ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನ್ಯಾಸ ಜಗತ್ತಿನ ತಾಜಾ ಕುಸುಮಗಳು

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ನೋಡುತ್ತ ಕೂಡಬೇಕೆನಿಸುವ ಅದ್ಭುತ ರ್‍ಯಾಂಪ್ ಅದಲ್ಲ. ಗುಂಪುಗಟ್ಟಿ ನಿಂತ ಆಟೋಗ್ರಾಫ್‌ ಪಡೆದುಕೊಳ್ಳಬೇಕು ಎಂಬಂಥ ವಿನ್ಯಾಸಕಾರರಾಗಲಿ, ರೂಪದರ್ಶಿಗಳಾಗಲಿ ಅಲ್ಲಿರಲಿಲ್ಲ.

ಬಿಳಿ ಬಟ್ಟೆಯ ಹಾಸಿನ ಅಷ್ಟುದ್ದದ ಸರಳ ರ್‍ಯಾಂಪ್‌. ಪಕ್ಕಕ್ಕೆರಡು ಪರದೆಗಳು. ಅದರ ಇಕ್ಕೆಲಗಳಲ್ಲಿ ಕೂತವರಲ್ಲಿ ಎಳೆಯರು, ಹಿರಿಯರು ಎಲ್ಲರೂ ಇದ್ದರು. ಫ್ಯಾಷನ್‌ ಲೋಕದ ರಿವಾಜುಗಳನ್ನು ತಿಳಿದವರು ಎಂದು ನೋಡಿದಾಕ್ಷಣ ಗೊತ್ತಾಗುವ ಜನರ ಜತೆಗೇ ಝಗಮಗ ಜಗವನ್ನು ಅಚ್ಚರಿಯ ಕಂಗಳಿಂದ ನೋಡುವ ಮಂದಿಯೂ ಕೂತಿದ್ದರು.

ಅದು ಜೆಡಿ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾಷನ್‌ನ 28ನೇ ವಾರ್ಷಿಕ ವಿನ್ಯಾಸ ಪ್ರಶಸ್ತಿಯ ಪ್ಯಾಷನ್‌ ಷೋ ಸಂದರ್ಭ. ಹೋಟೆಲ್‌ ಲಲಿತ್‌ ಅಶೋಕ್‌ನ ಕಳಿಂಗ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆ ಫ್ಯಾಶನ್‌ ಷೋದಲ್ಲಿ ಹೊಸ ತಲೆಮಾರಿನ ವಿನ್ಯಾಸಕರ ತಾಜಾತನವೇ ಮುಖ್ಯ ಆಕರ್ಷಣೆಯಾಗಿತ್ತು.

ಎರಡು ದಿನಗಳ ಕಾಲ ನಡೆದ ಈ ಫ್ಯಾಶನ್‌ ಷೋದಲ್ಲಿ ಜೆಡಿ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ 42 ಸಂಗ್ರಹಗಳ 300ಕ್ಕೂ ಹೆಚ್ಚಿನ ಉಡುಪುಗಳನ್ನು ರೂಪದರ್ಶಿಗಳು ಪ್ರದರ್ಶಿಸಿದರು.

‘ಅನ್‌ಟೋಲ್ಡ್‌ ಸ್ಟೋರೀಸ್‌’ ಎಂಬ ಹೆಸರಿನ ಈ ಫ್ಯಾಶನ್‌ ಷೋವನ್ನು ರಾಹುಲ್‌ ದೇವ ಶೆಟ್ಟಿ ನಿರ್ದೇಶಿಸಿದ್ದರು. ಫ್ಯಾಶನ್‌ ಷೋ ಪರಿಕಲ್ಪನೆಯೇ ಭಿನ್ನವಾಗಿತ್ತು. ಹೆಸರೇ ಸೂಚಿಸುವಂತೆ ಹೇಳದೇ ಉಳಿದ ಕಥನಗಳನ್ನು ಮುನ್ನೆಲೆಗೆ ತರುವುದು ಇದರ ಮುಖ್ಯ ಕಾಳಜಿಯಾಗಿರುವುದು ವಿಶೇಷ.

ಈ ಪರಿಕಲ್ಪನೆಯಲ್ಲಿಯೇ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು, ದೇಶದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಅಷ್ಟೇನೂ ಪ್ರಸಿದ್ಧಿಗೆ ಬಾರದ ಪ್ರತಿಭಾವಂತ ಕಲಾವಿದರ ಜತೆ ಸೇರಿ ಈ ವಿನ್ಯಾಸವನ್ನು ರೂಪಿಸಿದ್ದಾರೆ.

ಆ ಕಲಾವಿದರ ಜತೆ ಚರ್ಚಿಸಿ ಅವರ ಕಲೆಯನ್ನು ಅಭ್ಯಸಿಸಿ ಅವುಗಳಿಂದ ಸ್ಫೂರ್ತಿ ಪಡೆದು ತಮ್ಮದೇ ಆದ ರೀತಿಯಲ್ಲಿ ವಿನ್ಯಾಸ ರೂಪಿಸಿದ್ದಾರೆ.  ಇದೊಂದು ರೀತಿಯಲ್ಲಿ ಸಾಂಪ್ರದಾಯಿಕ ಕಲೆಗಳೊಂದಿಗೆ ಆಧುನಿಕ ವಿನ್ಯಾಸಗಳನ್ನು ಸೇರಿಸಿ ಮಾಡಿದ ಕಸಿ.

ಉದಾಹರಣೆಗೆ ವಸ್ತ್ರ ವಿನ್ಯಾಸದ ವಿದ್ಯಾರ್ಥಿಗಳಾದ ತೃಪ್ತಿ, ಶಾಲಿನಿ, ಸೋನು ಇವರು ಉತ್ತರ ಕರ್ನಾಟಕದ ಕೈಮಗ್ಗದ ಸೀರೆಗಳ ಸಾಂಪ್ರದಾಯಿಕೆ ಕಸೂತಿಗಳಿಂದ ಪ್ರೇರಿತರಾಗಿ ಗೌನ್‌ನಂತಹ ಉಡುಪನ್ನು ವಿನ್ಯಾಸ ಮಾಡಿದ್ದಾರೆ.

ದಟ್ಟ ಹಸಿರು, ಕೆಂಪು, ನೀಲಿ ಬಣ್ಣಗಳ ಮೇಲೆ ಸಾಂಪ್ರದಾಯಿಕ ಸೀರೆಗಳ ಕಸೂತಿಗಳನ್ನು ಮೂಡಿಸಿ ವಿಶಿಷ್ಟವಾದ ವಿನ್ಯಾಸ ರೂಪಿಸಲಾಗಿದೆ. ಈ ದಿರಿಸುಗಳ ಆಕರ್ಷಕ ಮೈಮಾಟದ ರೂಪದರ್ಶಿಯರ ಮೈಯನ್ನಪ್ಪಿ ರ್‍ಯಾಂಪ್‌ ಮೇಲೆ ನಲಿದು, ಎಲ್ಲರ ಗಮನ ಸೆಳೆಯಿತು.

ನಾಗಾಸಾಧುಗಳು ಬಳಸುವ ಶಾಲುಗಳ ವಿನ್ಯಾಸ, ತಮಿಳುನಾಡಿನ ಕಲಾವಿದ ಪ್ರಭಾಕರನ್‌ ಅವರ ಕಲಾಕೃತಿಗಳಿಂದ ಪ್ರಭಾವಿತರಾಗಿ ವಿ. ಧರಿಣಿ ಅವರು ರೂಪಿಸಿದ ವಿನ್ಯಾಸವೂ ಆಕರ್ಷಕವಾಗಿತ್ತು.

ಇಷ್ಟೇ ಅಲ್ಲ, ತೆಂಗಿನ ಚಿಪ್ಪಿನಿಂದ ರೂಪಿಸಿದ ಕಲಾಕೃತಿಗಳ ಪ್ರಭಾವದಿಂದ ಜೀನ್ಸ್‌ ಶಾರ್ಟ್ಸ್‌ ಮತ್ತು ಟಾಪ್‌ಗಳ ಮೇಲೆ ಮೂಡಿದ ಸಣ್ಣ ಸಣ್ಣ ಚಿತ್ತಾರಗಳು, ಬೀದಿ ಹುಡುಗರು ಧರಿಸುವ ಬಟ್ಟೆಗಳನ್ನು ನೋಡಿ ವಿನ್ಯಾಸಗೊಳಿಸಿದ ಉಡುಪುಗಳು, ಒರಿಸ್ಸಾದ ಜಾನಪದ ಕಲೆಗಳಿಂದ ಪ್ರೇರಣೆಗೊಂಡು ದಟ್ಟ ಕೆಂಪು, ಕಪ್ಪು, ನೀಲಿ ಬಳಸಿಕೊಂಡು ವಿನ್ಯಾಸಗೊಳಿಸಿದ ಟೀ ಷರ್ಟ್‌ ಮತ್ತು ಶಾರ್ಟ್ಸ್‌ಗಳು, ಅಶ್ವತ್ಥನಾರಾಯಣ ಅವರ ಗ್ಲಾಸ್‌ ಫ್ಯಾಬ್ರಿಕ್‌ ಕಲಾಕೃತಿಗಳಿಂದ ಸ್ಫೂರ್ತಿ ಪಡೆದ ಗೌನ್‌ಗಳು ಹೀಗೆ ಸಾಂಪ್ರದಾಯಿಕತೆಯೊಂದಿಗೆ ಆಧುನಿಕತೆ ಮಿಳಿತಗೊಂಡು ರೂಪಿತವಾದ ಹೊಸಥರದ ವಿನ್ಯಾಸಗಳು ಈ ಫ್ಯಾಶನ್‌ ಷೋ ಜೀವಾಳವಾಗಿತ್ತು.

ಸಂಜೆ ಏಳೂವರೆಗೆ ಬಣ್ಣದ ಬೆಳಕಿನಲ್ಲಿ ತೆರೆದುಕೊಂಡ ರ್‍ಯಾಂಪ್‌ ವಾಕ್‌ನಲ್ಲಿ ಹಲವು ಹೊಸ ವಿನ್ಯಾಸಗಾರರ ಕನಸು–ಕಲ್ಪನೆಗಳು ಸಾಕಾರಗೊಳ್ಳುವಲ್ಲಿ ಮುದ್ದು ಮುಖದ ರೂಪದರ್ಶಿಗಳ ಪಾಲೂ ಸಾಕಷ್ಟಿತ್ತು.

ಪ್ರತಿ ಸಂಗ್ರಹದ ಕೊನೆಯಲ್ಲಿ ರೂಪದರ್ಶಿಗಳೊಟ್ಟಿಗೆ ಹೆಜ್ಜೆ ಹಾಕುತ್ತಿದ್ದ ವಿನ್ಯಾಸಕಾರರ ಮುಖದಲ್ಲಿನ ಧನ್ಯತೆಗೆ ಪ್ರೇಕ್ಷಕರ ಕರತಾಡನದ ಬೆಂಬಲವೂ ಸಾಕಷ್ಟಿತ್ತು.ಪ್ರತಿಯೊಂದು ಸಂಗ್ರಹದ ವೀಕ್ಷಣೆಗೂ ಮುನ್ನ ಆ ಸಂಗ್ರಹದ ಕುರಿತು ವಿವರಣೆ ನೀಡಲಾಗುತ್ತಿತ್ತು.

ಯಾವ ಕಲಾವಿದರ ಕಲಾಕೃತಿಯಿಂದ ಪ್ರೇರಣೆ ಪಡೆದಿದ್ದಾರೆ, ಅವರ ಕುರಿತಾದ ವಿವರಣೆ, ಆ ಕಲಾಕೃತಿಗಳ ವಿಶೇಷ, ಅದು ವಿದ್ಯಾರ್ಥಿಗಳ ಕಲ್ಪನೆಯ ಮೂಸೆಯಲ್ಲಿ ಹೇಗೆ ಬದಲಾಗಿದೆ ಎಂಬುದರ ಕುರಿತಾದ ವಿವರಗಳು, ಯಾವ ಬಣ್ಣಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಾಗಿದೆ, ಆ ದಿರಿಸುಗಳನ್ನು ಎಂಥ ಸಂದರ್ಭದಲ್ಲಿ ಬಳಸಬಹುದು ಎಂಬುದರ ಮಾಹಿತಿಯನ್ನು ಗ್ರಾಫಿಕ್  ಸಮೇತ ವಿವರಿಸುತ್ತಿದ್ದರು. ಈ ಮಾಹಿತಿ ಉದಯೋನ್ಮುಖ ವಿನ್ಯಾಸಕಾರರಿಗೆ ಉಪಯುಕ್ತವಾಗಿತ್ತು.

ವಿದ್ಯಾರ್ಥಿಗಳ ವಿನ್ಯಾಸದಲ್ಲಿ ಅಚ್ಚರಿಯೆನಿಸುವ ಕ್ರಿಯಾಶೀಲತೆ ಕಾಣದಿದ್ದರೂ ಹೊಸ ರೀತಿಯ ಅಭಿವ್ಯಕ್ತಿಯ ಹಂಬಲ ಎದ್ದು ಕಾಣುತ್ತಿತ್ತು. ಬಹುತೇಕ ಎಲ್ಲ ವಿನ್ಯಾಸಗಳೂ ಆಧುನಿಕ ಯುವ ತಲೆಮಾರಿನ ಆಸಕ್ತಿಯನ್ನು ಕೇಂದ್ರೀಕರಿಸಿಕೊಂಡೇ ರೂಪಿತವಾಗಿದ್ದರೂ ಅಪವಾದಗಳು ಇಲ್ಲದಿರಲಿಲ್ಲ.

ವಿನ್ಯಾಸದ ಶ್ರಮಕ್ಕೆ ಪ್ರಶಸ್ತಿಯ ಪ್ರತಿಫಲ
ಎರಡನೇ ದಿನದ ಕೊನೆಯಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ವಿನ್ಯಾಸ ಸಂಗ್ರಹಗಳನ್ನು ಘೋಷಿಸಲಾಯಿತು. ‘ಅತ್ಯುತ್ತಮ ಸೃಜನಶೀಲ ಪರಿಕಲ್ಪನೆ’ ವಿಭಾಗದಲ್ಲಿ ಕೋಮಲ್‌ ಸಮ್ದಾರಿಯಾ ಅವರ ‘ಜಿಂಗಾರಾ’ ಎಂಬ ಸಂಗ್ರಹ ಪ್ರಶಸ್ತಿ ಪಡೆದುಕೊಂಡಿತು. ಈ ಸಂಗ್ರಹವು ಮಾರಿಸ್ಸಾ ಮಿರಾಂಡಾ ಅವರ ಕಲಾಕೃತಿಗಳಿಂದ ಪ್ರೇರೇಪಿತಗೊಂಡಿದೆ.

ಮನೋಜ್ಞಾ ಗೊಲ್ಲಪುಡಿ ಅವರ ‘ಮೇರಿಯೋನೇಟಾ’ ಸಂಗ್ರಹವು ವಿಶೇಷ ಜ್ಯೂರಿ ಅವಾರ್ಡ್‌ ಅನ್ನು ಪಡೆದುಕೊಂಡಿದೆ. ಇದು ಆಂಧ್ರಪ್ರದೇಶದ ಗೊಂಬೆಗಳ ಕಲಾಕೃತಿಗಳಿಂದ ಸ್ಫೂರ್ತಿ ಪಡೆದ ಸಂಗ್ರಹ. ಮಾನಸಿ ಸರಾಫ್‌ ಅವರ ವೋಗೆಲ್‌ ಸಂಗ್ರಹ ‘ಮೋಸ್ಟ್‌ ಕಮರ್ಷಿಯಲ್‌ ವಯೆಬಲ್‌’ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಡಿಪ್ಲೋಮಾ ವಿಭಾಗದಲ್ಲಿ ವೈಶಾಖಿ ಮತ್ತು  ಸೋನಿಯಾ  ಸೇರಿ ರೂಪಿಸಿದ ದಿರಿಸುಗಳ ಸಂಗ್ರಹವು ‘ಮೋಸ್ಟ್‌ ಕಾಂಟೆಂಪೊರರಿ’ ವಿಭಾಗದಲ್ಲಿ ಆಯ್ಕೆಯಾದರೆ, ಜುವೆರಿಯಾ ತಸ್ನೀಮ್‌, ಮಾಧುರಿ ಡಿ, ಸಮಂತಾ ಮೈಖೆಲ್‌, ಶುಭಂ ಸಾಂಘ್ವಿ ಈ ನಾಲ್ವರ ತಂಡವು ವಿನ್ಯಾಸಗೊಳಿಸಿದ್ದ ಬ್ಲೂಮ್‌ ಸಂಗ್ರಹ ಬೆಸ್ಟ್‌ ಡಿಸೈನ್‌ ಕಲೆಕ್ಷನ್‌, ವಿಮಖೊನೂ ಎಸ್ತರ್‌, ನಿವೇದಿತಾ ಬರ್ನ್‌ವಾಲ್‌, ಪಿ. ಮುರಳಿ ಕೃಷ್ಣ ತಂಡ ವಿನ್ಯಾಸಗೊಳಿಸಿದ ದಿರಿಸುಗಳು ಬೆಸ್ಟ್‌ ಕ್ರಿಯೆಟೀವ್‌ ಕಾನ್ಸೆಪ್ಟ್‌ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT