ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಸ್ಥಳಾಂತರ ಖಂಡಿಸಿ ಬಂದ್‌

Last Updated 29 ಆಗಸ್ಟ್ 2015, 7:02 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದಲ್ಲಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸಿರವಾರಕ್ಕೆ ಸ್ಥಳಾಂತರ ಮಾಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಕವಿತಾಳ ಬಂದ್‌ ಬಹುತೇಕ ಯಶಸ್ವಿಯಾಗಿದೆ.

ಇಲ್ಲಿನ ಮುಖ್ಯ ರಸ್ತೆ ಮತ್ತು ಬಜಾರ್‌ ಸೇರಿದಂತೆ ಎಲ್ಲೆಡೆ ಅಂಗಡಿ, ಹೋಟೆಲ್‌ ಮತ್ತು ಪೆಟ್ರೋಲ್‌ ಬಂಕ್‌ಗಳನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಮುಚ್ಚಿದ್ದರು. ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಔಷಧ ಅಂಗಡಿಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿತ್ತು. ಬಸ್‌ ಸಂಚಾರ ಎಂದಿನಂತೆ ಇತ್ತು.

ಆರ್‌ವೈಎಫ್‌ಐ, ಎಂಆರ್‌ಎಚ್‌ಎಸ್‌, ಕರವೇ ಮತ್ತು ಎಸ್‌ಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಆನ್ವರಿ ಕ್ರಾಸ್‌ ಹತ್ತಿರ ಸಭೆ ಸೇರಿ ಶಾಲೆ ಸ್ಥಳಾಂತರಕ್ಕೆ ಶಿಫಾರಸು ಪತ್ರ ನೀಡಿರುವ ಶಾಸಕ ಜಿ.ಹಂಪಯ್ಯ ನಾಯಕ ಧೋರಣೆಯನ್ನು ಖಂಡಿಸಿದರು. ಪ್ರತಿಭಟನಾಕಾರರು ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಅಭಿವೃದ್ಧಿಯನ್ನು ಕಡೆಗಣಿಸಿರುವ ಶಾಸಕ ಜಿ.ಹಂಪಯ್ಯ ನಾಯಕ ಅವರು ಇಲ್ಲಿನ ವಸತಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಕವಿತಾಳ ಜನತೆಗೆ ದ್ರೋಹ ಬಗೆದಿದ್ದಾರೆ. ಹೋರಾಟ ಮನೋಭಾವ ಕೊರತೆಯಿಂದ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರ್‌ವೈಎಫ್‌ಐ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಸವರಾಜ ಆರೋಪಿಸಿದರು.

ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ಪ್ರಜಾಪ್ರಭುತ್ವದ ಮಹತ್ವವನ್ನು ಮರೆತು ಕಾನೂನು ಬಾಹಿರವಾದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಬಿ.ಎ.ಕರೀಂಸಾಬ್‌, ಭೀರಪ್ಪ ದಿನ್ನಿ, ಅರಳಪ್ಪ, ಫ್ರಾಂಚ್‌, ಬಾಬು ಬಸಾಪುರ, ಕರಿಯಪ್ಪ ಬಾಂಡೆ, ಸಣ್ಣಯ್ಯ, ಮಾರ್ಕಂಡಯ್ಯ, ಶಿವರಾಜ ಮ್ಯಾಗಳಮನಿ, ರುಕ್ಮುದ್ಧೀನ್‌, ಹುಲುಗಪ್ಪ ಯಕ್ಲಾಸ್ಪುರ, ರಫಿ ಒಂಟಿಬಂಡಿ, ಬಸವರಾಜ ಬಾಗಲವಾಡ, ಆದಿ ನಗನೂರು ಮತ್ತು ಶಾಲಂಪಾಶಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT