ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆಯೂ ಒಂದು ಮಾಫಿಯಾ

ಪ್ರತಿಭಾವಂತರ ಬಗ್ಗು ಬಡಿಯಲು ಬಳಕೆ– ಚಂಪಾ
Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ‘ವಿಮರ್ಶೆ ಒಂದು ಮಾಫಿಯಾ ಆಗಿ ಬೆಳೆಯುತ್ತಿದೆ. ಅದು ಸಾಹಿತ್ಯೇತರ ಕಾರಣಗಳಿಗಾಗಿ ಪ್ರತಿಭಾವಂತ ಲೇಖಕರನ್ನು ಬಗ್ಗು ಬಡಿಯುವ ಸಾಧನವಾಗಿ ಬಳಕೆಯಾಗುತ್ತಿದೆ’ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಕಿಡಿ ಕಾರಿದರು.

ಅಭಿರುಚಿ ಪ್ರಕಾಶನ ಹಾಗೂ ಪ್ರೊ.ಎಲ್. ಬಸವರಾಜು ಅವರ ವಿದ್ಯಾರ್ಥಿಗಳ ಬಳಗವು ಇಲ್ಲಿನ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಏರ್ಪಡಿಸಿದ್ದ ‘ಪ್ರೊ.ಎಲ್. ಬಸವರಾಜು ಅವರ 96ನೇ ಜನ್ಮದಿನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಹಿತ್ಯೇತರ ಕಾರಣಗಳಿಂದಾಗಿಯೇ ಕೆಲವರ ಹೆಸರು ಹೆಚ್ಚು ಪ್ರಚಲಿತಕ್ಕೆ ಬರುತ್ತದೆ. ಉಳಿದವರು ಪ್ರತಿಭೆ ಇದ್ದರೂ ಮರೆಯಾಗು­ತ್ತಾರೆ. ವಿಮರ್ಶೆಯು ಸಹ ಇದಕ್ಕೆ ಇಂಬು ಕೊಡುತ್ತದೆ. ಹಾಗಾಗಿ, ವಿಮರ್ಶೆಯೇ ಅಂತಿಮ ಮಾನದಂಡ ಅಲ್ಲ’ ಎಂದು   ಅವರು ಅಭಿಪ್ರಾಯಪಟ್ಟರು.

ವಸಹಾತುಶಾಹಿ ವ್ಯವಸ್ಥೆಯನ್ನು ಋಣಾತ್ಮಕ ದೃಷ್ಟಿ­ಯಿಂದ ಕೆಲವರು ನೋಡುತ್ತಾರೆ. ಆದರೆ, ಹೊಸ ಹೊಸ ಪರಿಕಲ್ಪನೆಗಳು ಬಂದಿದ್ದೇ ಇದರ ಮೂಲಕ. ಸ್ವಾತಂತ್ರ್ಯ, ಸೋದರತೆ ಹಾಗೂ ಸಮಾನತೆ ಮೊದಲಾದ ಪರಿಕಲ್ಪನೆಗಳು ಫ್ರೆಂಚ್ ಕ್ರಾಂತಿಯಿಂದ ಬಂದವು. ಆದರೆ, ನಾವಿಂದು ಪೂರ್ವಾತ್ಯ, ಪಾಶ್ಚಿ­ಮಾತ್ಯ ಎಂಬ ಹಳಹಳಿಕೆಯಲ್ಲೇ ಇದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಾಹಿತ್ಯ ರಚಿಸುವವರು ಹಳೆಯ ಸಾಹಿತ್ಯ­ದಿಂದಲೇ ಎರವಲು ಪಡೆದು ಅದನ್ನು ಸ್ವಲ್ಪ ಆಚೀಚೆ ಮಾಡಿ ಹೊಸ ಹೊಸ ಮೌಲ್ಯಗಳನ್ನು ಸೇರಿಸುತ್ತಾರೆ. ಇದರ ಬದಲಿಗೆ ಹೊಸ ವಸ್ತು, ಪಾತ್ರವರ್ಗ ಹಾಗೂ ಸನ್ನಿವೇಶಗಳನ್ನು ನಿರ್ಮಾಣ ಮಾಡಬಾರದೇಕೆ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ಯಾವುದೇ ಕವಿಯನ್ನಾದರೂ ಸರಿ ಆತನ ಕಾವ್ಯ­ಗಳನ್ನು ಸಮಕಾಲೀನ ಪರಿಸ್ಥಿತಿಯಲ್ಲಿಟ್ಟು ನೋಡ­ಬೇಕು. ಅವನ ಕಾಲದ ಯುಗಧರ್ಮ ಅವನ ಕಾವ್ಯದಲ್ಲಿ ಎಷ್ಟರಮಟ್ಟಿಗೆ ಬಿಂಬಿತವಾಗಿದೆ ಎಂಬು­ದನ್ನು ಹುಡುಕಬೇಕು. ಸಮಕಾಲೀನ ತುರ್ತು ಮತ್ತು ತುಡಿತಕ್ಕೆ ಸ್ಪಂದನೆ ಮಾಡದ ಯಾವುದೇ ಕಾವ್ಯ ಶ್ರೇಷ್ಠ ಕಾವ್ಯ ಆಗಲಾರದು’ ಎಂದು ವಿವರಿಸಿದರು.

ಚಿಂತಕ...ಹಂತಕ...! 
ಈಚೆಗೆ ಕೆಲವರು ತಮ್ಮ ಹೆಸರಿನ ಹಿಂದೆ ಚಿಂತಕ ಎಂಬ ವಿಶೇಷಣ ಸೇರಿಸಿ­ಕೊಳ್ಳು­ತ್ತಾರೆ. ಚಿಂತಕ ಎಂದಾಕ್ಷಣ ಹಂತಕ ಎಂದು ನೆನಪಾ­ಗುತ್ತವೆ. ಕೆಲವರು ನಿರ್ದಿಷ್ಟ ಉದ್ದೇಶ ಸಾಧನೆಗಾಗಿ ಚಿಂತಕರಾಗುತ್ತಾರೆ. ಅವರು ‘ಸುಪಾರಿ ಚಿಂತಕರು’ ಎಂದು ಕರೆಯಬಹುದು ಎಂದು ಚಂಪಾ ಹೇಳಿದಾಗಲೂ ಸಭೆಯಲ್ಲಿ ನಗೆಯ ಬುಗ್ಗೆ ಎದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT