ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ ವಾದಕ ಪಂ. ರವೀಂದ್ರ ಯಾವಗಲ್

Last Updated 15 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

`ಸಂಗೀತ ಅಂದ್ರ ಬರೀ ಹಾಡುವವರು ಅಥವಾ ಮುಖ್ಯ ಕಲಾವಿದರಷ್ಟೇ ಅಲ್ಲ. ಜನ ಹಾಡೋವ್ರಿಗಷ್ಟ ಯಾಕ ಹೆಚ್ಗಿ ಮರ್ಯಾದಿ ಕೊಡ್ತಾರ ಅನ್ನೋದು ಗೊತ್ತಿಲ್ಲ. ಕೇಳಿ ಪಡೆಯೋದು ಮರ್ಯಾದೆ ಅನ್ನಸೂದಿಲ್ಲ. ದುಡ್ಡಿಂದು ಬಿಯಾಂಡ್ ದಿ ಕರ್ಟನ್ಸ್ ಆಗ್ತದ. ಆದ್ರ ಸಭಾ ಮರ್ಯಾದೆ ಆಗ್ಬೇಕಲ್ಲ~.

ಪಂ. ರವೀಂದ್ರ ಯಾವಗಲ್ ಅವರ ಸಂಗೀತದ ಸಾಥಿದಾರರ ಬಗ್ಗೆ ಕಾಳಜಿಯ ಮಾತುಗಳಿವು.

ಅನನ್ಯವಾದ ತಬಲಾವಾದನದ ಜೊತೆಗೆ ಸರಳತೆ, ಮುಗ್ಧತೆಗಳಿಂದ ಎಲ್ಲರೊಳಗೊಂದಾಗುವ ಪ್ರೀತಿಯ ಕಲಾವಿದ. ವಿನಯವೇ ವಿದ್ಯೆಗೆ ಭೂಷಣ ಎಂಬಂಥ ವ್ಯಕ್ತಿತ್ವ. ಸಾಮಾನ್ಯವಾಗಿ ಎಂಥಹ ಸಂದರ್ಭದಲ್ಲೂ ಹೆಚ್ಚು ಮಾತನಾಡದ ಇವರು `ಮೆಟ್ರೋ~ದ ಮಾತಿಗೆ ಅಪರೂಪವೆಂಬಂತೆ ಸಿಕ್ಕರು.

ಸಾಮಾನ್ಯವಾಗಿ ತಬಲಾ ಕಲಾವಿದರು ಎದುರಿಸುವ ಸವಾಲುಗಳೇನು?
ಸಾಥಿದಾರರ ಸವಾಲು ಭಾಳ ಬಿಗಿ ಇರ‌್ತದ. ಯಾಕಂದ್ರ, ಮುಖ್ಯ ಕಲಾವಿದರ ತಯಾರಿ ಬ್ಯಾರೇನ ಇರ್ತದ.  ನಮ್ದು ಹಂಗಲ್ಲ. ಎಷ್ಟೇ ತಯಾರಿ ಮಾಡ್ಕೊಂಡ್ರೂ ಮುಖ್ಯ ಕಲಾವಿದರೊಂದಿಗೆ ಸಾಗುವ ವೇಗವನ್ನು ಪಡೀಬೇಕು. ಅವರ ಶಾರೀರದೊಂದಿಗೆ ನಮ್ಮ ತಯಾರಿ ಒಂದಾಗಾಕ ಬೇಕು. ಇಲ್ಲಾಂದ್ರ  ನಾ ಬಾರ‌್ಸೋದೊಂದು ಅವ್ರ ಹಾಡೋದೊಂದು ಆಗ್ತದ. ಅಂದ್ರ ಪ್ರತಿಯೊಬ್ಬ ಆರ್ಟಿಸ್ಟ್‌ಗೂ ಬ್ಯಾರೆ ಬ್ಯಾರೆ ಥರಾನ ನುಡಿಸ್ಬೇಕು. ಅವರೊಂದಿಗೆ ಒಂದಾಗಬೇಕು. ನಮ್ಮ ಅಸ್ತಿತ್ವನೂ ಬೆಳಸ್ಕೊಬೇಕು. ಅದಕ್ಕ ನಾವು ಭಾಳ ತಯಾರಾಗಿರಬೇಕು.

ಸಾಥಿದಾರರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಹಾಗೂ ಸಂಭಾವನೆಯ ವಿಷಯದಲ್ಲಿ ಅಜಗಜಾಂತರ ವ್ಯತ್ಯಾಸವಿದೆಯಲ್ಲ?
ಇದು ಯಾಕ್ ಆಗ್ತಿದೆ ಅಂತ ನಂಗೂ ಗೊತ್ತಾಗ್ತಿಲ್ಲ. ಹಂಗ  ಹೆಚ್ಚೂ ಕಡಿಮಿ ಆಗ್ಬಾರ್ದು. ಕಲಾವಿದನ ಅನುಭವ ಮತ್ತು ಸಾಮರ್ಥ್ಯಕ್ಕ ತಕ್ಕಂಥ ಗೌರವ ಸಿಗ್ಲೇಬೇಕು. ಆದ್ರ ಒಮ್ಮಮ್ಮೆ ಹಿಂಗಾಗುದಿಲ್ಲ. ಈ ಕ್ಷೇತ್ರದೊಳಗ ಸುಮಾರು 40 ವರ್ಷದಿಂದ  ಕೃಷಿ ಮಾಡಿದ ನಂಗಿಂತ, ಈಗ ಒಂದು ಹತ್ತು ವರ್ಷದಿಂದ ಹಾಡುವವನಿಗೆ ಹೆಚ್ಚು ಸಂಭಾವನೆ ಕೊಟ್ರ ಏನು ಅನ್ನಿಸಬಹುದು? ಆಯೋಜಕರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾರ್ಮೋನಿಯಂ ಮತ್ತೆ ತಬಲಾ ಎರಡೂ ಸಂಗೀತದ ಅವಿಭಾಜ್ಯ ಅಂಗ. ಇಲ್ಲಾಂದ್ರ ಬರಿ ಹಾಡಷ್ಟ ಯಾರ್ ಕೇಳ್ತಾರ. ಛೊಲೊ ತಬಲಾ ಯಾಕ ಬೇಕಂತಾರ? ಹೊರಗಡೆಯ ಕಲಾವಿದರಿಗೆ ಹೆಚ್ಚಿನ ಸಂಭಾವನೆ ನೀಡುತ್ತಾರೆ.  ಹೊರಗಿನ ಕಲಾವಿದರಿಗೂ ಹೆಚ್ಚಿನ ಸಾಥ್ ನೀಡೀನಿ. ಅವಾಗೆಲ್ಲ ಇಂಥ ತರತಮ ನೀತಿಯನ್ನೂ ಅನುಭವಿಸೀನಿ. ಏನೋ ಆರ್ಥಿಕ ತೊಂದರೆ ಇದ್ರೂ  `ಹಾ, ಇವ್ರನ್ನ ಹಾಕ್ರಿ~ ಅಂತಾರ. ಅದು ಆಗಬಾರ್ದು. ಕಲಾವಿದರ ಆಯ್ಕೆ ರೊಕ್ಕದ ಮ್ಯಾಲೆ ಡಿಪೆಂಡ್ ಆಗ್ಬಾರ್ದು. ರೇಡಿಯೋದೊಳಗ ಗ್ರೇಡೇಷನ್ ಮ್ಯಾಲೆ ಕೊಡ್ತಾರ. ಹಂಗ ಆ ಮಾನದಂಡದ ಮೇಲಾದ್ರು ನಿರ್ಧಾರ ತಗೋಬೇಕು.

ಸಂಗೀತ ಬೇರೆಲ್ಲ ಕಲೆಗಳಿಗಿಂತ ಹೇಗೆ ವಿಶಿಷ್ಟವಾಗಿದೆ?
ರಾಜೀವ್ ತಾರಾನಾಥರು ಹೇಳಿದ್ದು ನೆನಪಾಗ್ತದ. ಎಲ್ಲ ಲಲಿತ ಕಲೆಗಳಿಗೆ ಎರಡು ಆಯಾಮ ಇದ್ರ, ಸಂಗೀತಕ್ಕ ಮಾತ್ರ 3 ಆಯಾಮಗಳು ಇರ್ತಾವಂತ. ಯಾಕಂದ್ರ ಇದು ಬಿಟ್ಟ ಬಾಣದ್ಹಾಂಗ. ಹೊಳ್ಳಿ ತಗೋಳಾಕ ಬರಂಗಿಲ್ಲಾ. ಪ್ರದರ್ಶನ ಮಾಡುವಾಗ ಸರಿಪಡಿಸಾಕ ಆಗಂಗಿಲ್ಲ. ಆದ್ರ ಸಾಧನೆಯಿಂದ ಕಡಿಮಿ ಮಾಡ್ಕೋಬಹುದು ಅಷ್ಟ. 
ಹಲವಾರು ಕಲಾ ಸಂಸ್ಥೆಗಳಿರುವ ನಗರದಲ್ಲಿ ನಿಮ್ಮದೇ ಆದಂಥ ಒಂದು ಶ್ರಿ ರಾಮ ಕಲಾವೇದಿಕೆಯನ್ನು ಆರಂಭಿಸಿದ್ದು ಏಕೆ?

ಒಬ್ಬ ಕಲಾವಿದ ತಯಾರಾಗ್ಬೇಕು ಅಂದ್ರ ಕುಟುಂಬ, ಸಮಾಜ, ಗುರುಗಳು ಈ ಎಲ್ಲಾರ‌್ದೂ ಸಹಕಾರ ಅವಶ್ಯಕ. ಮೊದ್ಲು ತಂದೆ ತಾಯಿನೇ ಗುರುತಿಸಿ ಬೀಜ ಹಾಕೋದು. ನಮ್ಮ ತಂದೆ ನಂಗೆ ತಬಲಾ ಕಲ್ಸೋಕೆ ಭಾಳ ಕಷ್ಟ ಪಟ್ಟಾರ. ಹಂಗಾಗಿ ನಮ್ ತಂದೆಯವರ (ಶ್ರೀ ರಾಮಚಂದ್ರ ಯಾವಗಲ್) ಹೆಸರು ಉಳೀಲಿ ಅಂತ ಈ ವೇದಿಕೆ ಆರಂಭಿಸಿದೆ. ಅದಕ್ಕಾಗಿಯೇ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್ ಕೊಡೋದರ ಜೊತೆಗೆ, ಹಿರಿಯ ಕಲಾವಿದರಿಗೆ ಕಲಾಶೃಂಗ ಅನ್ನೋ ಪ್ರಶಸ್ತಿಯನ್ನೂ ಕೊಡ್ತಾ ಬರ‌್ತಿದ್ದೀವಿ.

ರಿಯಾಲಿಟೀ ಷೋಗಳ ಅಬ್ಬರದಲ್ಲಿ ಕೆಲ ಪೋಷಕರು ಮಕ್ಕಳಿಗೆ ಸಂಗೀತವನ್ನು ಫಾಸ್ಟ್ ಫುಡ್ ನ ಹಾಗೆ ತುರುಕುತ್ತಿದ್ದಾರೆ. ಇದರ ಅಬ್ಬರದಲ್ಲಿ ವಾದ್ಯ ಕಲಿಕೆ ಕಡಿಮೆಯಾಗುತ್ತಿದೆಯೇ?
ರಿಯಾಲಿಟಿ ಷೋಗಳಲ್ಲಿ ಶಾಸ್ತ್ರೀಯ ಸಂಗೀತ ಎಲ್ಲದ? ಒಂದು ಲೆಕ್ಕಕ್ಕ ಖುಷಿ ಪಡಬಹುದು. ಆದ್ರ ರಿಯಾಲಿಟಿ ಷೋಗಾಗಿ ಕಲಿಯೋದ್ರಿಂದ ಕಲಿಕೆ ಅನ್ನಾಕಾಗೂದಿಲ್ಲ. ನಮಗಿನ್ನೂ ಕಲಿಯೂದದ ಅನ್ನಸ್ತದ. ಆದ್ರ ಇಂಥ ಷೋದೊಳಗ ಗೆದ್ದ ತಕ್ಷಣ ಮಕ್ಳಿಗೆ ನಂಗ ಸಂಗೀತ ಬರ್ತದ ಅಂತ ಅನ್ನಸ್ತದ. ಹಂಗನಿಸಿದ್ರ ಮುಗೀತು, ಆ ಹುಡುಗನ ಸಾಧನೆ, ಕಲಿಕೆ ಎಲ್ಲಾನೂ ನಿಂತಬಿಡ್ತದ.  ಹಾಡಿನ ಬಗ್ಗೆ ಅಷ್ಟೆ ಚರ್ಚೆ ನಡೀತದ.  ಆದ್ರ, ವಾದ್ಯಗಳ ಬಗ್ಗೆ ಮಾತಾಡಾಕ ಅವ್ರಿಗೆ ವ್ಯವಧಾನ ಇರೂದಿಲ್ಲ.

ಸಂಗೀತದಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಪ್ರಯೋಗಗಳ ಬಗ್ಗೆ ಏನಂತೀರಿ?
ವೆಸ್ಟರ್ನ ಆಗಲೀ.. ಬೇರೆ ಸಂಗೀತ ಪ್ರಾಕಾರನ ತಿಳ್ಕೊಳ್ಳಾಕ ಅಡ್ಡಿ ಇಲ್ಲ. ಆದ್ರ ಫ್ಯಾಷನ್ ಆಗ್ಬಾರ್ದು. ನಾ ಕಲ್ತೇನಿ ಅಂತ ಹಿಂದೂಸ್ತಾನಿ ಒಳಗ ಕರ್ನಾಟಕಿ ಬಾರಿಸಿದ್ರ ಅಪದ್ಧ ಆಗ್ತದ. ಯಾಕಂದ್ರ ಹಿಂದೂಸ್ತಾನಿ ಪ್ರಕೃತಿ ಬ್ಯಾರೆ, ಕರ್ನಾಟಕಿಯದ್ದೇ ಬ್ಯಾರೆ ಇರ‌್ತದ. ಅದು ಬೆಳವಣಿಗೆಗೆ ಅನುಕೂಲ. ಎಲ್ಲ ಪ್ರಕಾರದ ಸಂಗೀತಾನ ತಿಳ್ಕೋಬೇಕು. ವಿಷನ್ ಜಾಸ್ತಿ ಆಗ್ತದ. ಆದ್ರ ಮಂದಿ ಸಲ್ವಾಗಿ ಬಾರಿಸ್ಬಾರ್ದು.

ಸಂಗೀತದಲ್ಲಿ ನಿಮ್ಮ ಮುಂದಿನ ಹೆಜ್ಜೆ?
ಮುಂದಿನ ಹೆಜ್ಜಿ ಮತ್ತಷ್ಟು ಅಭ್ಯಾಸ ಮಾಡೂದು. ಮನಸ್ಸಿನೊಳಗ ಅಸ್ಪಷ್ಟ ಯೋಚನೆಗಳಿರ್ತಾವ. ಅವು ಸ್ಪಷ್ಟ ಆಗ್ಬೇಕಂದ್ರ ಅಭ್ಯಾಸ ಮಾಡಬೇಕು. ಅದು ಧ್ಯಾನ ಆಗ್ಬೇಕು. ನಾವು ಹೊಸದನ್ನ ಸಾಧನೆ ಮಾಡಬೇಕಾಗಿಲ್ಲ. ಗೊತ್ತಿರೋದನ್ನ ಮತ್ತ ಮತ್ತ ಅಭ್ಯಾಸ ಮಾಡ್ತಿದ್ರ ಅಲ್ಲೇ ಬೇರೆ ಬೇರೆ ಯೋಚನೆಗಳು ಹೊಳಿತಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT