ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಶಿಕ್ಷಣಕ್ಕೂ ಕನ್ನಡ ಬೇಕು

ಸಂವೇದನಾಶೀಲ ವೈದ್ಯರ ಸೃಷ್ಟಿಗಾಗಿ ವೈದ್ಯಕೀಯ ಶಿಕ್ಷಣದಲ್ಲಿ ಭಾಷಾ ಬೋಧನೆ ಅಗತ್ಯ.
Last Updated 14 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸುವ ಕಾನೂನನ್ನು ಸರ್ಕಾರ ರೂಪಿಸುತ್ತಿದೆ. ಶಾಲಾ ಹಂತಕ್ಕೆ ಸೀಮಿತಗೊಂಡಿರುವ ಈ ಕಾನೂನಿನ ವ್ಯಾಪ್ತಿಯನ್ನು ಕಾಲೇಜು ಶಿಕ್ಷಣಕ್ಕೆ, ಅದರಲ್ಲೂ ವೃತ್ತಿಶಿಕ್ಷಣಕ್ಕೆ ವಿಸ್ತರಿಸಬೇಕಾದ ತುರ್ತು ಅಗತ್ಯವಿದೆ. ವೃತ್ತಿಶಿಕ್ಷಣ ಕೋರ್ಸ್‌ಗಳಾದ ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್ ಮತ್ತಿತರ ಪದವಿ ತರಗತಿಗಳಲ್ಲಿ ಸಾಮಾಜಿಕ ಸೂಕ್ಷ್ಮಗಳನ್ನು ಕಲಿಯುವುದು ಅವಶ್ಯಕ.

ದೈಹಿಕ ಮತ್ತು ಮಾನಸಿಕ ಆರೋಗ್ಯ ಸಾಮಾಜಿಕ ಆರೋಗ್ಯದ ಸಮತೋಲನಕ್ಕೆ  ಸಹಕಾರಿ. ಆದರೆ ನಮ್ಮ ಬಹುಪಾಲು ವೈದ್ಯರಲ್ಲಿ ಸಾಮಾಜಿಕ ಆರೋಗ್ಯದ ವಿಚಾರದಲ್ಲಿ ಅಷ್ಟಾಗಿ ಒಲವು ಕಾಣದೇ ಇರುವುದು ದುರದೃಷ್ಟಕರ. ಇಂತಹದ್ದೊಂದು ಅನಾಸಕ್ತಿ   ವೈದ್ಯಕೀಯ ಶಿಕ್ಷಣದ ತರಗತಿಗಳಲ್ಲೇ ಪ್ರಾರಂಭವಾಗುತ್ತದೆ. ಇದಕ್ಕೆ ಹಲವಾರು ಕಾರಣಗಳನ್ನು ಗುರುತಿಸಬಹುದು. ಆದರೆ ಹಲವು ಭಾಷಾ ಸಂಸ್ಕೃತಿಯ ನಮ್ಮ ದೇಶದಲ್ಲಿ ನಾಡ ಭಾಷೆಯ ಅಥವಾ ಮಾತೃಭಾಷೆಯ ಕಲಿಕೆಯನ್ನು ವೈದ್ಯಕೀಯ ಶಿಕ್ಷಣದಲ್ಲಿ ಕಡೆಗಣಿಸಿರುವುದು ಒಂದು ಮುಖ್ಯ ಕಾರಣ.

ಆರೋಗ್ಯ ವಿಜ್ಞಾನದ ವಿದ್ಯಾರ್ಥಿಗಳು ಎಷ್ಟೇ ಬುದ್ಧಿವಂತರಾದರೂ ರೋಗಿಯ ಜೊತೆ ಮುಖಾಮುಖಿಯಾದಾಗ ಕೇವಲ ಪಠ್ಯಪುಸ್ತಕದ ಜ್ಞಾನ ಸಾಕಾಗುವುದಿಲ್ಲ. ರೋಗಿಯ ಆರೋಗ್ಯದ ಸಮಸ್ಯೆಗಳನ್ನು ಅರಿಯಲು ಮುಕ್ತವಾಗಿ ಅವರೊಡನೆ ಸಂವಹನ ನಡೆಸಬೇಕಾಗುತ್ತದೆ. ಇದು ರೋಗಲಕ್ಷಣದ ಚರಿತ್ರೆಯನ್ನು ತಿಳಿಯಲು ಇರುವ ಏಕೈಕ ಅಸ್ತ್ರ.

ಇಲ್ಲಿ ಉತ್ತಮ ಸಂವಹನ ಸಾಧ್ಯವಾಗದಿದ್ದರೆ ರೋಗಲಕ್ಷಣಗಳನ್ನು ತಿಳಿಯುವಲ್ಲಿ ಸಂಪೂರ್ಣ ವಿಫಲಗೊಂಡಂತೆಯೇ ಸರಿ. ಕೆಲವೊಮ್ಮೆ ಸಂಪೂರ್ಣವಾಗಿ ಅಲ್ಲದಿದ್ದರೂ ಕೇವಲ ದೈಹಿಕ ಗುಣಲಕ್ಷಣಗಳನ್ನು ಮಾತ್ರ ಹೊರತೆಗೆಯುವಲ್ಲಿ ವಿದ್ಯಾರ್ಥಿ ಸಫಲನಾಗಬಹುದು.

ದೈಹಿಕ ಗುಣಲಕ್ಷಣಗಳಿಗೆ ಮೂಲ ಕಾರಣಗಳನ್ನು ಕಂಡುಹಿಡಿಯುವುದು ವೈದ್ಯಕೀಯ ವೃತ್ತಿಯ ಅತಿ ಮುಖ್ಯ ಗುರಿ. ಯಾವುದೇ ರೋಗಕ್ಕೆ ಕೇವಲ ದೈಹಿಕ ಆಯಾಮವೊಂದೇ ಇರುವುದಿಲ್ಲ. ಅದಕ್ಕೆ ಪೂರಕವಾಗಿ ಮತ್ತು ಎಷ್ಟೋ ಸಂದರ್ಭಗಳಲ್ಲಿ ಮೂಲ ಕಾರಣವಾಗಿ ರೋಗಿಯ ಬದುಕಿನ ಶೈಲಿ, ಆರ್ಥಿಕ ಕ್ಷಮತೆ, ವಾಸಸ್ಥಳದ ಪರಿಸರ ಮತ್ತು ರೋಗಿಯ ಆರೋಗ್ಯ ಪ್ರಜ್ಞೆ ಕೆಲಸ ಮಾಡುತ್ತಿರುತ್ತದೆ. ಇದಕ್ಕೆ ಸಾಮಾಜಿಕ ಮತ್ತು ಸಾಂಸ್ಕೃತಿಕ ತಿಳಿವಳಿಕೆ ಅತಿ ಮುಖ್ಯ. ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಈ ಬಗೆಯ ಸಂವೇದನಾಶೀಲತೆಯನ್ನು ತರಲು ಕನ್ನಡ ಭಾಷಾ ಬೋಧನೆ ನೆರವಾಗುತ್ತದೆ.

ಕರ್ನಾಟಕದ ಆರೋಗ್ಯ ವಿಜ್ಞಾನಗಳ ವೃತ್ತಿಶಿಕ್ಷಣ ಕಾಲೇಜುಗಳಲ್ಲಿ ಹೊರ ರಾಜ್ಯಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಅವರೆಲ್ಲ ತಮ್ಮ ಪಠ್ಯಪುಸ್ತಕದ ಜ್ಞಾನವನ್ನು ಪ್ರಾಯೋಗಿಕವಾಗಿ ತಿಳಿಯುವುದು ನಮ್ಮ ನಾಡಿನ ರೋಗಿಗಳನ್ನು ಪರೀಕ್ಷಿಸುವ ಮೂಲಕ. ಇಂತಹ ಸಂವಹನದಿಂದ ವಿದ್ಯಾರ್ಥಿ ಸಂಗ್ರಹಿಸುವ ಮಾಹಿತಿ ವಿಸ್ತಾರವಾದದ್ದು. ಆದರೆ ಈ ಕಾರ್ಯ ಅಷ್ಟು ಸುಲಭದ್ದಲ್ಲ.

ಸಾಮಾಜಿಕ ಸಂವೇದನಾಶೀಲತೆಯನ್ನು ವಿದ್ಯಾರ್ಥಿ ಹೆಚ್ಚಿಸಿಕೊಂಡಷ್ಟೂ  ಆಮೂಲಾಗ್ರವಾದ ಮಾಹಿತಿ ಸಂಗ್ರಹ ಸಾಧ್ಯ. ಅದಕ್ಕಾಗಿ, ಸಾಮಾಜಿಕ ಕಾರಣಗಳನ್ನು ಹೆಕ್ಕಿ ತೆಗೆಯುವ ಕುತೂಹಲ ಮತ್ತು ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುವ ಪ್ರಯತ್ನಗಳನ್ನು ನಮ್ಮ ಪಠ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಬೇಕು.

ನಾಡ ಭಾಷೆಯಾದ ಕನ್ನಡದ ಕಲಿಕೆ ರೋಗಿಯ ಜೊತೆಗಿನ ಸಂವಹನಕ್ರಿಯೆಗೆ ಅತಿ ಮುಖ್ಯ. ಕನ್ನಡ ಭಾಷೆಯ ಜ್ಞಾನವೇ ಇಲ್ಲದಿದ್ದರೆ ರೋಗಿಯ ಜೊತೆ ಸಂವಾದ ಸಾಧ್ಯವಾಗುವುದಿಲ್ಲ. ಇನ್ನು ವಿದ್ಯಾರ್ಥಿಗಳು ಪಠ್ಯಕ್ರಮ ಪೂರೈಸಲು ರೋಗಿಯ ಚರಿತ್ರೆಯನ್ನು ಬರೆಯಲೇ ಬೇಕಾದ್ದರಿಂದ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಅವರೊಂದಿಗೆ ವ್ಯವಹರಿಸುವುದನ್ನು ಕಾಣುತ್ತೇವೆ. ಆದರೆ ರೋಗಿಯ ಗುಣಲಕ್ಷಣಗಳನ್ನು ಅರಿಯುವ ಸಂವೇದನಾಶೀಲತೆಯನ್ನು ಬೇರೆ ಭಾಷೆಯ ಮೂಲಕ ಸಂಪೂರ್ಣವಾಗಿ ಕಲಿಯುವುದು ಅಸಾಧ್ಯ.

ಈ ನೆಲದ ಸಾಮಾಜಿಕ- ಸಾಂಸ್ಕೃತಿಕ ಅರಿವಿಲ್ಲದ ವಿದ್ಯಾರ್ಥಿಗಳು ಇಲ್ಲಿ ಬದುಕಿ ಬಾಳುತ್ತಿರುವ ರೋಗಿಯ ಜೊತೆ ತೀರಾ ಕೃತಕವಾಗಿ ಬೇರೆ ಭಾಷೆಯಲ್ಲಿ ಸಂವಹನ ನಡೆಸುತ್ತಾರೆ. ಇದರಿಂದ ಕೇವಲ ದೈಹಿಕ ಗುಣಲಕ್ಷಣಗಳಿಗೆ ಚಿಕಿತ್ಸೆ ಕೊಡುವ ವೈದ್ಯಕೀಯ ಶೈಲಿಯನ್ನು ಅವರಿಗೆ ಕಲಿಸಿದಂತಾಗುತ್ತದೆ.

ಹೀಗಾಗಿ ಎಷ್ಟೋ ಸಂದರ್ಭಗಳಲ್ಲಿ ಮೂಲ ಕಾಯಿಲೆ ಚಿಕಿತ್ಸೆಗೊಳಪಡದೆ ಉಲ್ಬಣಿಸುತ್ತದೆ. ಇಲ್ಲಿ ಭಾಷಾ ಜ್ಞಾನಕ್ಕಿಂತ ಹೆಚ್ಚಾಗಿ, ಬದುಕನ್ನು ಅರ್ಥಮಾಡಿಕೊಳ್ಳುವ ಸಂವೇದನಾಶೀಲ ವೈದ್ಯರನ್ನು ಸೃಷ್ಟಿಸಲು ಭಾಷಾ ಬೋಧನೆ ಸಹಾಯ ಮಾಡುತ್ತದೆ.
ಆರೋಗ್ಯದ ಅಸಮತೋಲನಕ್ಕೆ ಕಾರಣಗಳನ್ನು ಶೋಧಿಸುವ ಕಾರ್ಯದಲ್ಲಿ ಸಂವಹನ ಬಹು ಮುಖ್ಯ ಕಾರ್ಯ ವಹಿಸುತ್ತದೆ. ಅದಕ್ಕಾಗಿ ನಾಡ ಭಾಷೆಯ ಅರಿವು ಮುಖ್ಯ. ಕಡೇ ಪಕ್ಷ ಯಶಸ್ವಿಯಾದ ಸಂವಹನಕ್ರಿಯೆಗೆ ಬೇಕಾಗುವಷ್ಟು ನಾಡ ಭಾಷೆಯನ್ನಾದರೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿದೆ.

ಯುನೆಸ್ಕೊ ಪ್ರಕಾರ, ಮಾತೃಭಾಷೆಯ ಶಿಕ್ಷಣ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅತಿ ಮುಖ್ಯ. ಈಗಾಗಲೇ ಮಾತೃಭಾಷಾ ಶಿಕ್ಷಣವನ್ನು ಉನ್ನತ ಶಿಕ್ಷಣದಲ್ಲೂ ಅಳವಡಿಸಿಕೊಂಡಿರುವ ಜಪಾನ್ ಮತ್ತು ಐರೋಪ್ಯ ದೇಶಗಳು ತಮ್ಮ ಸಾಮಾಜಿಕ ಆರೋಗ್ಯದ ಮಾನದಂಡದಲ್ಲಿ ಮುಂದಿವೆ. ಹೀಗಾಗಿ ಕನ್ನಡವನ್ನು ವೈದ್ಯಕೀಯ ವೃತ್ತಿಶಿಕ್ಷಣದಲ್ಲಿ ಕನಿಷ್ಠ ಒಂದು ಬೋಧನಾ ವಿಷಯವಾಗಿಯಾದರೂ ಕೊಡಬೇಕಾಗಿದೆ.

ಬರಗೂರು ರಾಮಚಂದ್ರಪ್ಪನವರು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಹೊರಡಿಸಿದ ಸುತ್ತೋಲೆಯೊಂದೇ ಈ ದಿಸೆಯಲ್ಲಿ ಇಲ್ಲಿಯವರೆಗೆ ನಡೆದಿರುವ ಪ್ರಯತ್ನ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ‘ಸಾಮಾಜಿಕ-ಸಾಂಸ್ಕೃತಿಕ ತಿಳಿವಿಲ್ಲದ ಉನ್ನತ ಶಿಕ್ಷಣ ಶುಷ್ಕ ವಾಣಿಜ್ಯ ವ್ಯಕ್ತಿತ್ವಗಳನ್ನು ರೂಪಿಸುವ ಅಪಾಯವಿದೆ’ ಎಂಬ ಬರಗೂರರ ಮಾತಿನಲ್ಲಿರುವ ಸತ್ಯವನ್ನು ಅರಿಯಬೇಕಾಗಿದೆ.

ರಾಜ್ಯದ ಆರೋಗ್ಯ ವಿಜ್ಞಾನ ಕಾಲೇಜುಗಳಲ್ಲಿ ಓದುತ್ತಿರುವ ಬಹುಪಾಲು ಪರಭಾಷಾ ವಿದ್ಯಾರ್ಥಿಗಳು ಕನ್ನಡ ಅರಿಯಲು ಆಸಕ್ತಿ ತೋರುವುದಿಲ್ಲ. ಪದವಿ ಪಡೆದ ಮೇಲೆ ತಮ್ಮ ರಾಜ್ಯಗಳಿಗೆ ಹಿಂದಿರುಗುವ ಅಥವಾ ವಿದೇಶಗಳಲ್ಲಿ ನೆಲೆಸುವ ಕಾರಣವನ್ನು ಅವರು ಇದಕ್ಕೆ ನೀಡುತ್ತಾರೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ದೇಹಾರೋಗ್ಯಕ್ಕೆ ಸಂಬಂಧಿಸಿದ ದೈಹಿಕ ಮತ್ತು ಸಾಮಾಜಿಕ ಕಾರಣಗಳನ್ನು ನಾವು ಬೇರ್ಪಡಿಸಿ ನೋಡುವಂತಿಲ್ಲ.

ಸಾಮಾಜಿಕ-ಸಾಂಸ್ಕೃತಿಕ ಪ್ರಜ್ಞೆಯನ್ನು ವೈದ್ಯರಲ್ಲಿ ಮೂಡಿಸುವಲ್ಲಿ ಕನ್ನಡ ಕಲಿಕೆ ಅರ್ಥಪೂರ್ಣ ಸಂವಹನ ಕ್ರಿಯೆಯ ಮೂಲಕ ಮುಖ್ಯ ಪಾತ್ರ ವಹಿಸುತ್ತದೆ. ಇಂತಹ ಕಲಿಕೆ ತಮ್ಮ ವೈದ್ಯಕೀಯ ವೃತ್ತಿಶೈಲಿಯ ಒಂದು ಭಾಗವೇ ಆಗುವುದರಿಂದ ವೃತ್ತಿಯ ಯಶಸ್ಸಿಗೂ ಸಹಾಯಕ ಎಂಬುದನ್ನು ವೈದ್ಯರು ಮರೆಯಬಾರದು. ಹೀಗಾಗಿ, ತಮ್ಮ ರಾಜ್ಯಗಳಿಗೆ ಮರಳುವ ವೈದ್ಯರು ಸಾಮಾಜಿಕ ಕಾಳಜಿಯುಳ್ಳ ಯಶಸ್ವಿ ವೃತ್ತಿಪರರಾಗಲು ನಮ್ಮ ನಾಡ ಭಾಷೆಯಾದ ಕನ್ನಡ ಪರೋಕ್ಷವಾಗಿ ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT