ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಬ್ಗಯೊರ್ ಅಧ್ಯಕ್ಷ ಬಂಧನ

ಶಾಲಾ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ
Last Updated 23 ಜುಲೈ 2014, 20:12 IST
ಅಕ್ಷರ ಗಾತ್ರ

ಬೆಂಗಳೂರು: ವಿಬ್ಗಯೊರ್‌ ಶಾಲಾ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಶಾಲೆಯ ಸಂಸ್ಥಾಪಕ ಅಧ್ಯಕ್ಷ ರುಸ್ತುಂ ಕೇರವಾಲ (53) ಅವರನ್ನು ನಗರ ಪೊಲೀಸರು ಬಂಧಿಸಿ, ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದ್ದರಿಂದ ಬಿಡುಗಡೆ ಮಾಡಿದರು.

‘ರುಸ್ತುಂ ಅವರ ವಿರುದ್ಧ ಪೋಷಕರಿಂದ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಆ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿ ದಿಯು-, ದಮನ್ ಕೇಂದ್ರಾಡಳಿತ ಪ್ರದೇಶದಲ್ಲಿ ಮಂಗಳವಾರ ರಾತ್ರಿ ರುಸ್ತುಂ ಅವರನ್ನು ಬಂಧಿಸಿ ನಗರಕ್ಕೆ ಕರೆದುಕೊಂಡು ಬಂದಿದ್ದರು’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ತಿಳಿಸಿದ್ದಾರೆ.

‘ರುಸ್ತುಂ ವಿರುದ್ಧ ಬಾಲ ನ್ಯಾಯ ಕಾಯ್ದೆ, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, ಸಾಕ್ಷ್ಯ ನಾಶ ಮತ್ತು ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಶಾಲೆಯ ಇತರೆ ಸಿಬ್ಬಂದಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾದರೆ ಅವರನ್ನೂ ಬಂಧಿಸ­ಲಾಗುತ್ತದೆ’ ಎಂದು ಹೇಳಿದ್ದಾರೆ.

ಮುಂಬೈ ಮೂಲದ ರುಸ್ತುಂ, ದೇಶದ ಹಲವು ರಾಜ್ಯಗಳಲ್ಲಿ ವಿಬ್ಗಯೊರ್‌ ಶಾಲೆಯ ಶಾಖೆಗಳನ್ನು ನಡೆಸುತ್ತಿದ್ದಾರೆ. ನಗರದಲ್ಲಿ ಆ ಶಾಲೆಯ ಸುಮಾರು ಒಂಬತ್ತು ಶಾಖೆಗಳಿವೆ ಎಂದು ಸಿಸಿಬಿ ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳು ರುಸ್ತುಂ ಅವ­ರನ್ನು ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದ ಲ್ಲಿರುವ ಎಸಿಎಂಎಂ ನ್ಯಾಯಾ­­ಧೀಶರ ಮನೆಗೆ ಬುಧವಾರ ರಾತ್ರಿ ಹಾಜರು­ಪಡಿಸಿದರು. ಬಳಿಕ ನ್ಯಾಯಾಧೀಶರು ಆರೋಪಿಗೆ ಜಾಮೀನು ನೀಡಿ, ಬಿಡುಗಡೆಗೆ ಆದೇಶಿಸಿದರು.

ಪ್ರಕರಣದ ಸಾಕ್ಷಿಗಳ ಮೇಲೆ ಒತ್ತಡ ಹೇರ ಬಾರದು, ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಬಾರದು, ಪೊಲೀಸ್‌ ತನಿಖೆಗೆ ಸಹಕರಿಸಬೇಕು ಮತ್ತು ಪೊಲೀಸರ ಪೂರ್ವಾನುಮತಿ ಇಲ್ಲದೆ ನಗರ ಬಿಟ್ಟು ಹೋಗಬಾರದು ಎಂಬ ಷರತ್ತುಗಳನ್ನು ನ್ಯಾಯಾ ಧೀಶರು ಆರೋಪಿ ರುಸ್ತುಂ ಅವರಿಗೆ ವಿಧಿಸಿದ್ದಾರೆ.

ಸ್ಕೇಟಿಂಗ್‌ ಸಹಾಯಕ ತರಬೇತುದಾರ ಮುಸ್ತಫಾ ಎಂಬಾತನನ್ನು ಪೊಲೀಸರು 20ರಂದು ಬಂಧಿಸಿ ದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯರನ್ನೂ ಬಂಧಿಸುವಂತೆ ಇತರೆ ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ವಿರೋಧ ಪಕ್ಷದ ಮುಖಂಡರು ಸಹ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

ಸಿಬ್ಬಂದಿಯ ವಿಚಾರಣೆ: ಸಿಸಿಬಿ ಅಧಿಕಾರಿಗಳು ಶಾಲೆಗೆ ಬುಧವಾರ ಭೇಟಿ ನೀಡಿ, ಶಿಕ್ಷಕರು ಹಾಗೂ ಕ್ರೀಡಾ ವಿಭಾಗದ ತರಬೇತು­ದಾರರ ವಿಚಾರಣೆ ನಡೆಸಿದರು.

‘ಘಟನೆಗೆ ಸಂಬಂಧಿಸಿದಂತೆ ಶಾಲೆಯ ಭೋದನಾ ಸಿಬ್ಬಂದಿ, ಕ್ರೀಡಾ ತರಬೇತುದಾರರು ಹಾಗೂ ಇತರೆ ಸಿಬ್ಬಂದಿಯ ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆಯ­ಲಾಗಿದೆ. ಕೆಲ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸ­ಲಾಗಿದೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಭೆ ರದ್ದು: ಶಾಲಾ ಆಡಳಿತ ಮಂಡಳಿಯು ಪ್ರಕರಣದ ಬಗ್ಗೆ ಚರ್ಚೆ ನಡೆಸಲು ಬುಧವಾರ ಇತರೆ ಮಕ್ಕಳ ಪೋಷಕರ ಸಭೆ ಕರೆದಿತ್ತು. ಪೋಷಕರು ಬೆಳಿಗ್ಗೆಯೇ ಶಾಲೆಯ ಬಳಿ ಬಂದು ಸಭೆ ಆರಂಭವಾಗುವುದನ್ನೇ ಕಾಯು­ತ್ತಿದ್ದರು. ಆದರೆ, ರುಸ್ತುಂ ಅವರ ಬಂಧನ­ವಾಗಿದ್ದರಿಂದ ಆಡಳಿತ ಮಂಡಳಿಯ ಯಾವುದೇ ಸದಸ್ಯರು ಸಭೆಗೆ ಬರಲಿಲ್ಲ. ಇದರಿಂದಾಗಿ ಅಂತಿಮ ಕ್ಷಣದಲ್ಲಿ ಸಭೆ ರದ್ದಾಯಿತು.

ಗುರುವಾರ (ಜುಲೈ 24) ಸಭೆ ನಡೆಸುವುದಾಗಿ ಆಡಳಿತ ಮಂಡಳಿ ಸದಸ್ಯರು ಭರವಸೆ ಕೊಟ್ಟಿದ್ದಾರೆ. ಶಾಲೆ ಪುನರಾ­ರಂಭದ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೋಷಕರು ತಿಳಿಸಿದ್ದಾರೆ.

ಐವರು ಸಿಬ್ಬಂದಿ ಅಮಾನತು: ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ವಿಬ್ಗಯೊರ್ ಶಾಲಾ ಆಡಳಿತ ಮಂಡಳಿಯು ಈಗಾಗಲೇ ಬಂಧಿತನಾಗಿರುವ ಸ್ಕೇಟಿಂಗ್ ತರಬೇತುದಾರ ಮುಸ್ತಫಾ ಸೇರಿದಂತೆ ಐವರನ್ನು ಸೇವೆಯಿಂದ ಅಮಾನತುಗೊಳಿಸಿದೆ. ಮತ್ತೊಬ್ಬ ಸ್ಕೇಟಿಂಗ್ ತರಬೇತಿ ಶಿಕ್ಷಕ, ಇಬ್ಬರು ಜಿಮ್‌ ತರಬೇತುದಾರರು ಹಾಗೂ ಒಬ್ಬ ಸಹಾಯಕ ಶಿಕ್ಷಕ ಅಮಾನತುಗೊಂಡ ಇತರೆ ಸಿಬ್ಬಂದಿ.

ಠಾಣೆಯಲ್ಲಿ ‘ಅತ್ಯಾಚಾರಿಗಳ ಪಟ್ಟಿ’
ಬೆಂಗಳೂರು: ರೌಡಿ ಪಟ್ಟಿಯ ಹಾಗೆ ಅತ್ಯಾಚಾರಿಗಳ ಪಟ್ಟಿ­ಯನ್ನೂ ಪೊಲೀಸ್‌ ಠಾಣೆಯಲ್ಲಿ ನಿರ್ವಹಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಒಮ್ಮೆ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ ವ್ಯಕ್ತಿಯ ಹೆಸರನ್ನೂ ‘ಅತ್ಯಾ­ಚಾರಿಗಳ’ ಪಟ್ಟಿಗೆ ಸೇರಿಸಿ, ಅವರ ಮೇಲೂ ನಿಗಾ ಇಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಪೊಲೀಸರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲು ಸಭೆ ತೀರ್ಮಾನಿಸಿತು.

ಪೋಷಕರ ಸಭೆ ರದ್ದು
ಶಾಲಾ ಆಡಳಿತ ಮಂಡಳಿ ಪ್ರಕರಣದ ಬಗ್ಗೆ ಚರ್ಚೆ ನಡೆಸಲು ಬುಧವಾರ ಇತರೆ ಮಕ್ಕಳ ಪೋಷಕರ ಸಭೆ ಕರೆದಿತ್ತು. ಪೋಷಕರು ಶಾಲೆ ಬಳಿ ಬಂದು ಸಭೆ ಆರಂಭ­ವಾ­ಗುವುದನ್ನೇ ಕಾಯುತ್ತಿದ್ದರು. ಆದರೆ, ರುಸ್ತುಂ ಅವರ ಬಂಧನದಿಂದಾಗಿ ಆಡಳಿತ ಮಂಡಳಿ ಸದಸ್ಯರು ಸಭೆಗೆ ಬರಲಿಲ್ಲ. ಇದ­ರಿಂದಾಗಿ ಸಭೆ ರದ್ದಾಯಿತು.

ಪ್ರತಿಭಟನೆ
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿ­ರುವ ಅತ್ಯಾ­ಚಾರ ಪ್ರಕರಣಗಳನ್ನು ಖಂಡಿಸಿ ವಿವಿಧ ಸಂಘಟನೆ­ಗಳ ಸದ­ಸ್ಯರು ನಗರದಲ್ಲಿ ಬುಧವಾರವೂ ಪ್ರತಿಭಟನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT