ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಣಾ ಮಲ್ಲಿಕ್‌ ಸೇರಿ ನಾಲ್ವರಿಗೆ 26 ವರ್ಷ ಶಿಕ್ಷೆ

ಟಿ.ವಿ ವಾಹಿನಿಯಲ್ಲಿ ಧರ್ಮನಿಂದನೆ ಕಾರ್ಯಕ್ರಮ
Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಧರ್ಮನಿಂದನೆಯ ಆರೋಪದಲ್ಲಿ ನಟಿ ವೀಣಾ ಮಲ್ಲಿಕ್‌ ಸೇರಿದಂತೆ ನಾಲ್ವರಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ 26 ವರ್ಷಗಳ ಶಿಕ್ಷೆ ವಿಧಿಸಿದೆ.

ಕಾರ್ಯಕ್ರಮವೊಂದರಲ್ಲಿ ವೀಣಾ ಮಲ್ಲಿಕ್‌ ಮತ್ತು ಆಕೆಯ ಪತಿ ಬಷೀರ್‌ ಅವರ ಅಣಕು ಮದುವೆಯನ್ನು ಜಿಯೊ ವಾಹಿನಿ ಕಳೆದ ಮೇ ತಿಂಗ­ಳಿನಲ್ಲಿ ಪ್ರಸಾರ ಮಾಡಿತ್ತು. ಕಾರ್ಯಕ್ರಮದ ಹಿನ್ನೆಲೆ­ಯಲ್ಲಿ ಧಾರ್ಮಿಕ ಗೀತೆಯೊಂದು ಪ್ರಸಾರವಾಗುತ್ತಿತ್ತು. ಇದು ಇಸ್ಲಾಂ ಧರ್ಮವನ್ನು ನಿಂದಿಸುವಂತಿದೆ ಎಂದು ವೀಣಾ ಹಾಗೂ ಬಷೀರ್‌ ದಂಪತಿ, ಜಿಯೊ ವಾಹಿನಿ ಮಾಲೀಕ ಶಕಿಲುರ್‌ ರೆಹಮಾನ್‌ ಹಾಗೂ ಕಾರ್ಯಕ್ರಮದ ನಿರ್ವಹಣೆ ಉಸ್ತುವಾರಿ ವಹಿಸಿ­ಕೊಂಡಿದ್ದ ಶಾಹಿಸ್ತಾ ವಾಹಿದಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶ ಶಹಬಾಜ್‌ ಖಾನ್‌,  ಈ ನಾಲ್ವರೂ ಧರ್ಮ ನಿಂದನೆ ಮಾಡಿರುವುದು ಸಾಬೀತಾಗಿದೆ ಎಂದು

‘ಆಗಬಾರದ್ದೇನೂ ಆಗಿಲ್ಲ. ಉನ್ನತ ಕೋರ್ಟ್ ಮೇಲೆ ನಂಬಿಕೆ ಇದ್ದು, ಅಂತಿಮ ತೀರ್ಪಿನಲ್ಲಿ ನ್ಯಾಯ ಸಿಗಲಿದೆ-’
–ವೀಣಾ ಮಲ್ಲಿಕ್

ನಾಲ್ವರಿಗೂ ತಲಾ 26 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದರು.

ಅಲ್ಲದೆ, ಆರೋಪಿಗಳಿಗೆ ತಲಾ 10.3 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸುವಲ್ಲಿ ವಿಫಲರಾದರೆ ಅವರ ಆಸ್ತಿಗಳನ್ನು ಮಾರಿ ಹಣ ಸಂಗ್ರಹಿಸ­ಬೇಕು ಎಂದು 40 ಪುಟದ ತೀರ್ಪಿನಲ್ಲಿ ಆದೇಶಿಸಲಾಗಿದೆ.

ಆರೋಪಿಗಳು ಗಿಲ್ಗಿತ್‌ ಬಾಲಿಸ್ತಾನ್‌ನ ಪ್ರಾದೇಶಿಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಈ ನಾಲ್ವರೂ ಪಾಕಿಸ್ತಾನದಿಂದ ಹೊರಗಿದ್ದಾರೆ ಎಂದು ವರದಿಯಾಗಿದೆ. ರೆಹಮಾನ್‌ ಯುಎಇನಲ್ಲಿ ವಾಸಿ­ಸುತ್ತಿದ್ದರೆ, ಉಳಿದ ಮೂವರೂ ಉಗ್ರ ಸಂಘಟನೆಗಳ ಬೆದರಿಕೆಯಿಂದಾಗಿ ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾ­ಗಿದೆ. ಆರೋಪಗಳು ಕೇಳಿಬಂದಾಗಲೇ ವಾಹಿದಿ ಮತ್ತು ಜಿಯೊ ಸಮೂಹ ಕ್ಷಮೆಯಾಚಿಸಿದ್ದರೂ, ಮೂಲಭೂತ­ವಾದಿಗಳು ಅದನ್ನು ತಿರಸ್ಕರಿಸಿದ್ದರು.

ಕರಾಚಿ ಮತ್ತು ಇಸ್ಲಾಮಾಬಾದ್‌ ಸೇರಿದಂತೆ ಹಲವು ನಗರಗಳಲ್ಲಿಯೂ ಈ ನಾಲ್ವರ ವಿರುದ್ಧ ಧರ್ಮ ನಿಂದನೆ ದೂರುಗಳು ದಾಖಲಾಗಿವೆ.

ಹಲವು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ವೀಣಾ ಮಲ್ಲಿಕ್‌, ಕನ್ನಡದ ‘ಸಿಲ್ಕ್‌’ ಚಿತ್ರದಲ್ಲಿಯೂ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT