ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು: ರಾಜ್ಯಪಾಲರಿಗೆ ಇನ್ನಷ್ಟು ದೂರು!

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲ ಯದಲ್ಲಿ ಅಕ್ರಮಗಳು ನಡೆದಿವೆ ಎಂದು ಈಗಾಗಲೇ ಸಾಕಷ್ಟು ದೂರುಗಳು ರಾಜ್ಯಪಾಲರಿಗೆ ಸಲ್ಲಿಕೆಯಾಗಿವೆ. ಎಂಜಿನಿಯರಿಂಗ್‌ ಕಾಲೇಜುಗಳ ಪ್ರಾಂಶುಪಾಲರ ನೇಮಕದಲ್ಲಿಯೂ ಅಕ್ರಮ ನಡೆದಿದೆ ಎಂದು ಹೊಸ ದಾಗಿ ರಾಜ್ಯಪಾಲರಿಗೆ ದಾಖಲೆ ಸಹಿತ ದೂರು ನೀಡಲಾಗಿದೆ.

‘ವಿಶ್ವವಿದ್ಯಾಲಯದ ಸಿ ಮತ್ತು ಆರ್‌ ನಿಯಮದ ಪ್ರಕಾರ ಎಂಜಿನಿಯರಿಂಗ್‌ ಕಾಲೇಜು ಹುದ್ದೆಗೆ ಗರಿಷ್ಠ ವಯೋಮಿತಿ 48 ವರ್ಷ. ಈಗಾಗಲೇ ಎಂಜಿನಿಯರ್‌ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ 10 ವರ್ಷದ ವಿನಾಯಿತಿ ಇದೆ. ಆದರೆ ಎಂಜಿನಿಯರಿಂಗ್‌ ಕಾಲೇ ಜಿನಲ್ಲಿ ಸೇವೆ ಸಲ್ಲಿಸದ 48 ವರ್ಷ ಮೀರಿದವರನ್ನೂ ಪ್ರಾಂಶುಪಾಲರನ್ನಾಗಿ ನೇಮಿಸಲಾಗಿದೆ.’

‘ಯುಜಿಸಿ ನಿಯಮಾವಳಿ ಮತ್ತು ವಿಶ್ವವಿದ್ಯಾಲಯದ ಕಾಯ್ದೆ ಪ್ರಕಾರ ಎಂಜಿನಿಯರಿಂಗ್‌ ಕಾಲೇಜು ಪ್ರಾಂಶು ಪಾಲರ ಹುದ್ದೆಗೆ ನೇಮಕವಾಗುವ ಅಭ್ಯರ್ಥಿ ಪಿಎಚ್‌ ಡಿಗಳಿಗೆ ಮಾರ್ಗದರ್ಶನ ಮಾಡಿರಬೇಕು. ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನ ಗಳನ್ನು ಪ್ರಕಟಿಸಿರಬೇಕು. ಪ್ರತಿಷ್ಠಿತ ಸಂಸ್ಥೆಗಳಿಂದ ಯೋಜನೆ ಗಳನ್ನು ತೆಗೆದುಕೊಂಡು ಅನುಷ್ಠಾನ ಗೊಳಿಸಿ ರಬೇಕು. ವಿಚಾರ ಸಂಕಿರಣ, ಕಾರ್ಯಾಗಾರ ನಡೆಸಿರ ಬೇಕು. ಆದರೆ ಈ ಯಾವುದೇ ಅರ್ಹತೆ ಇಲ್ಲದವರನ್ನು ಪ್ರಾಂಶುಪಾಲರನ್ನಾಗಿ ನೇಮಿಸಲಾಗಿದೆ. ಈ ಎಲ್ಲ ಅರ್ಹತೆ ಇರುವ ಅಭ್ಯರ್ಥಿಗಳು ಎಂಜಿನಿ ಯರಿಂಗ್‌ ಕಾಲೇಜಿನಲ್ಲಿಯೇ ಇದ್ದರೂ ಅವರನ್ನು ನಿರ್ಲಕ್ಷಿ ಸಲಾಗಿದೆ’ ಎಂದು ಆರೋಪಿಸಲಾಗಿದೆ.

ಧಾರವಾಡ ತಜ್ಞರ ದಾಖಲೆ
ಧಾರವಾಡದ ಕೃಷಿ ತಜ್ಞರೊಬ್ಬರು 1993ರಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬೋರ್ಡ್ ಆಫ್‌ ಮ್ಯಾನೇಜ್‌ಮೆಂಟ್‌ಗೆ ನಿರಂತರವಾಗಿ ನೇಮಕ ವಾಗುತ್ತಿದ್ದಾರೆ. 2013ರಲ್ಲಿ ಮತ್ತೆ ಕೃಷಿ ಕೈಗಾರಿ ಕೋದ್ಯಮಿಯ ಕೋಟಾದಲ್ಲಿ ಪುನರ್‌ ನಾಮಕರಣ ಗೊಂಡಿರುವ ಇವರು 2014ರಲ್ಲಿ ವಿಶೇಷ ಜ್ಞಾನ ಹೊಂದಿದ ವಿಜ್ಞಾನಿ ಕೋಟಾದಲ್ಲಿ ಬೀದರ್‌ನ ಹೈನುಗಾರಿಕೆ, ಪ್ರಾಣಿ ಮತ್ತು ಮೀನುಗಾರಿಕಾ ವಿಶ್ವವಿ ದ್ಯಾಲಯಕ್ಕೆ ನೇಮಕಗೊಂಡಿದ್ದಾರೆ. ಕೃಷಿ ವಿಶ್ವವಿದ್ಯಾ ಲಯದ ಅಧಿನಿಮಯ ಸೆಕ್ಷನ್‌ 3ರ ಪ್ರಕಾರ ಒಮ್ಮೆ 3 ವರ್ಷದ ಅವಧಿಗೆ ನಾಮಕರಣಗೊಂಡ ಯಾವುದೇ ವ್ಯಕ್ತಿ ಯಾವುದೇ ಪ್ರಾಧಿಕಾರಕ್ಕೂ ಯಾವುದೇ ಪ್ರವ ರ್ಗದಲ್ಲಿಯೂ ಪುನರ್‌ ನಾಮನಿರ್ದೇಶ ನಗೊಳ್ಳಲು ಅರ್ಹರಲ್ಲ. ಆದರೆ ಒಂದೇ ವ್ಯಕ್ತಿ 1993ರಿಂದ 96, 1996ರಿಂದ 99, 2002ರಿಂದ 2005, 2007 ರಿಂದ 2010ರವರೆಗೆ ನಾಮ ನಿರ್ದೇಶನಗೊಂಡಿ ದ್ದಾರೆ. ಅಲ್ಲದೆ 2013ರಿಂದ ಮತ್ತೆ ನಾಮ ನಿರ್ದೇಶನ ಗೊಂಡ ಇವರನ್ನು 2014ರಲ್ಲಿ ಮತ್ತೊಂದು ವಿಶ್ವವಿ ದ್ಯಾಲಯಕ್ಕೂ ನಾಮನಿರ್ದೇಶನ ಮಾಡಲಾಗಿದೆ ಎಂದು ಆಪಾದಿಸಲಾಗಿದೆ.

‘ದಾವಣಗೆರೆ ಯುಬಿಡಿಟಿಸಿಇ ಕಾಲೇಜಿನ ಪ್ರಾಂಶು ಪಾಲರ ಹುದ್ದೆಗೆ 35 ಅಭ್ಯರ್ಥಿಗಳನ್ನು ಕೇವಲ ಮೂರು ಗಂಟೆಯಲ್ಲಿ ಸಂದರ್ಶಿಸಲಾಗಿದೆ. ಎಲ್ಲ ಅಭ್ಯರ್ಥಿಗಳ ಅರ್ಜಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಿಲ್ಲ. ಸಂದರ್ಶನ ಸಮಿತಿಯ ಸದಸ್ಯರ ಬಗ್ಗೆಯೇ ಸಾಕಷ್ಟು ಆರೋಪ ಗಳಿವೆ. ಕ್ರಿಮಿನಲ್‌ ಪ್ರಕರಣ ದಾಖಲಾಗಿರುವ ವ್ಯಕ್ತಿ ಕೂಡ ಸಂದರ್ಶನ ಸಮಿತಿಯಲ್ಲಿದ್ದರು. ನಿವೃತ್ತ ವ್ಯಕ್ತಿ ಯನ್ನು ಡೀನ್‌ ಎಂದು ನೇಮಕ ಮಾಡಿ ಅವರನ್ನು ಸಂದರ್ಶನ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ’ ಎಂದು ಆಪಾದಿಸಲಾಗಿದೆ.

‘ನೇಮಕಾತಿ ಕುರಿತ ಅಧಿಸೂಚನೆ ಹೊರಡಿಸುವಾಗ, ಸಂದರ್ಶನ ನಡೆಸುವಾಗ, ಅರ್ಜಿಗಳನ್ನು ಪರಿಶೀಲಿ ಸುವಾಗ ಅಕ್ರಮಗಳು ನಡೆದಿವೆ. ಎಲ್ಲಿಯೂ ಪ್ರಾಧ್ಯಾ ಪಕರಾಗಿ ಸೇವೆ ಸಲ್ಲಿಸದೇ ಇರುವ ವ್ಯಕ್ತಿಯನ್ನೂ ಪ್ರಾಂಶುಪಾಲ ಹುದ್ದೆಗೆ ನೇಮಕ ಮಾಡಲಾಗಿದೆ.’

‘ಹೈದರಾಬಾದ್‌ ಕರ್ನಾಟಕ ಮೀಸಲಾತಿ ನಿಗದಿ ಯಾಗುವ ತನಕ ಯಾವುದೇ ನೇಮಕಾತಿ ಮಾಡ ಬಾರದು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದ್ದರೂ ನೇಮಕಾತಿ ನಡೆಸಲಾಗಿದೆ. 371 ಜೆ ಪ್ರಕಾರ ಮೀಸ ಲಾತಿ ಪ್ರಕಟವಾದ ನಂತರ ವಿಶ್ವವಿದ್ಯಾಲಯ ಈಗಾ ಗಲೇ ಅಧಿಸೂಚನೆ ಹೊರಡಿಸಿದ ಹುದ್ದೆಗಳಿಗೆ ಮತ್ತೆ ಅಧಿಸೂಚನೆ ಹೊರಡಿಸಬೇಕಾಗಿತ್ತು. ಆದರೆ ಹಾಗೆ ಮಾಡಿಲ್ಲ. ಯಾವುದೇ ಕುಲಪತಿ ವಿಶ್ವವಿದ್ಯಾ ಲಯದ ಯಾವುದೇ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ ನಂತರ ನಿವೃತ್ತರಾದರೆ ಮುಂದೆ ಬರುವ ಕುಲಪತಿ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು. ಅದೇ ಕುಲಪತಿ ಅಧಿಕಾರಾವಧಿ ವಿಸ್ತರಣೆಯಾದರೂ ಅಧಿಸೂಚನೆಯನ್ನು ಹೊಸದಾಗಿ ಹೊರಡಿಸಬೇಕು ಎಂಬ ನಿಯಮವಿದ್ದರೂ ಹಳೆಯ ಅಧಿಸೂಚನೆ ಯಂತೆಯೇ ನೇಮಕಾತಿ ಪ್ರಕ್ರಿಯೆ ನಡೆದಿದೆ.’

‘ಸಂದರ್ಶನ ಸಮಿತಿಯಲ್ಲದೆ ಅರ್ಜಿಗಳ ಪರಿಶೀಲನಾ ಸಮಿತಿಯೊಂದು ಇರಬೇಕು. ಸಂದರ್ಶನಕ್ಕೆ ಅರ್ಹರಾದ ಎಲ್ಲ ಅಭ್ಯರ್ಥಿಗಳೂ ಆಯಾ ಆಯಾ ವಿಭಾಗದ ಬೋಧನಾ ಸಿಬ್ಬಂದಿಯ ಎದುರು ಪಾಠದ ಪ್ರಾತ್ಯಕ್ಷಿಕೆ ನಡೆಸಬೇಕು. ಅಲ್ಲದೆ ಪಿಎಚ್‌ಡಿ ಮಾರ್ಗದರ್ಶನ, ಪ್ರಬಂಧ ಮಂಡನೆ, ಯೋಜನೆಗಳ ಅನುಷ್ಠಾನ, ವಿಚಾರ ಸಂಕಿರಣಗಳ ನ್ನು ನಡೆಸಿರುವುದು ಹಾಗೂ ಪ್ರಬಂಧಗಳ ಪ್ರಕಟಣೆಗಳಿಗೆ ಅಂಕವನ್ನು ನೀಡಿ ಅದನ್ನು ಮುಚ್ಚಿದ ಲಕೋಟೆಯಲ್ಲಿ ಕುಲಪತಿಗೆ ನೀಡಬೇಕು. ನಂತರ ಸಂದ ರ್ಶನ ಸಮಿತಿ ಎಲ್ಲರನ್ನು ಸಂದರ್ಶನ ಮಾಡಿ ಅಂಕ ನೀಡಬೇಕು. ಆ ನಂತರ ಸಂದರ್ಶನದ ಅಂಕ ಮತ್ತು ಪರಿಶೀಲನಾ ಸಮಿತಿ ನೀಡಿದ ಅಂಕವನ್ನು ಒಟ್ಟು ಮಾಡಿ ನೇಮಕಾತಿಗೆ ಅಭ್ಯರ್ಥಿಯನ್ನು ಪರಿಗಣಿಸಬೇಕು ಎನ್ನು ವುದು ತಾಂತ್ರಿಕ ವಿಶ್ವವಿದ್ಯಾಲಯದ ನಿಯಮ.

ಆದರೆ ದಾವಣಗೆರೆ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶು ಪಾಲರ ಹುದ್ದೆಗೆ ನಡೆದ ಸಂದರ್ಶನದಲ್ಲಿ ಪರಿಶೀಲನಾ  ಸಮಿತಿ ಮತ್ತು ಸಂದರ್ಶನ ಸಮಿತಿಯ ಸದಸ್ಯರು ಒಟ್ಟಾಗಿಯೇ ಕುಳಿತು ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯ ಒಳಗೆ 35 ಅಭ್ಯರ್ಥಿಗಳನ್ನು ಸಂದರ್ಶನ ಮಾಡಿದರು. ಅದರಲ್ಲಿ ಮಧ್ಯಾಹ್ನ 1 ಗಂಟೆ ಊಟದ ಬಿಡುವು ನೀಡಲಾಗಿತ್ತು.  ಬೆಳಿಗ್ಗೆ 10 ಗಂಟೆಗೆ ಸೆಮಿನಾರ್‌, ಮಧ್ಯಾಹ್ನ 2 ಗಂಟೆಗೆ ಸಂದರ್ಶನ ಎಂದು ಅಭ್ಯರ್ಥಿಗಳಿಗೆ ತಿಳಿಸಲಾಗಿತ್ತು. ಆದರೆ ಇದು ನಡೆಯಲಿಲ್ಲ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಸಂದರ್ಶನ ನಡೆದ 6 ತಿಂಗಳ ಒಳಗೆ ನೇಮಕಾತಿಯ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಿಂಡಿಕೇಟ್‌ನಲ್ಲಿ ಒಪ್ಪಿಗೆ ಪಡೆಯಬೇಕು. ಇಲ್ಲಿ ಇದೂ ಕೂಡ ಆಗಿಲ್ಲ. ಮೇ ತಿಂಗಳಿನಲ್ಲಿ ಸಂದರ್ಶನ ನಡೆದರೆ. ಈ ಬಗ್ಗೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು ಡಿಸೆಂಬರ್‌ನಲ್ಲಿ. ನೇಮಕಾತಿ ವಿಷಯವನ್ನು ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಿ ಆ ಬಗ್ಗೆ ವಿವರವಾದ ಚರ್ಚೆ ನಡೆಸಬೇಕು. ಅದರ ನಡಾವಳಿಯನ್ನು ಎಲ್ಲ ಸದಸ್ಯರಿಗೂ ನೀಡಬೇಕು. ನಂತರ ಮುಂದಿನ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಆದರೆ ಇಲ್ಲಿ ಈ ನಿಯಮವನ್ನು ಉಲ್ಲಂಘಿಸಿ ಸಭೆ ನಡೆದ ದಿನವೇ ಆಯ್ಕೆಯಾದ ಅಭ್ಯರ್ಥಿಗೆ ಇ–ಮೇಲ್‌ ಮುಖಾಂತರ ನೇಮಕಾತಿ ಆದೇಶ ಕಳುಹಿಸಿಕೊಡಲಾಗಿದೆ’ ಎಂದು ದೂರಲಾಗಿದೆ.

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT