ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಲಯದ ಕಲೋಪಾಸನೆ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಅಲ್ಲಿ ಜಿಂಕೆಯ ತುಂಟಾಟವಿದೆ, ಜಿರಾಫೆಗಳ ಆಟೋಟವಿದೆ, ಕೆನೆಯುತ್ತಿರುವ ಕುದುರೆಯಿದೆ, ಚಿಕ್ಕ ಚಿಕ್ಕ ಮನೆಗಳಂತೆ ಭಾಸವಾಗುವ ಅಣಬೆಗಳ ರಾಶಿ ಇದೆ, ಹಸಿರ ಸಿರಿಯ ನಡುವೆ ಸರಸ್ವತಿ ವೀಣೆ ನುಡಿಸುತ್ತಿದ್ದಾಳೆ, ಬೋಧಿವೃಕ್ಷದ ಕೆಳಗೆ ಬುದ್ಧ ತಪಸ್ಸಿನಲ್ಲಿ ಮಗ್ನವಾಗಿದ್ದಾನೆ, ಮಗುವನ್ನು ಹೊತ್ತ ಅಮ್ಮ ಇವೆಲ್ಲ ನೋಡುವಲ್ಲಿ ತಲ್ಲೀನಳಾಗಿದ್ದಾಳೆ...



ನೋಡಿದಷ್ಟೂ ಮತ್ತಷ್ಟು, ಇನ್ನಷ್ಟು ನೋಡಬೇಕೆನಿಸುವ, ನಿಜ ಸ್ವರೂಪವನ್ನೇ ಮೈದಳೆದಂತಿರುವ ಈ ಕಲಾಕೃತಿ ಗಳಿರುವುದು ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ. ಇವೆಲ್ಲ  ರೂಪುತಳೆದಿರುವುದು ವಿದ್ಯಾರ್ಥಿಗಳ ಕೈಯಲ್ಲಿ ಎಂಬುದು ವಿಶೇಷ.

‌ಖ್ಯಾತ ಚಿತ್ರಕಲಾವಿದರಾದ ಎಂ.ವಿ.ಮಿಣಜಗಿಯವರ ಶ್ರಮದ ಫಲವಾಗಿ 1964ರಲ್ಲಿ ಈ ಕಲಾಶಾಲೆ ನಿರ್ಮಾಣಗೊಂಡಿದೆ. ಅವರ ನಂತರ ಸುಮಾರು 25 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ವಿ.ಬಿ. ಹಿರೇಗೌಡರ ಅವರ ಆಸಕ್ತಿಯ ಫಲವಾಗಿ ಇಂದು 23 ಎಕರೆ ಪ್ರದೇಶದಲ್ಲಿ ಕಲಾಪ್ರಪಂಚ ಮೈದಳೆದಿದೆ.

ಒಡೆದಿರುವ ಬಣ್ಣ ಬಣ್ಣದ ಟೈಲ್ಸ್‌ಗಳಿಂದ ವಿವಿಧ ಭಾವನೆಯುಳ್ಳ ಮುಖಗಳನ್ನು ಇಲ್ಲಿರುವ ಪ್ರತಿಯೊಂದು ಮರದ ಕೆಳಗೆ ಕಾಣಬಹುದು. ಶಾಲೆಯ ದ್ವಾರದ ಬಾಗಿಲಲ್ಲಿ ಸ್ವಾಗತಿಸುತ್ತಿರುವ ಟೆರ್ರಾಕೋಟದಿಂದ ರಚಿಸಿರುವ ಆನೆ ಮತ್ತು ಗೂಳಿಯ ದೃಶ್ಯ ಮನಮೋಹಕ. ಸೃಜನಾತ್ಮಕತೆಯಿಂದ ಕೂಡಿರುವ ಅನೇಕ ಭಿತ್ತಿಚಿತ್ರಗಳು  ಕಲಾಶಾಲೆಗೆ ಸೌಂದರ್ಯವನ್ನು ಹೆಚ್ಚಿಸಿವೆ. ಶಾಲೆಯ ಗೋಡೆಗಳಲ್ಲಿ ರೂಪಿಸಲಾದ ಕುವೆಂಪು ಹಾಗೂ ಕಲಾವಿದ ಎಂ.ವಿ. ಮಿಣಜಿಗಿಯವರ ಭಾವಚಿತ್ರಗಳು ನೋಡಲು ಸುಂದರ. ಹಾಗೆಯೇ ಅನೇಕ  ಭಿತ್ತಿಚಿತ್ರಗಳು, ಟೆರ್ರಾಕೋಟ ಮತ್ತು ಐತಿಹಾಸಿಕ ಚಿತ್ರಗಳ ಜೊತೆ ಜನಪದ ಚಿತ್ರಗಳೂ ಇಲ್ಲಿವೆ.



  ‘ಈ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಲಾವಿದ್ಯೆಯನ್ನು ಆರಾಧಿಸುತ್ತಾ, ಅದ್ಭುತ ಕಲಾವಿದರಾಗಿ ಹೊರಹೊಮ್ಮಿರುತ್ತಾರೆ. 50 ವರ್ಷದ ಸಂಭ್ರಮಾಚರಣೆಯಲ್ಲಿರುವ ಈ ಕಲಾ ವಿದ್ಯಾಲಯದಲ್ಲಿ ಇಲ್ಲಿಯವರೆಗೆ ಕಲಿತ ವಿದ್ಯಾರ್ಥಿಗಳ ಪೈಕಿ ಅನೇಕ ಮಂದಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕಲಾವಿದರಾಗಿ, ಕಲಾತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ’ ಎನ್ನುತ್ತಾರೆ ವಿದ್ಯಾಲಯದ ಉಪನ್ಯಾಸಕರಾದ ಜಯರಾಜ ಚಿಕ್ಕಪಾಟೀಲ ಮತ್ತು ಸಂತೋಷಕುಮಾರ್ ಕುಲಕರ್ಣಿ.

1992–93ರಲ್ಲಿ ಕುವೆಂಪು ವಿಶ್ವವಿದ್ಯಾಲಯವು ಈ ಕಲಾಶಾಲೆಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ‘ಲಲಿತಕಲಾ ಮಹಾವಿದ್ಯಾಲಯ’ ಎಂದು ನಾಮಕರಣ ಮಾಡಿತು. ನಂತರ ಇತ್ತೀಚೆಗೆ ನೂತನ ವಿಶ್ವವಿದ್ಯಾಲಯ ದಾವಣಗೆರೆಯಲ್ಲಿ ಪ್ರಾರಂಭವಾಗಿದ್ದಾಗಿನಿಂದ ಈ ವಿದ್ಯಾಲಯವು ‘ದಾವಣಗೆರೆ ವಿಶ್ವವಿದ್ಯಾಲಯ’ದ ಹೆಮ್ಮೆಯ ವಿಭಾಗವಾಗಿ ಗುರುತಿಸಿಕೊಂಡಿರುವುದು ವಿಶೇಷ.   

                               
               

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT