ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಮಿತಾ ಹೊಸ ಯಾನ

ಸಂಗೀತ ನಿರ್ದೇಶನ
Last Updated 18 ಮೇ 2016, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಉತ್ತಮ ಗಾಯಕಿಯಾಗಿ ಗುರುತಿಸಿಕೊಂಡ ಶಮಿತಾ ಮಲ್ನಾಡ್‌, ಡಾನ್ಸಿಂಗ್‌ ಸ್ಟಾರ್‌ ಮೂಲಕ ನೃತ್ಯದಲ್ಲೂ ಸೈ ಎನಿಸಿಕೊಂಡರು. ಇದೀಗ ಸಂಗೀತ ನಿರ್ದೇಶನದ ಸರದಿ. ಹೌದು. ಸದ್ದು-ಗದ್ದಲವಿಲ್ಲದೆ ಮಲ್ನಾಡ್‌ ಸಂಗೀತ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಮಾತಿಗೆ ಸಿಕ್ಕಾಗ...

*ಸಂಗೀತ ನಿರ್ದೇಶನದತ್ತ ಮನಸ್ಸು ಮಾಡಲು ಪ್ರೇರಣೆ?
ಚಿಕ್ಕವಳಿದ್ದಾಗಿನಿಂದ ಕುವೆಂಪು, ಬೇಂದ್ರೆಯವರ ಪದ್ಯಗಳಿಗೆ ನಾನೇ ಯಾವುದೋ ರಾಗ ಸೇರಿಸಿ ಹಾಡುತ್ತಿದ್ದೆ. ಗೀತ ಸಂಯೋಜನೆ ನನ್ನೊಳಗೆ ಮೊದಲಿನಿಂದಲೂ ಇತ್ತು. ಅದೇ ಈಗ ಸಂಗೀತ ನಿರ್ದೇಶನದತ್ತ ಪ್ರೇರೇಪಿಸಿದ್ದು.

*ಸಂಗೀತ ನಿರ್ದೇಶಕಿಯಾಗಿದ್ದೀರಿ. ಹೇಗನ್ನಿಸುತ್ತಿದೆ?
ಸಂಗೀತ ನಿರ್ದೇಶಕಿಯಾಗಿ ಗುರುತಿಸಿಕೊಳ್ಳುವುದು ನನಗಂತೂ ಖುಷಿಯ ವಿಚಾರ. ಮೊದಲು ಹಾಡುತ್ತಿದ್ದೆ. ನಂತರ ನೃತ್ಯ, ಈಗ ಸಂಗೀತ ನಿರ್ದೇಶನ. ಬದುಕಿನಲ್ಲಿ ಅವಕಾಶಗಳು ಹೇಗೆ ಬಂದವೋ ಹಾಗೇ ಸ್ವೀಕರಿಸಿದೆ ಅಷ್ಟೆ. ನನ್ನ ಪ್ರಕಾರ ಸಿನಿಮಾ ರಂಗ ಮಹಿಳೆಯರಿಗೆ ಯುದ್ಧ ಭೂಮಿಯಿದ್ದಂತೆ.
ಇಂಥ ಸಮಯ ಎನ್ನುವಂತಿಲ್ಲ. ನಡು ರಾತ್ರಿಯಲ್ಲಿ ಶೂಟಿಂಗ್‌, ರೆಕಾರ್ಡಿಂಗ್‌ ಎಂದರೂ ರೆಡಿ ಇರಬೇಕು. ಮಹಿಳೆಯರಿಗೆ ಇಂದಿಗೂ ಅವಕಾಶಗಳು ಕಡಿಮೆಯೇ. ಹಾಗಿರುವಾಗ ಬರಗೂರು ರಾಮಚಂದ್ರಪ್ಪನವರು ಅವರ ಸಿನಿಮಾದಲ್ಲಿ ಸಂಗೀತ ನಿರ್ದೇಶಕಿಯಾಗಲು ಅವಕಾಶ ಕೊಟ್ಟರು. ನಾನೆಂದಿಗೂ ಅವರಿಗೆ ಆಭಾರಿ!

*ಈ ಮೊದಲು ನಿರ್ದೇಶನದಲ್ಲಿ ಏನಾದರೂ ಅನುಭವ ಇತ್ತೆ?
ಹತ್ತಾರು ಆಲ್ಬಂಗಳು, ಭಕ್ತಿ ಗೀತೆಗಳಿಗೆ, ಕ್ಯಾಸೆಟ್‌ಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ. ಬರಗೂರು ರಾಮಚಂದ್ರಪ್ಪ ಅವರ ‘ಬೆಕ್ಕು’, ಗೋಪಿ ಪೀಣ್ಯ ನಿರ್ದೇಶದ ‘ತಳಂಗ್‌ ನೀರ್‌’ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದೇನೆ.

*ಬರಗೂರರು ವಿಷಯ ತಿಳಿಸಿದ ಸಂದರ್ಭ ಹೇಗಿತ್ತು?
ಒಂದು ದಿನ ಫೋನ್‌ ಮಾಡಿ, ಡಾಕ್ಟ್ರೇ ಸಂಜೆ ಬಿಡುವು ಮಾಡಿಕೊಂಡು ಸುರೇಶ್‌ ಅರಸು ಸ್ಟುಡಿಯೊಗೆ ಬರುವಿರಾ ಅಂದ್ರು. ಆಯ್ತು ಸರ್‌ ಬರ್ತಿನಿ ಅಂದೆ. ಯಾತಕ್ಕೆ ಕರೆದಿದ್ದಾರೆ ಅಂತ ಯೋಚನೆ ಮಾಡ್ಕೊಂಡು ಹೋದೆ. ‘ಬೆಕ್ಕು’ ಅಂತ ಸಿನಿಮಾ ಮಾಡಿದ್ದೀವಿ, ನೋಡೋಣ ಅಂದರು. ಇಪ್ಪತ್ತು ನಿಮಿಷ ಆದಮೇಲೆ, ಈ ಸಿನಿಮಾಗೆ ನೀವೇ ಸಂಗೀತ ನಿರ್ದೇಶನ ಮಾಡಬೇಕು ಅಂದ್ರು.  ಆಗಂತೂ ಶಾಕ್‌ ಆಯ್ತು. ಖುಷಿ, ಭಯ, ಆಶ್ಚರ್ಯ ಎಲ್ಲ ಭಾವಗಳು ಒಟ್ಟಿಗೇ. ಅದಂತೂ ಬರಗೂರರಿಂದ ಪಡೆದ ಸರ್‌ಪ್ರೈಸ್‌ ಗಿಫ್ಟ್‌!

*‘ಬೆಕ್ಕು’ ಚಿತ್ರದ ಸಂಗೀತ ನಿರ್ದೇಶಕಿಯಾಗಿ ಅನುಭವ ಹೇಗಿತ್ತು?
‘ಬೆಕ್ಕು’ ಒಂದು ಕಲಾತ್ಮಕ ಚಿತ್ರ. ನಾನು ಹೆಚ್ಚು ಕಮರ್ಶಿಯಲ್‌ ಫೀಲ್ಡ್‌ನಲ್ಲಿ ಕೆಲಸ ಮಾಡಿದವಳು. ಅದಂತೂ ಸವಾಲೇ ಆಗಿತ್ತು. ಬರಗೂರು ಸರ್‌ ಚಿತ್ರಕ್ಕೆ ಕೆಲಸ ಮಾಡುವುದು ಸುಲಭವಲ್ಲ ಎಂದು ಹೆದರಿದ್ದೆ. ಆದರೆ ಅವರು ನೀನು ಮಾಡಬಲ್ಲೆ ಮಾಡು ಎಂದು ಧೈರ್ಯ ಹೇಳಿದರು. ಅವರಿಟ್ಟ ಕಂಡೀಷನ್ ಒಂದೇ, ಪಾಶ್ಚಾತ್ಯ ವಾದ್ಯಗಳು ಬೇಡ, ಭಾರತೀಯ ವಾದ್ಯಗಳನ್ನು ಬಳಸಿ ಎಂದು.

ಕಲಾತ್ಮಕ ಚಿತ್ರಗಳಲ್ಲಿ ಮಾತಿಗೆ ಹೆಚ್ಚು ಅವಕಾಶವಿರುವುದಿಲ್ಲ. ಮೌನವೇ ಸಂವಹಿಸುತ್ತಿರುತ್ತದೆ. ಹಾಗಾಗಿ, ಮೌನದ ಜಾಗವನ್ನು ಹಿನ್ನೆಲೆ ಸಂಗೀತದ ಮೂಲಕ ತುಂಬಬೇಕು.

* ಬೆಕ್ಕು ಸಿನಿಮಾ ತಂಡದ ಪ್ರತಿಕ್ರಿಯೆ ಹೇಗಿತ್ತು?
ಬರಗೂರು ಸರ್‌ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಅವರಂತೂ ಮೆಚ್ಚಿದರು. ಸುರೇಶ್‌ ಅರಸು ಇಷ್ಟು ಕಾಲ ಸಂಗೀತ ನಿರ್ದೇಶನಕ್ಕೆ ಯಾಕೆ ಬರದೇ ಇದ್ದಿರಿ ಎಂದರು. ಸಿನಿಮಾ ನಿರ್ಮಾಪಕ ಕುಮಾರ್‌ ಗೋವಿಂದು ಬಹಳ ಮೆಚ್ಚಿದರು. ಒಂದು ದಿನವೂ ರೆಕಾರ್ಡಿಂಗ್‌ ಹೇಗೆ ನಡೆಯುತ್ತಿದೆ ಎಂದು ಬಂದು ನೋಡಲಿಲ್ಲ. ರೆಕಾರ್ಡಿಂಗ್‌ ಮುಗಿದ ಮೇಲೆ ಕೇಳಿದರು. ನಿರ್ದೇಶಕಿಯಾಗಿ ನಮ್ಮ ನಿರೀಕ್ಷೆ ಮೀರಿ ಕೆಲಸ ಮಾಡಿದಿರಿ ಎಂದರು.

*ಸದ್ಯ ನಿಮ್ಮ ಮುಂದಿರುವ ಪ್ರಾಜೆಕ್ಟ್‌ಗಳು ಯಾವುವು?
ನಾಡಗೀತೆಗೆ ವಿಭಿನ್ನವಾಗಿ ರಾಗ ಸಂಯೋಜಿಸುವ ಆಲೋಚನೆ ಇದೆ. ಪಾಶ್ಚಿಮಾತ್ಯ ಶೈಲಿಯಲ್ಲಿ ಸಂಗೀತ ನಿರ್ದೇಶಿಸಲಿದ್ದೇವೆ. ಕನ್ನಡದ 50 ಗಾಯಕರು ಹಾಡಲಿದ್ದಾರೆ. ಅಲ್ಲದೇ ಬೆಂಗಳೂರಿನ ಕಸದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳ ಆಲ್ಬಂ ಮಾಡುತ್ತಿದ್ದೇನೆ. ಜತೆಗೆ ಎರಡು ಸಿನಿಮಾಗಳ ಕತೆ ಕೇಳಿದ್ದೇನೆ. ಯಾವುದೂ ನಿರ್ಧಾರವಾಗಿಲ್ಲ. ಹೆಚ್ಚು ಕಮರ್ಶಿಯಲ್‌ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುವ ಹಂಬಲವಿದೆ.

* ಚಿತ್ರೋದ್ಯಮ ಸಂಗೀತ ನಿರ್ದೇಶಕಿಯನ್ನು ಹೇಗೆ ಸ್ವೀಕರಿಸಿದೆ ಎಂದು ನಿಮಗನ್ನಿಸುತ್ತದೆ?
ಹಲವು ಮಂದಿ ಸಂಗೀತ ನಿರ್ದೇಶಕಿಯರನ್ನು ಖುಷಿಯಿಂದಲೇ ಸ್ವಾಗತಿಸಿದ್ದಾರೆ. ಆದರೆ ಪ್ರಾಜೆಕ್ಟ್‌ ಕೊಡಲು ಬಹಳ ಹಿಂಜರಿಯುತ್ತಾರೆ. ತಮಿಳು, ತೆಲಗು, ಮಲಯಾಳಂ ಯಾವುದೇ ಭಾಷೆಯ ಸಿನಿಮಾ ಇರಲಿ ಸಂಗೀತ ನಿರ್ದೇಶಕಿಯರ ಸಂಖ್ಯೆ ತುಂಬಾ ಕಡಿಮೆ ಇದೆ.

ಅಲ್ಲದೆ ಇಂಗ್ಲಿಷ್‌ ಸಿನಿಮಾಗಳಲ್ಲಿ ಸಂಗೀತ ಹೆಚ್ಚು ಕಂಡುಬರುವುದಿಲ್ಲ. ಭಾರತೀಯ ಸಿನಿಮಾಗಳಲ್ಲಿ ಜನರು ಅಬ್ಬರ ಕೇಳುತ್ತಾರೆ. ಹೀರೋ ಬಂದರೆ, ಫೈಟಿಂಗ್‌ ಸೀನ್‌ ಎಂದಾಕ್ಷಣ ಅದಕ್ಕೆ ತಕ್ಕ ಸಂಗೀತ ಇರಲೇಬೇಕು. ನಮ್ಮಲ್ಲಿ ತುಂಬು ಕುಟುಂಬ, ಭಾವನೆಗಳಿಗೆ ಪ್ರಾಮುಖ್ಯ ಇದೆ. ಎಲ್ಲಕ್ಕೂ ಸಂಗೀತ ಬೇಕು.

*ಮುಂಬರುವ ಸಂಗೀತ ನಿರ್ದೇಶಕಿಯರಿಗೆ ಏನು ಹೇಳುತ್ತೀರಿ?
ಏನಿಲ್ಲ. ಶ್ರದ್ಧೆ, ಬದ್ಧತೆಯಿಂದ ಕೆಲಸ ಮಾಡಿ. ಖಂಡಿತ ಫಲ ಸಿಗಲಿದೆ. ಆರಂಭದಲ್ಲಿ ನೆಲೆ ಕಾಣುವವರೆಗೆ ತುಸು ಹೆಚ್ಚೇ ಶ್ರಮ ವಹಿಸಬೇಕಾಗುತ್ತದೆ. ನನಗೆ ಇಂತಹ ಸನ್ನಿವೇಶದಲ್ಲಿ ಬರಗೂರು ರಾಮಚಂದ್ರಪ್ಪನವರು ಅವಕಾಶ ನೀಡಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು. ಕುಮಾರ್‌ ಗೋವಿಂದು ಅವರ ಬೆಂಬಲ ಮರೆಯುವಂತಿಲ್ಲ. ಗೋಪಿ ಪೀಣ್ಯ ಸಹ ಪೂರ್ಣ ಸಹಕಾರ ನೀಡಿದ್ದಾರೆ.

*ಸಂಗೀತ, ನೃತ್ಯ, ರಾಗ ಸಂಯೋಜನೆ ಎಂದು ಯಾವಾಗಲೂ ಬ್ಯುಸಿಯಾಗಿರುತ್ತೀರಿ. ಮನೆ ಮತ್ತು ಇತರ ಜವಾಬ್ದಾರಿ ನಿಭಾಯಿಸುವುದು ಹೇಗೆ?
ಕಷ್ಟ ಇದೆ. ಅನೇಕ ವಿಚಾರಗಳು ನೋವುಂಟು ಮಾಡುತ್ತವೆ.  ಆದರೆ, ದಾರಿಯಲ್ಲಿ, ಶಾಪಿಂಗ್‌ ಮಾಲ್‌ನಲ್ಲಿ ಸಿಕ್ಕವರು ಯಾರಾದರೂ ‘ಮೇಡಂ ನಿಮ್ಮ ಹಾಡು ಇಷ್ಟವಾಯಿತು, ಚೆನ್ನಾಗಿ ನೃತ್ಯ ಮಾಡಿದಿರಿ’ ಎಂದಾಗ ಆ ನೋವೆಲ್ಲ ಮರೆಯಾಗಿ ಖುಷಿಯಾಗುತ್ತದೆ. ಅಷ್ಟೇ ಸಾಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT