ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣು ನೆನಪಿನಲ್ಲಿ ಸಹೋದರರ ಸವಾಲ್

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಮೂರೂವರೆ ದಶಕಗಳ ಹಿಂದೆ ತೆರೆ ಕಂಡು, ಸೂಪರ್‌ ಹಿಟ್‌ ಎನಿಸಿದ್ದ ‘ಸಹೋದರರ ಸವಾಲ್’ ಚಿತ್ರ ಹೊಸರೂಪದಲ್ಲಿ ಮತ್ತೆ ಬಿಡುಗಡೆಯಾಗಲಿದೆ. ಈಗಿನ ಸೂಪರ್‌ ಸ್ವಾರ್‌ ರಜನಿಕಾಂತ್ ಹಾಗೂ ದಿವಂಗತ ವಿಷ್ಣುವರ್ಧನ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಡಿಟಿಎಸ್‌ ಅಳವಡಿಸಲಾಗಿದ್ದು, ಸಿನಿಮಾಸ್ಕೋಪ್‌ನಲ್ಲಿ ತೆರೆ ಕಾಣಲಿದೆ.

‘ನಮ್ಮ ಹಾಗೂ ವಿಷ್ಣು ಬಾಂಧವ್ಯಕ್ಕೆ ನಾಂದಿ ಹಾಡಿದ ಈ ಚಿತ್ರದ ಪುನರ್‌ ಬಿಡುಗಡೆ ಸಮಯದಲ್ಲಿ ವಿಷ್ಣು ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ’ ಎಂದ ನಿರ್ಮಾಪಕ ಎ.ಆರ್‌. ರಾಜು ತುಸು ಹೊತ್ತು ಮೌನವಾದರು. ಬಳಿಕ ಮಾತು ಮುಂದುವರಿಯಿತು.  ಅಂದಿನ ಹೀರೋಗಳ ಮನಸ್ಥಿತಿಗೂ ಇಂದಿನವರಿಗೂ ಕಾಣುವ ವ್ಯತ್ಯಾಸವನ್ನು ಅವರು ಸ್ಪಷ್ಟವಾಗಿ ಗುರುತಿಸಿದರು.

‘1977ರಲ್ಲಿ ತಾವು ಈ ಚಿತ್ರ ನಿರ್ಮಾಣಕ್ಕೆ ನಿರ್ಧರಿಸಿದ ತಕ್ಷಣವೇ ಎದುರಾದ ಪ್ರಶ್ನೆ, ಹೀರೋ ಯಾರಾಗಬೇಕು ಎಂಬುದು. ಆಗಷ್ಟೇ ನಾಗರಹಾವು ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು. ಅದರಲ್ಲಿನ ವಿಷ್ಣುವರ್ಧನ್‌ ನಮ್ಮ ಸಿನಿಮಾಕ್ಕೆ ನಾಯಕ ಎಂದು ನಾನೂ ಹಾಗೂ ನಿರ್ದೇಶಕ ಕೆ.ಎಸ್.ಆರ್. ದಾಸ್ ಒಮ್ಮತದಿಂದ ತೀರ್ಮಾನಿಸಿದೆವು. ಎರಡನೇ ಹೀರೋ ಆಗಿ ರಜನಿಕಾಂತ ಆಯ್ಕೆಯಾದರು. ಅವರಿಬ್ಬರಲ್ಲಿನ ಬದ್ಧತೆ, ಶಿಸ್ತು, ಸಮಯಪ್ರಜ್ಞೆ, ನಿರ್ಮಾಪಕರೆಡೆಗೆ ಇದ್ದ ಕಾಳಜಿ ಒಂದೇ ಎರಡೇ..? ಅವೆಲ್ಲ ಈಗ ಸವಿ ನೆನಪುಗಳು’ ಎಂದು ನೆನಪಿಸಿಕೊಂಡರು ರಾಜು.

ಒಟ್ಟು 14 ಲಕ್ಷ ರೂಪಾಯಿ ಬಜೆಟ್‌ನ ಈ ಚಿತ್ರಕ್ಕೆ 22 ದಿನ ಶೂಟಿಂಗ್‌ ನಡೆಸಲಾಗಿತ್ತಂತೆ. ಕೋಲಾರ ಜಿಲ್ಲೆಯ ನರಸಾಪುರದಲ್ಲಿ ನಡೆಸಿದ ಕ್ಲೈಮ್ಯಾಕ್ಸ್‌ ಘಟನೆ ಚಿತ್ರೀಕರಣಕ್ಕೆ 40 ಕುದುರೆಗಳನ್ನು ಬಳಸಲಾಗಿತ್ತು. ಶೂಟಿಂಗ್‌ ನಡೆಯುತ್ತಿದ್ದಾಗ ವಿಷ್ಣು ಹಾಗೂ ರಜನಿ ಬೆಳ್ಳಂಬೆಳಿಗ್ಗೆ ಎದ್ದು ಕುದುರೆ ಸವಾರಿ ಅಭ್ಯಾಸ ಮಾಡುತ್ತಿದ್ದರಂತೆ. ಚಿತ್ರ ಸಿದ್ಧಗೊಂಡು, ಮೊದಲ ಪ್ರತಿ ಪ್ರದರ್ಶನದ ಬಳಿಕ ವಿಷ್ಣುವರ್ಧನ್ ಅವರು ರಜನಿಕಾಂತ ಬಳಿ ಬಂದು, ‘ನನಗಿಂತ ನಿನ್ನ ಆ್ಯಕ್ಟಿಂಗ್‌ ಸೂಪರ್‌ ಆಗಿದೆ. ಮುಂದೆ ನೀನು ಸೂಪರ್‌ ಸ್ಟಾರ್‌ ಆಗ್ತೀಯ...’ ಅಂದಿದ್ದನ್ನು ರಾಜು ಸ್ಮರಿಸಿಕೊಂಡರು.

ವಿಷ್ಣು ಅವರನ್ನು ನಾಯಕನನ್ನಾಗಿಸಿ ಒಟ್ಟು ಒಂಬತ್ತು ಚಿತ್ರಗಳನ್ನು ರಾಜು ನಿರ್ಮಿಸಿದ್ದಾರೆ. ಅವುಗಳಲ್ಲಿ ಬಹುತೇಕ ಎಲ್ಲವೂ ಜನಮನ ಗೆದ್ದಿವೆ. ಪ್ರಸ್ತುತ ವಿಷ್ಣು ಜನ್ಮದಿನಕ್ಕೆಂದು ‘ಸಹೋದರರ ಸವಾಲ್‌’ ಸಿನಿಮಾವನ್ನು ಪುನರ್‌ ಬಿಡುಗಡೆ ಮಾಡುತ್ತಿದ್ದಾರೆ. ರಾಜ್ಯದ 50 ಚಿತ್ರಮಂದಿರಗಳಲ್ಲಿ ಸೆ. 19ರಂದು ‘...ಸವಾಲ್‌’ ತೆರೆ ಕಾಣಲಿದೆ. ‘ಅವತ್ತು ಅದು ಜನರನ್ನು ಹೇಗೆ ಸೆಳೆಯಿತೋ, ಈಗಲೂ ಹಾಗೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಿದ್ದಾರೆ’ ಎಂಬ ನಿರೀಕ್ಷೆ ಅವರದು. ಭಾರತಿ ವಿಷ್ಣುವರ್ಧನ್, ಸಹ ನಿರ್ಮಾಪಕ ರಾಧಾಕೃಷ್ಣ ರಾಜು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT