ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರು ನೆಚ್ಚಿದ `ತೇಜಸ್ವಿ ಮದ್ದು'

Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ತೇಜಸ್ವಿ ಕನ್ನಡ ನಾಡು ಕಂಡ ಅದ್ಭುತ ಲೇಖಕ. ಅವರ ಸಾಹಿತ್ಯವನ್ನು ಓದಿ ಅದರ ಪ್ರಭಾವಕ್ಕೆ ಒಳಗಾಗದವರು ವಿರಳ. ಅವರ ಪ್ರಭಾವದಿಂದ ತಪ್ಪಿಸಿಕೊಂಡದ್ದು ಕಡಿಮೆ. ಇಂಥ ಅಪರೂಪದ ಸಾಹಿತಿಯ ನೆನಪು ಸಾಹಿತ್ಯೇತರ ಕಾರಣಗಳಿಂದಾಗಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನಾರಬಂಡಿ ಗ್ರಾಮದಲ್ಲಿ ಸಾಕಾರಗೊಂಡಿದೆ.

ನಾರಬಂಡಿಯಲ್ಲಿ ಒಂದು ಜಲಾಶಯವಿದೆ. ಅದರ ಹೆಸರು `ಪೂರ್ಣಚಂದ್ರ ತೇಜಸ್ವಿ ಜಲಾಶಯ'. ಹಟ್ಟಿ ಗೋಲ್ಡ್‌ಮೈನ್‌ಗೆ ಹೋಗುವ ನವಲಕಲ್‌ನಲ್ಲಿ ಕವಲೊಡೆಯುವ ರಸ್ತೆಯಿಂದ ನಾಲ್ಕು ಕಿಮೀ ಮುಂದೆ ಹೋದರೆ ಈ ಜಲಾಶಯ ಸಿಗುತ್ತದೆ.

ತೇಜಸ್ವಿ ಅಭಿಮಾನಿಗಳು ಯಾರಾದರೂ ನೋಡಿದರೆ, ಪುಳಕಗೊಳ್ಳುವ ಸಂಗತಿ ಇದು. ಎತ್ತಣ ಮಲೆನಾಡಿನ ತೇಜಸ್ವಿ, ಎತ್ತಣ ರಾಯಚೂರಿನ ನಾರಬಂಡೆ ಊರಿನಕೆರೆ!

ನಾರಬಂಡೆಯಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ. ಸಾವಿರಕ್ಕೆ ಹತ್ತು ಜನ ಓದಿದವರು ಸಿಗುವುದು ಕಷ್ಟ. ಇಂಥ ಊರಲ್ಲಿ ತೇಜಸ್ವಿ ಹೆಸರಿನ ಜಲಾಶಯ ಇರುವುದು ಹೇಗೆ ಎನ್ನುವ ಪ್ರಶ್ನೆ ಸಹಜ. ಈ ಕುತೂಹಲದ ಕೇಂದ್ರದಲ್ಲಿ ನಿಲ್ಲುವವರು ಡಾ. ವಿರುಪಾಕ್ಷಪ್ಪ.

ವಿರುಪಾಕ್ಷಪ್ಪ ವೃತ್ತಿಯಿಂದ ವೈದ್ಯರು. ನಾರಬಂಡಿಯಿಂದ 10 ಕಿಮೀ ದೂರದಲ್ಲಿರುವ ಸಿರವಾರದಲ್ಲಿ ಅವರು ವೈದ್ಯಕೀಯ ಸೇವೆ ಶುರು ಮಾಡಿ ಸುಮಾರು ವರ್ಷಗಳೇ ಆಗಿವೆ. ತೇಜಸ್ವಿ ಬಗ್ಗೆ ವೈದ್ಯರಿಗೆ ವಿಶೇಷ ಅಕ್ಕರೆ. ತೇಜಸ್ವಿಯವರು ಎಲ್ಲ ಸಾಹಿತ್ಯವನ್ನುಓದಿಕೊಂಡಿರುವ ಅವರು, ತನ್ನ ಮೆಚ್ಚಿನ ಲೇಖಕನ ಆದರ್ಶಗಳನ್ನು ತಮ್ಮ ಜೀವನದ ಭಾಗವಾಗಿ ಭಾವಿಸಿದವರು, ಅನುಕರಿಸಿದವರು. ತೇಜಸ್ವಿಯವರ ಪ್ರಖರ ಪ್ರತಿಭೆಗೆ ಬೆರಗಾದವರು.

“ತೇಜಸ್ವಿಯವರ ಸಮಗ್ರ ಲೇಖನಗಳನ್ನು, ಸಮಗ್ರವಾಗಿ, ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದೆ. ತೇಜಸ್ವಿ ಅಂದರೆ ಎಲ್ಲರೂ ಒರಟು ವ್ಯಕ್ತಿ ಎಂದು ಗುರುತಿಸುತ್ತಾರೆ. ಆದರೆ ಕನ್ನಡ ಜ್ಞಾನಸಂಪತ್ತನ್ನು ಸರಳಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ” ಎನ್ನುತ್ತಾರೆ ವಿರುಪಾಕ್ಷಪ್ಪ. ತೇಜಸ್ವಿಯವರ ವ್ಯಕ್ತಿತ್ವ ಮತ್ತು ಅವರ ಬರಹಗಳನ್ನು ಗೌರವಿಸುವ ವಿರುಪಾಕ್ಷಪ್ಪ, ತೇಜಸ್ವಿಯವರಂತೆ ನಿಷ್ಠುರ ವ್ಯಕ್ತಿತ್ವದವರು. ವ್ಯವಸ್ಥೆಯನ್ನು ಈಗಿಂದೀಗಲೇ ಬದಲಾಯಿಸುತ್ತೇನೆ ಎನ್ನುವ ಹುಸಿ ನಂಬಿಕೆಗಳಿಲ್ಲದ ವ್ಯಕ್ತಿತ್ವ ಅವರದು. 

ಶಿರವಾರದಲ್ಲಿ ವಾಸವಾಗಿದ್ದುಕೊಂಡು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಅವರು ಒಮ್ಮಿಂದೊಮ್ಮೆಲೆ ನಾರಬಂಡಿಯಂಥ ಕುಗ್ರಾಮಕ್ಕೆ ಸ್ಥಳಾಂತರಗೊಂಡಿದ್ದು ಕಥೆಯೊಂದಕ್ಕೆ ಗ್ರಾಸ ಆಗುವಂತಹದ್ದು. ಹತ್ತು ವರ್ಷಗಳ ಕೆಳಗೆ ತೇಜಸ್ವಿಯಂತೆ ಎಲ್ಲಿಯಾದರೂ ಕಾಡಿನಲ್ಲಿ ಜೀವನ ಸಾಗಿಸಬೇಕೆಂದು ಅವರು ಕನಸು ಕಂಡರು. ಆದರೆ ಈ ವೈದ್ಯರಿಗೆ ಬಯಲು ಸೀಮೆಯಲ್ಲಿ ಕಾಡು ಎಲ್ಲಿ ಸಿಗಬೇಕು? ಅದಕ್ಕೆ ಅವರು ಕಂಡುಕೊಂಡ ವಿಧಾನ ನಾರಬಂಡಿಯಿಂದ ಅನತಿ ದೂರದಲ್ಲಿರುವ ಬಯಲು ಭೂಮಿ.

ಅಲ್ಲಿ `ವಿವೇಕಾನಂದ ಫಾರ್ಮ್' ಅಭಿವೃದ್ಧಿಪಡಿಸಿ ಸಪೋಟ, ಮೂಸಂಬಿ, ಮಾವಿನ ಗಿಡ ಬೆಳೆಸಿದರು. ಕಾಡು ಬೆಳೆಗಳನ್ನೂ ಬೆಳೆಸಿದರು. ಸಮೀಪದಲ್ಲೇ ಕೆರೆಯೊಂದಿತ್ತು. ಆ ಕೆರೆಗೆ ವೈದ್ಯರಿಂದ ನಾಮಕರಣವೂ ಆಯಿತು- ಪೂರ್ಣಚಂದ್ರ ತೇಜಸ್ವಿ ಜಲಾಶಯ!

ತೇಜಸ್ವಿ ಕೆರೆಯಿಂದ ನೀರುಣ್ಣುತ್ತ ಪ್ರಸ್ತುತ ವೈದ್ಯರ ಕಾಡು ಮೂವತ್ತು ಎಕರೆಗಳಲ್ಲಿ ಹಬ್ಬಿಕೊಂಡಿದೆ. ಪೂರ್ಣಚಂದ್ರ ತೇಜಸ್ವಿ ಜಲಾಶಯದ ದಂಡೆಗೆ ಈ ತೋಟ ನಳನಳಿಸುತ್ತ ಅರಳಿ ನಿಂತಿದೆ.

ವೈದ್ಯರು ತೋಟದ ಮನೆಯಲ್ಲೇ ವಾಸವಾಗಿದ್ದಾರೆ. ಶಿರವಾರದಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಡಾಕ್ಟರಿಕೆ ಮಾಡಿಕೊಂಡು ಸಂಜೆ ತಮ್ಮ ಫಾರ್ಮ್‌ಗೆ ಬರುತ್ತಾರೆ. ಅವರ ಮನೆಗೆ ಹೋದರೆ ತೇಜಸ್ವಿಯವರ ಚಿತ್ರಪಟ ನೋಡುಗರ ಗಮನ ಸೆಳೆಯುತ್ತದೆ. ಅವರ ಪಾಲಿಗೆ, ತೇಜಸ್ವಿಯನ್ನು ಮರೆತು ದೈನಿಕ ಸಾಧ್ಯವೇ ಇಲ್ಲ.

ವಿರುಪಾಕ್ಷಪ್ಪನವರು ಒಮ್ಮೆ ಯಾವುದೋ ಒಂದು ಕಾರ್ಯಕ್ರಮಕ್ಕೆ ತೇಜಸ್ವಿಯವರನ್ನು ಆಹ್ವಾನಿಸಿದ್ದರಂತೆ. ಆಗವರು, `ಡಾಕ್ಟ್ರೆ, 500 ಕಿ.ಮೀ. ದೂರಕ್ಕೆ ನಾನು ಬಂದು, ನಾಲ್ಕು ಮಾತಾಡುವದರಿಂದ ಏನೂ ಬದಲಾವಣೆ ಆಗುವುದಿಲ್ಲ. ಬದಲಾಗಿ ನನ್ನ ದೇಹದಲ್ಲಿ ಬದಲಾವಣೆ ಆಗಬಹುದು'. ಈ ಮಾತನ್ನು ಈಗಲೂ ನೆನಪಿಸಿಕೊಂಡು ಡಾಕ್ಟರ್ ನಗುತ್ತಾರೆ.

`ವಿಜ್ಞಾನವನ್ನು ತೇಜಸ್ವಿಯವರು ಹೇಳಿದಂತೆ, ಅವರು ಪರಿಸರವನ್ನು ಪ್ರೀತಿಸಿದಂತೆ ಇನ್ನೊಂದು ಉದಾಹರಣೆ ಸಿಗುವುದು ಕಷ್ಟ. ಅವರಂತೆ ವಿಶಿಷ್ಟ ಕಥೆ ಕಾದಂಬರಿಗಳನ್ನು ಸೃಷ್ಟಿಸಿದವರು ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಮತ್ತೊಬ್ಬರಿಲ್ಲ' ಎನ್ನುವ ವೈದ್ಯರ ಮನೆಯಲ್ಲಿ ಎಲ್ಲೆಂದರಲ್ಲಿ ಸಿಗುವುದು ತೇಜಸ್ವಿಯವರ ಸಾಹಿತ್ಯ ಮಾತ್ರ.

ಡಾಕ್ಟರ್ ಮನಸ್ಸು ಮಾಡಿದರೆ ಹಣವಂತರಾಗಬಹುದಿತ್ತು. ದೊಡ್ಡದೊಡ್ಡ ಕಟ್ಟಡಗಳ, ಆಸ್ಪತ್ರೆಯ ಒಡೆಯರಾಗಬಹುದಿತ್ತು. ಆದರೆ ಈ ಡಾಕ್ಟ್ರು ಎಲ್ಲರಂತಲ್ಲ. ಮಾನವೀಯ ಮೌಲ್ಯಗಳನ್ನು ಮದ್ದಿನ ಮೂಲಕ ಜನರಿಗೆ ಉಣಬಡಿಸುವ ಪ್ರಯತ್ನ ಅವರದು. ರೈತರ ಬಗ್ಗೆಯಂತೂ ಅವರಿಗೆ ಅಪಾರ ಪ್ರೀತಿ. ಈ ಭಾಗದಲ್ಲಿ ಸಾಲ ಗೀಲ ಮಾಡಿ ಅಥವಾ ವೈಯಕ್ತಿಕ ಕಾರಣದಿಂದ ವಿಷ ಕುಡಿಯಲು ಪ್ರಯತ್ನಿಸುವ ರೈತರಿಗೆ ವೈದ್ಯರಿಂದ ಮದ್ದಿನ ಜೊತೆಗೆ ಶಿಕ್ಷೆಯೂ ಲಭ್ಯ! ದುಸ್ಸಾಹಕ್ಕೆ ಕೈಹಾಕುವ ರೈತರ ಕಪಾಳಕ್ಕೆ ಒಂದು ಏಟು ಕೊಟ್ಟೇ ಅವರು ಮಾತನಾಡುವುದು. `ನಾಚಿಕೆ ಆಗಲ್ವ ಸಾಯಾಕ ಹೋಗಿದ್ಯಲ್ಲ' ಎನ್ನುವ ಅವರ ಮಾತಿನಲ್ಲಿ ರೈತರ ಬಗೆಗಿನ ಕಾಳಜಿಯೂ ಜೀವನಪ್ರೇಮವೂ ಧ್ವನಿಸುತ್ತದೆ.

ವೈದ್ಯರ ಕಾಡಿಗೆ ನೀರುಣಿಸುವ ತೇಜಸ್ವಿ ಜಲಾಶಯಕ್ಕೆ ಕೃಷ್ಣಾ ಬಲದಂಡೆಯ ಒಂದು ಕಾಲುವೆಯನ್ನು ಜೋಡಿಸುವ ಯೋಜನೆ ಜೀವ ಪಡೆದುಕೊಂಡಿದೆ. ಮುಂದೊಂದು ದಿನ ಈ ಜಲಾಶಯದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿಯಲಿದೆ. ಹಾಗಾಗಿ ಸುತ್ತಮುತ್ತಲಿನ ಪರಿಸರದ ಹಸಿರೂ ಹೆಚ್ಚಲಿದೆ.
ವೈದ್ಯರ ಮೂಲಕ, ಅವರ ಮನೆ-ತೋಟದ ಮೂಲಕ ನಾರಬಂಡಿಯಲ್ಲಿ ತೇಜಸ್ವಿ ಜೀವಂತವಾಗಿದ್ದಾರೆ ಎನಿಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT