ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೋಚನೆ ಹಾದಿಯ ಹಿನ್ನೋಟ...

1724 ರಿಂದ ಸೆ. 13, 1948ರ ಪೊಲೀಸ್ ಕಾರ್ಯಾಚರಣೆವರೆಗೆ
Last Updated 17 ಸೆಪ್ಟೆಂಬರ್ 2014, 8:20 IST
ಅಕ್ಷರ ಗಾತ್ರ

ಕೊಪ್ಪಳ: ದೇಶ 1947ರ ಆಗಸ್ಟ್ 15ರಂದು ಗಳಿಸಿದ ಸ್ವಾತಂತ್ರ್ಯ ಅಪೂರ್ಣವಾಗಿತ್ತು. ಏಕೆಂದರೆ ಹೈದರಾಬಾದ್‌ ಕರ್ನಾಟಕ ಭಾಗ ಇನ್ನೂ ನಿಜಾಮರ ಹಿಡಿತದಲ್ಲಿತ್ತು. ಇದನ್ನು ವಿಮೋಚನೆಗೊಳಿಸುವ ಹೋರಾಟ ಮತ್ತೂ ಒಂದು ವರ್ಷ ಮುಂದುವರಿಯಿತು. ಅದರ ಕಥೆಯೇ ಹೈದರಾಬಾದ್‍ ವಿಮೋಚನಾ ಚಳವಳಿ. ಹೈದರಾಬಾದ್‍ ವಿಮೋಚನಾ ದಿನದ ಅಂಗವಾಗಿ ಆ ದಿನಗಳನ್ನು ಮೆಲುಕು ಹಾಕುವ ಪ್ರಯತ್ನವಿದು.

ನಿಜಾಮ ಸಂಸ್ಥಾನದಲ್ಲಿ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನಡೆದ ಹೋರಾಟವು ಭಾರತದ ಸ್ವಾತಂತ್ರ್ಯ ಹೋರಾಟದ ಅಂತಿಮ ಮಜಲು.

ಹೈದರಾಬಾದ್ ರಾಜ್ಯದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯು ಹಿಂಸಾತ್ಮಕವಾಗಿದ್ದು ಕ್ರಾಂತಿಯ ಸ್ವರೂಪ ಪಡೆದಿತ್ತು. ಇಲ್ಲಿ ಜನರು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಸಿದರು.

* ನಿಜಾಮ ಸಂಸ್ಥಾನ ಹಾಗೂ ಬ್ರಿಟಿಷರು: ಪ್ರಾರಂಭದಿಂದಲೂ ತಮಗೆ ದೈವದತ್ತ ಅರಸೊತ್ತಿಗೆ ಅಧಿಕಾರವಿದೆ ಎಂದು ನಿಜಾಮರು ನಂಬಿದ್ದರು. 1857ರ ಸ್ವಾತಂತ್ರ್ಯ ಸಂಗ್ರಾಮದ ಅಲೆಗಳನ್ನು ದಕ್ಷಿಣ ಭಾರತದಲ್ಲಿ ತಡೆದಿದ್ದನ್ನು ಗಮನಿಸಿದರೆ, ಬ್ರಿಟಿಷರಿಗೆ ನಿಜಾಮ ಶಕ್ತಿಯ ಅನಿವಾರ್ಯತೆ ಗೊತ್ತಾಯಿತು. ಪ್ರಥಮ ಮಹಾಯುದ್ಧದ ಸಮಯದಲ್ಲಿ ನಿಜಾಮನು ಬ್ರಿಟನ್‌ಗೆ  ₨ 375 ಲಕ್ಷ ಹಣ ಹಾಗೂ ಸೇನಾ ತುಕಡಿಗಳನ್ನು ಕಳುಹಿಸಿದ. ಇದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ನಿಜಾಮರಿಗೆ ಆಂತರಿಕ ಅಧಿಕಾರ ನೀಡಿತು. ನಿಜಾಮ ಸ್ವತಂತ್ರವಾದ ಧ್ವಜ, ರಾಷ್ಟ್ರಗೀತೆ, ಸೈನ್ಯ, ನಾಣ್ಯ, ಸಾರಿಗೆ, ರೈಲ್ವೆ, ಅಂಚೆ, ಆಕಾಶವಾಣಿ ಮತ್ತು ಶಿಕ್ಷಣ ವ್ಯವಸ್ಥೆ ಹೊಂದಿದ್ದ. ಬದುಕಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸಂಪತ್ತು ಮತ್ತು ಅಧಿಕಾರವನ್ನೇ ಬಯಸುತ್ತಿದ್ದ ಮೀರ್ ಉಸ್ಮಾನ್ ಅಲಿಖಾನ್ ಬಹಾದ್ದೂರ್, 1911, ಆ. 29ರಂದು ಅಧಿಕಾರಕ್ಕೆ ಬಂದ.

* ಸಂಸ್ಥಾನದ ಮೂಲ: ಭಾರತದಲ್ಲೇ ಅತ್ಯಂತ ಶ್ರೀಮಂತವೂ ಆಗಿದ್ದ ಹೈದರಾಬಾದ್ ಸಂಸ್ಥಾನವನ್ನು ಮಿರ್ ಖಮರುದ್ದೀನ್ ಚಿನ್ ಖಲಿಚ್‌ಖಾನ್ ಎಂಬುವನು 1724ರಲ್ಲಿ ಸ್ಥಾಪಿಸಿದ.

* ಬ್ರಿಟಿಷರ ಪಾತ್ರ: ದಕ್ಷಿಣ ಭಾರತದಲ್ಲಿ ತಮ್ಮ ಪರಮಾಧಿಕಾರ ಕಾಯ್ದುಕೊಳ್ಳಲು ಹೈದರಾಬಾದ್ ಸಂಸ್ಥಾನವನ್ನು ಬ್ರಿಟಿಷರು ತಮ್ಮ ಅಧೀನ ರಾಜ್ಯವನ್ನಾಗಿ ಬಳಸಿದರು. ಮೈಸೂರು ಯುದ್ಧದಲ್ಲಿ ಟಿಪ್ಪುಸುಲ್ತಾನನು ಸೋತ ನಂತರ 1796ರಲ್ಲಿ ಬ್ರಿಟಿಷರು ಮತ್ತು ನಿಜಾಮನ ನಡುವೆ ಉಂಟಾದ ಒಪ್ಪಂದದ ಪ್ರಕಾರ ಇಂದು ಹೈದರಾಬಾದ್ ಕರ್ನಾಟಕ ಎಂದು ಕರೆಯುವ ಬೀದರ್, ಗುಲ್ಬರ್ಗ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಬ್ರಿಟಿಷರು ನಿಜಾಮನಿಗೆ ಕಾಣಿಕೆಯಾಗಿ ನೀಡಿದರು. ಇದರಿಂದಾಗಿ ಹೈದರಾಬಾದ್ ಸಂಸ್ಥಾನದ ಆಂತರಿಕ ವ್ಯವಹಾರದಲ್ಲಿ ನಿಜಾಮನಿಗೆ ಸಂಪೂರ್ಣ ಅಧಿಕಾರ ನೀಡಲಾಯಿತು.

*1857ರ ದಂಗೆ, ಪರಿಣಾಮ: ಬ್ರಿಟಿಷರ ಆಳ್ವಿಕೆ ಮತ್ತು ದಾಸ್ಯದಿಂದ ಮುಕ್ತರಾಗಲು ಪೇಶ್ವೆ ನಾನಾ ಸಾಹೇಬನ ಕರೆಯಂತೆ ಹಮ್ಮಿಗೆ ಕೆಂಚನಗೌಡ, ಮುಂಡರಗಿ ಭೀಮರಾವ್, ಸುರಪುರದ ರಾಜ ವೆಂಕಟಪ್ಪ ನಾಯಕ ಮುಂತಾದವರ ಜತೆಗೆ ಏಕಕಾಲದಲ್ಲಿ ಹೈದರಾಬಾದ್, ಮದ್ರಾಸ್‌, ಮೈಸೂರು, ತಿರುವಾಂಕೂರು ಹಾಗೂ ಕೊಚ್ಚಿನ್ ರಾಜ್ಯಗಳೂ ಸಹ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದಾಗಿ ಸ್ಪಂದಿಸುತ್ತಿದ್ದವು. ಆದರೆ, ನಿಜಾಮನು ಬ್ರಿಟಿಷರೆಂಬ ಅಂಕುಶವನ್ನು ಸಣ್ಣಪುಟ್ಟ ಸಂಸ್ಥಾನಗಳನ್ನು ಹತ್ತಿಕ್ಕಲು ಬಳಸುತ್ತಿದ್ದ. ಇಷ್ಟಾದರೂ ಸುರಪುರದ ಮತ್ತು ಹಲಗಲಿ ಬೇಡರು ಮತ್ತು ಇತರ ವೀರರು ಹೋರಾಡಿ ಬ್ರಿಟಿಷ್ ಸೈನ್ಯಾಧಿಕಾರಿ ಕ್ಯಾಪ್ಟನ್ ನ್ಯೂಬರಿಯನ್ನು ಕೊಂದು ಹಾಕಿದರು.

ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚುವುದರಲ್ಲಿ ಯಶಸ್ವಿಯಾಗಿದ್ದ ಹೈದರಾಬಾದ್ ಸಂಸ್ಥಾನದ ರಾಷ್ಟ್ರೀಯವಾದಿಗಳು 1938ರಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಆರ್ಯ­ಸಮಾಜ, ಹಿಂದೂ ಮಹಾಸಭಾ, ರಾಜ್ಯ ಕಾಂಗ್ರೆಸ್ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿ ಪ್ರಾರಂಭಿಸಿದರು.

ಆಗಿಂದಾಗ್ಗೆ ನಿಜಾಮನು ರಾಷ್ಟ್ರೀಯವಾದಿ ಹೋರಾಟಗಾರರ ಬಂಧನಕ್ಕೆ ಫರ್ಮಾನ್‌ ಹೊರಡಿಸುತ್ತಿದ್ದ. ನಿಜಾಮನ ಈ ನೀತಿಯನ್ನು ವಿರೋಧಿಸಲು ವಿನಾಯಕರಾವ್ ವಿದ್ಯಾಲಂಕಾರ್ ನಾಯಕತ್ವದಲ್ಲಿ ವಕೀಲರ ವೇದಿಕೆಯನ್ನು ನಿರ್ಮಿಸಲಾಯಿತು. ಇವೆಲ್ಲಾ ಬೆಳವಣಿಗೆಗಳು ರಾಷ್ಟ್ರೀಯವಾದಿಗಳು ಹಾಗೂ ನಿಜಾಮನ ಪಡೆಗಳ ನಡುವೆ ಘರ್ಷಣೆಗೆ ಕಾರಣವಾದವು.

* ಪತ್ರಿಕೆಗಳು: ಪತ್ರಿಕೆಗಳು ಸ್ವಾತಂತ್ರ್ಯ, ರಾಷ್ಟ್ರೀಯತೆ ಕುರಿತು ಬರಹ ಪ್ರಕಟಿಸುವಂತಿರಲಿಲ್ಲ. ಜಮೀನ್ದಾರಿ, ಪಾಳೆಗಾರಿಕೆಯ ಕರಾಳಮುಖ, ರಜಾಕಾರರ ಹಾವಳಿ, ತೆಲಂಗಾಣದಲ್ಲಿ ಕಮ್ಯುನಿಸ್ಟರ ಭಯೋತ್ಪಾದಕತೆ ಮುಂತಾದ ಸಂಪಾದಕೀಯ­ಗಳನ್ನು ಬರೆಯುತ್ತಿದ್ದ ರಾಷ್ಟ್ರೀಯವಾದಿ ಉರ್ದು ದೈನಿಕ ಇಮ್ರೋಜ್‌ನ ಸಂಪಾದಕ ಮುಸ್ಲಿಂ ತರುಣ ಶೋಬುಲ್ಲಾಖಾನ್‌ನನ್ನು ರಜಾಕಾರರು 1948ರ ಆಗಸ್ಟ್ 21ರಂದು ಕ್ರೂರವಾಗಿ ಕೊಲೆಗೈದರು. ನಿಜಾಮನ ಆಳ್ವಿಕೆ ಪರವಾಗಿ ಬರೆಯುತ್ತಿದ್ದ ಮತ್ತು ಇತ್ತೇಹಾದ್ ಅನ್ನು ವೈಭವೀಕರಿಸುತ್ತಿದ್ದ ಪತ್ರಿಕೆಗಳಿಗೆ ಸಂಭಾವನೆ ಕೊಡಲಾಗುತ್ತಿತ್ತು. ಜನಾಂದೋಲನದ ಪರವಾಗಿದ್ದ ಪತ್ರಿಕೆಗಳನ್ನು ಕೋಮುವಾದಿಗಳೆಂದು ನಿಜಾಮನು ನಿಷೇಧ ಹೇರುತ್ತಿದ್ದ. ನಿಜಾಮ ಈ ರೀತಿಯ ದಮನಕಾರಿ ನೀತಿಯಿಂದಾಗಿ 1935ರಲ್ಲಿ 35ರಷ್ಟಿದ್ದ ಪತ್ರಿಕೆಗಳ ಸಂಖ್ಯೆಯು 1945ರಲ್ಲಿ 22ಕ್ಕೆ ಇಳಿದವು.

* ಕನ್ನಡ ಭಾಷೆ: ಹೈದರಾಬಾದ್ ಸಂಸ್ಥಾನದಲ್ಲಿ 1.6ಕೋಟಿ ಜನಸಂಖ್ಯೆಯಿತ್ತು. ಇದರಲ್ಲಿ 70 ಲಕ್ಷ ತೆಲುಗರು, 40 ಲಕ್ಷ ಮರಾಠಿಗರು ಮತ್ತು 20 ಲಕ್ಷ ಕನ್ನಡಿಗರು ಇದ್ದರು. ನಿಜಾಮನ ಮಲತಾಯಿ ಧೋರಣೆಯಿಂದಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಭಾಷೆ, ಸಾಹಿತ್ಯವು ಪೂರ್ಣ ನಿರ್ಲಕ್ಷ್ಯಕ್ಕೆ ಗುರಿಯಾಯಿತು.

1875-76ರಲ್ಲಿ ಪ್ರಾರಂಭವಾಗಿದ್ದ ಆಂಗ್ಲ ಭಾರತೀಯ ಭಾಷಾ ಸಂಯುಕ್ತ ಶಾಲೆಗಳನ್ನೆಲ್ಲಾ ನಿಜಾಮನು 1917ರಲ್ಲಿ ಉರ್ದು ಶಿಕ್ಷಣ ಮಾಧ್ಯಮದ ಉಸ್ಮಾನಿಯ ಪ್ರೌಢಶಾಲೆಗಳಾಗಿ ಪರಿವರ್ತಿಸಿದನು. ಇದೇ ವೇಳೆ ಉಸ್ಮಾನಿಯಾ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.

ಹೈದರಾಬಾದ್‌ ಸಂಸ್ಥಾನವನ್ನು ಭಾರತದ ಒಕ್ಕೂಟದೊಳಗೆ ವಿಲೀನಗೊಳಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದರು. ಕಾಂಗ್ರೆಸ್ ಕ್ರಿಯಾಶೀಲ ನೇತಾರ ಸ್ವಾಮಿ ರಮಾನಂದ ತೀರ್ಥರು ಈ ಸವಾಲನ್ನು ಸ್ವೀಕರಿಸಿದರು. ಪರಿಣಾಮ 1948ರ ಸೆ. 13ರಿಂದ ‘ಆಪರೇಷನ್‌ಪೋಲೋ’ ಸೈನಿಕ ಕಾರ್ಯಾಚರಣೆ ನಡೆಯಿತು. ಸೆ. 17ರಂದು  ಹೈದರಾಬಾದ್‌ ಸಂಸ್ಥಾನ, ಜತೆಗಿದ್ದ ಕರ್ನಾಟಕದ ಭಾಗವು ವಿಮೋಚನೆಗೊಂಡು ಅಖಂಡ ಭಾರತದೊಳಗೆ ಒಂದಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT