ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣುವಿಗೆ ನಾನು ಕೊಟ್ಟ ಬೆನ್ನುನೋವು

Last Updated 8 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್‌’ನ ಹಾಡಿನ ಚಿತ್ರೀಕರಣವೇ ಅಪೂರ್ವ ಅನುಭವ. ಹನ್ನೊಂದು ನಟರನ್ನು ನಾನು ಸೇರಿಸಿದ್ದೆ. ವಿಷ್ಣುವರ್ಧನ್, ಅಂಬರೀಷ್, ಶ್ರೀನಾಥ್, ಶಿವರಾಜ್‌ಕುಮಾರ್, ಜಗ್ಗೇಶ್, ಉಪೇಂದ್ರ, ಪುನೀತ್, ದರ್ಶನ್, ಆದಿತ್ಯ ಹೀಗೆ. ಚಿನ್ನಿಪ್ರಕಾಶ್ ಆ ಹಾಡಿನ ನೃತ್ಯ ಸಂಯೋಜಕರು. ಕ್ಲೋಸಪ್ ಶಾಟ್‌ಗಳನ್ನು ಹೆಚ್ಚಾಗಿ ಬಳಸಕೂಡದು ಎಂದು ಅವರಿಗೆ ನಾನು ಮೊದಲೇ ಸೂಚಿಸಿದ್ದೆ.

ವಿಷ್ಣು, ಶಿವರಾಜ್‌ಕುಮಾರ್, ಪುನೀತ್, ದರ್ಶನ್ ಇವರು ಒಂದು ಫ್ರೇಮ್‌ಗೆ ಬಂದಾಗ ನನಗೇ ರೋಮಾಂಚನವಾಗುತ್ತಿತ್ತು. ಈ ನಟರೆಲ್ಲಾ ಒಗ್ಗೂಡಿ ಸಿನಿಮಾಗಳಲ್ಲಿ ಅಭಿನಯಿಸಲು ಮನಸ್ಸು ಮಾಡಿದರೆ ಕನ್ನಡ ಚಿತ್ರರಂಗಕ್ಕೆ ಒಂದಿಷ್ಟು ಒಳ್ಳೆಯ ಸಿನಿಮಾಗಳು ಸಿಗುವುದರಲ್ಲಿ ಅನುಮಾನವೇ ಇಲ್ಲ ಎನಿಸುತ್ತಿತ್ತು.

ನನ್ನ ಆ ಅನಿಸಿಕೆಯನ್ನು ಅಲ್ಲಿ ಇದ್ದ ಅವರೆಲ್ಲರಲ್ಲಿಯೂ ಹಂಚಿಕೊಂಡಿದ್ದೆ. ಹಿಂದಿಯಲ್ಲಿ ಅಮಿತಾಭ್‌ ಬಚ್ಚನ್‌, ದಿಲೀಪ್‌ ಕುಮಾರ್‌ ಅವರಂಥ ದಿಗ್ಗಜರು ಬಹು ನಾಯಕರ ಸಿನಿಮಾಗಳನ್ನು ಮಾಡಿ ಗೆದ್ದ ಉದಾಹರಣೆಗಳನ್ನೂ ನೀಡಿದ್ದೆ.  ‘ಒಳ್ಳೆಯ ಕಥೆ ಸಿಕ್ಕರೆ ಮಾಡೋಣ’ ಎಂದು ಅವರೆಲ್ಲಾ ಉತ್ಸಾಹದ ಮಾತುಗಳನ್ನು ಆಡಿದ್ದರು. ಆ ಹಾಡಿನ ಚಿತ್ರೀಕರಣಕ್ಕೆ ರವಿಚಂದ್ರನ್, ಸುದೀಪ್ ಹಾಗೂ ಗಣೇಶ್ ಅವರನ್ನು ಕೂಡ ಕರೆದಿದ್ದೆ. ಆದರೆ ಕಾರಣಾಂತರಗಳಿಂದ ಅವರು ಬರಲು ಆಗಲಿಲ್ಲ.

ನಾಲ್ಕೈದು ದಿನ ಹಾಡಿನ ಚಿತ್ರೀಕರಣ ನಡೆಸಿದ್ದೇ ಒಂದು ಸಂಭ್ರಮ. ಆಮೇಲೆ ವಿಷ್ಣುವಿನ ಮನೆಗೆ ಹೋಗಿ ಒಂದು ಧನ್ಯವಾದದ ಪತ್ರ ಕೊಟ್ಟೆ. ಅದನ್ನು ಓದಿದ ಅವನಿಗೆ ಹೃದಯ ತುಂಬಿ ಬಂದಿತು. ಶಿವರಾಜ್‌ಕುಮಾರ್, ಪುನೀತ್, ದರ್ಶನ್ ಮೂರೂ ಜನರ ಪ್ರತಿಭೆಯನ್ನು, ಅವರು ನೃತ್ಯ ಮಾಡುವ ರೀತಿಯನ್ನು, ಅವರಲ್ಲಿ ಇದ್ದ ಎನರ್ಜಿಯನ್ನು ವಿಷ್ಣು ಮುಕ್ತವಾಗಿ ಹೊಗಳಿದ.

 ಮತ್ತೆ ನಾವಿಬ್ಬರೂ ಒಂದಾಗುವಷ್ಟರಲ್ಲಿ ವಿಷ್ಣು ಆರೋಗ್ಯ ಮೊದಲಿನಷ್ಟು ಉತ್ತಮವಾಗಿರಲಿಲ್ಲ. ನನಗೆ ಮಧುಮೇಹದ ಸಮಸ್ಯೆ ಇತ್ತು. ಅವನಿಗೂ ಆ ಸಮಸ್ಯೆ ಇದೆ ಎಂದು ಗೊತ್ತಿತ್ತು. ಅದು ‘ಡಿಫಿಷಿಯೆನ್ಸಿ’ ಅಷ್ಟೆ, ಕಾಯಿಲೆ ಅಲ್ಲ ಎಂದು ಅವನಿಗೆ ನಾನು ಮನದಟ್ಟು ಮಾಡಿಕೊಟ್ಟೆ. ಚೆನ್ನೈನಲ್ಲಿ ಚೆನ್ನಾಗಿ ಔಷಧ ಕೊಡುವ ಒಳ್ಳೆಯ ಆಸ್ಪತ್ರೆ ಇದೆ. ಅಲ್ಲಿಗೆ ನಾನೇ ಕರೆದುಕೊಂಡು ಹೋಗುತ್ತೇನೆಂದು ಹೇಳಿದೆ. ಆದರೆ ಅವನು ಬರಲಿಲ್ಲ. ಆಯುರ್ವೇದ ಚಿಕಿತ್ಸೆಯಲ್ಲಿ ಅವನಿಗೆ ನಂಬಿಕೆ ಇತ್ತು. ನಾನು ಅಲೋಪಥಿ ನೆಚ್ಚಿಕೊಂಡವನು. ನಾನೇ ವಿಮಾನದ ಟಿಕೆಟ್ ಬುಕ್ ಮಾಡಿಸಿ, ಕರೆದುಕೊಂಡು ಹೋಗುತ್ತೇನೆಂದರೂ ಅವನು ಬರಲು ಒಪ್ಪಲಿಲ್ಲ. ಒಪ್ಪಿದ್ದಿದ್ದರೆ ಅವನ ಬದುಕಿನ ಚಿತ್ರಕಥೆ ಬೇರೆಯೇ ಆಗುತ್ತಿತ್ತೋ ಏನೋ?

ಅವನಿಗೆ ಕಾಲಿನಲ್ಲಿ ಒಂದು ಗಾಯ ಆಗಿ, ವಾಸಿಯಾಗಲು ತಡವಾಗುತ್ತಿತ್ತು. ಅದಕ್ಕೂ ಆಯುರ್ವೇದ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದ. ಒಮ್ಮೆ ನಿಧಿ ಸಂಗ್ರಹಣೆಗೆಂದು ಶೂ ಹಾಕಿಕೊಂಡು ಓಡಾಡಿ, ಅದು ಕಚ್ಚಿದ್ದರಿಂದ ಕಾಲಿನಲ್ಲಿ ಇನ್ನೊಂದು ಗಾಯ ಅವನನ್ನು ಬಾಧಿಸಿತ್ತು. ಅವನ ಆ ನೋವಿನ ಕ್ಷಣಗಳನ್ನೂ ನಾನು ಕಂಡೆ. 

ಸುನಿಲ್‌ಕುಮಾರ್ ದೇಸಾಯಿ ಅವರು ‘ಕ್ಷಣ ಕ್ಷಣ’ ಸಿನಿಮಾ ನಿರ್ದೇಶಿಸಿದರು. ಅದರಲ್ಲಿ ಆದಿತ್ಯ ಕೂಡ ಅಭಿನಯಿಸಿದ್ದ. ವಿಷ್ಣು ಕಾಂಬಿನೇಷನ್‌ನಲ್ಲಿ ಚಿತ್ರೀಕರಣ ಇದ್ದ ದಿನ ಅವನು ನನ್ನನ್ನೂ ಕರೆದ. ಚಿತ್ರೀಕರಣದ ಸ್ಥಳಕ್ಕೆ ನಾನು ಹೋದೆ. ವಿಷ್ಣು ನನ್ನ ಜೊತೆ ಊಟ ಮಾಡಿದ. ಬಹಳ ಹೊತ್ತು ಇಬ್ಬರೂ ಮಾತನಾಡಿದೆವು. ಆಗ ಕುರ್ಚಿಯಿಂದ ಮೇಲೇಳುವ ಸಂದರ್ಭದಲ್ಲಿ ಅವನು ಸಂಕಟ ಪಟ್ಟಿದ್ದನ್ನು ಕಂಡೆ. ದೇಸಾಯಿ ಅವರು ‘ಏನಾಯಿತು’ ಎಂದು ವಿಷ್ಣುವನ್ನು ವಿಚಾರಿಸಿದರು. ‘ನನ್ನ ಬೆನ್ನು ನೋವು ಬರೋಕೆ ಇವನೇ ಕಾರಣ’ ಎಂದು ವಿಷ್ಣು ನನ್ನತ್ತ ಬೆರಳು ತೋರಿದ. ನನಗೆ ತಕ್ಷಣಕ್ಕೆ ನಾನೇನು ಮಾಡಿದೆ ಎನಿಸಿತು. ಆಮೇಲೆ ‘ಮುತ್ತಿನ ಹಾರ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಒಂದು ಘಟನೆ ನೆನಪಾಯಿತು.

ಪ್ಯಾರಾಶ್ಯೂಟ್‌ನಿಂದ ಇಳಿಯುವ ಒಂದು ದೃಶ್ಯವನ್ನು ‘ಮುತ್ತಿನಹಾರ’ ಸಿನಿಮಾಗೆ ಚಿತ್ರೀಕರಿಸಿಕೊಂಡಿದ್ದೆವು. ಮರುಭೂಮಿಯ ಬಯಲಿನಲ್ಲಿ ಚಿತ್ರೀಕರಣ. ಜೀಪು ಜೋರಾಗಿ ಓಡಿಸಿದರೆ, ಪ್ಯಾರಾಶ್ಯೂಟ್ 700-800 ಅಡಿಗಳಷ್ಟು ಮೇಲಕ್ಕೆ ಹಾರುತ್ತದೆ. ಅದನ್ನೇ ಪ್ಯಾರಾಸೇಲಿಂಗ್‌ನಂತೆ ಚಿತ್ರೀಕರಿಸಿಕೊಳ್ಳಬಹುದು ಎಂದು ತೀರ್ಮಾನಿಸಿದೆವು. ಸೇನೆಯವರು ಅದಕ್ಕೆ ತಕ್ಕಂತೆ ಜೀಪ್ ಓಡಿಸುವುದರಲ್ಲಿ, ಅದನ್ನು ನಿಧಾನವಾಗಿ ನಿಲ್ಲಿಸಿ, ಪ್ಯಾರಾಶ್ಯೂಟ್ ಇಳಿಸುವುದರಲ್ಲಿ ತರಬೇತಿ ಪಡೆದಿರುತ್ತಾರೆ. ಚಿತ್ರೀಕರಣವನ್ನು ಪ್ರಾರಂಭಿಸಿದೆವು. ಜೀಪು ಮುಂದೆ ಸಾಗಿ, ಎತ್ತರಕ್ಕೆ ಪ್ಯಾರಾಶ್ಯೂಟ್ ಹಾರಿ ಆಮೇಲೆ ಸುಸೂತ್ರವಾಗಿ ಇಳಿಯಿತು. ಸೇನೆಯವರೂ ಸೇರಿದಂತೆ ಅಲ್ಲಿದ್ದ ಎಲ್ಲರೂ ದೃಶ್ಯ ಚೆನ್ನಾಗಿ ಬಂದಿತು ಎಂದು ಚಪ್ಪಾಳೆ ತಟ್ಟಿದರು. ಅದರಲ್ಲಿ ಇದ್ದ ವಿಷ್ಣು ಸೇಫ್‌ ಆಗಿ ಇಳಿದಿದ್ದ. ಆದರೆ, ನಮ್ಮ ಕ್ಯಾಮೆರಾಮನ್ ರಾಜಾರಾಂ ಮಾತ್ರ ‘ಒನ್ ಮೋರ್’ ಎಂದರು.

‘ಒನ್ ಮೋರ್’ ಎಂಬ ಶಬ್ದ ನಿರ್ದೇಶಕರಿಗೆ ಎಂದೂ ಹಿಡಿಸದು. ಸಂಭಾಷಣೆಯ ಶಾಟ್ ಇದ್ದರೇನೋ ಇನ್ನೊಮ್ಮೆ ಸಲೀಸಾಗಿ ಚಿತ್ರೀಕರಿಸಿಬಿಡಬಹುದು. ಅದೇ ಸಾಹಸ ದೃಶ್ಯಗಳ ಮರು ಚಿತ್ರೀಕರಣ ದೊಡ್ಡ ಸವಾಲು. ಎಷ್ಟೋ ಸಲ ಹೀಗೆ ‘ಒನ್ ಮೋರ್’ ಎಂದು ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲು ಹೋದಾಗ ಕೆಲವರ ಪ್ರಾಣ ಹೋದ ಉದಾಹರಣೆಗಳು ಚಿತ್ರರಂಗದಲ್ಲಿ ಇವೆ. ವಾಸನ್ ಅವರ ಸಿನಿಮಾದಲ್ಲಿ ‘ಟೇಕ್ 2’ ಎಂದಾಗ, ನಾಯಕನ ಪ್ರಾಣವೇ ಹೋಗಿತ್ತು. ಹಿಂದಿ ಚಿತ್ರರಂಗದಲ್ಲಿ ಧರ್ಮೇಂದ್ರ ಅವರ ಡ್ಯೂಪ್ ಒಮ್ಮೆ ದೊಡ್ಡ ಅಪಘಾತಕ್ಕೆ ಈಡಾಗಿದ್ದರು.

ಇಂಥ ಉದಾಹರಣೆಗಳೆಲ್ಲಾ ಕಣ್ಮುಂದೆ ಬರುತ್ತಾ ಇದ್ದುದರಿಂದ ‘ಟೇಕ್ 2’ಗೆ ನಾನೂ ಹಿಂದೇಟು ಹಾಕುತ್ತಿದ್ದೆ. ರಾಜಾರಾಂ ಅವರಿಗೆ ತಾಂತ್ರಿಕ ಸಮಸ್ಯೆ ಆಗಿತ್ತು. ಅಷ್ಟು ಎತ್ತರದಲ್ಲಿ ಕ್ಲೋಸಪ್ ತೆಗೆಯುವಾಗ ಅವರ ನಿರೀಕ್ಷೆಗೆ ತಕ್ಕಂತೆ ಶಾಟ್‌ ಫೋಕಸ್ ಆಗಿರಲಿಲ್ಲ. ಅದನ್ನು ಅವರು ನನಗೆ ಮನವರಿಕೆ ಮಾಡಿಕೊಟ್ಟರು. ಇನ್ನೊಂದು ಟೇಕ್‌ಗೆ ವಿಷ್ಣುವನ್ನು ಒಪ್ಪಿಸುವುದು ಹೇಗೆ ಎಂಬ ಅಳುಕು ನನಗೆ. ಅಷ್ಟು ಎತ್ತರಕ್ಕೆ ಅವನನ್ನು ಮತ್ತೆ ಕಳುಹಿಸಿ, ಸಾಹಸ ಮಾಡುವಂತೆ ಹೇಳುವುದು ಸುಲಭದ ವಿಷಯ ಆಗಿರಲಿಲ್ಲ. ನಟ-ನಟಿಯರಿಂದ ತಮಗೆ ಬೇಕಾದದ್ದನ್ನು ಹೊರತೆಗೆಸುವುದು ಕೂಡ ಒಂದು ಕೌಶಲ. ಮೆರಿಲ್ ಸ್ಟ್ರಿಪ್ ಎಂಬ ನಟಿ, ನಿರ್ದೇಶಕ ಸ್ಟೀವನ್ ಸ್ಪೆಲ್‌ಬರ್ಗ್‌ ಅವರನ್ನು ಮೆಚ್ಚಿಕೊಂಡಿದ್ದುದು ಆ ಕೌಶಲದ ಕಾರಣಕ್ಕೇ. ಮೆರಿಲ್ ಅಭಿನಯ ಸರಿಯಾಗಿಲ್ಲ ಎನಿಸಿದಾಗ ಸ್ಪೆಲ್‌ಬರ್ಗ್ ಮೈಕ್‌ನಲ್ಲಿ ಅದನ್ನು ಎಲ್ಲರಿಗೂ ಕೇಳುವಂತೆ ಹೇಳುತ್ತಿರಲಿಲ್ಲವಂತೆ. ಮೆರಿಲ್ ಹತ್ತಿರಕ್ಕೆ ಹೋಗಿ, ಅವಳ ಕಿವಿಯಲ್ಲಿ ಹೇಗೆ ನಟಿಸಬೇಕು ಎಂದು ಉಸುರುತ್ತಿದ್ದರಂತೆ. ಅವರು ಕೆಲಸ ತೆಗೆಸುತ್ತಿದ್ದ ಆ ರೀತಿ ಸಹಜವಾಗಿಯೇ ಮೆರಿಲ್‌ಗೆ ಸಂತೋಷ ತಂದಿತ್ತು. ವಿಷ್ಣು ತರಹದ ನಟರ ವಿಷಯದಲ್ಲಿ ನಾನೂ ಹಾಗೆಯೇ ವರ್ತಿಸಬೇಕಿತ್ತು.

ವಿಷ್ಣುವನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, ಕೂರಿಸಿಕೊಂಡೆ. ಆ ದೃಶ್ಯ ಚೆನ್ನಾಗಿ ಬಂದಿದ್ದನ್ನು ಮೊದಲು ಹೇಳಿದೆ. ಆಗಿದ್ದ ತಾಂತ್ರಿಕ ಸಮಸ್ಯೆಯನ್ನು ವಿವರಿಸಿ, ಇನ್ನೊಂದು ಟೇಕ್ ತೆಗೆದುಕೊಳ್ಳುವ ಅನಿವಾರ್ಯವನ್ನು ಮನದಟ್ಟು ಮಾಡಿಸಿದೆ. ಅವತ್ತು ವಿಷ್ಣು ಮೂಡ್ ಚೆನ್ನಾಗಿತ್ತು. ನನ್ನ ಪ್ರೀತಿಯ ಒತ್ತಾಯಕ್ಕೆ ಸುಲಭವಾಗಿ ಮಣಿದ. ಮತ್ತೆ ಲೈಫ್ ಸೇವಿಂಗ್ ಜಾಕೆಟ್ ಇತ್ಯಾದಿ ಸಾಧನಗಳನ್ನು ಹಾಕಿಕೊಂಡು, ಚಿತ್ರೀಕರಣಕ್ಕೆ ಸಿದ್ಧನಾದ. ಜೀಪ್ ವೇಗವಾಗಿ ಸಾಗಿತು. ಅಂದುಕೊಂಡಂತೆಯೇ ಪ್ಯಾರಾಸೇಲಿಂಗ್ ನಡೆಯಿತು. ಆದರೆ, ಕೆಳಗೆ ಇಳಿಸುವಾಗ ಜೀಪ್‌ಗೆ ಕಟ್ಟಿದ್ದ ಒಂದು ದಾರ ತುಂಡಾಯಿತು. ಐವತ್ತು ಅರವತ್ತು ಅಡಿಗಳಷ್ಟು ಮೇಲೆ ಇದ್ದಾಗ, ವಿಷ್ಣು ಕುಳಿತಿದ್ದ ಪ್ಯಾರಾಶ್ಯೂಟ್ ಅತ್ತಿತ್ತ ವಾಲಿತು. ಆಯತಪ್ಪಿ ವಿಷ್ಣು ಕೆಳಗೆ ಬಿದ್ದ. ಕ್ಯಾಮೆರಾ ಇದ್ದ ಜಾಗದಲ್ಲಿ ನಿಂತಿದ್ದ ನನಗೆ ನಡುಕ ಶುರುವಾಯಿತು.

ವಿಷ್ಣುವಿಗೆ ಏನಾಯಿತೋ ಎಂದು ಜೀವವೇ ಬಾಯಿಗೆ ಬಂದಹಾಗೆ ಆಯಿತು. ಓಡಿಹೋಗಿ ನೋಡಿದರೆ ವಿಷ್ಣು ಮಲಗಿದ್ದ. ನೀರಿನ ಬಾಟಲ್ ತೆಗೆದುಕೊಂಡು ನಾನು, ರಾಜಾರಾಂ ಅಲ್ಲಿಗೆ ಹೋಗಿದ್ದೆವು. ಆಮೇಲೆ ಅವನು ಕಣ್ಣುಬಿಟ್ಟು, ‘ಸ್ವಲ್ಪ ಆಯತಪ್ಪಿತಷ್ಟೆ’ ಎಂದ. ನಮಗೆ ಆಗ ಸಮಾಧಾನವಾಯಿತು. ಆ ದಿನ ಆಗಿದ್ದ ನೋವು ವಿಷ್ಣುವನ್ನು ಹಲವು ದಿನಗಳ ಕಾಲ ಕಾಡಿತು. ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಅವನು ಕೆಲಸ ಮಾಡಿದ್ದ. ಆ ನೋವೇ ಅವನ ಬೆನ್ನಿನಲ್ಲಿ ಉಳಿದುಬಿಟ್ಟಿತ್ತು. ಅದನ್ನು ‘ಕ್ಷಣ ಕ್ಷಣ’ ಸಿನಿಮಾ ಚಿತ್ರೀಕರಣಕ್ಕೆ ಹೋದಾಗ ವಿಷ್ಣು ನನಗೆ ನೆನಪಿಸಿದ.

ವಿಷ್ಣು ಕೆಲವೊಮ್ಮೆ ನಾನು ಹೇಳಿದ್ದನ್ನು ಹಟ ತೊಟ್ಟು ಮಾಡಿಬಿಡುತ್ತಿದ್ದ. ‘ಮುತ್ತಿನಹಾರ’ ಸಿನಿಮಾದಲ್ಲಿಯೇ ಇನ್ನೊಂದು ಶಾಟ್‌ನಲ್ಲಿ ನಾಯಕನ ಮುಖ, ಕಣ್ಣು ಕೆಂಪಗಾಗಬೇಕಿತ್ತು. ಮೆಣಸಿನಕಾಯಿಗಳನ್ನು ತಿಂದರೆ ಹಾಗಾಗುತ್ತದೆ. ಆಗ ಗ್ಲಿಸರಿನ್ ಇಲ್ಲದೆಯೇ ಉತ್ತಮ ಅಭಿನಯ ಬರುತ್ತದೆ ಎಂದು ನಾನು ಹೇಳಿದೆ. ಅವನು ಒಮ್ಮೆಲೇ ಒಂಬತ್ತು ಮೆಣಸಿನಕಾಯಿಗಳನ್ನು ತಿಂದುಬಿಟ್ಟ. ಮುಖ, ಕಣ್ಣು ಎಲ್ಲಾ ಕೆಂಪಾಗಿ ಶಾಟ್ ತುಂಬಾ ಚೆನ್ನಾಗಿ ಬಂತು. ಆಮೇಲೆ ನನಗೆ, ಸುಹಾಸಿನಿಗೆ ಬಲವಂತ ಮಾಡಿ ನಾಲ್ಕು ನಾಲ್ಕು ಮೆಣಸಿನಕಾಯಿಗಳನ್ನು ತಿನ್ನಿಸಿದ.

ಅದೇ ಸಿನಿಮಾಗೆ, ಅವನ ಪಾತ್ರ ಮೃತಪಟ್ಟ ನಂತರದ ದೃಶ್ಯಾವಳಿಯ ಚಿತ್ರೀಕರಣ ನಡೆಸಿದೆವು. ಆಗ ರಾಷ್ಟ್ರಧ್ವಜವನ್ನು ಹೊದ್ದಿಸಿ, ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸುವುದನ್ನು ಚಿತ್ರೀಕರಿಸಿದೆವು. ‘ನಿಜ ಜೀವನದಲ್ಲಿ ಈ ಅವಕಾಶ ಸಿಗುವುದಿಲ್ಲ. ನೀನು ಅದನ್ನು ಸಿನಿಮಾದಲ್ಲಿ ಮಾಡಿದೆ’ ಎಂದು ವಿಷ್ಣು ಭಾವುಕನಾಗಿ ಹೇಳಿದ್ದ. ಈಗಲೂ ಆ ದೃಶ್ಯವನ್ನು ನೋಡಿದರೆ ನನಗೆ ವಿಷ್ಣು ಆಡಿದ ಆ ಮಾತು ನೆನಪಾಗಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ.

ಆಮೇಲೆ ನಾನು ವಿಷ್ಣುವಿಗಾಗಿ ಕಥೆಗಳನ್ನು ಹೆಣೆಯುವುದನ್ನು ಮುಂದುವರಿಸಿದೆ. ನನ್ನ ತಂಗಿ ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸಿದ ‘ಈ ಬಂಧನ’ ಸಿನಿಮಾದಲ್ಲಿ ಅವನು ಅಭಿನಯಿಸುತ್ತಿದ್ದ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿಗೆ ಹೋದೆ. ‘ನೀನೂ ಈ ಸಿನಿಮಾದಲ್ಲಿ ನಿನ್ನ ತಂಗಿಗೆ ಸಲಹೆಗಳನ್ನು ಕೊಡಬಹುದಲ್ಲವೇ?’ ಎಂದು ಅವನು ನನಗೆ ಹೇಳಿದ. ನಾನು ಅಲ್ಲಿ ನಿಂತರೆ ನನ್ನ ತಂಗಿಗೆ ಕಿರಿಕಿರಿ ಆಗುತ್ತದೆ. ಇಬ್ಬರು ನಿರ್ದೇಶಕರು ಎಂದಿಗೂ ಒಮ್ಮತಕ್ಕೆ ಬರುವುದಿಲ್ಲ. ಇಬ್ಬರು ವೈದ್ಯರು, ವಕೀಲರು ಕೂಡ ಹಾಗೆಯೇ ಎಂದೆ. ತನ್ನ ಶಾಟ್ ಹೇಗೆ ಬರುತ್ತದೆ ಎಂದು ಗಮನಿಸಿ ಹೇಳುವಂತೆ ಅವನು ನನ್ನನ್ನು ಕೇಳಿಕೊಂಡ. ನಾನು ಆ ಸಿನಿಮಾ ವಿಷಯದಲ್ಲಿ ಮೂಗು ತೂರಿಸುವುದಿಲ್ಲ ಎಂದು ತಿಳಿಸಿ, ಅವನಿಗೆ ಕತೆ ಹೇಳಲು ಬಂದಿರುವುದಾಗಿ ಹೇಳಿದೆ. ಮೈಸೂರಿನ ಅವನ ಮನೆಗೆ ಆ ಬಗ್ಗೆ ಚರ್ಚೆ ಮಾಡಲು ಬರುವಂತೆ ಅವನು ಕರೆದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT