ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ಕೇಂದ್ರಿತ ಚಿಂತನೆ

ಅಕ್ಷರ ಗಾತ್ರ

ಯಾರಾದರೂ ನಮ್ಮನ್ನು ಗುರುತಿಸುವುದರಿಂದ ನಮಗೆ ಏನು ಪ್ರಯೋಜನ? ಜನರಿಗೆ ಸುಮ್ಮನೆ ನಾವು ಗುರುತಾಗುವುದರಿಂದ ಯಾರಿಗೆ ಏನು ಉಪಯೋಗ? ಅದರಿಂದ ಸಮಾಜಕ್ಕಾಗಲಿ, ಸಮುದಾಯಕ್ಕಾಗಲಿ ಏನಾದರೂ ಉಪಯೋಗ ಇದೆಯೆ? ಪ್ರಖ್ಯಾತಿ ಪಡೆಯುವುದೇ ನಮ್ಮ ಗುರಿಯೆ? ಜನ ನಮ್ಮ ಕೆಲಸದಿಂದ ನಮ್ಮನ್ನು ಗುರುತಿಸಬೇಕೆ?

ಈಚೆಗೆ ಟಿ.ವಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದಾಗ ಗೆಳೆಯರೊಬ್ಬರು ‘ಏನ್ ಸಖತ್ ಮಿಂಚಿಬಿಟ್ರಲ್ಲ ಸಾರ್. ನಿಮ್ಮನ್ನು ಜನ ಈಗ ಗುರ್ತಿಸ್ತಾರೆ ಸಾರ್’ ಎಂದರು. ಅಂದರೇನು? ಇದರಿಂದ ನನಗೇನು ಪ್ರಯೋಜನ? ಜನರಿಗೇನು ಪ್ರಯೋಜನ? ನನ್ನ ಚರ್ಚೆಯಿಂದ ಜನಕ್ಕೆ ಏನಾದರೂ ಮನರಂಜನೆಯೋ, ಕಾಲಾಯಾಪನೆಯೋ ಆಗುವುದಾದರೆ, ಜೀವನವನ್ನು ನೋಡುವ ಹೊಸ ದೃಷ್ಟಿಯೊಂದು ಲಭಿಸುವುದಾದರೆ ಅಷ್ಟರಮಟ್ಟಿಗೆ ಅದರಿಂದ ಅವರಿಗೆ ಪ್ರಯೋಜನ ಇದೆ. ನನ್ನ ಬಗ್ಗೆ ಸುಮ್ಮನೆ  ತಿಳಿಯುವುದರಿಂದ ಅವರಿಗೆ ಏನು ಉಪಯೋಗ? ಮಾತು, ಚರ್ಚೆಯಿಂದ ಜನಕ್ಕೆ ಏನಾದರೂ ಸ್ವಲ್ಪ ವಿವೇಕ ಬರುವುದಾದರೆ ಒಳ್ಳೆಯದು. ಹಾಗಾಗಿ ನಾವು ಮಾಡುವ ಕೆಲಸ, ನಮ್ಮ ಕೃತಿ ಮುಖ್ಯವೇ ವಿನಾ ನಾವಲ್ಲ.

ಒಂದು ಕೃತಿಯನ್ನು ಯಾರೋ ತಿಮ್ಮಣ್ಣ ಬರೆದರೆ ಏನು, ಬೊಮ್ಮಣ್ಣ ಬರೆದರೆ ಏನು? ವ್ಯಕ್ತಿಯನ್ನು ಕಟ್ಟಿಕೊಂಡು ಸಮಾಜಕ್ಕೆ ಏನಾಗಬೇಕಿದೆ? ಸಮಾಜಕ್ಕೆ ಬೇಕಾದುದನ್ನು ಪಡೆಯಲು ಮತ್ತು ಆ ಮೂಲಕ ಮುಂದೆ ಸಾಗಲು ಕಾರ್ಯಗಳು ಹಾಗೂ ಕೃತಿಗಳು ಬೇಕಾಗುತ್ತವೆ. ಅವನ್ನು ಸೃಷ್ಟಿಸಲು ವ್ಯಕ್ತಿ ಒಂದು ಸಾಧನ ಮಾತ್ರ. ಯಾವುದೇ ರಚನೆ, ಸೃಷ್ಟಿ ವೈಯಕ್ತಿಕ ಸೃಷ್ಟಿ ಅಲ್ಲ. ಎಲ್ಲವೂ ಸಾಮುದಾಯಿಕ, ಸಾಂಸ್ಕೃತಿಕ ಉತ್ಪನ್ನಗಳೇ; ವ್ಯಕ್ತಿ, ಸಮಾಜವನ್ನು ಬಿಟ್ಟು  ಸ್ವಯಂ ಆಗಿ ಬೆಳೆಯಲು ಸಾಧ್ಯವೆ? ಬದುಕಲು ಸಾಧ್ಯವೆ? ಏನನ್ನಾದರೂ ಸೃಷ್ಟಿಸಲು ಸಾಧ್ಯವೆ? ಆತನ ವ್ಯಕ್ತಿತ್ವ ಸಮಾಜದಿಂದ, ಪರಿಸರದಿಂದ ರೂಪುಗೊಂಡದ್ದೇ ಅಲ್ಲವೆ? ಆದರೂ ಕೆಲವರು ‘ಎಲ್ಲ ನಾನೇ ಮಾಡಿದೆ’ ಎನ್ನುತ್ತಾರೆ!

ಆದರೆ ಈ ಮಾಧ್ಯಮಗಳಿಂದ ನಮಗೆ ಏನಾಗುತ್ತಿದೆ?  ಹೇಗಾದರೂ ಸರಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬೇಕು, ಎಲ್ಲರಿಗೂ ನಾನು ಪರಿಚಯ ಆಗಬೇಕು, ಪ್ರಖ್ಯಾತ ಆಗಬೇಕು? ಜನರೆದುರು ನಾನು ಹೀರೊ ಆಗಬೇಕು, ಹೀರೊಯಿನ್ ಆಗಬೇಕು ಎಂಬ ಭ್ರಮೆ ಆವರಿಸುತ್ತಿದೆ. ವ್ಯಕ್ತಿಯೊಬ್ಬ ಪ್ರಸಿದ್ಧಿ ಪಡೆಯಲು ಕೆಲವೊಮ್ಮೆ ನೈತಿಕತೆಯನ್ನು ಗಾಳಿಗೆ ತೂರುವುದೂ ಇದೆ. ಸಮಾಜದ ಏಳ್ಗೆಗೆ ನಾನು ಏನು ಮಾಡಬೇಕು, ನೀಡಬೇಕು ಎಂಬುದೆಲ್ಲ ಅಮುಖ್ಯವಾಗಿ, ನಾನು ಪ್ರಖ್ಯಾತ ಆಗಬೇಕು ಎಂಬುದೇ ಮುಖ್ಯ ಆಗಿಬಿಟ್ಟರೆ ಹೇಗೆ?

ಸಿನಿಮಾಗಳಂತೂ ಸಮುದಾಯವನ್ನು ಬಿಂಬಿಸುವ ಬದಲು ವ್ಯಕ್ತಿ ಆರಾಧನೆಯನ್ನೇ ಬಿಂಬಿಸುತ್ತಿವೆ. ನಾವೆಲ್ಲರೂ ವ್ಯಕ್ತಿಗಳು, ಪ್ರಚಾರ ಗಿಟ್ಟಿಸುವುದೇ ಮುಖ್ಯ ಎಂದು ಭಾವಿಸುತ್ತಿದ್ದೇವೆ.  ಕಾರ್ಯಕ್ಕಿಂತ, ಕೃತಿಗಿಂತ ನಮ್ಮ ಎಲ್ಲ ಓದುವಿಕೆ ಮತ್ತು ಮಾಧ್ಯಮಗಳಲ್ಲಿ ವ್ಯಕ್ತಿಯೇ ಕೇಂದ್ರ ಆಗುತ್ತಿದ್ದಾನೆ. ಒಬ್ಬ ಅಮಿತಾಭ್‌ ಬಚ್ಚನ್‌, ಒಬ್ಬ ರಜನೀಕಾಂತ್‌, ಒಬ್ಬ ರೇಖಾ, ಒಬ್ಬ ಶ್ರೀದೇವಿ... ಇವರೆಲ್ಲ ಒಬ್ಬೊಬ್ಬರೇ ಸಿನಿಮಾ ತಯಾರಿಸಿದರೇ? ಅಲ್ಲೆಲ್ಲ ಒಂದೊಂದು ತಂಡ ಕೆಲಸ ಮಾಡಿಲ್ಲವೆ?

ಒಬ್ಬ ನಾಯಕನಟನ ಅಭಿನಯದ  ಸಿನಿಮಾ ಸಮಾಜಕ್ಕೆ ಏನು ನೀಡಿದೆ ಎಂಬುದು ಮುಖ್ಯ ಆಗಬೇಕೋ, ಪಾತ್ರ ಪೋಷಿಸಿದ ಕಾರಣಕ್ಕೆ ಆ ವ್ಯಕ್ತಿಯ ಪೂಜೆ ಮುಖ್ಯ ಆಗಬೇಕೋ? ಕೃತಿಗೆ ಗೌರವ ಕೊಡುವುದನ್ನೇ ವ್ಯಕ್ತಿಗೆ ಗೌರವ ಕೊಡುವುದು ಎಂದು ನಾವು ತಪ್ಪಾಗಿ ಭಾವಿಸಿದ್ದೇವೆ. ಹಾಗಾಗಿಯೇ ನಮ್ಮ ಬಹುಪಾಲು ಚರ್ಚೆಗಳಲ್ಲಿ ಸಿನಿಮಾ ಆಗಲಿ ಸಾಹಿತ್ಯ
ಆಗಲಿ ಮುಂಚೂಣಿಗೆ ಬರದೆ ವ್ಯಕ್ತಿಯೇ  ಮುಂಚೂಣಿಗೆ ಬರುತ್ತಾನೆ. ಕೃತಿ, ಕಾರ್ಯ ಆ ನಂತರ ಬರುತ್ತದೆ!

ವ್ಯಕ್ತಿತ್ವ ತಾನೇ ಸಂಪೂರ್ಣ ಒಳ್ಳೆಯ ಅಥವಾ ಸಂಪೂರ್ಣ ಕೆಟ್ಟದ್ದಾಗಿ, ವಾಸ್ತವದಲ್ಲೂ ನಾಯಕ ಅಥವಾ ಖಳನಾಯಕ ಎಂದು ಪ್ರತ್ಯೇಕವಾಗಿ ಇರುತ್ತದೆಯೇ? ನಾಯಕನ ಒಳಗೆ ಖಳನಾಯಕನೂ, ಖಳನಾಯಕನ ಒಳಗೆ ನಾಯಕನ ಗುಣವೂ ಇರಬಹುದಲ್ಲವೆ? ಹಾಗೆ ವ್ಯಕ್ತಿಗಳು ಏಕ ಆಕೃತಿಯಲ್ಲಿ ಇರುತ್ತಾರೆಯೆ? ರಾಮನೊಳಗೆ ರಾವಣನೂ ರಾವಣನೊಳಗೆ ರಾಮನೂ, ಒಬ್ಬನೊಳಗೇ ರಾಮ, ಸೀತೆ, ರಾವಣ, ಕುಂಭಕರ್ಣ ಎಲ್ಲರ ವ್ಯಕ್ತಿತ್ವಗಳೂ  ಇರಬಹುದಲ್ಲವೆ?

ಕಲ್ಲಾದ ಅಹಲ್ಯೆಗೆ ಮುಕ್ತಿ ನೀಡಿದ ರಾಮನೇ ಗರ್ಭಿಣಿ  ಸೀತೆಯನ್ನು ಕಾಡಿಗೆ ಕಳಿಸಲಿಲ್ಲವೆ? ಗೋಪಿಕೆಯರ ಸೀರೆಗಳನ್ನು ಅವರು ಸ್ನಾನ ಮಾಡುವಾಗ ಕದ್ದು ಮರವೇರಿ ಕುಳಿತ ಕೃಷ್ಣನೇ ದ್ರೌಪದಿಗೆ ಅಕ್ಷಯವಸ್ತ್ರ ನೀಡಲಿಲ್ಲವೆ? ನಮಗೆ ಕಾಣುವ ಮತ್ತು ಕಾಣದ ಹಲವು ಮುಖಗಳು ಎಲ್ಲ ವ್ಯಕ್ತಿಗಳಲ್ಲೂ ಇರುತ್ತವೆ.

ಮನೆಯಲ್ಲಿ ಹೆಂಡತಿಗೆ ಕಾಣುವ ಮುಖ ಕಚೇರಿಯಲ್ಲಿ ಗೆಳತಿಗೆ ಕಾಣದೆ ಇರಬಹುದು. ತಂದೆಯಲ್ಲಿ ಮಗಳಿಗೆ ಕಾಣುವ ಮುಖ, ಮಗನಿಗೆ ಕಾಣದೇ ಇರಬಹುದು. ಒಬ್ಬರಲ್ಲೇ ಒಳ್ಳೆಯ ಮತ್ತು ಕೆಟ್ಟ ಎರಡೂ ವ್ಯಕ್ತಿತ್ವಗಳು ಇರಬಹುದಲ್ಲವೆ? ವ್ಯಕ್ತಿಗಳು ಹಾಗೆ ಸಂಪೂರ್ಣ ಒಳ್ಳೆಯವರು ಇಲ್ಲವೇ ಕೆಟ್ಟವರು ಆಗಿರುವುದಿಲ್ಲ. ವ್ಯಕ್ತಿತ್ವಕ್ಕಿಂತ ವ್ಯಕ್ತಿ ಕೇಂದ್ರಿತ ಆಗಿ ಯೋಚನೆ ಮಾಡುವುದರಿಂದ ನಾವು ಇಂತಹ ತಪ್ಪುಗ್ರಹಿಕೆಗಳಲ್ಲಿ ಬೀಳುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT