವೈಭವ ಒಡಲಲ್ಲಿಟ್ಟುಕೊಂಡಿರುವ ಪ್ರವಾಸಿಗರ ಪಾಲಿನ ಸ್ವರ್ಗ ವಿಜಾಪುರ. ಮಕ್ಕಳ ಸಾಹಿತ್ಯದ ತೂಗು ತೊಟ್ಟಿಲು ಎಂಬ ಖ್ಯಾತಿ ಹೊಂದಿರುವ ವಿಜಾಪುರದ ಜನರು ದಶಕಗಳಿಂದ ನಿರೀಕ್ಷಿಸುತ್ತಿದ್ದ `ನುಡಿ ಆರಾಧನೆ' ಶನಿವಾರದಿಂದ ಆರಂಭವಾಗಲಿದೆ. ಸಕಲ ಸಿದ್ಧತೆಗಳು ಪೂರ್ಣವಾಗಿದ್ದು ಜನರ ಸಂಭ್ರಮ ಮುಗಿಲು ಮುಟ್ಟಿದೆ.

`...ಇವ ನಮ್ಮವ' ಎಂಬ ಮಾನವೀಯ ಮೌಲ್ಯ, `ಕಾಯಕ ತತ್ವ' ಪರಿಚಯಿಸಿದ ಅಣ್ಣ ಬಸವಣ್ಣ, `ನಿನಗೆ ರಸಮೊಂದೆ ಶಾಂತಮೆ...' ಎಂಬ ಶ್ರೇಷ್ಠ ಜಿನಭಕ್ತಿಗೀತೆ ರಚಿಸಿದ `ಅಭಿನವ ಪಂಪ' ನಾಗಚಂದ್ರ, ಕಾಖಂಡಕಿಯ ಮಹಿಪತಿ ದಾಸರು, `ತೊರವೆ ರಾಮಾಯಣ'ದ ಕುಮಾರ ವಾಲ್ಮೀಕಿ, ಅಕ್ಷರ ದಾಸೋಹಿ ಬಂಥನಾಳ ಸಂಗನಬಸವ ಸ್ವಾಮೀಜಿ, ಡಾ.ಫ.ಗು. ಹಳಕಟ್ಟಿ ಅವರಂತಹ ದಾರ್ಶನಿಕರಿಗೆ ಜನ್ಮ ನೀಡಿದ `ಮುತ್ತಿನ ಜೋಳ'ದ ಭೂಮಿ ಅಕ್ಷರ ಜಾತ್ರೆಗೆ ಅಣಿಯಾಗಿದೆ.

ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೈನಿಕ ಶಾಲೆಯ ಆವರಣದಲ್ಲಿ ಅಲಂಕೃತ ಬೃಹತ್ ಮಂಟಪ ನಿರ್ಮಿಸಲಾಗಿದ್ದು, 25,000 ಆಸನ ವ್ಯವಸ್ಥೆ ಮಾಡಲಾಗಿದೆ. ಒಂದು ಸಾವಿರ ಗಣ್ಯರು, 100 ಮಠಾಧೀಶರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳೀಯ ಐತಿಹಾಸಿಕ ಸ್ಮಾರಕಗಳ ಚಿತ್ರ ಬಳಸಿಕೊಂಡು ಪ್ರಮುಖ ವೇದಿಕೆಯನ್ನು ಕಲಾತ್ಮಕವಾಗಿ ರೂಪಿಸಲಾಗಿದೆ. ದೂರದಲ್ಲಿ ಕುಳಿತವರು ಕಾರ್ಯಕ್ರಮವನ್ನು ವೀಕ್ಷಿಸಲು ಅನುವು ಮಾಡಿಕೊಡಲು ಅಲ್ಲಲ್ಲಿ ಬೃಹತ್ ಎಲ್ಸಿಡಿ ಪರದೆಗಳನ್ನು ಅಳವಡಿಸಲಾಗಿದೆ.

ಹೆಚ್ಚಿದ ನಿರೀಕ್ಷೆ: ಒಂಬತ್ತು ದಶಕಗಳ ನಂತರ ನಗರದಲ್ಲಿ ನಡೆಯುತ್ತಿರುವ ಸಮ್ಮೇಳನ ನಿರೀಕ್ಷೆ-ಕುತೂಹಲ ಎರಡನ್ನೂ ಒಟ್ಟೊಟ್ಟಿಗೆ ತಂದಿದೆ. ತಾವು ರೊಟ್ಟಿ ಚಟ್ನಿ ತಿಂದರೂ ಚಿಂತೆಯಿಲ್ಲ ಸಾಲ ಮಾಡಿಯಾದರೂ ಅತಿಥಿಗಳಿಗೆ ಹೋಳಿಗೆ-ತುಪ್ಪ ಉಣಬಡಿಸುವುದು ಇಲ್ಲಿಯ ಜನರ ಜಾಯಮಾನ. ಆಲಮಟ್ಟಿ ಜಲಾಶಯವಿದ್ದರೂ ಜಮೀನಿಗೆ ನೀರು ಹರಿದಿಲ್ಲ. ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ. ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿಲ್ಲ. ಅನ್ನ ಅರಸಿ ಗುಳೆ ಹೋಗುವುದು ತಪ್ಪಿಲ್ಲ. ಈ ಎಲ್ಲ ಸಮಸ್ಯೆಗಳ ಮೇಲೆ ಸಮ್ಮೇಳನ ಬೆಳಕು ಚೆಲ್ಲುತ್ತದೆಯೇ ಎಂದು ಅವರೆಲ್ಲ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ವಿಜಾಪುರ ಜಿಲ್ಲೆಯದ್ದು ಅಳಿಸಲಾರದ ಛಾಪು. ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿಜಾಪುರ, ಜಮಖಂಡಿ, ರಬಕವಿಯಲ್ಲಿ ಮತ್ತು ಸ್ವಾತಂತ್ರ್ಯಾ ನಂತರ ಮುಧೋಳದಲ್ಲಿ ಸಮ್ಮೇಳನಗಳು ನಡೆದಿದ್ದವು. ವಿಜಾಪುರ ಜಿಲ್ಲೆ ವಿಭಜನೆ ನಂತರ 2000ನೇ ಇಸವಿಯಲ್ಲಿ ಬಾಗಲಕೋಟೆಯಲ್ಲಿ ಸಮ್ಮೇಳನ ನಡೆದಿತ್ತು.

ಈ ನೆಲದ `ರತ್ನ'ಗಳಾದ ಫ.ಗು. ಹಳಕಟ್ಟಿ, ಶ್ರೀರಂಗ, ರಂ.ಶ್ರೀ. ಮುಗಳಿ, ಸಿಂಪಿ ಲಿಂಗಣ್ಣ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ ಅಲಂಕರಿಸಿದ್ದು ಇಲ್ಲಿಯ `ಸಾಹಿತ್ಯ ಸಿರಿ'ಗೆ ಸಾಕ್ಷಿ.

ಇಂದೂ ಅದೇ ಮಾತು: 1923ರ ಮೇ 21 ರಿಂದ ಮೂರು ದಿನಗಳ ಕಾಲ ವಿಜಾಪುರದಲ್ಲಿ ನಡೆದಿದ್ದ ಅಖಿಲ ಭಾರತ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ಧಾಂತಿ ಶಿವಶಂಕರ ಶಾಸ್ತ್ರಿಗಳು, `ಅವರೇನು ಮಾಡಿದರು?', `ನಾನು ಮಾಡಿದ್ದೇ ಸರಿ' ಎಂಬ ಅಹಂಭಾವ ಬಿಡಿ ಎಂದು ಬೋಧಿಸಿದ್ದರು.

`ಲೋಕಕ್ಕೆ ಈ ಕಾಲದಲ್ಲಿ ಪರಭಾಷಾ ಸಾಂಕರ್ಯ ರೋಗವು ಪ್ರಬಲಿಸಿರುವಾಗ ಸ್ವದೇಶ ಭಾಷಾ ಸೇವೆಗೆ ಬನ್ನಿರೆಂಬ ಪಥ್ಯ ಪಾನವು ಪುರಾಣ ಶ್ರವಣದಂತೆ ಪೂರೈಕೆಯಾಗುತ್ತಿದೆ. ಎ.ಬಿ.ಸಿ.ಡಿ. ಅಧ್ಯಯನಕ್ಕಿಂತಲೂ ಮೊದಲೇ ನಮ್ಮ ಮಕ್ಕಳಿಗೆ ನೀತಿ- ಧರ್ಮ-ಭಾಷೆಯ ಸೊಬಗು ಕಲಿಸಬೇಕು' ಎಂದು ಅವರು ಪ್ರತಿಪಾದಿಸಿದ್ದರು. 90 ವರ್ಷಗಳ ನಂತರ ಇದೇ ನೆಲದಲ್ಲಿ ನಡೆಯುತ್ತಿರುವ ಈ ಸಮ್ಮೇಳನದ ಅಧ್ಯಕ್ಷರೂ ಅದೇ ಮಾತು ಹೇಳಬೇಕಾಗಿ ಬಂದಿರುವುದು ವಿಪರ್ಯಾಸ.

`ನಮ್ಮ ಈ ಕನ್ನಡ ನಾಡಿಗರೆಲ್ಲರೂ ತಿಂಗಳಿಗೊಮ್ಮೆ ತಲೆಗೊಂದು ಕಾಸು ಕನ್ನಡಕ್ಕೆ ಎಂದು ಪ್ರತಿ ಕುಟುಂಬದಿಂದಲೂ ದ್ರವ್ಯಸಹಾಯವನ್ನು ಪಡೆದವರಾಗಿ ಅದನ್ನು ಕರ್ಣಾಟ ಪರಿಷತ್ತಿಗೆ ಮೂಲಧನವಾಗಿ ಬೆಳೆಯಿಸಿಕೊಂಡು ಸತ್ಕೃತಿ ಪ್ರಚಾರಕ್ಕೆ ವಿನಿಯೋಗಿಸುತ್ತ ಬಂದಲ್ಲಿ, ಕರ್ಣಾಟ ಭಾಷಾ ವಿಚಕ್ಷಣರು ಉದಯಿಸಿ ಬಾರರೇ' ಎಂದು ಶಾಸ್ತ್ರಿಗಳು ಅಂದು ಪ್ರಶ್ನಿಸಿದ್ದರು. ಶತಕದ ಸಂಭ್ರಮದಲ್ಲಿದ್ದರೂ ಸಮ್ಮೇಳನಕ್ಕೆ ಹಣ ಕೊಡಿ ಎಂದು ಸಾಹಿತ್ಯ ಪರಿಷತ್ತು, ಸರ್ಕಾರ ಮತ್ತು ಅಧಿಕಾರಸ್ಥರಿಗೆ ದುಂಬಾಲು ಬೀಳುವುದು ಇನ್ನೂ ತಪ್ಪಿಲ್ಲ.

ಸಿಂಗಾರ: ಸಮ್ಮೇಳನದ ಮಹಾಮಂಟಪಕ್ಕೆ ಮಹಾಮಾನವತಾವಾದಿ ಬಸವ, ಮುಖ್ಯ ವೇದಿಕೆಗೆ ವಚನ ಪಿತಾಮಹ ಫ.ಗು. ಹಳಕಟ್ಟಿ, ಮಹಾದ್ವಾರಕ್ಕೆ ಬಂಥನಾಳ ಸಂಗನ ಬಸವ ಶಿವಯೋಗಿ ಅವರ ಹೆಸರು ಇಡಲಾಗಿದೆ. ಪುರಪ್ರವೇಶದ ಮುಖ್ಯ ದ್ವಾರಗಳಿಗೆ ಜಿಲ್ಲೆಯ ಖ್ಯಾತ ಸಾಹಿತಿಗಳ ನಾಮಕರಣ ಮಾಡಲಾಗಿದೆ. ನಗರದ ತುಂಬೆಲ್ಲ ಸ್ವಾಗತ ಕಮಾನು, ಫಲಕಗಳು ರಾರಾಜಿಸುತ್ತಿವೆ. ನಗರ ಸಾರಿಗೆಯ 40 ಹೊಸ ಬಸ್ ಸೇವೆ ಆರಂಭಿಸಲಾಗಿದೆ.

500 ಪುಸ್ತಕ ಮಳಿಗೆ, 250 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಸೈನಿಕ ಶಾಲೆಯ ಆವರಣದ ಕಂಠಿ ಸಭಾಂಗಣದಲ್ಲಿ ಸಮಾನಾಂತರ ಗೋಷ್ಠಿಗೆ ಅವಕಾಶ ಕಲ್ಪಿಸಲಾಗಿದೆ. `ಕಲೆ-ಕುಂಚ', `ನವರಸ ಸಾಂಸ್ಕೃತಿಕ ಕಲರವ'ದ ರಸದೌತಣವೂ ಇದೆ. ಚಿತ್ರಕಲೆ ಪ್ರದರ್ಶನದ ಜೊತೆಗೆ ರಾಷ್ಟ್ರದ ಆಹ್ವಾನಿತ 40 ಕಲಾವಿದರು ಸ್ಥಳದಲ್ಲಿಯೇ ಚಿತ್ರ ಬಿಡಿಸಲಿದ್ದಾರೆ. 1,372 ಕಲಾವಿದರು 186 ತಂಡಗಳಲ್ಲಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ 12,000 ಜನರಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. `ನಾಲತ್ತವಾಡದ ವೀರೇಶ ಶರಣರು' ಪ್ರಸಾದ ನಿಲಯ ಅನ್ನ ದಾಸೋಹಕ್ಕೆ ಅಣಿಯಾಗಿದೆ. 300 ಬಾಣಸಿಗರು ಅಡುಗೆ ಸಿದ್ಧಪಡಿಸುತ್ತಿದ್ದು, ಲಕ್ಷ ಶೇಂಗಾ ಹೋಳಿಗೆ, ಐದು ಲಕ್ಷ ಖಡಕ್ ರೊಟ್ಟಿ ಸಂಗ್ರಹಿಸಿಕೊಂಡಿದ್ದಾರೆ. ಊಟ-ಉಪಹಾರಕ್ಕೆ 92 ಕೌಂಟರ್ಗಳನ್ನು ತೆರೆಯಲಾಗಿದ್ದು, 5,000ಕ್ಕೂ ಹೆಚ್ಚು ಸ್ವಯಂ ಸೇವಕರು ಸೇವೆಗೆ ಸನ್ನದ್ಧರಾಗಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಮೈಸೂರಿನ ಪೊಲೀಸ್ ಅಶ್ವದಳ, ಬೆಂಗಳೂರಿನ ಪೊಲೀಸ್ ಬ್ಯಾಂಡ್, ಮಹಿಳಾ ವಿವಿಯ ಮಹಿಳಾ ಬ್ಯಾಂಡ್ಗಳನ್ನು ಇದೇ ಮೊದಲ ಬಾರಿಗೆ ಬಳಸಿಕೊಳ್ಳಲಾಗುತ್ತಿದೆ.

ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿದ್ದು, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮೂರು ದಿನಗಳ ಅವಧಿಗೆ ಹಾಗೂ ಬೇರೆ ಜಿಲ್ಲೆಗಳಿಂದ ಬರುವ ನೌಕರರಿಗೆ ಪ್ರಯಾಣಕ್ಕೆ ತಗಲುವ ಅವಧಿಯನ್ನೂ ಸೇರಿಸಿ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.