ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಿಂದ ಹೊರಗಿದ್ದಾರೆ 3,215 ಮಕ್ಕಳು

ವಸತಿ ರಹಿತ ಶಾಲೆಯಲ್ಲಿ ಮಕ್ಕಳಿಗೆ ತರಬೇತಿ
Last Updated 25 ಏಪ್ರಿಲ್ 2014, 6:09 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ 7ರಿಂದ 14 ವರ್ಷ ವಯಸ್ಸಿನ 3,215 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಕಳೆದ ನವೆಂ­ಬರ್‌ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ಈ ಅಂಶ ಬೆಳಕಿಗೆ ಬಂದಿದೆ.

ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂಬುದು 2013ರಲ್ಲಿ ನಡೆಸಿದ ಸಮೀಕ್ಷೆ­ಯಿಂದ ಗೊತ್ತಾಗಿದೆ. 2012ರಲ್ಲಿ ಇಂಥ ಮಕ್ಕಳ ಸಂಖ್ಯೆ 1304 ಆಗಿತ್ತು. 2013ರಲ್ಲಿ ಅದು 3,215ಕ್ಕೆ ಏರಿದೆ. ಈ ಮಕ್ಕ­ಳನ್ನು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಸೇರಿಸಲು ಇಲಾಖೆ ನಿರ್ಧರಿಸಿದೆ.

ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇಂಥ ಮಕ್ಕಳು ಇರುವುದು ರೋಣ ತಾಲ್ಲೂಕಿನಲ್ಲಿ. ಇಲ್ಲಿ 833 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ನಂತರ ಸ್ಥಾನದಲ್ಲಿ ಶಿರಹಟ್ಟಿ (706), ಮುಂಡರಗಿ (645), ಗದಗ ಗ್ರಾಮೀಣ (478), ಗದಗ ಶಹರ (374), ನರಗುಂದ (129) ತಾಲ್ಲೂಕುಗಳಿವೆ.

ಶಾಲೆಯಿಂದ ಹೊರಗುಳಿದಿರುವ ಒಟ್ಟು 1,304 ಮಕ್ಕ­ಳನ್ನು 2012ರ ಸಮೀಕ್ಷೆಯಲ್ಲಿ ಗುರುತಿಸಲಾಗಿತ್ತು. ಈ ಪೈಕಿ ಬಹುತೇಕ ಎಲ್ಲ ಮಕ್ಕಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ ಸೇರಿಸಲಾಗಿದೆ. ಕಳೆದ ನವೆಂಬರ್‌ನಲ್ಲಿ ಕೈಗೊಂಡ ಸಮೀಕ್ಷೆ­ಯಲ್ಲಿ ಗುರುತಿಸಿರುವ ಮಕ್ಕಳನ್ನು ಮುಂಬರುವ ಶೈಕ್ಷಣಿಕ ಸಾಲಿ­ನಲ್ಲಿ ಶಾಲೆಗೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ.
ಇಲಾಖೆ ಗುರುತಿಸಿರುವ ಒಟ್ಟು 3,215 ಮಕ್ಕಳ ಪೈಕಿ  2,313 ಮಕ್ಕಳನ್ನು ಈಗಾಗಲೇ ಮೂರು ತಿಂಗಳ ವಸತಿ ರಹಿತ ವಿಶೇಷ ಶಾಲೆಗೆ ದಾಖಲು ಮಾಡಲಾಗಿದೆ. ಉಳಿದ 902 ಮಕ್ಕಳನ್ನು ಜೂನ್‌ ತಿಂಗಳಿನಲ್ಲಿ ಎರಡು ಕಸ್ತೂರಬಾ ಶಾಲೆಗೆ ದಾಖಲು ಮಾಡಲಾಗುತ್ತದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸಾರ್ವ­ಜ­ನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಯೋಜನಾ ಸಮ­ನ್ವ­ಯಾ­­ಧಿಕಾರಿ ಜಿ.ಎಲ್‌.ಬಾರಟಾಕೆ, ‘ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗೆ ಜನರು ದೂರದ ಊರಿಗೆ ಹೋಗು­ತ್ತಾರೆ.

ಹೆಚ್ಚಾಗಿ ಗೋವಾ, ಚಿಕಮಗಳೂರು, ಮಂಗಳೂರಿಗೆ ಕೂಲಿ­­ಗಾಗಿ ಹೋಗಿದ್ದಾರೆ. ಅವರೊಂದಿಗೆ ಮಕ್ಕಳನ್ನು ಕರೆದು­ಕೊಂಡು ಹೋಗುವುದಿರಿಂದ ಶಾಲೆಯಿಂದ ಹೊರ­ಗುಳಿ­ದಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಶಾಲೆಯಿಂದ ಹೊರಗೆ ಇರುವವರಲ್ಲಿ ಆರು ಮತ್ತು ಏಳನೇ ತರಗತಿ ಮಕ್ಕಳೇ ಹೆಚ್ಚು. ಶಾಲೆಯಲ್ಲಿ ಹೆಸರು ನೋಂದಾಯಿಸಿರುತ್ತಾರೆ, ಆದರೆ ತರಗತಿಗೆ ಹಾಜರಾಗುವುದಿಲ್ಲ’ ಎಂದು ತಿಳಿಸಿದರು.

‘ಹೊರಗಿನಿಂದ ರೈಲ್ವೆ ಕೆಲಸಕ್ಕೆ ಬಂದಿರುವ ಕುಟುಂಬಗಳು ಹಾಗೂ ಕುರಿಗಾರರ ಜತೆ ಮಕ್ಕಳು ಇಲ್ಲಿಗೆ ಬಂದಿರುತ್ತಾರೆ. ಆದರೆ ಅವರು ತಿಂಗಳುಗಟ್ಟಲೆ ಇರುವುದಿಲ್ಲ. ತಿಂಗಳಿಗೂ ಮೇಲ್ಪಟ್ಟು ಇದ್ದರೆ ಆ ಮಕ್ಕಳಿಗೆ ಟೆಂಟ್‌ ಶಾಲೆ ತೆರೆಯಲಾಗುವುದು’ ಎಂದು ಅವರು ವಿವರಿಸಿದರು.

ನವೆಂಬರ್‌ 6, 7 ಮತ್ತು 13ರಿಂದ 17ರವರೆಗೆ ಜಿಲೆಯಾದ್ಯಂತ ಏಕಕಾಲಕ್ಕೆ 612 ತಂಡಗಳು ಸಮೀಕ್ಷೆ ನಡೆಸಿವೆ. ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಎರಡು ತಂಡಗಳಾಗಿ ವಿಭಾಗ ಮಾಡಲಾಗಿತ್ತು. ಮೊದಲ ತಂಡದಲ್ಲಿ ಇಬ್ಬರು ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ ಮತ್ತು ಸ್ವಯಂ ಸೇವಾ ಪ್ರತಿನಿಧಿ. ಮೊತ್ತೊಂದು ತಂಡದ ಸದಸ್ಯರು ಮೊದಲ ತಂಡಕ್ಕೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.  ಏಳು ದಿನಗಳ ಸಮೀಕ್ಷೆ ನಡೆಸಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ.

ಹೊರಗುಳಿದ ಮಕ್ಕಳು
ಗದಗ ಶಹರ   374
ಗದಗ ಗ್ರಾಮೀಣ  478
ಮುಂಡರಗಿ  645
ನರಗುಂದ  179
ರೋಣ   833
ಶಿರಹಟ್ಟಿ   706
ಒಟ್ಟು   3,215

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT