ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜಿತ ಆಂಧ್ರದ ಮೊದಲ ಸಿ.ಎಂ ನಾಯ್ಡು

Last Updated 8 ಜೂನ್ 2014, 19:30 IST
ಅಕ್ಷರ ಗಾತ್ರ

ವಿಜಯವಾಡ (ಪಿಟಿಐ): ತೆಲುಗುದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು  ಹೊಸ ಆಂಧ್ರ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು. 

ಇಲ್ಲಿಗೆ ಸಮೀಪದ ನಾಗಾರ್ಜುನ ನಗರದಲ್ಲಿ ಸಂಜೆ 7.27ಕ್ಕೆ ನಡೆದ  ಸಮಾರಂಭದಲ್ಲಿ ರಾಜ್ಯಪಾಲ ಇ.ಎಸ್‌.ಎಲ್‌. ನರಸಿಂಹನ್‌, ನಾಯ್ಡು ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ತೆಲುಗು ಭಾಷೆಯಲ್ಲಿ ದೇವರ ಹೆಸರಲ್ಲಿ  ಅವರು ಪ್ರಮಾಣವಚನ ಸ್ವೀಕರಿಸಿದರು.

ಪ್ರತಿಜ್ಞಾವಿಧಿ ಸ್ವೀಕರಿಸುವ ಮೊದಲು ಅವರು ವೇದಿಕೆಯಲ್ಲಿದ್ದ ತೆಲುಗು ಮಾತೆಯ ಮೂರ್ತಿಗೆ ನಮಿಸಿದರು. ಇದೇ ಸಂದರ್ಭದಲ್ಲಿ ನಾಯ್ಡು ಜತೆ 19 ಶಾಸಕರು ಸಂಪುಟ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದರು.  ಮಿತ್ರಪಕ್ಷ ಬಿಜೆಪಿಯ ಇಬ್ಬರು ನಾಯ್ಡು ಸಂಪುಟದಲ್ಲಿ ಅವಕಾಶ ಪಡೆದಿದ್ದಾರೆ.

ಸಂಪುಟದಲ್ಲಿ ಮೂವರು ಮಹಿಳೆಯರು ಮತ್ತು ಮೂವರು ವೈದ್ಯರಿದ್ದಾರೆ. ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಎದುರಿನ 70 ಎಕರೆ ವಿಶಾಲ ಮೈದಾನದಲ್ಲಿ ಆಯೋಜಿಸ­ಲಾಗಿದ್ದ ಸಮಾರಂಭದಲ್ಲಿ ಬಿಸಿಲಿನ ಝಳವನ್ನು ಲೆಕ್ಕಿಸದೆ  ತೆಲುಗುದೇಶಂನ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ನೆರವಿನ ಭರವಸೆ: ಆಂಧ್ರ ಪ್ರದೇಶದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎನ್.ಚಂದ್ರಬಾಬು ನಾಯ್ಡು ಅವರನ್ನು ಟ್ಟಿಟರ್‌ನಲ್ಲಿ ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯಕ್ಕೆ ಎಲ್ಲ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ನಡುವೆ ವಿಜಯವಾಡದಲ್ಲಿ ಮಾತನಾಡಿದ ಸಂಸದೀಯ ವ್ಯವಹಾರ ಮತ್ತು ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು, ‘ಕೇಂದ್ರ ಸರ್ಕಾರ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಬಜೆಟ್‌ ನೆರವು ನೀಡಲಿದೆ’ ಎಂದು ಭರವಸೆ ನೀಡಿದ್ದಾರೆ.

ದಾಖಲೆಗಳ ಸರದಾರ: ಅತಿ ಹೆಚ್ಚು ಕಾಲ ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎಂಬ ದಾಖಲೆ ಚಂದ್ರಬಾಬು ನಾಯ್ಡು ಅವರ ಹೆಸರಿನಲ್ಲಿದೆ. ಎಂಟು ವರ್ಷ  ಅವಿಭಜಿತ ಆಂಧ್ರದ ಮುಖ್ಯಮಂತ್ರಿ­ಯಾಗಿದ್ದ ಅವರು, ಈಗ ವಿಭಜನೆಯ ನಂತರ ಆಂಧ್ರದ ಮೊದಲ ಮುಖ್ಯಮಂತ್ರಿ ಎಂಬ ಹೊಸ ದಾಖಲೆಯೂ ಅವರ ಹೆಸರಿನಲ್ಲಿ ದಾಖಲಾಗಿದೆ.

ಅತಿ ಚಿಕ್ಕ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆ­ಯಾದ ನಾಯ್ಡು 28ನೇ ವರ್ಷಕ್ಕೆ  ಟಿ. ಅಂಜಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಏಳು  ಅವಧಿಗೆ ಶಾಸಕರಾಗಿರುವ ಅವರು, ಅತಿ ಹೆಚ್ಚು ಕಾಲ (ಹತ್ತು ವರ್ಷ) ವಿರೋಧಪಕ್ಷದ ನಾಯಕರಾಗಿಯೂ ದಾಖಲೆ ಬರೆದಿದ್ದಾರೆ.

1950ರಲ್ಲಿ ತಿರುಪತಿ ಬಳಿಯ ನಾರಾವಾರಿಪಲ್ಲಿ ಮಧ್ಯಮ ಕೃಷಿಕ ಕುಟುಂಬದಲ್ಲಿ ಜನಿಸಿದ ನಾರಾ ಚಂದ್ರಬಾಬು ನಾಯ್ಡು ಅರ್ಥಶಾಸ್ತ್ರದಲ್ಲಿ ಸ್ನಾತ­ಕೋತ್ತರ ಪದವಿ ಪಡೆದಿದ್ದಾರೆ.

1975ರಲ್ಲಿ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿ ಶಾಸಕರಾದ ಕಾರಣ ಪಿಎಚ್‌.ಡಿ ಪದವಿಯನ್ನು ಅರ್ಧಕ್ಕೆ ಕೈಬಿಟ್ಟರು. ತೆಲುಗು ಚಿತ್ರರಂಗದ ಮೇರುನಟ ಎನ್‌.ಟಿ. ರಾಮಾರಾವ್ ಅವರ ಎರಡನೇ ಪುತ್ರಿ ಭುವನೇಶ್ವರಿ ಅವರನ್ನು ವರಿಸಿದರು.

ಕೃಷಿ, ಸ್ವಯಂ ಸೇವಾ ಸಂಸ್ಥೆಗಳ ಸಾಲ ಮನ್ನಾ
ನಾಯ್ಡು  ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಕೃಷಿಸಾಲ ಹಾಗೂ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ (ಡ್ವಾಕ್ರಾ) ಅಡಿ ಅಸ್ತಿತ್ವಕ್ಕೆ ಬಂದ ಸ್ವಯಂ ಸೇವಾ ಸಂಸ್ಥೆಗಳ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದರು. 

ಸಾವಿರ ರೂಪಾಯಿ ವಿಧವಾ ಹಾಗೂ ವೃದ್ಧಾಪ್ಯ ವೇತನ, ಎನ್‌ಟಿಆರ್‌ ಸುಜಲಾ ಯೋಜನೆ ಅಡಿ ಎರಡು ರೂಪಾಯಿಗೆ 20 ಲೀಟರ್‌ ಶುದ್ಧ ಕುಡಿಯುವ ನೀರು, ನಿವೃತ್ತಿ ವಯೋಮಿತಿ 58 ರಿಂದ 60 ವರ್ಷಕ್ಕೆ ಏರಿಕೆ ಕಡತಗಳಿಗೆ ಅವರು ಸಹಿ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT