ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಶಿಕ್ಷಣಕ್ಕೆ ಸವಾಲು

Last Updated 23 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ಯಾವುದೇ ರಾಷ್ಟ್ರದ ಗುಣಮಟ್ಟ ಅಲ್ಲಿನ ಪ್ರಜೆಗಳ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಪ್ರಜೆಗಳ ಗುಣಮಟ್ಟವು ಆ ದೇಶದ ಶಿಕ್ಷಣದ ಗುಣಮಟ್ಟವನ್ನು  ಹಾಗೂ ಶಿಕ್ಷಣದ ಗುಣಮಟ್ಟವು ಅಲ್ಲಿಯ ಶಿಕ್ಷಕರ ಗುಣಮಟ್ಟವನ್ನು ಅವಲಂಬಿಸಿರುತ್ತದೆ’– ಅಮೆರಿಕದ ಶಿಕ್ಷಕರ ಶಿಕ್ಷಣ ಆಯೋಗದ ಈ ಮಾತು, ಶಿಕ್ಷಕರ ಶಿಕ್ಷಣದ ಗುಣಮಟ್ಟಕ್ಕೆ ಇರುವ ಪ್ರಾಮುಖ್ಯವನ್್ನು ತಿಳಿಸುತ್ತದೆ. ಇಂಥದ್ದೇ ಅಭಿಪ್ರಾಯವನ್ನು ಕೊಠಾರಿ ಶಿಕ್ಷಣ ಆಯೋಗವೂ (1964) ವ್ಯಕ್ತಪಡಿಸಿದೆ.

ಶಿಕ್ಷಣ ಕ್ಷೇತ್ರ ಸತ್ವಶಾಲಿ ಆಗುವುದು ಗುಣಮಟ್ಟದ ಶಿಕ್ಷಕರಿಂದ ಮಾತ್ರ. ಅಂತಹ ಶಿಕ್ಷಕರನ್ನು ನಿರ್ಮಿಸಬೇಕಾದರೆ ಅತ್ಯುತ್ತಮವಾದ ಶಿಕ್ಷಕರ ಶಿಕ್ಷಣ ವ್ಯವಸ್ಥೆ ಇರಬೇಕು. ಅದು ಶಿಕ್ಷಕರಲ್ಲಿ ಬೋಧನಾ ಕೌಶಲ, ಕಲಿಕಾ-ಬೋಧನಾ ಕ್ರಮದ ಸಿದ್ಧಾಂತ ಹಾಗೂ ವೃತ್ತಿಪರ ಕೌಶಲ ವೃದ್ಧಿಯ ನಡುವೆ ಕೇಂದ್ರೀಕೃತವಾಗಿದೆ. ಶಿಕ್ಷಕರ ಶಿಕ್ಷಣವು ಚಲನಶೀಲವಾದ ಮತ್ತು ನಿರಂತರವಾಗಿ ವಿಕಸನಗೊಳ್ಳುವ ಕ್ಷೇತ್ರ. ಅದು ಸೇವಾಪೂರ್ವ ಶಿಕ್ಷಕರ ಶಿಕ್ಷಣ ಹಾಗೂ ಸೇವಾನಿರತ ಶಿಕ್ಷಕರ ಶಿಕ್ಷಣ ಎಂಬ ಎರಡು ಪ್ರಮುಖ ಭಾಗಗಳನ್ನು ಹೊಂದಿದೆ. ಇವೆರಡೂ ಪೂರಕವಾಗಿ ಕಾರ್ಯ ನಿರ್ವಹಿಸಿದರಷ್ಟೇ ಉತ್ತಮ ಪರಿಣಾಮ ಸಾಧ್ಯ. ಇವುಗಳ ಜೊತೆಗೆ ಶಿಕ್ಷಕರಿಗೆ ನೀಡುವ ಆರಂಭಿಕ ತರಬೇತಿಯೂ ಬಹು ಮುಖ್ಯ. ‘ಶಿಕ್ಷಕರು ಹುಟ್ಟಿನಿಂದಲೇ ಶಿಕ್ಷಕರಾಗಿರುವುದಿಲ್ಲ. ಯಾವುದೇ ವ್ಯಕ್ತಿಗೆ ಅಗತ್ಯ ತರಬೇತಿ ನೀಡಿ, ಉತ್ತಮ ಶಿಕ್ಷಕನನ್ನಾಗಿ ರೂಪಿಸಲು ಸಾಧ್ಯ’ ಎಂಬ ತಾತ್ವಿಕ ನೆಲೆಗಟ್ಟಿನ ಮೇಲೆ ಶಿಕ್ಷಕರ ಶಿಕ್ಷಣ ಕಾರ್ಯ ನಿರ್ವಹಿಸುತ್ತದೆ.

ಮಕ್ಕಳು ತಮ್ಮ ಬದುಕಿನ  ಮೊದಲ ಪಾಠಗಳನ್ನು ಕಲಿಯುವುದು ತರಗತಿ ಕೋಣೆಯಲ್ಲಿ. ಹೀಗಾಗಿ ಶಿಕ್ಷಕರ ಮೇಲೆ ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಹೊಣೆ ಇರುತ್ತದೆ. ಉತ್ತಮ ಶಿಕ್ಷಕರಿಲ್ಲದೇ ಹೋದಲ್ಲಿ ಶಾಲೆಯ ಭವ್ಯ ಕಟ್ಟಡಕ್ಕಾಗಲಿ ಅಥವಾ ಅಲ್ಲಿನ ಮೂಲ ಸೌಕರ್ಯಗಳಿಗಾಗಲಿ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಲು ಸಾಧ್ಯವಿಲ್ಲ. ಶಿಕ್ಷಕರ ಶಿಕ್ಷಣವು ತಮ್ಮ ವೃತ್ತಿಗೆ ಅಗತ್ಯವಾದ ಜ್ಞಾನ ಹಾಗೂ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಶಿಕ್ಷಕರಿಗೆ ನೆರವಾಗುತ್ತದೆ ಎಂಬ ಅಂಶ ಸಂಶೋಧನೆಯಿಂದ ತಿಳಿದು ಬಂದಿದೆ. ಯಾವುದೇ ಶಾಲೆಯು ಗುಣಮಟ್ಟದ ಶಿಕ್ಷಕರನ್ನು ಹೊಂದಿದ್ದರೆ ಪರಿಣಾಮಕಾರಿ ಶಾಲೆಯಾಗಿ ಮಾರ್ಪಡುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಪರಿಣಾಮಕಾರಿ ಶಾಲೆಯೆಂದರೆ ಯಾವುದು ಎಂಬ ಪ್ರಶ್ನೆ ಮೂಡುತ್ತದೆ.

ಶಾಲೆಯು ಮಕ್ಕಳಿಗೆ ಸುರಕ್ಷಿತ, ಆಪ್ತವಾಗಿದ್ದು, ಎಲ್ಲ ಮಕ್ಕಳನ್ನೂ ಸಮಾನ ಹಾಗೂ ಗೌರವದಿಂದ ಕಾಣುವುದು ಪರಿಣಾಮಕಾರಿ ಶಾಲೆಯ ಮೊದಲ ಲಕ್ಷಣ ಎನ್ನಬಹುದು. ಮಕ್ಕಳ ಕಲಿಕೆಗೆ ಒತ್ತಡ ಹೇರದೆ ಅವರದೇ ವೇಗದಲ್ಲಿ ಕಲಿಯುವಂತೆ ಮಾಡುವುದು, ಪರಿಣಾಮಕಾರಿ ಮೌಲ್ಯಮಾಪನ, ನಿರಂತರ ಮೇಲುಸ್ತುವಾರಿಯ ಬೋಧನಾ- ಕಲಿಕಾ ವ್ಯವಸ್ಥೆ, ಬಲವಾದ ಶಾಲಾ ನಾಯಕತ್ವ, ಪೋಷಕರು ಹಾಗೂ ಸಮುದಾಯದ ಗರಿಷ್ಠ ಭಾಗವಹಿಸುವಿಕೆ, ಕಂಪ್ಯೂಟರ್ ಆಧಾರಿತ ಕಲಿಕೆಗಳನ್ನು ಹೊಂದಿರುವುದೂ ಪರಿಣಾಮಕಾರಿ ಶಾಲೆಯ ಲಕ್ಷಣಗಳಾಗಿವೆ.

ಮಕ್ಕಳ ಮನಸ್ಥಿತಿಯನ್ನು ಅವರ ಕೌಟುಂಬಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಅರ್ಥೈಸಿಕೊಂಡು, ಪ್ರತಿ ಮಗುವನ್ನೂ ವಿಭಿನ್ನ ಮತ್ತು ವಿಶಿಷ್ಟ ಎಂಬ ಮನೋಧೋರಣೆಯಿಂದ ನಿರಂತರ ಕಲಿಕೆಯಲ್ಲಿ ಸಹಭಾಗಿಯನ್ನಾಗಿ ಮಾಡಬೇಕು. ಜೊತೆಗೆ ತಾನು ಸಹ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರನ್ನು ಹೊಂದಿರುವುದೇ ಪರಿಣಾಮಕಾರಿ ಶಾಲೆಯ ಬಹು ಮುಖ್ಯ ಅಂಶ.

ಮಕ್ಕಳು ಉತ್ತಮವಾಗಿ ಕಲಿತೇ ಕಲಿಯುತ್ತಾರೆಂಬ ಆಶಾಭಾವನೆ ಶಿಕ್ಷಕರಲ್ಲಿದ್ದರೆ ಅದು ಉತ್ತಮ ಕಲಿಕೆಗೆ ನೆರವಾಗುತ್ತದೆ. ಇದಕ್ಕೆ ಬದಲಾಗಿ, ತನ್ನ  ವಿದ್ಯಾರ್ಥಿಗಳು ಬುದ್ಧಿವಂತರಲ್ಲ, ಅವರು ಉತ್ತಮವಾಗಿ ಕಲಿಯುವಂತೆ ಮಾಡುವುದು ಕಠಿಣ ಎಂಬ ಮನೋಧೋರಣೆ ಶಿಕ್ಷಕರಿಗೆ ಇದ್ದಲ್ಲಿ, ಆ ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆ ಅಸಾಧ್ಯ ಎಂಬುದು ಸಂಶೋಧನೆಗಳ ಸಾರ.

ಪರಿಣಾಮಕಾರಿ ಶಿಕ್ಷಕರ ಶಿಕ್ಷಣ ವ್ಯವಸ್ಥೆಗಾಗಿ ಕೆಳಗಿನ ಸುಧಾರಣೆಗಳನ್ನು ಕೈಗೊಳ್ಳಬಹುದು:
ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ಶಿಕ್ಷಕರ ಶಿಕ್ಷಣ ವ್ಯವಸ್ಥೆಯನ್ನೇ ಸಮಗ್ರವಾಗಿ ಪರಿಷ್ಕರಿಸಬೇಕು. ಅದಕ್ಕಾಗಿ ತಳಮಟ್ಟದಿಂದ ಮೇಲ್ಮಟ್ಟದವರೆಗಿನ ಭಾಗೀದಾರರು, ತಜ್ಞರ ಸಲಹೆ– ಅಭಿಪ್ರಾಯ ಪಡೆದು ಬದಲಾವಣೆ ಪ್ರಕ್ರಿಯೆಗೆ ಚಾಲನೆ ನೀಡಬಹುದು.
ಶಿಕ್ಷಕರ ಶಿಕ್ಷಣ ಕಾಲೇಜುಗಳಿಗೆ ಅನುದಾನ ಹೆಚ್ಚಿಸಿದರೆ ಶಿಕ್ಷಕರ ಶಿಕ್ಷಣಕ್ಕೆ ಬಲ ತುಂಬಿದಂತಾಗುತ್ತದೆ. ಶಿಕ್ಷಕರ ಶಿಕ್ಷಣ ಕಾಲೇಜುಗಳು ಯೋಜನಾಬದ್ಧವಾಗಿ ಬೆಳೆಯುವಂತೆ  ನೋಡಿಕೊಳ್ಳಬೇಕು. ಕಾಲೇಜುಗಳ ಸಂಖ್ಯೆ ಮಿತಿಮೀರಿದರೆ ಗುಣಮಟ್ಟ ಕುಸಿಯಬಹುದು. ಈಗಾಗಲೇ ಅಂತಹ ಸನ್ನಿವೇಶ ಸೃಷ್ಟಿಯಾಗಿದ್ದು, ಎಚ್ಚರ ವಹಿಸಬೇಕಿದೆ.

ಶಿಕ್ಷಕರ ಶಿಕ್ಷಣ ಕಾಲೇಜುಗಳು ಸರ್ವ ಶಿಕ್ಷಣ ಅಭಿಯಾನದ ವಿವಿಧ ಹಂತದ ಸಂಸ್ಥೆಗಳಾದ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿ.ಆರ್.ಸಿ), ಕ್ಲಸ್ಟರ್ ಸಂಪನ್ಮೂಲ ಕೇಂದ್ರ (ಸಿ.ಆರ್.ಸಿ), ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಶಿಕ್ಷಕರ ಶಿಕ್ಷಣ ಕಾಲೇಜು (ಸಿ.ಟಿ.ಇ), ಡಿ.ಎಸ್.ಇ.ಆರ್.ಟಿ, ವಿಶ್ವವಿದ್ಯಾಲಯಗಳು, ಶಿಕ್ಷಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸ್ವಯಂಸೇವಾ ಸಂಸ್ಥೆಗಳ ಜೊತೆ ಉತ್ತಮ ಸಂಪರ್ಕ  ಹೊಂದಿರಬೇಕು.

ಮಕ್ಕಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕಲಿಸಬೇಕಾದರೆ, ಕಲಿಸುವ ವಿಷಯದಲ್ಲಷ್ಟೇ ಶಿಕ್ಷಕರಿಗೆ ಪ್ರಭುತ್ವ ಇದ್ದರೆ ಸಾಲದು. ವೃತ್ತಿಗೆ ಅಗತ್ಯವಾದ ಬದ್ಧತೆ, ಮೌಲ್ಯಗಳು, ತೀವ್ರಾಸಕ್ತಿ ಇರಬೇಕು.

ಶಿಕ್ಷಕರಲ್ಲಿ ಇರಬಹುದಾದ ಪೂರ್ವಗ್ರಹಗಳನ್ನು ತೊಡೆದುಹಾಕುವುದು ಸಹ ಸವಾಲಿನ ಕಾರ್ಯ. ಇಂತಹ ಜಾತಿ ಅಥವಾ ಧರ್ಮಕ್ಕೆ ಸೇರಿದ ಮಕ್ಕಳು ಕಲಿಯಲಾರರು, ಕೊಳೆಗೇರಿಗಳ ಮಕ್ಕಳ ಬುದ್ಧಿಶಕ್ತಿ ಇಷ್ಟೇ ಎಂಬಂತಹ ಮನೋಭಾವ ಎಲ್ಲ ಮಕ್ಕಳಿಗೂ ಪರಿಣಾಮಕಾರಿಯಾಗಿ ಕಲಿಸಲು ಅಡ್ಡಿಯುಂಟು ಮಾಡುತ್ತದೆ. ಶಿಕ್ಷಕರಲ್ಲಿನ ಈ ಬಗೆಯ ನಂಬಿಕೆಗಳನ್ನು ತೊಡೆದು ಹಾಕಲು ಶಿಕ್ಷಕರ ಶಿಕ್ಷಣ ವ್ಯವಸ್ಥೆ ಸಜ್ಜಾಗಬೇಕಿದೆ. ಇಲ್ಲದಿದ್ದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಕಲಿಕೆಯ ಮುಖ್ಯವಾಹಿನಿಯಿಂದ ದೂರ ಉಳಿಯುತ್ತಾರೆ. 

ಮೇಲಿನ ಅಂಶಗಳ ಜೊತೆಗೆ, ಶಿಕ್ಷಕರ ಶಿಕ್ಷಣ ಸಂಸ್ಥೆಗಳು ಬೋಧನೆ, ಕಲಿಕೆಗೆ ಸಂಬಂಧಿಸಿ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳುವಂತೆ ಮಾಡಬೇಕಿದೆ. ಶಿಕ್ಷಕರು ನಿರಂತರವಾಗಿ ತಮ್ಮ ವೃತ್ತಿ ಸಂಬಂಧಿತ ವಿಷಯಗಳ ಕುರಿತು ಸಂವಹನ ನಡೆಸಲು ವಾಟ್ಸ್ಆ್ಯಪ್, ಫೇಸ್‌ಬುಕ್‌ಗಳ  ಬಳಕೆ, ಶಿಕ್ಷಕರಿಗೆ ಪೋರ್ಟಲ್ ಆರಂಭಿಸುವ ಕುರಿತು ಚಿಂತಿಸಬಹುದು. ಒಟ್ಟಿನಲ್ಲಿ ಮಕ್ಕಳ ಸಮಗ್ರ ವ್ಯಕ್ತಿತ್ವದ ವಿಕಾಸಕ್ಕಾಗಿ ಸದಾ ತುಡಿಯುವ ಶಿಕ್ಷಕರು ಹಾಗೂ ಪರಿಣಾಮಕಾರಿ ಶಾಲೆಗಳ ನಿರ್ಮಾಣಕ್ಕಾಗಿ ಶಿಕ್ಷಕರ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಗೆ ಚಾಲನೆ ನೀಡಬೇಕಿದೆ.
(ಲೇಖಕ ಸರ್ವ ಶಿಕ್ಷಣ ಅಭಿಯಾನದ ಸಹಾಯಕ ಕಾರ್ಯಕ್ರಮ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT