ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕಿಯ ಸಾಧನೆಯ ಗಾಥೆ...

ಶಿಕ್ಷಕರ ದಿನ ವಿಶೇಷ
Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳಿಗೆ ಪಾಠ ಮಾಡುವ ಜೊತೆಗೆ ತಮ್ಮ ಇಷ್ಟದ ರಂಗವಾದ ಕ್ರೀಡೆಯಲ್ಲೂ ಸಾಧನೆ ಮಾಡಿದವರು ತ್ರಿವೇಣಿ ಹೆಗಡೆ. ಶಿಕ್ಷಕರ ದಿನದ ನೆಪದಲ್ಲಿ ಅವರ ಸಾಧನೆಯ ಪರಿಚಯ ಇಲ್ಲಿದೆ.

ವೃತ್ತಿಯಲ್ಲಿ ಶಿಕ್ಷಕಿಯಾದರೂ ನನ್ನ ಆಸಕ್ತಿ ಇದ್ದಿದ್ದು ಕ್ರೀಡಾರಂಗದಲ್ಲಿ. ಕ್ರೀಡೆಯ ಮೇಲೆ ಪ್ರೀತಿ ಅರಳಿದ್ದು ಹೇಗೆ ಎನ್ನುವುದರ ಬಗ್ಗೆ ಕೊಂಚ ಹೇಳಿಬಿಡುತ್ತೇನೆ.

ಅದು ಬಾಲ್ಯದ ದಿನಗಳಿಂದಲೇ ನನ್ನೊಂದಿಗೆ ಬೆಳೆದುಬಂದ ಆಸೆ. ಪ್ರಬಂಧ, ಕ್ರೀಡೆ, ಭಾಷಣ ಹೀಗೆ ಪ್ರತಿ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಬೇಕೆನ್ನುವ ಕನಸು. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಬೇಕು ಎನ್ನುವ ಗುರಿಯಿತ್ತು. ನನ್ನೆಲ್ಲಾ ಆಸೆ, ಕನಸುಗಳಿಗೆ ಅಮ್ಮನ ಬೆಂಬಲ ಇದ್ದೇ ಇರುತ್ತಿತ್ತು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಾಕುಳಿ ನಮ್ಮೂರು. ಸಂತೇಗುಳಿಯ ಪ್ರಾಥಮಿಕ ಶಾಲೆಯಲ್ಲಿ ಓದಿದೆ. ಅಲ್ಲಿ ಕ್ರೀಡೆಗೆ ತುಂಬಾ ಬೆಂಬಲ ಲಭಿಸುತ್ತಿತ್ತು. ಆದ್ದರಿಂದ ಆರನೇ ತರಗತಿಯಿಂದಲೇ ಕ್ರೀಡೆಗಳಲ್ಲಿ ಭಾಗವಹಿಸಲು ಸಾಧ್ಯವಾಯಿತು. ನನಗೆ ಮೊದಲು ಆಸಕ್ತಿ ಇದ್ದದ್ದು 100 ಮತ್ತು 200 ಮೀಟರ್‌್್ಸ ಓಟದ ಸ್ಪರ್ಧೆಗಳಲ್ಲಿ.

ಮುಂದಿನ ದಿನಗಳಲ್ಲಿ ಈ ಸ್ಪರ್ಧೆಗಳ ಜೊತೆಗೆ 4x100 ಮತ್ತು 4x400 ಮೀಟರ್ಸ್‌ ರಿಲೇಯಲ್ಲೂ ಆಸಕ್ತಿ ಬೆಳೆಸಿಕೊಂಡೆ. ಪಿಯುಸಿಯಲ್ಲಿ ಇದ್ದಾಗ ಪ್ರಬಂಧ, ಕ್ರೀಡೆ ಎರಡರಲ್ಲೂ ಪ್ರಶಸ್ತಿ ಲಭಿಸಿತ್ತು. ಆದ್ದರಿಂದ ‘ಆಲ್‌ರೌಂಡರ್‌’ ಎನ್ನುವ ಗೌರವ ಸಿಕ್ಕಿತ್ತು. ಹೀಗಾಗಿ ಪದವಿ ಹಾಗೂ ಡಿಇಡಿ ಮಾಡುವಾಗ ಹೆಚ್ಚು ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಆಸಕ್ತಿ ಬಂತು. ಶಿಕ್ಷಕಿಯಾದ ಮೇಲೂ ಇದೇ ಆಸಕ್ತಿ ಮುಂದುವರಿಯಿತು. ಆಗಾಗ ಅಮ್ಮ ಹೇಳುತ್ತಿದ್ದ ಮಾತುಗಳೂ ಸ್ಫೂರ್ತಿಯಾದವು.

ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಇರಬೇಕು. ಓದು ನಿಮ್ಮ ಬದುಕು ರೂಪಿಸಿದರೆ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ವ್ಯಕ್ತಿತ್ವ ರೂಪಿಸುತ್ತದೆ ಎಂದು ಅಮ್ಮ ಹೇಳುತ್ತಿದ್ದರು. ಕುಮಟಾದಲ್ಲಿ ಡಿ.ಇಡಿ. ಓದುತ್ತಿರುವಾಗ ರಾಜ್ಯ ಮಟ್ಟದ ಕ್ರೀಡಾಕೂಟದ 100 ಮತ್ತು 200 ಮೀಟರ್‌್ಸ ಓಟದಲ್ಲಿ ಮೊದಲಿಗಳಾಗಿ ಗುರಿ ಮುಟ್ಟಿದ್ದೆ. ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ ಬಳಿಕವೂ ಕ್ರೀಡೆಯ ಬಗ್ಗೆ ಆಸಕ್ತಿ ಉಳಿಸಿಕೊಳ್ಳಲು ಸಾಧ್ಯವಾಗಿದ್ದಕ್ಕೆ ಅತೀವ ಖುಷಿಯೆನಿಸುತ್ತದೆ.

ಮೂರು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ನನ್ನ ನಾಲ್ಕೂ ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದಿದ್ದೆ. ಅದೇ ವರ್ಷ ಭೋಪಾಲ್‌ನಲ್ಲಿ ಅಖಿಲ ಭಾರತ ನಾಗರಿಕ ಸೇವಾ ಕ್ರೀಡಾಕೂಟ ಜರುಗಿತು. ಅಲ್ಲಿ 4Xx400 ಮೀಟರ್‌್ಸ ರಿಲೇ ಸ್ಪರ್ಧೆಯಲ್ಲಿ ಚಿನ್ನ ಮತ್ತು 100 ಮೀ. ಓಟದಲ್ಲಿ ಕಂಚು ಜಯಿಸಿದ್ದೆ. 2014ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ರಿಲೇ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಲಭಿಸಿತ್ತು.

ಹೀಗೆ ಪ್ರತಿ ಕ್ರೀಡಾಕೂಟದಲ್ಲಿ ಪದಕ ಗೆಲ್ಲುತ್ತಲೇ ಬಂದಿದ್ದರಿಂದ ಅಮ್ಮನ ಹಾಗೂ ಕುಟುಂಬದವರು ಖುಷಿಯೂ ಹೆಚ್ಚಾಯಿತು. ಬೆಂಬಲವೂ ಇಮ್ಮಡಿಗೊಂಡಿತು. ಇದೇ ವರ್ಷ ಮಂಡ್ಯದಲ್ಲಿ ಆಯೋಜನೆಯಾಗಿದ್ದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ನಾಲ್ಕು ಪದಕಗಳನ್ನು ಜಯಿಸಿದ್ದೆ. ಪ್ರತಿ ಪದಕ ಗೆದ್ದಾಗಲೂ ಅಮ್ಮ ಸರಸ್ವತಿ ಹೆಗಡೆ ಬಿಟ್ಟುಬಿಡದೇ ನೆನಪಾಗುತ್ತಾರೆ. ಪ್ರಾಥಮಿಕ ಶಾಲೆಯಲ್ಲಿ ಓದುವಾಗಿನಿಂದಲೂ ಅವರು ನೀಡುತ್ತಿದ್ದ ಪ್ರೋತ್ಸಾಹದಿಂದಾಗಿ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ.

ಈಗಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಾಗ ನನಗೆ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ. ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಇದೆಯಾದರೂ, ಶಿಕ್ಷಕಿಯಾಗದೇ ಹೋಗಿದ್ದರೆ ಇಷ್ಟೆಲ್ಲಾ ಸಾಧನೆ ಮಾಡಲು ಆಗುತ್ತಿರಲಿಲ್ಲವೇನೊ? ಈಗ ಹೊಸಕೋಟೆ ಸಮೀಪದ ಕೋಟೂರಿನಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ.

ನಾನು ಏನೇ ಸಾಧನೆ ಮಾಡಿದರೂ ಹಲವಾರು ಶಿಕ್ಷಕರು ಈ ಸಾಧನೆಗೆ ಕಾರಣರಾಗಿದ್ದರು. ಪ್ರಾಥಮಿಕ ಶಾಲೆಯಿಂದ ಡಿ.ಇಡಿ. ಓದು ಮುಗಿಸುವ ತನಕವೂ ಸಾಕಷ್ಟು ಗುರುಗಳು ಬೆಂಬಲವಾಗಿ ನಿಂತಿದ್ದಾರೆ. ಯಾವುದೇ ಕ್ರೀಡಾಕೂಟವಿರಲಿ, ಪದಕ ಗೆದ್ದು ಬಂದಾಗ ಅಪ್ಪ ಶಿವರಾಮ್‌ ಹೆಗಡೆ ಕೂಡ ತುಂಬಾ ಖುಷಿ ಪಡುತ್ತಿದ್ದರು. ಆದರೆ, ಈಗ ಹಲವಾರು ಪದಕ ಗೆದ್ದಿದ್ದೇನೆ. ಇದನ್ನೆಲ್ಲಾ ನೋಡಲು ಅಪ್ಪ ಇಲ್ಲವಲ್ಲ ಎನ್ನುವ ಬೇಸರ ಯಾವಾಗಲೂ ಕಾಡುತ್ತಲೇ ಇರುತ್ತದೆ.

ಪಿಯುಸಿ ಓದುವಾಗ ಕನ್ನಡ ಅಧ್ಯಾಪಕರಾಗಿದ್ದ  ಆರ್‌.ಟಿ. ಸ್ವಾಮಿ ಸರ್‌, ಡಿಇಎಡ್‌ನ ಗುರುಗಳಾದ ಆರ್‌.ಎಲ್. ಭಟ್‌ ಸರ್‌ ನೀಡಿದ ಬೆಂಬಲವನ್ನು ಯಾವತ್ತಿಗೂ ಮರೆಯಲಾರೆ. ಆದ್ದರಿಂದ ಈಗ ನಾನೂ ಶಿಕ್ಷಕಿಯಾಗಿರುವುದಕ್ಕೆ ಅತೀವ ಸಂತೋಷವೆನಿಸುತ್ತದೆ. ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೊಂದು ದಿನ ದೊಡ್ಡ ಸಾಧನೆ ಮಾಡಿ ‘ನಾನು ನಿಮ್ಮ ವಿದ್ಯಾರ್ಥಿ’ ಎಂದು ಹೆಮ್ಮೆಯಿಂದ ಹೇಳಿದರೆ ಅದಕ್ಕಿಂತ ಖುಷಿಯ ವಿಷಯ ಮತ್ತೇನಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT