ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಕ್ಷಕ ವಿವರಣೆಯಲ್ಲಿ ಅಭಿಮಾನದ ತೇಗು

Last Updated 27 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌ ವೀಕ್ಷಕ ವಿವರಣೆ ಈ ಕಾಲದ ‘ಈಡಿಯಂ’ಗಳಲ್ಲಿ ಮುಖ್ಯವಾದುದು. ವಿವರಣೆಕಾರ ಅಭಿಮಾನಿಯಾಗಬಹುದೇ, ಬೇಡವೇ? ಆಗಿರುವುದೇ ಆದರೆ ಅದು ಯಾಕೆ ಎನ್ನುವ ಸತ್ಯವನ್ನು ಬಗೆದು ನೋಡುವ ಯತ್ನವಿದು...

ಊರಿನಲ್ಲಿ ಕ್ರಿಕೆಟ್ ಟೂರ್ನಿ ಎಂದರೆ ಒಂದು ಸಣ್ಣ ಪೆಂಡಾಲ್, ತಿಂಡಿ ಪಾನೀಯದ ವ್ಯವಸ್ಥೆ, ಆಡಲು ಕಿಟ್‌ಗಳಿದ್ದರೆ ಸಾಕು ಎಂಬ ಮಿತವ್ಯಯವನ್ನು ಮೀರಿದ್ದು ದಶಕಗಳ ಹಿಂದೆ. ಪೆಂಡಾಲಿಗೆ ಬೆಂಚು, ಕುರ್ಚಿ ಬಂದವು. ಧ್ವನಿವರ್ಧಕ ಬಂದಿತು. ಮೈಕು ಹಿಡಿಯಲು ಕೂಡ ಪೈಪೋಟಿ.

ವೈಡ್ ಬಾಲ್‌ಗೆ ಕನ್ನಡದಲ್ಲಿ ‘ಅಗಲವಾದ ಚೆಂಡು’ ಎಂದು ಬಾಲಿಶವಾಗಿ ಅನುವಾದ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡವರೂ ಇದ್ದಾರೆ. ಹಾಗಿದ್ದರೆ ನೋ ಬಾಲ್‌ಗೆ ಹೇಗೆ ಅನುವಾದ ಮಾಡುವುದು ಎಂದಾಗ, ಅದೇ ವ್ಯಕ್ತಿ ತಬ್ಬಿಬ್ಬಾದದ್ದೂ ಇದೆ.

ಕ್ರಿಕೆಟ್ ವೀಕ್ಷಕ ವಿವರಣೆಗೆ ನಿಜವಾದ ಅರ್ಥ ಇದ್ದುದು ರೇಡಿಯೊದಲ್ಲಿ ದೇಸಿ ಪಂದ್ಯಗಳ ಸ್ಕೋರ್ ತಿಳಿಯುವ ಕುತೂಹಲಿಗಳ ಕಾಲದಲ್ಲಿ. ಹಂ.ಪ. ನಾಗರಾಜಯ್ಯ ಒಂದೊಮ್ಮೆ ಆ ಕಾಲದ ರೋಚಕ ಕ್ಷಣಗಳನ್ನು ಮೆಲುಕು ಹಾಕಿದ್ದರು. ಪಂದ್ಯವನ್ನು ನೋಡದೇ ಇದ್ದರೂ ವೀಕ್ಷಕ ವಿವರಣೆಯಿಂದಲೇ ಆಟದ ವೈಖರಿಯನ್ನು ಕಲ್ಪಿಸಿಕೊಳ್ಳುತ್ತಿದ್ದ ಸುಖವನ್ನು ನೆನೆದಿದ್ದರು.

ಈಗ ಕ್ರಿಕೆಟ್ ಬದಲಾಗಿದೆ. ವೀಕ್ಷಕ ವಿವರಣೆಕಾರರ ಪಟ್ಟಿಯಂತೂ ಉದ್ದುದ್ದ ಆಗುತ್ತಲೇ ಇದೆ. ನೋಡುವ ಆಟದ ನಡುವೆ ಕೇಳುವ ಅವಕಾಶ. ಇಷ್ಟಕ್ಕೂ ವೀಕ್ಷಕ ವಿವರಣೆಗೆ ಇದಮಿತ್ಥಂ  ಎಂಬ ನಿಯಮವೇನೂ ಇಲ್ಲವಲ್ಲ. ಆದರೆ, ವೀಕ್ಷಕ ವಿವರಣೆ ನೀಡುವವರ ಜ್ಞಾನ, ಧೋರಣೆ, ಸಂವಹನ ಸಾಮರ್ಥ್ಯ, ಭಾಷಾ ಕೌಶಲ, ಚಾಕಚಕ್ಯತೆ ಎಲ್ಲವೂ ಅಡಿಗಡಿಗೂ ಅನಾವರಣವಾಗುತ್ತಲೇ ಇರುತ್ತವೆ.

ವೀಕ್ಷಕ ವಿವರಣೆಕಾರರೂ ಮನುಷ್ಯರಲ್ಲವೇ? ಅವರೊಳಗೂ ಒಬ್ಬ ಅಭಿಮಾನಿ ಇದ್ದೇಇರುತ್ತಾನೆ. ಊರಿನಲ್ಲಿ ಹನುಮಂತನೆಂಬ ದನ ಕಾಯುವ ಹುಡುಗನ ಪಿಂಚ್ ಹಿಟ್ಟಿಂಗ್‌ಗೆ ವೀಕ್ಷಕ ವಿವರಣೆಕಾರರು ಕೆಟ್ಟ ಕನ್ನಡದಲ್ಲಿಯೇ ಭಾವುಕರಾಗುತ್ತಿದ್ದುದನ್ನು ನೆನಪಿಸಿಕೊಂಡರೆ ನಗು ಬರುತ್ತದೆ. ಹೇಳಿಕೇಳಿ ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ಆಟ.

ಕಡಿಮೆ ಓವರ್‌ಗಳ ಗಲ್ಲಿ ಕ್ರಿಕೆಟ್‌ನಲ್ಲಿ ಈ ಸಾಲಿಗೆ ಅಡಿಗೆರೆ ಎಳೆಯಬೇಕು. ‘ಬೌಲರ್‌ಗಳಿಗೆ ತುಸುವೂ ಮರ್ಯಾದೆ ಕೊಡುವುದಿಲ್ಲವಲ್ಲ ಈ ಬ್ಯಾಟ್ಸ್‌ಮನ್‌ಗಳು’ ಎಂದು ಸ್ಥಳೀಯ ವೀಕ್ಷಕ ವಿವರಣೆಕಾರರು ಒಂದೊಮ್ಮೆ ಕಮೆಂಟಿಸಿದ್ದನ್ನು ಅನೇಕರು ಟೀಕಿಸಿದ್ದರು. ‘ಮರ್ಯಾದೆಯ ಪ್ರಶ್ನೆಯೇ ಇಲ್ಲ. ಕ್ರಿಕೆಟ್ ನಿಂತಿರುವುದೇ ಬೌಂಡರಿ, ಸಿಕ್ಸರ್‌ಗಳಿಂದ’ ಎಂಬ ವಾದವನ್ನು ಟೀಕಾಕಾರರು ಮುಂದಿಟ್ಟಿದ್ದರು.

ಹೋದ ತಿಂಗಳು ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದಾಗ, ಪಾಕಿಸ್ತಾನದ ರಮೀಜ್ ರಾಜಾ ಕೊಟ್ಟ ವೀಕ್ಷಕ ವಿವರಣೆಯಿಂದಾಗಿ ಇವೆಲ್ಲವೂ ನೆನಪಿಗೆ ಬಂದವು. ಪಂಜಾಬ್‌ನ ಮೊಹಾಲಿಯಲ್ಲಿ ಕಳೆದ ಮಾರ್ಚ್ 22ರಂದು ನಡೆದ ಸೂಪರ್ 10 ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನದ ಶರ್ಜೀಲ್ ಖಾನ್ ಆರಂಭಿಕ ಬ್ಯಾಟಿಂಗ್ ಕಂಡು ರಮೀಜ್ ಹೆಚ್ಚೇ ಭಾವುಕರಾದರು.

ಆರನೇ ಓವರ್‌ನಲ್ಲಿ ನ್ಯೂಜಿಲೆಂಡ್‌ನ ಮಿಲ್ನ್ ಬೌಲಿಂಗ್‌ನಲ್ಲಿ ಶರ್ಜೀಲ್ ಔಟಾಗುವ ಮುನ್ನ ರಮೀಜ್ ವೀಕ್ಷಕ ವಿವರಣೆ ಹೇಗಿತ್ತೆಂದರೆ, ‘ಪಾಕಿಸ್ತಾನ ಇನ್ನು ಈ ಪಂದ್ಯವನ್ನು ಸೋಲುವುದು ಅನುಮಾನ’ ಎಂಬರ್ಥದ ಸಾಲನ್ನು ಉದುರಿಸುವಷ್ಟು.

ಸ್ನಾಂಟ್‌ನರ್, ಕೋರೆ ಆಂಡರ್‌ಸನ್ ತರಹದ ಬೌಲರ್‌ಗಳಿಗೆ ನೀರಿಳಿಸಿದ್ದ ಶರ್ಜೀಲ್ ಒಂಬತ್ತು ಬೌಂಡರಿ, ಆರು ಸಿಕ್ಸರ್‌ಗಳನ್ನು ಹೊಡೆದದ್ದೇ ಪಾಕಿಸ್ತಾನದ ಸ್ಕೋರ್ ಬೋರ್ಡ್ ಐದೂವರೆ ಓವರ್‌ನಲ್ಲೇ 65 ಆಯಿತು. ಎದುರಲ್ಲಿ 181 ರನ್‌ಗಳ ಗುರಿ ಇದ್ದುದನ್ನೇ ಕೆಲವು ಕ್ಷಣಗಳ ಕಾಲ ರಮೀಜ್ ಮರೆತುಬಿಟ್ಟರು. ಶರ್ಜೀಲ್ ಬ್ಯಾಟಿಂಗ್ ಲಾಲಿತ್ಯದ ಅಭಿಮಾನಿಯಂತೆ ಮಾತನಾಡತೊಡಗಿದರು.

ಶರ್ಜೀಲ್ ಸಹಜ ಪ್ರತಿಭೆಯ ಕುರಿತು ಗುಣವಿಶೇಷಣಗಳಿದ್ದ ಅವರ ಮಾತುಗಳು ಮೈನವಿರೇಳಿಸುವಂತಿದ್ದವು. ಹೀಗೆ ಹೇಳುತ್ತಾ ಹೇಳುತ್ತಾ ರಮೀಜ್ ತಮ್ಮ ತಂಡದ ಅಭಿಮಾನಿಯೇ ಆಗಿ ಕ್ರಿಕೆಟ್ ವೀಕ್ಷಕ ವಿವರಣೆ ನೀಡಿದ್ದರು. ಶರ್ಜೀಲ್ ಔಟಾದ ಮೇಲೆ ಪರಿಸ್ಥಿತಿ ದಿಢೀರನೆ ಬದಲಾಗಿ, ಆ ಪಂದ್ಯವನ್ನು ಪಾಕಿಸ್ತಾನ 22 ರನ್‌ಗಳಿಂದ ಸೋತಿತು. ಕೆಲವು ಓವರ್‌ಗಳ ಮಟ್ಟಿಗೆ ವೀರಾಭಿಮಾನಿಯಂತೆ ಮಾತನಾಡಿದ್ದ ರಮೀಜ್, ಶರ್ಜೀಲ್ ಔಟಾದ ಮೇಲೆ ಒಂದಿಷ್ಟು ನಿಮಿಷ ಸುಮ್ಮನಾದದ್ದೂ ಸಹಜವೇ.

ಕ್ರಿಕೆಟ್ ಆಡದೆಯೂ ಅದರ ಸೂಕ್ಷ್ಮಗಳನ್ನು ಅರಿತು ಆಟದ ಕುರಿತ ಬರವಣಿಗೆ ಹಾಗೂ ವೀಕ್ಷಕ ವಿವರಣೆಯಿಂದ ಹೆಸರಾದವರು ಹರ್ಷ ಭೋಗ್ಲೆ. ಅವರು ಸರಿಯಾಗಿ ಒಂದು ದಶಕದ ಹಿಂದೆ ಬೆಂಗಳೂರಿನಲ್ಲಿ ಕ್ವಿಜ್ ಕಾರ್ಯಕ್ರಮವೊಂದನ್ನು ನಡೆಸಿಕೊಡಲು ಬಂದಿದ್ದರು. ಆಗ ನವಜೋತ್ ಸಿಂಗ್ ಸಿಧು ಈಡಿಯಂಗಳು, ಅತಿ ಭಾವುಕ ಶೈಲಿಯ ವೀಕ್ಷಕ ವಿವರಣೆ ಜನಪ್ರಿಯವಾಗಿದ್ದವು.

ಆಗ ಹರ್ಷ ಹೇಳಿದ್ದು: ‘ಕ್ರಿಕೆಟ್ ವೀಕ್ಷಕ ವಿವರಣೆಯ ಮುಖ್ಯ ಲಕ್ಷಣ ಕೇಳುಗರನ್ನಷ್ಟೇ ಅಲ್ಲ, ನೋಡುಗರನ್ನೂ ಹಿಡಿದಿಡಬೇಕಿರುವುದು. ರೇಡಿಯೊ ಕಾಮೆಂಟರಿಯಲ್ಲಿ ಇದ್ದ ಸವಾಲಿಗಿಂತ ಈಗಿನದ್ದು ಹೆಚ್ಚು ಎಂದೇ ನನಗೆ ಅನಿಸುತ್ತದೆ. ಟೋನಿ ಗ್ರೇಗ್ ತಮ್ಮ ಬೇಸ್ ವಾಯ್ಸ್‌ನಿಂದ ಗಮನ ಸೆಳೆದರೆ, ಜೆಫ್ರಿ (ಬಾಯ್ಕಾಟ್) ತುಂಟತನ ಬೆರೆಸಿದ ಶೈಲಿಯಿಂದ ಗುರುತಾಗುತ್ತಾರೆ.

ದೇಸಿ ಮನರಂಜನೆ ಸಿಧು ವರಸೆ. ಅವರು ಭಾರತೀಯ ಪದಗಳನ್ನು ಇಂಗ್ಲಿಷ್‌ಗೆ ಒಗ್ಗಿಸಿ ಹೇಳುವ ಪರಿಯಿಂದಲೇ ಯಶಸ್ವಿಯಾದವರು. ಇಂಥವರ ಮಧ್ಯೆ ನನಗೆ ವೀಕ್ಷಕ ವಿವರಣೆ ದೊಡ್ಡ ಸವಾಲೇ ಅಲ್ಲವೇ?’. ಹರ್ಷ ಭೋಗ್ಲೆ ತಮ್ಮ ಶೈಲಿಯ ಬಗೆಗೆ ಮಾತ್ರ ಹೇಳಿಕೊಳ್ಳಲಿಲ್ಲ. ಆತ್ಮರತಿ ಒಳ್ಳೆಯದಲ್ಲ ಎಂದು ನಕ್ಕಿದ್ದರಷ್ಟೆ. ಅದು ಅವರ ಸಾಮರ್ಥ್ಯವೂ ಹೌದೆನ್ನಬಹುದು.

ಒಮ್ಮೆ ಜೆಫ್ರಿ ಬಾಯ್ಕಾಟ್, ಸಿಧು ಸಿಕ್ಸರ್ ಹೊಡೆಯಲು ಕ್ರೀಸ್‌ನಿಂದ ಮುಂದಕ್ಕೆ ಬರುತ್ತಿದ್ದುದನ್ನು ನೆನಪಿಸಿ ಲೇವಡಿ ಮಾಡಿದರು. ‘ನಿಂತಲ್ಲಿಯೇ ಯಾಕೆ ಸಿಕ್ಸರ್ ಹೊಡೆಯಲು ನಿನಗೆ ಆಗುತ್ತಿರಲಿಲ್ಲ’ ಎಂದು ಕಿಚಾಯಿಸಿದರು. ಅದಕ್ಕೆ ಸಿಧು ನಗುನಗುತ್ತಲೇ, ‘ನಾನು ಸಿಕ್ಸರ್ ಹೊಡೆದದ್ದಂತೂ ನಿಜ. ಒಂದೂ ಸಿಕ್ಸರ್ ಹೊಡೆಯದ ನಿಮ್ಮ ಬಾಯಲ್ಲಿ ಈ ಪ್ರಶ್ನೆ ಸರಿ ಕಾಣುವುದಿಲ್ಲ’ ಎಂದು ಟಾಂಟ್ ಕೊಟ್ಟರು.

ಟೋನಿ ಗ್ರೇಗ್, ಮಾರ್ಕ್ ನಿಕಲಸ್, ಡೇವಿಡ್ ಲಾಯ್ಡ್, ಜೆಫ್ರಿ ಬಾಯ್ಕಾಟ್, ಇಯಾನ್ ಹೀಲಿ, ಮೈಕಲ್ ಹೋಲ್ಡಿಂಗ್, ಇಯಾನ್ ಬಿಷಪ್, ಜೊನಾಥನ್ ಆ್ಯಗ್ನೂ, ಮೈಕಲ್ ಸ್ಲೇಟರ್, ರಿಚಿ ಬೆನಾಡ್, ನಾಸಿರ್ ಹುಸೇನ್ ತರಹದ ಕ್ರಿಕೆಟ್ ವೀಕ್ಷಕ ವಿವರಣೆಕಾರರು ತಮ್ಮೊಳಗಿನ ಅಭಿಮಾನಿಯನ್ನು ಹತ್ತಿಕ್ಕಿಯೇ ಕಮೆಂಟರಿ ಕೊಡುತ್ತಾರೆನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಲಕ್ಷ್ಮಣ್ ಶಿವರಾಮಕೃಷ್ಣನ್, ಸಂಜಯ್‌ ಮಾಂಜ್ರೇಕರ್‌, ರವಿ ಶಾಸ್ತ್ರಿ, ಸೌರವ್ ಗಂಗೂಲಿ ತರಹದವರಿಗೆ ಈ ಸಿದ್ಧಿ ಕಷ್ಟ. 

ಸರಿಯೂ ಅಲ್ಲ ತಪ್ಪೂ ಅಲ್ಲ
ಕನ್ನಡದ ಮಟ್ಟಿಗೆ ವೀಕ್ಷಕ ವಿವರಣೆಕಾರರಾಗಿ ಗಮನ ಸೆಳೆದಿರುವವರು ಚಂದ್ರಮೌಳಿ ಸಿ. ಕಣವಿ. ವೀಕ್ಷಕ ವಿವರಣೆಕಾರ ಅಭಿಮಾನಿ ಆಗಿ ಮಾತನಾಡುವುದನ್ನು ತಪ್ಪು ಅಥವಾ ಸರಿ ಎಂದು ಹೇಳಲಾಗದು ಎನ್ನುವ ಅಭಿಪ್ರಾಯ ಅವರದ್ದು.

‘ಸ್ವಾಭಾವಿಕವಾಗಿ ಎಲ್ಲರಿಗೂ ತಮ್ಮ ತಂಡ ಗೆಲ್ಲಬೇಕು ಎಂಬ ಆಸೆ ಇರುತ್ತದೆ. ಕಮ್ಮಟಗಳಲ್ಲಿ ನ್ಯೂಟ್ರಲ್‌ ಆಗಿಯೇ ವೀಕ್ಷಕ ವಿವರಣೆ ನೀಡಬೇಕು ಎಂದು ಕಿವಿಮಾತನ್ನೇನೋ ಹೇಳುತ್ತಾರೆ. ಆದರೆ, ಅದು ಸದಾ ಪಾಲನೆಯಾಗುವುದಿಲ್ಲ. ಟ್ವೆಂಟಿ 20 ಕ್ರಿಕೆಟ್‌ ಅನ್ನು ಗೇಮ್‌ ಎಂದಷ್ಟೇ ನೋಡಲಾಗದು. ಅದೊಂದು ಹೈಪ್‌, ಕ್ರಿಕೆಟೇನ್‌ಮೆಂಟ್‌. ಅದಕ್ಕೇ ರಮೀಜ್‌ ರಾಜಾ ಉನ್ಮಾದದಿಂದ ಮಾತನಾಡಿರುವ ಸಾಧ್ಯತೆ ಇದೆ’ ಎಂದು ಕಣವಿ ಹೇಳುತ್ತಾರೆ.

ದೇಸಿ ಹಾಗೂ ಹಿಂದಿ ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡುವಾಗ ಹೆಚ್ಚೇ ಸ್ವಾತಂತ್ರ್ಯ ತೆಗೆದುಕೊಂಡು ಮಾತನಾಡುವ ಪ್ರವೃತ್ತಿ ಇದೆ ಎಂದು ಹೇಳುವ ಕಣವಿ, ಇಂಗ್ಲಿಷ್‌ ಕಮೆಂಟೇಟರ್‌ಗಳಿಗೆ ಇದು ಸಾಧ್ಯವಿಲ್ಲ ಎಂದೂ ಮಾತು ಸೇರಿಸುತ್ತಾರೆ.

ಕಣವಿ ಇಷ್ಟಪಡುವ ವೀಕ್ಷಕ ವಿವರಣೆಕಾರ ಇಯಾನ್‌ ಚಾಪೆಲ್‌. ಕ್ರಿಕೆಟ್‌ ಆಟಗಾರನಾಗಿ, ನಾಯಕನಾಗಿ ಆಟವನ್ನು ಕಟ್ಟುವ ಕಲೆಗಾರನಾಗಿ ಬೆಳೆದ ಚಾಪೆಲ್‌ ಬಹಳ ನೇರವಂತಿಕೆಯ ವೀಕ್ಷಕ ವಿವರಣೆಕಾರ ಎನ್ನುವುದೇ ಕಣವಿ ಅವರನ್ನು ಮೆಚ್ಚಲು ಕಾರಣ. ಕಡ್ಡಿ ತುಂಡು ಮಾಡದಂತೆ ಮಾತನಾಡುವ ಚಾಪೆಲ್‌, ಈ ಗುಣದಲ್ಲಿ ಆಸ್ಟ್ರೇಲಿಯನ್ನರ ಮುಖ್ಯ ಪ್ರತಿನಿಧಿಯಂತೆಯೂ ಕಾಣಿಸುವರಂತೆ.

ಇಂಗ್ಲೆಂಡ್‌ನ ಮಾರ್ಕ್‌ ನಿಕಲಸ್‌ ಹಾಗೂ ಅಲನ್‌ ವಿಲ್ಕಿನ್ಸ್‌ ಅವರು ಮೆಚ್ಚುವ ಇನ್ನಿಬ್ಬರು ವೀಕ್ಷಕ ವಿವರಣೆಕಾರರು. ಕೌಂಟಿ ಕ್ರಿಕೆಟ್‌ನಲ್ಲಿ ಆಡಿ ಪಳಗಿದ ಮಾರ್ಕ್‌, ಇಂಗ್ಲೆಂಡ್‌ ತಂಡದ ಪರವಾಗಿ ಆಡಲಿಲ್ಲ. ಆದರೆ, ಕ್ರಿಕೆಟ್‌ ಬಗೆಗಿನ ಅವರ ಜ್ಞಾನ ಕಂಡು ಕಣವಿ ಬೆರಗುಗೊಂಡಿದ್ದಿದೆ. ಅವರ ವಾಗ್ಝರಿ, ಮಿಠಾಸ್‌ ಎನ್ನಬಹುದಾದ ಧ್ವನಿ, ತಮಾಷೆ ಮಾಡುತ್ತಲೇ ಗಹನವಾದದ್ದನ್ನು ಹೇಳುವ ವೈಖರಿಯನ್ನು ಮೆಚ್ಚದೇ ಇರಲಾದೀತೆ ಎನ್ನುತ್ತಾರೆ.

ಕ್ರಿಕೆಟ್‌ ಅಷ್ಟೇ ಅಲ್ಲದೆ ವಿಜಯ್‌ ಅಮೃತ್‌ ರಾಜ್‌ ಜೊತೆಗೆ ಕೂತು ಟೆನಿಸ್‌ ಆಟದ ವೀಕ್ಷಕ ವಿವರಣೆಯನ್ನೂ ನೀಡುವ ಅಲನ್‌ ವಿಲ್ಕಿನ್ಸ್‌, ತಮ್ಮ ಕೆಲಸಕ್ಕೆ ತಯಾರಾಗುವ ರೀತಿಯನ್ನು ಕಣವಿ ಹತ್ತಿರದಿಂದ ನೋಡಿದ್ದಾರೆ.

ಮರುದಿನದ ಪಂದ್ಯದಲ್ಲಿ ಆಡುವ ತಂಡಗಳ ಪ್ರಮುಖ ಆಟಗಾರರ ಕುರಿತು ಮಾತನಾಡುವಾಗ ಯಾವ್ಯಾವ ಗುಣವಿಶೇಷಣಗಳನ್ನು ಬಳಸಬೇಕು ಎಂದು ಶಬ್ದಕೋಶ ಹಿಡಿದು ಐವತ್ತು ಅರವತ್ತು ಪದಗಳನ್ನು ಅವರು ಪಟ್ಟಿ ಮಾಡಿಕೊಳ್ಳುತ್ತಾರಂತೆ. ಪಂದ್ಯದ ಡೈನಮಿಕ್ಸ್‌, ಫ್ಲ್ಯಾಷ್‌ಬ್ಯಾಕ್‌ ಎಲ್ಲವುಗಳ ಕುರಿತು ಸ್ಪಷ್ಟವಾದ ನೀಲಿನಕ್ಷೆ ತಯಾರಿಸಿಕೊಳ್ಳುವುದು ವಿಲ್ಕಿನ್ಸ್‌ ಸಿದ್ಧತೆಯ ವೈಖರಿ.

ತಟ್ಟೆಗೆ ಹಿತಮಿತವಾಗಿ ಊಟ ಬಡಿಸಿಕೊಳ್ಳುತ್ತಾ, ‘ಜೋಕ್‌ನ ಜೊತೆಗೆ ತೇಗೂ ಬಂದರೆ ಕ್ರಿಕೆಟ್‌ ಕಮೆಂಟರಿ ಕೆಟ್ಟುಹೋಗುತ್ತದೆ’ ಎಂದು ಜೋಕ್‌ ಸಿಡಿಸಿದ್ದ ನವಜೋತ್‌ ಸಿಂಗ್‌ ಸಿಧು  ತಮ್ಮೊಳಗೂ ಒಬ್ಬ ವೀರಾಭಿಮಾನಿ ಇರುವುದನ್ನು ಒಪ್ಪಿಕೊಂಡಿದ್ದರು.

ಎಲ್ಲ ದೇಶದ ಆಟಗಾರರನ್ನು ಬಣ್ಣಿಸಲು ತಮ್ಮ ಬತ್ತಳಿಕೆಯಲ್ಲಿ ಗುಣವಿಶೇಷಣಗಳಿವೆ ಎಂದೂ ಎದೆಯುಬ್ಬಿಸಿದ್ದರು. ಇಷ್ಟಕ್ಕೂ ಆಟ ಅಂದಮೇಲೆ ಅಭಿಮಾನ ಇದ್ದೇ ಇರುತ್ತದಲ್ಲವೇ? ಈಗ ಐಪಿಎಲ್‌ ವೀಕ್ಷಕ ವಿವರಣೆಯಲ್ಲಿ ಅಭಿಮಾನದ ಶಬ್ದಾಡಂಬರವನ್ನು ಹುಡುಕೋಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT