ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಪ್ಯಕ್ಕೆ ಸುಭದ್ರ ಆರ್ಥಿಕ ಆಧಾರ

ಅಟಲ್ ಪಿಂಚಣಿ ಯೋಜನೆ
Last Updated 12 ಮೇ 2015, 19:30 IST
ಅಕ್ಷರ ಗಾತ್ರ

ಈಗ ತಿಂಗಳಿಗೆ ಕೇವಲ ₹42 ಪಾವತಿಸಿ, 60 ವರ್ಷದ ನಂತರ ಪ್ರತಿ ತಿಂಗಳೂ ₹1 ಸಾವಿರ ಪಿಂಚಣಿ ಪಡೆಯುವುದಾದರೆ ಹೇಗಿರುತ್ತದೆ? ಅಥವಾ  ಇವತ್ತು ₹210 ಪಾವತಿಸಿ ನಮಗೆ 60 ವರ್ಷ ದಾಟಿದಾಗ ಮಾಸಿಕ ₹5 ಸಾವಿರ ನಿವೃತ್ತ ವೇತನ ಪಡೆಯಬಹುದೇ?

ಹೌದು, ಕೆಲಸದಲ್ಲಿ ಇಲ್ಲದವರೂ, ಸ್ವಯಂ ಉದ್ಯೋಗಿಗಳು ಮತ್ತು ವೃತ್ತಿನಿರತರೂ ಸಹ ಸರ್ಕಾರಿ ನೌಕರರಂತೆಯೇ 60 ವರ್ಷಗಳನ್ನು ಪೂರೈಸಿದ ನಂತರ ಪ್ರತಿ ತಿಂಗಳೂ ನಿಗದಿತ ಮೊತ್ತದ ಪಿಂಚಣಿ ಪಡೆಯಬಹುದು. ಅಂತಹುದೊಂದು ವಿಶೇಷ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಅಮೆರಿಕ ಹಾಗೂ ಯೂರೋಪ್ ದೇಶಗಳಲ್ಲಿ ವೃದ್ಧಾಪ್ಯದಲ್ಲಿ ಎಲ್ಲ ನಾಗರಿಕರಿಗೂ ಮಾಸಿಕ ಪಿಂಚಣಿ ದೊರೆಯುತ್ತದೆ. ಸರ್ಕಾರಿ ನೌಕರರು ಮಾತ್ರವಲ್ಲದೆ ವ್ಯಾಪಾರಿಗಳು, ಸಂತವಾಗಿ ಉದ್ಯೋಗ ಕೈಗೊಳ್ಳುವವರು, ರೈತರು, ಕೂಲಿ ಕಾರ್ಮಿಕರು, ಗೃಹಣಿಯರೂ ಸೇರಿದಂತೆ ಎಲ್ಲರಿಗೂ ಪ್ರತಿ ತಿಂಗಳೂ ನಿಗದಿತ ಮೊತ್ತದ ಪಿಂಚಣಿ ದೊರೆಯುವಂತಹ ವ್ಯವಸ್ಥೆ ಪಾಶ್ಚಿಮಾತ್ಯ ದೇಶಗಳಲ್ಲಿ ಇದೆ.

ಆದರೆ ಭಾರತದಲ್ಲಿ ಪಿಂಚಣಿ ಸೌಲಭ್ಯ ಕೇವಲ ಸರ್ಕಾರಿ ಹಾಗೂ ಬ್ಯಾಂಕ್ ನೌಕರರಿಗೆ ಮಾತ್ರ ಸೀಮಿತವಾಗಿದೆ. ಭವಿಷ್ಯ ನಿಧಿಗೆ ವಂತಿಗೆ ನೀಡುವ ಸರ್ಕಾರೇತರ ಸಂಸ್ಥೆ ಮತ್ತು ಕಂಪೆನಿಗಳ ನೌಕರರಿಗೂ ಪಿಂಚಣಿ ದೊರೆಯುತ್ತದೆ. ಕೇಂದ್ರ ಸರ್ಕಾರ ದೇಶದ ಎಲ್ಲಾ ನಾಗರಿಕರಿಗೂ ವೃದ್ಧಾಪ್ಯದಲ್ಲಿ ಪಿಂಚಣಿ ದೊರೆಯಬೇಕು ಎಂಬ ಉದ್ದೇಶದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿಯೇ ಅಟಲ್ ಪಿಂಚಣಿ ಯೋಜನೆಯನ್ನು ಆರಂಭಿಸಿದೆ. ಇದು ಜೂನ್ 1ರಿಂದ ಜಾರಿಗೆ ಬರಲಿದೆ.

ಅಟಲ್  ಪಿಂಚಣಿ  ಯೋಜನೆ
ಅಟಲ್ ಪಿಂಚಣಿ ಯೋಜನೆಯಡಿ ಚಂದದಾರರಾಗಿ ಹಣ ತೊಡಗಿಸಿದವರಿಗೆ ಅವರು 60 ವರ್ಷ ಪೂರೈಸಿದ ನಂತರ ಪಿಂಚಣಿ ದೊರೆಯುತ್ತದೆ. ಅವರು ಈಗಿನಿಂದ ಪ್ರತಿ ತಿಂಗಳೂ ಪವತಿಸುವ ವಂತಿಗೆ ಅನುಗುಣವಾಗಿ ಮಾಸಿಕ ₹1 ಸಾವಿರ, ₹2 ಸಾವಿರ, ₹3 ಸಾವಿರ, ₹4 ಸಾವಿರ ಅಥವಾ ₹5 ಸಾವಿರ ಪಿಂಚಣಿ ದೊರೆಯುತ್ತದೆ. ಎಲ್ಲಾ ನಾಗರಿಕರು ಈ ಪಿಂಚಣಿ ಯೋಜನೆಗೆ ಸೇರಬಹುದು. ಆದರೆ, ಕೆಲವು ಅರ್ಹತೆಗಳು ಇರಬೇಕು ಮತ್ತು ಕೆಲವು ಷರತ್ತುಗಳನ್ನು ಪೂರೈಸಬೇಕು.

*ಚಂದಾದಾರರ ವಯಸ್ಸು 18ರಿಂದ 40 ವರ್ಷಗಳ ವಯೋಮಿತಿಯಲ್ಲಿರಬೇಕು.
*ಯಾವುದಾದರೂ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರಬೇಕು ಅಥವಾ ಹೊಸದಾಗಿ ಖಾತೆ ತೆರೆಯಬೇಕು.
*ಮೊಬೈಲ್ ಫೋನ್ ನಂಬರ್ ಕಡ್ಡಾಯ.
*40 ವರ್ಷ ದಾಟಿದವರು ಈ ಪಿಂಚಣಿ ಯೋಜನೆಗೆ ಸೇರಲು ಅವಕಾಶವಿಲ್ಲ.

ಸರ್ಕಾರದ  ಧನ ಸಹಾಯ
ಈ ಯೋಜನೆಯ ಮುಖ್ಯವಾದ ಅಂಶವೆಂದರೆ, ಚಂದಾದಾರರು ಆರಂಭದಿಂದ 20 ವರ್ಷಗಳ ಕಾಲ ತಮ್ಮ ಪಾಲಿನ ವಂತಿಗೆ ಪಾವತಿಸಿದರೆ, ಅದಕ್ಕೆ ಕೇಂದ್ರ ಸರ್ಕಾರವೂ ಪ್ರತಿ ಚಂದದಾರರ ಖಾತೆಗೆ ಅವರ ವಂತಿಗೆಯ ಶೇ 50ರಷ್ಟು ಅಥವಾ ಗರಿಷ್ಠ ₹1 ಸಾವಿರ ಅನುದಾನವನ್ನು ಸೇರಿಸುತ್ತದೆ. 

ಕೇಂದ್ರ ಸರ್ಕಾರ ಪಿಂಚಣಿ ಯೋಜನೆ ಚಂದಾದಾರರ ಖಾತೆಗೆ ಐದು ವರ್ಷಗಳವರೆಗೆ ಮಾತ್ರವೇ ಈ ಅನುದಾನವನ್ನು ಸೇರಿಸುತ್ತದೆ. ಅಲ್ಲದೇ, ಈ ಅನುದಾನ 2015-16ರಿಂದ 2019-20ವರೆಗೆ ಮಾತ್ರ ಲಭ್ಯವಿರುತ್ತದೆ. ಕೇಂದ್ರ ಸರ್ಕಾರ ನೀಡುವ ಈ ಅನುದಾನವು 2015ರ ಜೂನ್ 1ರಿಂದ 2015ರ ಡಿಸೆಂಬರ್ 31ರೊಳಗೆ ಸೇರ್ಪಡೆಯಾಗುವ ಚಂದಾದಾರರಿಗೆ ಮಾತ್ರ ಲಭ್ಯವಿರುತ್ತದೆ.

ಸರ್ಕಾರದ ನೀಡುವ ಈ ಧನಸಹಾಯವು ಆದಾಯ ತೆರಿಗೆ ಪಾವತಿಸುವವರು, ಭವಿಷ್ಯ ನಿಧಿ ಸದಸ್ಯರು ಮತ್ತು ಇತರೆ ಸರ್ಕಾರಿ ಸಾಮಾಜಿಕ ಭದ್ರತೆ ಯೋಜನೆಯ ಫಲಾನುಭವಿಗಳಿಗೆ ಲಭ್ಯವಿರುವುದಿಲ್ಲ.

ಯೋಜನೆಗೆ ಸೇರುವುದು ಹೇಗೆ?
ನಿಮ್ಮ ಉಳಿತಾಯ ಖಾತೆ ಇರುವ ಬ್ಯಾಂಕ್‌ನಲ್ಲಿ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಆಧಾರ್ ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನುನೀಡಬೇಕು. ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರು ಪಾವತಿಸುವ ಮಾಸಿಕ ವಂತಿಗೆ ಮೊತ್ತವು ಅವರದೇ ಉಳಿತಾಯ ಖಾತೆಯಿಂದ ಸ್ವಯಂ ಚಾಲಿತವಾಗಿ ಪ್ರತಿ ತಿಂಗಳೂ ಜಮಾ ಆಗುತ್ತದೆ. ಆದ್ದರಿಂದ ಚಂದಾದಾರರು ತಮ್ಮ ಉಳಿತಾಯ ಖಾತೆಯಲ್ಲಿ ವಂತಿಗೆಗೆ ಅನುಗುಣವಾಗಿ ಹಣವನ್ನು ಇರಿಸಲೇಬೇಕು.

ಈ ಯೋಜನೆಗೆ ಸೇರುವ ದಿನವೇ ಪ್ರತಿ ತಿಂಗಳು ಮಾಸಿಕ ವಂತಿಗೆ ಪಾವತಿಸುವ ಕಡೇ ದಿನವಾಗಿರುತ್ತದೆ. ಆ ದಿನದೊಳಗೆ ಮಾಸಿಕ ಕಂತು ಪಾವತಿಸದೇ ಇದ್ದರೆ ವಂತಿಗೆ ಮೊತ್ತಕ್ಕೆ ಅನುಗುಣವಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

₹100 ಮಾಸಿಕ ವಂತಿಗೆಗಾದರೆ ₹1
₹101ರಿಂದ ₹500ರವರೆಗಿನ ಮೊತ್ತಕ್ಕೆ ₹2
₹501ರಿಂದ ₹1 ಸಾವಿರದವರೆಗಿನ ಕಂತಿಗೆ ₹5
₹1001ಕ್ಕಿಂತ ಅಧಿಕ ಮೊತ್ತಕ್ಕೆ ₹10  
ಹೆಚ್ಚುವರಿ ಶುಲ್ಕ ‍ಪಾವತಿಸಬೇಕಾಗುತ್ತದೆ.

ಆರು ತಿಂಗಳವರೆಗೆ ಮಾಸಿಕ ವಂತಿಗೆ ಪಾವತಿಸಲು ವಿಫಲವಾದರೆ ಪಿಂಚಣಿ ಯೋಜನೆಯ ಖಾತೆಯನ್ನು ತಾತ್ಕಾಲಿಕ ತಡೆ ಹಿಡಿಯಲಾಗುವುದು. 12 ತಿಂಗಳು ವಂತಿಗೆ ಬಾಕಿ ಇದ್ದರೆ ನಿಷ್ಕ್ರಿಯಗೊಳಿಸಲಾಗುತ್ತದೆ. 24 ತಿಂಗಳವರೆಗೂ ವಂತಿಗೆ ಬಾಕಿಯಾದರೆ ಬಳಿಕ ಖಾತೆ ರದ್ದುಗೊಳ್ಳುತ್ತದೆ.

ಅಟಲ್ ಪಿಂಚಣಿ ಯೋಜನೆಯಲ್ಲಿ ಒಬ್ಬ ವ್ಯಕ್ತಿಯು ಒಂದು ಖಾತೆಯನ್ನು ಮಾತ್ರವೇ ತೆರೆಯಬಹುದು. ಪಿಂಚಣಿ ಖಾತೆ ಒಂದು ಬ್ಯಾಂಕಿನ ಒಂದು ಉಳಿತಾಯ ಖಾತೆಗೆ ಮಾತ್ರವೇ ಸೀಮಿತವಾಗಿರುತ್ತದೆ. ಚಂದಾದಾರರು ಮಾಸಿಕ ಪಿಂಚಣಿ ವಂತಿಗೆಯ ಮೊತ್ತವನ್ನು ಹೆಚ್ಚು ಅಥವಾ ಕಡಿಮೆ ಮಾಡಲು ಅವಕಾಶವಿರುತ್ತದೆ. ಹೀಗೆ ಮಾಸಿಕ ಕಂತಿನ ಮೊತ್ತವನ್ನು ಏಪ್ರಿಲ್ ತಿಂಗಳಲ್ಲಿ ಮಾತ್ರವೇ ಬದಲಿಸಲು ಅವಕಾಶವಿರುತ್ತದೆ.

ಯೋಜನೆಯಿಂದ ನಿರ್ಗಮನ
ಚಂದಾದಾರರಿಗೆ 60 ವರ್ಷ ಪೂರ್ಣಗೊಂಡಾಗ ಪಿಂಚಣಿ ಖಾತೆಯಲ್ಲಿರುವ ಮೊತ್ತವನ್ನು ಕ್ರೋಡೀಕರಿಸಲಾಗುತ್ತದೆ. ನಂತರ ಚಂದಾದಾರರಿಗೆ  ಮಾಸಿಕ ಪಿಂಚಣಿ ಪಾವತಿಯಾಗುವುದು ಆರಂಭಗೊಳ್ಳುತ್ತದೆ. ಚಂದಾದಾರರ ಜೀವಿತಾವಧಿಯ ಕೊನೆವರೆಗೂ ಪಿಂಚಣಿಯು ಪ್ರತಿ ತಿಂಗಳೂ ದೊರೆಯುತ್ತದೆ. ಚಂದಾದಾರರ ಅಸುನೀಗಿದ ನಂತರ ಅವರ ಪಿಂಚಣಿ ಖಾತೆಯಲ್ಲಿರುವ ಪೂರ್ಣ ಮೊತ್ತವನ್ನು ಚಂದಾದಾರರ ಪತಿ/ಪತ್ನಿಗೆ ಅಥವಾ ನಾಮಿನಿಗೆ ನೀಡಲಾಗುತ್ತದೆ.

ಚಂದಾದಾರರಿಗೆ ೬೦ ವರ್ಷವಾಗುವವರೆಗೂ ಈ ಖಾತೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಆದರೆ ಸಾವು ಅಥವಾ ಅನಾರೋಗ್ಯ ಉಂಟಾದಲ್ಲಿ ಮಾತ್ರವೇ ಖಾತೆಯಲ್ಲಿ ಆವರೆಗೆ ಜಮಾ ಆಗಿರುವ ಮೊತ್ತ ಹಿಂದಿರುಗಿಸಲಾಗುತ್ತದೆ. ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PenಿsionಟFund Regulatory and Development Authority: PFRDA) ಅಟಲ್ ಪಿಂಚಣಿ ಯೋಜನೆಯನ್ನು ನಿಯಂತ್ರಿಸುತ್ತದೆ.

ಎಷ್ಟು ಪಿಂಚಣಿಗೆ ಎಷ್ಟು ವಂತಿಗೆ?
ಮಾಸಿಕ ಪಿಂಚಣಿಯ ಮೊತ್ತ ವ್ಯಕ್ತಿಯ ವಯಸ್ಸು ಮತ್ತು ಅವರು ಪಾವತಿಸುವ ಮಾಸಿಕ ವಂತಿಗೆಯ ಮೇಲೆ ನಿರ್ಧಾರಿತವಾಗಿದೆ. ಅದಕ್ಕೆ ಸಂಬಂಧಿಸಿದ ವಿವರವಾದ ಕೋಷ್ಟಕವನ್ನು ಇಲ್ಲಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT