ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ಸಾಮರ್ಥ್ಯ ವೃದ್ಧಿಗೆ ಕ್ರಮ

ಕೆಂಪೇಗೌಡ ವಿಮಾನ ನಿಲ್ದಾಣ: ಭವಿಷ್ಯದಲ್ಲಿ ಪ್ರತಿ ಗಂಟೆಗೆ 48 ವಿಮಾನಗಳ ಹಾರಾಟ
Last Updated 1 ಜುಲೈ 2015, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿ ಗಂಟೆಗೆ 48 ವಿಮಾನಗಳ ಹಾರಾಟ ನಿರ್ವಹಣೆ ಸಾಮರ್ಥ್ಯವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಲ್ಪಿಸಲಾಗುವುದು’ ಎಂದು ವಿಮಾನ ನಿಲ್ದಾಣದ ಕಾರ್ಯಾಚರಣೆ ಅಧ್ಯಕ್ಷ ಹರಿ ಮರಾರ್‌ ತಿಳಿಸಿದರು. ‘ಈಗ ಪ್ರತಿ ಗಂಟೆಗೆ 30 ವಿಮಾನಗಳ ಹಾರಾಟ ನಿರ್ವಹಣೆ ಮಾಡಲಾಗುತ್ತಿದೆ’ ಎಂದು ಬುಧವಾರ ನಿಲ್ದಾಣಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳಿಗೆ ಅವರು ವಿವರಿಸಿದರು.

‘ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದರಿಂದ ಮತ್ತೊಂದು ರನ್‌ ವೇ ನಿರ್ಮಿಸುವ ಯೋಜನೆಯು ಇದೆ’ ಎಂದರು. ‘ಮತ್ತೊಂದು ರನ್‌ವೇ ನಿರ್ಮಿಸಲು ಭೂಮಿ ಸಮತಟ್ಟು ಮಾಡುವುದು ಸೇರಿದಂತೆ ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ.

ಹೀಗಾಗಿ ಈ ಕಾರ್ಯ ಈಗ ಕೈಗೆತ್ತಿಕೊಂಡರೂ ಅದು ಪೂರ್ಣಗೊಳ್ಳಲು ಕನಿಷ್ಠ ನಾಲ್ಕು ವರ್ಷ ಸಮಯ ಹಿಡಿಯುತ್ತದೆ’ ಎಂದರು. ‘ಈಗ ದಿನಕ್ಕೆ ಸರಾಸರಿ 400 ವಿಮಾನಗಳು ಬಂದು ಹೋಗುತ್ತಿದ್ದು, ನಿತ್ಯ 48,800 ಪ್ರಯಾಣಿಕರು ಸಂಚರಿಸುತ್ತಿದ್ದಾರೆ’ ಎಂದು ವಿವರಿಸಿದರು. ‘ಒಟ್ಟು 39 ಏರ್‌ಲೈನ್ಸ್‌ ಸಂಸ್ಥೆಗಳು ಇಲ್ಲಿಂದ ಕಾರ್ಯಾಚರಣೆ ನಡೆಸುತ್ತಿವೆ. ಇದರಲ್ಲಿ 29 ಅಂತರರಾಷ್ಟ್ರೀಯ ಹಾಗೂ 10 ದೇಶೀಯ ಏರ್‌ಲೈನ್ಸ್‌ ಸಂಸ್ಥೆಗಳು ಸೇರಿವೆ’ ಎಂದರು.

‘ಎರಡನೇ ಹಂತದಲ್ಲಿ ವಿಮಾನ ನಿಲ್ದಾಣದ ವಿಸ್ತರಣೆಗೆ ಒಟ್ಟು ₹1,539 ಕೋಟಿ ವೆಚ್ಚ ಮಾಡಲಾಗಿದೆ. ಈಗ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ರೀತಿಯ ಸೌಕರ್ಯ ಕಲ್ಪಿಸಲಾಗಿದೆ’ ಎಂದು ಹಣಕಾಸು ಮತ್ತು ಅದಕ್ಕೆ ಪೂರಕವಾದ ಸೇವೆಗಳ ವಿಭಾಗದ ಬಿ. ಭಾಸ್ಕರ್‌ ಮಾಹಿತಿ ನೀಡಿದರು.
*
ನಿಲ್ದಾಣದಲ್ಲಿ ಮಕ್ಕಳ ಆಟದ ಪ್ರದೇಶ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದೇಶಿ ಪ್ರಯಾಣಿಕರು ನಿರ್ಗಮಿಸುವ ಟರ್ಮಿನಲ್‌ನಲ್ಲಿ ಮಕ್ಕಳು ಆಟವಾಡಲು ವ್ಯವಸ್ಥೆ ಮಾಡಲಾಗಿದೆ. 70 ಚದರ ಅಡಿ ಸುತ್ತಳತೆಯ ಪ್ರದೇಶದಲ್ಲಿ 12 ಮಕ್ಕಳು ಒಟ್ಟಿಗೆ ಆಟ ಆಡಬಹುದು. ಇದಕ್ಕೆ ಯಾವುದೇ ರೀತಿಯ ಶುಲ್ಕ ಇಲ್ಲ.

‘ಕ್ರಾಸ್‌ ವರ್ಡ್ಸ್‌’ ಸಂಸ್ಥೆಗೆ ಇದರ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿದೆ. ಮೈಕಲ್‌ ಫಾಲಿ  ಇದನ್ನು ವಿನ್ಯಾಸಗೊಳಿಸಿದ್ದಾರೆ. ಇದರ ಮತ್ತೊಂದು ವಿಶೇಷತೆಯೆಂದರೆ ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ಆಟಿಕೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಪೋಷಕರು ಅವರ ಮಕ್ಕಳ ವಯಸ್ಸಿಗೆ ಅನುಗುಣವಾದ ಆಟಿಕೆಗಳ ವಿಭಾಗದಿಂದ ಆಟಿಕೆಗಳನ್ನು ಖರೀದಿಸಬಹುದು.

ಇದರ ಸನಿಹದಲ್ಲಿಯೇ ವಿವಿಧ ಬಗೆಯ ಮಳಿಗೆಗಳು ಇವೆ.ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಆಟವಾಡಲುಬಿಟ್ಟು ಶಾಪಿಂಗ್‌
ಮಾಡಬಹುದು.ಇದರ ಜೊತೆಗೇ ಸ್ವದೇಶಿ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರು ನಿರ್ಗಮಿಸುವ ಟರ್ಮಿನಲ್‌ನಲ್ಲಿ ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಖಾದ್ಯ, ಉಡುಗೆ, ಕರಕುಶಲ ವಸ್ತುಗಳ ಮಾರಾಟ  ಮಳಿಗೆಗಳು, ಹೋಟೆಲ್‌ ಹಾಗೂ ಸ್ಪಾ ಕೂಡ ತೆರೆಯಲಾಗಿದೆ.

ಮೈಸೂರು ಪಾಕ್‌, ಮದ್ದೂರು ವಡೆ, ಕೊಡಬಳೆ ಸೇರಿದಂತೆ ಸ್ಥಳೀಯ ಖಾದ್ಯಗಳ ರುಚಿ ಸವಿಯಬಹುದು. ಅಂತರರಾಷ್ಟ್ರೀಯ ಪ್ರಯಾಣಿಕರು ನಿರ್ಗಮಿಸುವ ಟರ್ಮಿನಲ್‌ನಲ್ಲಿ ‘ಡ್ಯೂಟಿ ಫ್ರೀ’ ಹೆಸರಿನ ಮಳಿಗೆ ತೆರೆಯಲಾಗಿದೆ. ಇದರ ವಿಶೇಷತೆ ಎಂದರೆ ಇಲ್ಲಿ ಖರೀದಿಸುವ ಎಲ್ಲ ರೀತಿಯ ಬ್ರಾಂಡೆಡ್‌ ವಸ್ತುಗಳು ಸುಂಕರಹಿತವಾಗಿ ಮಾರಾಟಕ್ಕೆ ಲಭ್ಯವಾಗಲಿವೆ.
*
ಅಂಕಿ ಅಂಶ
30 ಪ್ರತಿ ಗಂಟೆಗೆ  ವಿಮಾನಗಳ ಹಾರಾಟ
400 ದಿನಕ್ಕೆ ಸರಾಸರಿವಿಮಾನಗಳ ಹಾರಾಟ
49 ದಿನಕ್ಕೆ ಸಂಚರಿಸುವ ಪ್ರಯಾಣಿಕರು
39 ಏರ್‌ಲೈನ್ಸ್‌ ಸಂಸ್ಥೆಗಳ ಕಾರ್ಯನಿರ್ವಹಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT