ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯಾವಾಟಿಕೆಗೆ ದೂಡಿದವಳನ್ನು ಹಿಡಿದುಕೊಟ್ಟ ಮಹಿಳೆ!

ನಿರಂತರ ಲೈಂಗಿಕ ಶೋಷಣೆ: ಮಾನವೀಯತೆ ಮೆರೆದ ಆಟೊ ಚಾಲಕ ಮಾನೊ
Last Updated 25 ಮೇ 2016, 19:32 IST
ಅಕ್ಷರ ಗಾತ್ರ

ಬೆಂಗಳೂರು: ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿ ದೆಹಲಿ ಸೇರಿದ್ದ ಮಹಿಳೆಯೇ, ತಾನು ಆ ಜಾಲದಲ್ಲಿ ಸಿಲುಕಲು ಕಾರಣಳಾದ ಮಹಿಳೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗೌರಿಬಿದನೂರು ತಾಲ್ಲೂಕಿನಲ್ಲಿ ನಡೆದಿದೆ.

ದಶಕದ ಹಿಂದೆ ಮನೆ ಕೆಲಸಕ್ಕೆಂದು ಪಕ್ಕದ ಅಲೀಪುರ ಗ್ರಾಮಕ್ಕೆ ತೆರಳಿದ್ದ ಮಹಿಳೆ ಮನೆಗೆ ವಾಪಾಸಾಗಿರಲಿಲ್ಲ. ದೆಹಲಿಯ ಅಜ್ಮೀರ್‌ಗೇಟ್‌ಗೆ ಸಮೀಪದ ಹೊರವರ್ತುಲ ರಸ್ತೆಯ ಬಸ್‌ ನಿಲ್ದಾಣದ ಬಳಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಸಂತ್ರಸ್ತೆಯನ್ನು ಮಾನೊ ಎಂಬ ಆಟೊ ಚಾಲಕ ರಕ್ಷಿಸಿದ್ದು, ಆರು ತಿಂಗಳ ಹಿಂದಷ್ಟೆ ಮಹಿಳೆ ಗ್ರಾಮಕ್ಕೆ ಮರಳಿದ್ದಾರೆ.

ನಿರಂತರ ಲೈಂಗಿಕ ಶೋಷಣೆಯಿಂದಾಗಿ ಗರ್ಭಕೋಶವನ್ನೇ ಕಳೆದುಕೊಂಡಿರುವ ಈ ಮಹಿಳೆ, ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.  ಈಗ ದುಡಿಯುವ ಶಕ್ತಿಯನ್ನೇ ಕಳೆದುಕೊಂಡಿರುವ ಅವರು, ಜೀವನೋಪಾಯಕ್ಕೆ ದಾರಿ ಕಾಣದೆ ಕಂಗಾಲಾಗಿದ್ದಾರೆ. ತೆಂಗಿನ ಗರಿಗಳಿಂದ ನಿರ್ಮಿಸಿದ ಪುಟ್ಟ ಗುಡಿಸಲಲ್ಲಿ ವಾಸವಾಗಿರುವ ಸಂತ್ರಸ್ತ ಮಹಿಳೆ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಎಲೆ–ಅಡಿಕೆ ಕೊಟ್ಟು ಅಪಹರಿಸಿದರು: ‘ನಮ್ಮದು ಅತ್ಯಂತ ಬಡ ಕುಟುಂಬ. ಪತಿ ಮದ್ಯ ವ್ಯಸನಿಯಾಗಿದ್ದ ಕಾರಣ ಜೀವನೋಪಾಯ ಕಷ್ಟವಾಗಿತ್ತು. ಆದಕಾರಣ ಅಲೀಪುರಕ್ಕೆ ಮನೆಕೆಲಸಕ್ಕೆ ಹೋಗುತ್ತಿದ್ದೆ. ಹೀಗೆ ಹೋಗಿ ಬರುವಾಗ ಬಸ್ಸಿನಲ್ಲಿ ಪ್ಯಾರಿಮಾ ಎಂಬುವವರ ಪರಿಚಯವಾಯಿತು. ನನ್ನ ಕಷ್ಟವನ್ನೆಲ್ಲ ಅವರಲ್ಲಿ ಹಂಚಿಕೊಳ್ಳುತ್ತಿದ್ದೆ. ಮದುವೆ ಕೆಲಸಕ್ಕೆ ಬಂದರೆ ಕೈ ತುಂಬಾ ಹಣ ಸಿಗುತ್ತೆ. ಬಾ ಎಂದು ಹೇಳಿದ್ದರು’.

‘ಒಂದು ದಿನ ಬಸ್ಸಿಗಾಗಿ ಕಾಯುತ್ತಿದ್ದಾಗ ಎಲೆ–ಅಡಿಕೆ ಕೊಟ್ಟರು.  ಅದನ್ನು ತಿಂದ ಬಳಿಕ ಏನಾಯಿತೊ ತಿಳಿಯಲಿಲ್ಲ. ಪ್ರಜ್ಞೆ ಬಂದಾಗ ರೈಲಿನಲ್ಲಿದ್ದೆ. ನಾನು ಎಲ್ಲಿದ್ದೀನಿ? ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಮದುವೆ ಕೆಲಸಕ್ಕೆ ಎಂದಷ್ಟೆ ಹೇಳಿದ್ದರು. ಪ್ಯಾರಿಮಾ ಜತೆ ಇನ್ನೊಬ್ಬ ಮಹಿಳೆಯೂ ಇದ್ದಳು. ತುಂಬಾ ತಲೆನೋಯುತ್ತಿದೆ ಎಂದು ಹೇಳಿದ್ದಕ್ಕೆ ಮಾತ್ರೆ ಕೊಟ್ಟರು. ಅದನ್ನು ತಿಂದ ಮೇಲೆ ಮತ್ತೆ ಎಚ್ಚರ ತಪ್ಪಿದೆ’.

‘ರೈಲಿನಿಂದ ಇಳಿದ ನಂತರ ಮಹಿಳೆಯೊಬ್ಬರಿದ್ದ ಆಟೊದಲ್ಲಿ ಕೂರಿಸಿದರು. ತಾನು ಹಿಂದಿನ ಆಟೊದಲ್ಲಿ ಬರುವುದಾಗಿ ಹೇಳಿದರು. ಆದರೆ ಅವರು ನನ್ನನ್ನು ಮಾರಾಟ ಮಾಡಿದ್ದರು ಎಂಬ ವಿಷಯ ತಿಳಿಯಲು ಬಹಳ ಸಮಯ ಬೇಕಾಗಲಿಲ್ಲ’ ಎಂದು ಬೆಚ್ಚುತ್ತಲೇ ತಿಳಿಸಿದರು ಸಂತ್ರಸ್ತ ಮಹಿಳೆ.

ಉಸಿರುಗಟ್ಟಿಸುವ ವಾತಾವರಣ: ‘ನನ್ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಕೊಠಡಿಯನ್ನು ಕಬ್ಬಿಣದ ರಾಡುಗಳಿಂದ ಬಂದೋಬಸ್ತ್‌ ಮಾಡಲಾಗಿತ್ತು. ನನ್ನಂತೆಯೇ ಅನೇಕ ಹೆಣ್ಣುಮಕ್ಕಳೂ ಅಲ್ಲಿ ಬಂಧನದಲ್ಲಿದ್ದರು.

ನಿತ್ಯಕರ್ಮ, ಸ್ನಾನ, ಊಟ, ನಿದ್ರೆ  ಎಲ್ಲವೂ ಅಲ್ಲಿಯೆ. ಅವರು ನೀಡುತ್ತಿದ್ದ ಅರೆಬೆತ್ತಲೆ ಉಡುಪುಗಳನ್ನೇ ಹಾಕಿಕೊಳ್ಳಬೇಕಿತ್ತು. ಅಲ್ಲಿಗೆ ಬರುತ್ತಿದ್ದ ಗಂಡಸರೊಂದಿಗೆ ವ್ಯವಹರಿಸಲು ಹೇಳುತ್ತಿದ್ದರು.

ಅದಕ್ಕೆ ಒಪ್ಪದಿದ್ದರೆ ಹೊಡೆಯುತ್ತಿದ್ದರು. ಕೂಗಿದರೆ ಬಲವಂತವಾಗಿ ಮಾತ್ರೆ ನುಂಗಿಸಿ ಮಂಕು ತರಿಸುತ್ತಿದ್ದರು. ಋತುಸ್ರಾವದ  ಸಮಯದಲ್ಲೂ ಬಿಡುತ್ತಿರಲಿಲ್ಲ’.

‘ಗಂಡ–ಮಕ್ಕಳನ್ನು ನೋಡಬೇಕು ನನ್ನನ್ನು ಊರಿಗೆ ಕಳುಹಿಸಿ ಎಂದು ಅಂಗಲಾಚಿ ಬೇಡಿದೆ. ಯಾರೂ ಮಾನವೀಯತೆ ತೋರಲಿಲ್ಲ. ಕೊಟ್ಟ ಹಣ ತೀರುವವರೆಗೂ ಇಲ್ಲಿಯೇ ಇರಬೇಕು ಎಂದು ಒತ್ತಡ ಹೇರುತ್ತಿದ್ದರು.

ಈ ಉಸಿರುಗಟ್ಟಿಸುವ ವಾತಾವರಣದಿಂದ ಯಾವಾಗ ಮುಕ್ತಿ ಸಿಗುವುದೋ ಎಂದು ಕ್ಷಣ ಕ್ಷಣವೂ ಹಂಬಲಿಸುತ್ತಿದ್ದೆ. ಆ ಭದ್ರಕೋಟೆಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಿರಲಿಲ್ಲ. ಹೀಗೆ ಹಲವು ವರ್ಷಗಳು ಕಳೆದವು. ಕಣ್ಣೀರು ಸುರಿಸಿ ಸುರಿಸಿ ಶಕ್ತಿಹೀನಳಾಗಿದ್ದೆ’.

‘ಒಮ್ಮೆ ಮುಟ್ಟಾಗಿ ಹದಿನೈದು ದಿನ ಕಳೆದರೂ ರಕ್ತಸ್ರಾವ ನಿಂತಿರಲಿಲ್ಲ. ಅದೇ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಕಷ್ಟು ಜನ ಬಂದು ಹೋಗುತ್ತಿದ್ದರು. ಅಂದು ನನ್ನ ಕೊಠಡಿಗೆ ಬೀಗ ಹಾಕುವುದನ್ನೇ ಮರೆತಿದ್ದರು.

ಇದೇ ಸರಿಯಾದ ಸಮಯ ಎಂದೆಣಿಸಿ ಜನರಗುಂಪಿನ ನಡುವೆಯೇ ಅಲ್ಲಿಂದ ತಪ್ಪಿಸಿಕೊಂಡೆ. ಸ್ವಲ್ಪ ದೂರದಲ್ಲಿ ಬಸ್‌ ನಿಲ್ದಾಣ ಕಾಣಿಸುತ್ತಿತ್ತು. ಅಲ್ಲಿಗೆ ಬರುತ್ತಿದ್ದಂತೆ ಕುಸಿದು ಬಿದ್ದೆ. ಮತ್ತೆ ಕಣ್ಣು ಬಿಟ್ಟಾಗ ಮಾನೊ ಭಯ್ಯಾ ಅವರ ಉಪಚಾರದಲ್ಲಿದ್ದೆ’ ಎಂದು ವಿವರಿಸಿದರು ಅವರು.

ಯಾರು ಈ ಮಾನೊ ಭಯ್ಯಾ: ಬಸ್‌ ನಿಲ್ದಾಣದ ಬಳಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿ ಹುಟ್ಟೂರಿಗೆ ಕರೆತಂದವರು ಆಟೊ ಚಾಲಕ ಮಾನೊ. ರಾಜಸ್ತಾನ ಮೂಲದವರಾದ ಮಾನೊ ಹೊಟ್ಟೆಪಾಡಿಗಾಗಿ ದೆಹಲಿಯಲ್ಲಿ ನೆಲೆಸಿದ್ದು, ಆಟೊ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಪೇಂಟಿಂಗ್‌ ಕೆಲಸವನ್ನೂ ಮಾಡುತ್ತಿದ್ದಾರೆ.

ಸಂತ್ರಸ್ತ ಮಹಿಳೆ ಕೈಗೆ ಸಿಕ್ಕಿಬಿದ್ದ ಪ್ಯಾರಿಮಾ: ‘ತೀವ್ರ ರಕ್ತಸ್ರಾವದ ಕಾರಣ ತಕ್ಷಣ ಊರಿಗೆ ಬರಲು ಸಾಧ್ಯವಾಗಲಿಲ್ಲ. ಚಿಕಿತ್ಸೆಗಾಗಿ ಹಲವು ಆಸ್ಪತ್ರೆಗಳಿಗೆ ತಿರುಗಾಡಿದೆ. ಗರ್ಭಕೋಶ ತೆಗೆಸುವುದು ಅನಿವಾರ್ಯವಾಯಿತು. ಸಂಪೂರ್ಣ ಗುಣಮುಖಳಾದ ನಂತರ ಊರಿಗೆ ಬಂದೆ.

ಎಲ್ಲರೂ ನಾನು ಸತ್ತು ಹೋಗಿದ್ದೇನೆ ಎಂದೇ ತಿಳಿದಿದ್ದರು. ಪತಿ ಕೋಪಗೊಂಡಿದ್ದ ಕಾರಣ ತವರು ಮನೆಯಲ್ಲಿ ಸ್ವಲ್ಪ ದಿನ ಉಳಿದುಕೊಂಡೆ. ತಾಯಿಗೆ ನಡೆದಿದ್ದನ್ನು ತಿಳಿಸಿದೆ. ಅವರು ಈ ಬಗ್ಗೆ ಯಾರಿಗೂ ಹೇಳಬೇಡ, ಸುಮ್ಮನಿದ್ದುಬಿಡು ಎಂದು ಹೇಳಿದ್ದರು’. 

‘ಅಲ್ಲಿರಲು ಸಾಧ್ಯವಾಗದೆ ಮರಳಿ ಗಂಡನ ಮನೆಗೆ ಬಂದೆ. ಪುಟ್ಟ ಗುಡಿಸಲು ಕಟ್ಟಿಕೊಂಡು ಪ್ರತ್ಯೇಕವಾಗಿ ಇರಲಾರಂಭಿಸಿದೆ. ಕಾಲಾಂತರದಲ್ಲಿ ಪತಿಯೂ ಸುಮ್ಮನಾದರು’. 

‘ಸಮಾರಂಭದ ನಿಮಿತ್ತ ಅಣ್ಣನ ಮನೆಗೆ ಹೋಗಿ ರೈಲಿನಲ್ಲಿ ವಾಪಸ್‌ ಬರುತ್ತಿದ್ದೆ. ಜತೆಗೆ ಸಂಬಂಧಿಕರೂ ಇದ್ದರು. ಅವರ ಬಳಿ ನಾನು ಪಟ್ಟ ಪಾಡು ಹೇಳುತ್ತಿದ್ದೆ. ಪಕ್ಕದಲ್ಲಿಯೇ ಬುರ್ಖಾ ಧರಿಸಿ ಕುಳಿತಿದ್ದ ಮಹಿಳೆಯೊಬ್ಬಳು ನಮ್ಮ ಮಾತುಗಳನ್ನು ಕೇಳಿಸಿಕೊಂಡು ಬುರ್ಖಾ ಎತ್ತಿ ನೋಡಿದಳು.

ನಾನೂ ಆಕೆಯನ್ನು ನೋಡಿದೆ. ನನ್ನ ಸ್ಥಿತಿಗೆ ಕಾರಣಳಾದ ಪ್ಯಾರಿಮಾ ಈಕೆಯೇ ಎಂದು ಸಂಬಂಧಿಕರಿಗೆ ತಿಳಿಸಿ ಆಕೆಯನ್ನು ಹಿಡಿದುತಂದು ಪೊಲೀಸರಿಗೆ ಒಪ್ಪಿಸಿದೆವು’ ಎಂದು ತನ್ನ ನೋವಿನ ಕಥೆ  ಬಿಚ್ಚಿಟ್ಟರು ಮಹಿಳೆ.

‘ತನ್ನಂತೆ ಇನ್ನೂ ಹಲವು ಹೆಣ್ಣುಮಕ್ಕಳು ಈ ಜಾಲದಲ್ಲಿ ಸಿಲುಕಿದ್ದಾರೆ. ಅವರೆಲ್ಲರನ್ನೂ ಸರ್ಕಾರ ರಕ್ಷಿಸಬೇಕು. ನನಗೆ ಬಂದ ದುಃಸ್ಥಿತಿ ಮತ್ತೊಬ್ಬ ಮಹಿಳೆಗೆ ಬರಬಾರದು. ಇದಕ್ಕೆ ಇನ್ನೂ ಯಾರ್‍್ಯಾರು ಕಾರಣರಿದ್ದಾರೆ ಎಂಬುದನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’.

‘ನನ್ನ ಚಿಕಿತ್ಸೆಗಾಗಿ ಮಾನೊ ಭಯ್ಯಾ ಸಾಲ ಮಾಡಿ, ಮಗಳ ಒಡವೆಗಳನ್ನು ಗಿರವಿ ಇಟ್ಟು ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ. ಅವರೂ ಬಡವರಾಗಿದ್ದು, ಖರ್ಚು ಮಾಡಿದ ಹಣ ವಾಪಸ್‌ ಮಾಡುವ ಸ್ಥಿತಿಯಲ್ಲಿ ನಾನಿಲ್ಲ. ಸರ್ಕಾರ ನೆರವು ನೀಡಬೇಕು’ ಎಂದು ಮನವಿ ಮಾಡುತ್ತಾರೆ ಅವರು.

‘ಬಡತನವನ್ನೇ ಅಸ್ತ್ರವಾಗಿ ಬಳಸಿಕೊಂಡು ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುವವರ ಜಾಲದ ಬಗ್ಗೆ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ಹೆಣ್ಣುಮಕ್ಕಳು ಕಾಣೆಯಾಗಿರುವ ಮತ್ತು ಅವರನ್ನು ರಕ್ಷಿಸಿ ಕರೆತಂದಿರುವ ಬಗ್ಗೆ ಗ್ರಾಮಸ್ಥರು ಮಾತಾಡಿಕೊಳ್ಳುವುದನ್ನು ಆಲಿಸಿದ್ದೇನೆ.

ಈ ಪ್ರಕರಣದ ಮೂಲಕ ಪೊಲೀಸರು ಆ ಜಾಲವನ್ನು ಭೇದಿಸಬೇಕು. ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸುತ್ತಾರೆ ಮಹಿಳೆ ಮತ್ತು ಮಕ್ಕಳ ರಕ್ಷಣಾ ವೇದಿಕೆಯ ಕಾನೂನು ಸಲಹೆಗಾರ ಅಂಜನಾಮೂರ್ತಿ.

ತನಿಖೆಗೆ ಕ್ರಮ
ಪ್ಯಾರಿಮಾ ವಿರುದ್ಧ ಕಲಂ ಐಪಿಸಿ 370ರ ಅಡಿ (ಆಮಿಷವೊಡ್ಡಿ ಮೋಸದಿಂದ ಮಾರಾಟ ಮಾಡುವುದು) ಪ್ರಕರಣ ದಾಖಲಿಸಲಾಗಿದೆ. ಈಕೆ ಜತೆಗಿದ್ದ ಮತ್ತೊಬ್ಬ ಮಹಿಳೆಯ ಶೋಧ ಕಾರ್ಯ ನಡೆದಿದೆ.

ಇನ್ನೂ ಯಾರ್‍್ಯಾರು ಈ ಜಾಲದಲ್ಲಿ ಸಿಲುಕಿರಬಹುದು ಎಂಬ ದೃಷ್ಟಿಯಿಂದಲೂ ತನಿಖೆ ನಡೆಸಲಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡುತ್ತಾರೆ ಮಂಚೇನಹಳ್ಳಿ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಸುಂದರ್‌.

*
ಯಾದಗಿರಿ ಜಿಲ್ಲೆಯಲ್ಲಿ ಅತಿ ಕಡಿಮೆ 3 ಯುವತಿಯರು ಮತ್ತು 17 ಮಹಿಳೆಯರು ಕಾಣೆಯಾದ ಬಗ್ಗೆ ವರದಿಯಾಗಿದೆ. ಇದರಲ್ಲಿ ಒಬ್ಬ ಯುವತಿ ಹಾಗೂ ಐವರು ಮಹಿಳೆಯರನ್ನು ಪತ್ತೆ ಮಾಡಲಾಗಿದೆ.

*
ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 281 ಯುವತಿಯರು ಮತ್ತು 2714 ಮಹಿಳೆಯರು ಕಾಣೆಯಾಗಿದ್ದಾರೆ. ಈ ಪೈಕಿ 169 ಯುವತಿಯರು ಹಾಗೂ 1419 ಮಹಿಳೆಯರನ್ನು ಪತ್ತೆ ಮಾಡಲಾಗಿದೆ.

ಮತ್ತೊಬ್ಬ ಹೆಣ್ಣುಮಗಳಿಗೆ ಈ ಸ್ಥಿತಿ ಬೇಡ
‘ಪ್ರಯಾಣಿಕರನ್ನು ಬಿಡುವ ಸಲುವಾಗಿ ಅಂದು ದೆಹಲಿಯ ಹೊರವರ್ತುಲ ರಸ್ತೆ ಬಳಿಯ ಬಸ್‌ನಿಲ್ದಾಣಕ್ಕೆ ತೆರಳಿದ್ದೆ. ಅಲ್ಲಿ ಮಹಿಳೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದು ನರಳಾಡುತ್ತಿದ್ದರು. ಧರ್ಮ–ಕರ್ಮ ದೇವರು ನೋಡಿಕೊಳ್ಳುತ್ತಾನೆ ಎಂದು ಆಕೆಯನ್ನು ಎತ್ತಿ ಆಟೊದಲ್ಲಿ ಹಾಕಿಕೊಂಡು ಮನೆಗೆ ಕರೆತಂದೆ.

ಬಟ್ಟೆಯೆಲ್ಲ ರಕ್ತವಾಗಿತ್ತು. ಮಗಳಿಗೆ ಉಪಚರಿಸಲು ಹೇಳಿದೆ. ಹಲವು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದೆ. ಆದರೂ ಗುಣಮುಖರಾಗದ ಕಾರಣ ತಕ್ಷಣ ಊರಿಗೆ ಕರೆತರಲು ಸಾಧ್ಯವಾಗಲಿಲ್ಲ. ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿ, ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೇ ಊರಿಗೆ ಕರೆತರಬೇಕಾಯಿತು.

ವಾಪಸ್‌ ಊರಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಮಹಿಳೆಯನ್ನು ದೆಹಲಿಗೆ ಕರೆತಂದಿದ್ದ ಅಜ್ಜಿಯ ಬಂಧನವಾಯಿತು. ಪ್ರಕರಣದ ತನಿಖೆಗೆ ನೆರವಾಗುವ ಉದ್ದೇಶದಿಂದ ಸದ್ಯ ಇಲ್ಲಿಯೇ ಉಳಿದಿದ್ದೇನೆ’ ಎನ್ನುತ್ತಾರೆ ಮಾನೊ.

‘ಮಹಿಳೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ದುಡಿದು ಬದುಕುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಗುಡಿಸಿಲಿನಲ್ಲಿ ವಾಸ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಸ್ಥಿತಿ ಬೇರೆ ಯಾವ ಹೆಣ್ಣುಮಕ್ಕಳಿಗೂ ಬರದಂತೆ ಎಚ್ಚರ ವಹಿಸಬೇಕು’ ಎಂಬ ಬೇಡಿಕೆ ಮುಂದಿಡುತ್ತಾರೆ ಮಾನೊ.

*
ಮಹಿಳೆ ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ. ಆಯೋಗಕ್ಕೆ ಬಂದು ದೂರು ನೀಡಿದಲ್ಲಿ ಪುನರ್‌ವಸತಿಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
ಬಲ್ಕೀಸ್‌ ಭಾನು,  ಅಧ್ಯಕ್ಷೆ, ರಾಜ್ಯ ಅಲ್ಪಸಂಖ್ಯಾತರ ಆಯೋಗ

*
ಮಹಿಳೆ ಸ್ವತಂತ್ರವಾಗಿ ಉದ್ಯೋಗ ಕೈಗೊಳ್ಳಲು ಅಗತ್ಯ ತರಬೇತಿ ಮತ್ತು ಹಣಕಾಸು ನೆರವು ನೀಡಲಾಗುತ್ತದೆ.  ಚಿಕ್ಕಬಳ್ಳಾಪುರ  ವಿಭಾಗದ ಅಧಿಕಾರಿಗೆ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.
ಹಲೀಮ, ಸಹಾಯಕ ನಿರ್ದೇಶಕಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

*
ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಭಾರತದಲ್ಲಿ ಹೆಚ್ಚಿವೆ. ಈ ಬಗ್ಗೆ ಆಯೋಗದಿಂದಲೂ ಅಧ್ಯಯನ ಕೈಗೊಂಡಿದ್ದೇವೆ. ಮಹಿಳೆಗೆ ನೆರವು ನೆರವು ನೀಡಲು ಬದ್ಧ.
ಮಂಜುಳಾ ಮಾನಸ,
ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT