ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನೋದದಿಂದಲೇ ಪಸರಿಸುವ ವಿಷಾದ

ರಂಗಭೂಮಿ
Last Updated 1 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಕನ್ನಡ ರಂಗಭೂಮಿಗೆ ಅಸಂಗತ ಆಯಾಮವನ್ನು ಕಟ್ಟಿಕೊಟ್ಟ ಬೆರಳೆಣಿಕೆಯಷ್ಟು ನಾಟಕಕಾರರಲ್ಲಿ ಪ್ರೊ.ಚಂದ್ರಶೇಖರ್ ಪಾಟೀಲ(ಚಂಪಾ) ಪ್ರಮುಖರು. 1960ರ ದಶಕದಲ್ಲಿ ಕನ್ನಡ ರಂಗಭೂಮಿ ಪರಿವರ್ತನೆಯ ಹಾದಿಯಲ್ಲಿದ್ದಾಗ ಕವಿಯಾಗಿದ್ದ ಚಂಪಾ ವಿಶಿಷ್ಟವಾದ ನಾಟಕಗಳನ್ನು ಬರೆದರು. ವಾಸ್ತವ ಮಾರ್ಗವನ್ನು ಬಿಟ್ಟು  ಅವಾಸ್ತವದ ಅಸಂಗತ ಮಾದರಿಯಲ್ಲಿ ನಾಟಕಗಳನ್ನು ಚಂಪಾ ರಚಿಸಿದರು.

1970ರ ದಶಕದಲ್ಲಿ ಅವರು ಬರೆದ ‘ಕುಂಟಾ ಕುಂಟಾ ಕುರವತ್ತಿ’ ನಾಟಕವು ವಿಶಿಷ್ಟ ವಸ್ತು ಹಾಗೂ ವಿಚಿತ್ರ ನಿರೂಪಣೆಯಿಂದಾಗಿ ಇವತ್ತಿನವರೆಗೂ ನಾಡಿನಲ್ಲಿ ಆಗಾಗ ಪ್ರದರ್ಶನಗೊಳ್ಳುತ್ತಲೇ ಬಂದಿದೆ. ಇತ್ತೀಚೆಗೆ ‘ಸೃಷ್ಟಿ ಜನಕಲಾ ಕೇಂದ್ರ’ವು  ಶಶಿಕಾಂತ ಯಡಹಳ್ಳಿ ಅವರ ನಿರ್ದೇಶನದಲ್ಲಿ ‘ಕುಂಟಾ ಕುಂಟಾ ಕುರವತ್ತಿ’ ನಾಟಕ ನಯನ ರಂಗಮಂದಿರದಲ್ಲಿ ಪ್ರದರ್ಶಿಸಿತು.

ಈ ನಾಟಕಕ್ಕೆ ಸಿದ್ಧ ಸೂತ್ರದ ಕಥೆ ಎಂಬುದಿಲ್ಲ. ಇಂತಹ ಅಸಂಗತ ನಾಟಕಗಳಿಗೆ ಕಥೆಯ ಹಂಗೂ ಇಲ್ಲ. ಬೆಂಗಳೂರು–ಪುಣೆ ಹೆದ್ದಾರಿಯ ದ್ಯಾಮವ್ವನ ಗುಡಿ ಕಟ್ಟೆಯ ಮುಂದೆ ಆಕಸ್ಮಿಕವಾಗಿ ಭೇಟಿಯಾದ ಕುಂಟ, ಕುರುಡ ಹಾಗೂ ಕಿವುಡ ವ್ಯಕ್ತಿಗಳು ತಮ್ಮ ಅಂಗವಿಕಲತೆಯ ನ್ಯೂನತೆಯನ್ನು ಮರೆಮಾಚುತ್ತಲೇ ಅದನ್ನು ಮೀರುವ ಪ್ರಯತ್ನವನ್ನು ಮಾಡುತ್ತಾರೆ. ಅಸಂಬದ್ಧವಾಗಿ ಮಾತಾಡುತ್ತಲೇ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಾ, ಪರಸ್ಪರ  ಲೇವಡಿ ಮಾಡುತ್ತಾ ನೋಡುಗರನ್ನು ನಗೆಗಡಲಲ್ಲಿ ಮುಳುಗಿಸುತ್ತಾರೆ. ಈ ಮೂವರೂ ತಮ್ಮ ಅಂಗವಿಕಲತೆಯ ಕೊರತೆಯನ್ನು ಭ್ರಮೆಯಲ್ಲಿ ತುಂಬಿಕೊಳ್ಳಲು ನಡೆಸುವ ಸನ್ನಾಹಗಳು ಹಾಸ್ಯಾಸ್ಪದವೂ ದುರಂತಮಯವೂ ಆಗಿವೆ. 

ಕುಂಟನಿಗೆ ಕಾಲಿಲ್ಲ. ಆದರೆ ಬೂಟಿನ ಮೇಲೆ ಬಲು ವ್ಯಾಮೋಹ. ಕುರುಡನಿಗೆ ಕಣ್ಣಿಲ್ಲ. ಆದರೂ ಕನ್ನಡಕ ಹಾಗೂ ವಾಚಿನ ಮೇಲೆ ತುಂಬಾನೇ ಪ್ರೀತಿ. ಕೆಪ್ಪನಿಗೆ ಕಿವಿ ಕೇಳುವುದಿಲ್ಲ. ಆದರೆ ರೇಡಿಯೊ ಹಾಗೂ ಸಂಗೀತ ಅಂದರೆ ಪಂಚಪ್ರಾಣ. ಅಂಗವಿಕಲತೆಯಿಂದಾಗಿ ತಮಗೆ ಉಪಯೋಗವಿಲ್ಲದ ವಸ್ತುಗಳ ಬಳಕೆಯಲ್ಲಿ ತಮ್ಮ ನ್ಯೂನತೆಯನ್ನು ಮರೆಯುವ ಪ್ರಯತ್ನವನ್ನು ಈ ಮೂರೂ ಪಾತ್ರಗಳೂ ಮಾಡುತ್ತವೆ. ಕುಂಟನಿಗೆ ಕುದುರೆಯ ಹಾಗೆ ಓಡುವ ಖಯಾಲಿಯಿದ್ದರೆ, ಕುರುಡನಿಗೆ ಕಾಣದ ಬಣ್ಣಗಳನ್ನು ಕಾಣುವ ಆಸೆ. ಕೆಪ್ಪನಿಗೋ ರೇಡಿಯೊ ಸ್ಟೇಷನ್ನಿನ ಹತ್ತಿರ ಹೋಗಿ ಸ್ಪಷ್ಟವಾಗಿ ಸಂಗೀತ ಕೇಳುವ ಬಯಕೆ. ಹೀಗೆ…. ಈ ನಾಟಕದ ಪಾತ್ರಗಳೆಲ್ಲವೂ ತಮಗೆ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವ ಭ್ರಮೆಯಲ್ಲಿ ಬದುಕುವ ಪರಿಯನ್ನು ನೋಡಿದವರಿಗೆ ನಗು ಉಕ್ಕುತ್ತದೆ.

‘…ಕುರವತ್ತಿ’ ನಾಟಕದ ಸತ್ವ ಇರುವುದು ಅದರ ನಾಟಕೀಯತೆಯಲ್ಲಿ. ಕುಂಟನಿಗೆ ಕಣ್ಣಿಲ್ಲ, ಕುರುಡನಿಗೆ ಕಾಲಿಲ್ಲ. ಆದರೆ ಈ ಇಬ್ಬರೂ ಮಾಡಿಕೊಳ್ಳುವ ಹೊಂದಾಣಿಕೆ ತಾತ್ಕಾಲಿಕವಾದರೂ ಪರಿಹಾರವನ್ನು ತರಬಲ್ಲುದಾಗಿದೆ. ದಾರಿ ಕಾಣದ ಕುರುಡನ ಬೆನ್ನೇರಿ ಕುಂತ ನಡೆಯಲಾರದ ಕುಂಟ ದಾರಿತೋರಿಸುತ್ತಲೇ ಕುರುಡನ ಸಹಾಯದಿಂದ ಮುನ್ನಡೆಯುತ್ತಾನೆ. ಇದು ಹೊಂದಾಣಿಕೆಯೊಂದೇ ಮನುಷ್ಯನ ಬದುಕಿನ ಅನಿವಾರ್ಯತೆ ಎಂಬುದನ್ನು ಪರೋಕ್ಷವಾಗಿ ಹೇಳುತ್ತದೆ. ಪರಸ್ಪರ ಹೊಂದಾಣಿಕೆ ಇಲ್ಲದಿದ್ದರೆ ಅಪೂರ್ಣತೆ ಕಾಡುತ್ತದೆ. ಜೊತೆ ಸೇರಿ ಒಬ್ಬರಿಗೊಬ್ಬರು ಸಹಾಯಕರಾದರೆ ಬದುಕು ಮುನ್ನಡೆಯುತ್ತದೆ ಎನ್ನುವ ಸಾರ್ವಕಾಲಿಕ ಸತ್ಯವನ್ನು ಈ ಅಸಂಗತ ನಾಟಕ ಬಿತ್ತರಿಸುತ್ತದೆ. 

ಈ ನಾಟಕ ನಿಂತಿರುವುದೇ ಭಾಷೆಯ ಬಳಕೆ, ಅಸಂಗತ ಕ್ರಿಯೆ ಹಾಗೂ ಅಂತರ್ಗತವಾದ ಸಾಮಾಜಿಕ ಚಿಂತನೆಯ ಅನಾವರಣಗಳ ಮೇಲೆ. ಈ ಮೂರೂ ಕ್ರಿಯಾಶೀಲ ಕೆಲಸಗಳನ್ನು ನಿರ್ದೇಶಕ ಶಶಿಕಾಂತ ಯಡಹಳ್ಳಿ ಈ ನಾಟಕದಲ್ಲಿ ಸಮರ್ಥವಾಗಿ ಮಾಡಿದ್ದಾರೆ.

ಮುಕ್ಕಾಲು ಗಂಟೆಯ ನಾಟಕ ನೋಡುಗರಿಗೆ ಒಂದು ನಿಮಿಷವೂ ಬಿಡುವು ಕೊಡದಂತೆ ನೋಡಿಸಿಕೊಂಡು ಹೋಗುತ್ತದೆ. ನಿರ್ದೇಶಕರು ಬ್ಲಾಕಿಂಗ್ ಹಾಗೂ ಮೂವ್‌ಮೆಂಟ್‌ಗಳಿಗೆ ಅತಿ ಹೆಚ್ಚು ಪ್ರಾಮುಖ್ಯ ಕೊಟ್ಟಿರುವುದೇ ನಾಟಕದ ಚಲನಶೀಲತೆಗೆ ಪ್ರೇರಕವಾಗಿದೆ. ನಟರು ಅಭಿನಯಕ್ಕೆ ಹೊಸಬರಾದರೂ ಪಳಗಿದ ಕಲಾವಿದರಂತೆ ಪಾತ್ರಗಳನ್ನು ನಿರ್ವಹಿಸಿ ನೋಡುಗರ ಗಮನ ಸೆಳೆದರು. ನಟರಲ್ಲಿದ್ದ ಪರಸ್ಪರ ಹೊಂದಾಣಿಕೆ ಮನೋಭಾವ ನಾಟಕದ ಗೆಲುವಿಗೆ ಕಾರಣವಾಯಿತು.

ಕುಂಟನಾಗಿ ಆಕಾಶ್ ಶೆಟ್ಟಿ ತನ್ನ ಮಾರ್ಮಿಕ ಮಾತು ಹಾಗೂ ಆಂಗಿಕಾಭಿನಯದಿಂದ ಪಾತ್ರಕ್ಕೆ ಜೀವ ತುಂಬಿದರೆ, ಕುರುಡನಾಗಿ ರಘು ಆಚಾರ್ ತನ್ನ ವಯಸ್ಸಿಗೂ ಮೀರಿದ ಮುದುಕನ ನಟನೆ ಮಾಡಿದ್ದು ಗಮನಾರ್ಹ. ಕೆಪ್ಪನಾಗಿ ಕೃಷ್ಣ ಕಶ್ಯಪ್ ಆಂಗಿಕ ಹಾಗೂ ವಾಚಿಕದಲ್ಲಿ ಪಾತ್ರ ಕಟ್ಟಿಕೊಟ್ಟರೂ ಇನ್ನೂ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ರೂಢಿಸಿಕೊಳ್ಳಬೇಕಿದೆ. ಒಟ್ಟಾರೆಯಾಗಿ ಅಭಿನಯವೇ ಈ ನಾಟಕದ ಜೀವಾಳ.

ಅತ್ಯಂತ ಸರಳವಾದ ರಂಗವಿನ್ಯಾಸವನ್ನು ಮಾಡಲಾಗಿದ್ದು, ನಟರ ಅಭಿನಯದ ಮೇಲೆ ಹೆಚ್ಚು ಕೆಲಸವನ್ನು ನಿರ್ದೇಶಕರು ಮಾಡಿ ನಾಟಕವನ್ನು ಗೆಲ್ಲಿಸಿದ್ದಾರೆ. ಮೂರೇ ಪಾತ್ರಗಳು ದೊಡ್ಡದಾದ ರಂಗಸ್ಥಳವನ್ನು  ಬಳಸಿದ ರೀತಿ ತುಂಬಾ ಚೆನ್ನಾಗಿತ್ತು. ಉತ್ತರ ಕರ್ನಾಟಕದ ಭಾಷೆಗೆ ಪೂರಕವಾಗಿ ಆ ಭಾಗದ ಬಳಕೆಯ ವಸ್ತ್ರವಿನ್ಯಾಸವನ್ನು ಮಾಡಿದ್ದು ಸೂಕ್ತವಾಗಿದೆ. ಬೆಳಕಿನ ವಿನ್ಯಾಸ ದೃಶ್ಯಗಳನ್ನು ಬೆಳಗಿದೆಯಾದರೂ ನಿರ್ವಹಣೆ ಇನ್ನೂ ಕರಾರುವಾಕ್ಕಾಗಬೇಕಿದೆ.

ಈ ಅಸಂಗತ ನಾಟಕದ ರಂಗಪಠ್ಯದಲ್ಲಿಲ್ಲದ ಹಾಡನ್ನು  ನಿರ್ದೇಶಕರು ಬರೆದು ಅರ್ಥಪೂರ್ಣವಾಗಿ ಬಳಸಿದ್ದು ನಾಟಕಕ್ಕೆ ಹೊಸ ಕಳೆಯನ್ನು ತಂದುಕೊಟ್ಟಿದೆ. ಟಿ. ಜನಾರ್ದನ ಅವರು ಹಾಡಿಗೆ ಸಂಗೀತ ಸಂಯೋಜನೆ ಮಾಡಿ ಮನಮುಟ್ಟುವ ಹಾಗೆ ಹಾಡಿದ್ದಾರೆ. ಆದರೆ ನಾಟಕದ ಪಾತ್ರಗಳ ಕ್ರಿಯೆಗಳ ನಡುವೆ ‘ಮೂಡ್’ ಹುಟ್ಟಿಸಲು ಸಂಗೀತದ ಪರಿಣಾಮ ಉಂಟುಮಾಡುವಲ್ಲಿ ಅವರು ವಿಫಲರಾದರು.

‘ಕುರುಡನ್ ಮೇಲೆ ಕುಂಟಾ, ಹತ್ತಿ ಕುಂತು ಹೊಂಟ,
ನೋಡಲು ಬಾರದು ಅವನಿಗೆ, ಓಡಲು ಬಾರದು ಇವನಿಗೆ…’

ನಾಟಕ ಮುಗಿದ ಮೇಲೆಯೂ ನಾಟಕದಲ್ಲಿ ಬಳಸಿದ ಈ ಹಾಡು ಕೇಳುಗರ ಬಾಯಲ್ಲಿ ಗುನುಗುನಿಸುತ್ತದೆ. ಇಡೀ ನಾಟಕದ ತಿರುಳನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಇಡೀ ನಾಟಕದ ಅಂತಃಸತ್ವವನ್ನೇ ಹಾಡಿನ ಸಾಲುಗಳಲ್ಲಿ ಸಾಕಾರಗೊಳಿಸಲಾಗಿದ್ದು ನಾಟಕದ ಅರ್ಥಸಾಧ್ಯತೆಯನ್ನು ವಿಸ್ತರಿಸಲಾಗಿದೆ.
ತಮಾಷೆ ಮಾಡುತ್ತಲೇ ಸಮಾಜದ ಹಾಗೂ ವ್ಯಕ್ತಿಯ ಗಂಭೀರ ಸ್ತರಗಳನ್ನು ಅನಾವರಣಗೊಳಿಸುವುದು ಈ ನಾಟಕದ ಉದ್ದೇಶವಾಗಿದ್ದು, ಈ ಆಶಯದಲ್ಲಿ ನಾಟಕ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT