ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ದುರಂತ: 116 ಬಲಿ

ಇಂಡೊನೇಷ್ಯಾ: ನಗರದ ಮೇಲೆ ಬಿದ್ದ 51 ವರ್ಷ ಹಳೆಯ ಹರ್ಕ್ಯುಲಿಸ್‌ ಸಿ 130
Last Updated 30 ಜೂನ್ 2015, 19:30 IST
ಅಕ್ಷರ ಗಾತ್ರ

ಮೆಡನ್‌ (ಇಂಡೊನೇಷ್ಯಾ) (ಎಎಫ್‌ಪಿ): ಇಂಡೊನೇಷ್ಯಾ ವಾಯುಪಡೆಯ ಸಾರಿಗೆ ವಿಮಾನವೊಂದು ಹಾರಾಟ ಆರಂಭಿಸಿ ಸ್ವಲ್ಪ ಹೊತ್ತಿನಲ್ಲೇ ಪ್ರಮುಖ ನಗರವೊಂದರ ಮೇಲೆ ಪತನಗೊಂಡಿದ್ದು 116 ಜನರು ಮೃತಪಟ್ಟಿದ್ದಾರೆ. ಹರ್ಕ್ಯುಲಿಸ್‌ ಸಿ 130 ವಿಮಾನ ಸುಮಾತ್ರ ದ್ವೀಪದಲ್ಲಿರುವ ಮೆಡನ್‌ ನಗರದ ಮೇಲೆ ಬಿದ್ದಿದೆ. ಪತನಗೊಂಡ ವಿಮಾನ ಬೆಂಕಿಯ ಉಂಡೆಯಂತೆ ಕಾಣಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಿಮಾನದಲ್ಲಿ 101 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು.

ಅವರಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ವಾಯುಪಡೆ ಮುಖ್ಯಸ್ಥ ಆಗಸ್‌ ಸುಪ್ರಿಯಾಂತ ಹೇಳಿದ್ದಾರೆ.  ಮೆಡನ್‌ ನಗರದ ಜನವಸತಿ ಪ್ರದೇಶದ ಮೇಲೆ ವಿಮಾನ ಬಿದ್ದ ರಭಸಕ್ಕೆ ಹಲವು ಕಟ್ಟಡಗಳು ಹಾನಿಯಾಗಿವೆ. ಕಾರುಗಳಿಗೆ ಬೆಂಕಿ ಹಿಡಿದಿದೆ. ಕೆಲವು ಸ್ಥಳೀಯರೂ ಬಲಿಯಾಗಿದ್ದಾರೆ.

ಅಪಘಾತ ಸ್ಥಳದಿಂದ ಈತನಕ 69 ದೇಹಗಳನ್ನು ತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಯಾಣಿಕರಲ್ಲಿ ಹಲವರು ಸೇನಾ ಸಿಬ್ಬಂದಿಯ ಕುಟುಂಬ ಸದಸ್ಯರು ಎಂದು ಮೆಡನ್‌ ವಾಯುನೆಲೆಯ ವಕ್ತಾರರು ತಿಳಿಸಿದ್ದಾರೆ. ವಿಮಾನವು 51 ವರ್ಷ ಹಳೆಯದಾಗಿದ್ದು, ಒಂದು ಮಸಾಜ್‌ ಕೇಂದ್ರ ಹಾಗೂ ಸಣ್ಣ ಹೋಟೆಲ್‌ಗೆ ಅಪ್ಪಳಿಸಿದೆ. ಹಾರಾಟ ಆರಂಭಿಸಿ ಎರಡೇ ನಿಮಿಷದಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿದ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಪತನಗೊಳ್ಳುವುದಕ್ಕೆ ಮೊದಲು ವಿಮಾನ ಅತ್ಯಂತ ಕೆಳಭಾಗದಿಂದ ಹಾರಾಡುತ್ತಿತ್ತು. ಆ ದೃಶ್ಯ ಅತ್ಯಂತ ಭಯಾನಕವಾಗಿತ್ತು ಎಂದು ಶಾಲಾ ಶಿಕ್ಷಕಿ ನೋವಿ ಹೇಳಿದ್ದಾರೆ. ‘ವಿಮಾನವು ನಿಲ್ದಾಣ ಕಡೆಯಿಂದ ಬರುತ್ತಿದ್ದುದನ್ನು ನಾನು ಕಂಡೆ. ಆಗಲೇ ಅದು ಓಲಾಡುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ವಿಮಾನದಿಂದ ಹೊಗೆ ಬರಲು ಆರಂಭಿಸಿತು’ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. 1964ರಲ್ಲಿ ನಿರ್ಮಾಣವಾದ ಹರ್ಕ್ಯುಲಿಸ್‌ ಸಿ 130 ಶ್ರೇಣಿಯ 28 ವಿಮಾನಗಳು ಇಂಡೊನೇಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿವೆ.
*
ವಿಮಾನದಲ್ಲಿದ್ದವರು
101 ಪ್ರಯಾಣಿಕರು
12 ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT