ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣವೆಂಬ ಚಕ್ರತೀರ್ಥ

ಎತ್ತ ಸಾಗುತ್ತಿದೆ ಶಿಕ್ಷಣ ವ್ಯವಸ್ಥೆ?
Last Updated 28 ಮೇ 2016, 5:47 IST
ಅಕ್ಷರ ಗಾತ್ರ

ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಏಕಸ್ವಾಮ್ಯ ಕೊನೆಗೊಂಡು ಖಾಸಗಿಯವರನ್ನೂ ಒಳಗೊಳ್ಳುವ ಪ್ರಕ್ರಿಯೆ ಪ್ರಾರಂಭವಾದ ಲಾಗಾಯ್ತಿನಿಂದಲೂ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವಣ ಹೋಲಿಕೆಯ ಸಮರ ಚರ್ಚೆಗೆ ಗ್ರಾಸವಾಗುತ್ತಲೇ ಬಂದಿದೆ.

ಇದೀಗ ‘ಖಾಸಗಿ ಶಿಕ್ಷಣ ಸಂಸ್ಥೆಗಳು ವೇಶ್ಯಾವಾಟಿಕೆ ಕೇಂದ್ರಗಳಿಗಿಂತ ಕಡೆಯಾಗಿವೆ’ ಎಂಬ ಸಚಿವ ಆಂಜನೇಯ ಅವರ ಹೇಳಿಕೆ, ಇದಕ್ಕೆ ಪುಷ್ಟಿ ನೀಡುವಂತಿರುವ ಕೆಲವರ ಪ್ರತಿಕ್ರಿಯೆಗಳು ವಿವಾದದ ಕಿಡಿಯನ್ನು ಹೊತ್ತಿಸಿವೆ. ಹಾಗಿದ್ದರೆ ವಾಸ್ತವ ಏನು?

ನಿಜಕ್ಕೂ ಈ ಸಂಸ್ಥೆಗಳು ಅಷ್ಟೊಂದು ಅಧೋಗತಿಗೆ ಇಳಿದಿವೆಯೇ ಅಥವಾ ಸರ್ಕಾರ ಎಲ್ಲಕ್ಕೂ ಖಾಸಗಿ ಶಾಲೆಗಳನ್ನೇ ಹೊಣೆಯಾಗಿಸಿ ತನ್ನ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುತ್ತಿದೆಯೇ? ಆರ್‌.ಟಿ.ಇ. ಗತಿ ಏನಾಗಿದೆ? ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಇರುವ ತೊಡಕುಗಳು, ಪರಿಹಾರ ಕ್ರಮಗಳೇನು?

ಮಾಧ್ಯಮಗಳಲ್ಲಿ ಮೇಲಿಂದ ಮೇಲೆ ಬರುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಯಾರು ಬೇಕಾದರೂ ಏನನ್ನಾದರೂ ಹೇಳಬಹುದಾದ ಕ್ಷೇತ್ರವೆಂದರೆ ಶಿಕ್ಷಣ ಎನ್ನಿಸುತ್ತದೆ. ಈ ಕ್ಷೇತ್ರ ಬದುಕಿನ ಎಲ್ಲ ಸ್ತರಗಳಿಗೆ ಅವಶ್ಯವಾಗಿರುವುದರಿಂದ ಎಲ್ಲರಿಗೂ ಅದರ ಬಗ್ಗೆ ಚರ್ಚೆ ಮಾಡುವ, ಸಲಹೆ ನೀಡುವ, ಅಭಿಪ್ರಾಯ ತಿಳಿಸುವ ಹಕ್ಕು ಇದೆ ಎನ್ನಬಹುದು.

ಆದರೆ ಕೆಲವು ಮಾತುಗಳು ಹೋರಾಟದ ವೀರಾವೇಶದಿಂದ ಬಂದವುಗಳಾದರೆ ಮತ್ತೆ ಕೆಲವು ರಾಜಕೀಯ ಪ್ರೇರಿತವಾದವು. ಕೆಲವರ ಮಾತುಗಳು ಶಿಕ್ಷಣ ಸಾಗುತ್ತಿರುವ ದಿಕ್ಕನ್ನು ಕಂಡು ನೋವಿನಿಂದ ಹೇಳಿದವುಗಳು, ಮತ್ತೆ ಕೆಲವರ ಮಾತುಗಳು ಕುತೂಹಲದಿಂದ ಹಾಗೂ ಕೆಲವರ ಹೇಳಿಕೆಗಳು ಶಿಕ್ಷಣದ ಬಗ್ಗೆ ಏನನ್ನೂ ತಿಳಿಯದೆ ಅಜ್ಞಾನ ಪ್ರದರ್ಶನಕ್ಕೆ ಒಡ್ಡಿದ ಸಾಕ್ಷಿಗಳಾಗಿ ಬಂದಿವೆ.

ಬಹುಶಃ ಶಿಕ್ಷಣ ವ್ಯವಸ್ಥೆಯ ಬಗ್ಗೆ ಗಟ್ಟಿಯಾಗಿ ತಿಳಿಯದ ಮಹಾಪ್ರಭುಗಳೊಬ್ಬರು ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳನ್ನು ’ವೇಶ್ಯಾವಾಟಿಕೆ ಕೇಂದ್ರಗಳಂತೆ’ ಎಂದು ಅಪ್ಪಣೆ ಕೊಡಿಸಿದರು. ಶಾಲೆಗಳು ವೇಶ್ಯಾವಾಟಿಕೆ ಕೇಂದ್ರಗಳಂತಾದರೆ, ಅಲ್ಲಿಗೆ ಹೋಗುವ ಮಕ್ಕಳು, ಅವರನ್ನು ದಾಖಲಿಸುವ ಪಾಲಕರು ಏನು ಎಂಬ ಚಿಂತನೆ ಹುಂಬ ಮಾತನ್ನಾಡುವಾಗ ಇರುವುದಿಲ್ಲ.

ಶಿಕ್ಷಣ ಈಗ ಸಂಪೂರ್ಣವಾಗಿ ವ್ಯಾಪಾರೀಕರಣವಾಗಿದೆ, ಖಾಸಗಿ ಶಾಲೆಗಳು ಸಮಾಜವನ್ನು ಲೂಟಿ ಮಾಡುತ್ತಿವೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾದದ್ದೇ ಹಣ ಮಾಡಲು, ಸರ್ಕಾರಿ ಶಾಲೆಗಳು ತೀರಾ ಅಪ್ರಯೋಜಕವಾಗಿವೆ,

ಅಲ್ಲಿ ಪಾಠ ಮಾಡುವವರೂ ಇಲ್ಲ ಕೇಳುವವರೂ ಇಲ್ಲ... ಇಂಥ ಹೇಳಿಕೆಗಳನ್ನು ನಾವು ಕೇಳುತ್ತಲೇ ಇದ್ದೇವೆ. ಸ್ವಲ್ಪ ತಾಳ್ಮೆಯಿಂದ, ಅಧ್ಯಯನದಿಂದ ಗಮನಿಸಿದರೆ ಮೇಲಿನ ಹೇಳಿಕೆಗಳು ಸಂಪೂರ್ಣವಾಗಿ ಸತ್ಯವೂ ಅಲ್ಲ, ಅಸತ್ಯವೂ ಅಲ್ಲ ಎಂಬುದು ಹೊಳೆದೀತು.

ಅರವತ್ತರ ದಶಕದವರೆಗೆ ರಾಜ್ಯದಲ್ಲಿ ಬಹುಪಾಲು ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿತ್ತು. ಆದರೆ ಈ ಶಾಲೆಗಳ ಸಂಖ್ಯೆ ಕೆಲವು ಭಾಗಗಳಲ್ಲಿ ತುಂಬ ಕಡಿಮೆಇದ್ದುದರಿಂದ ಆ ಪ್ರದೇಶಗಳು ಶೈಕ್ಷಣಿಕವಾಗಿ ಹಿಂದುಳಿಯತೊಡಗಿದವು.

ಇದನ್ನು ಗಮನಿಸಿದ ಅಲ್ಲಿನ  ಹಿರಿಯರು, ಧರ್ಮಗುರುಗಳು, ಚಿಂತಕರು ಮನೆಮನೆಗಳಿಂದ ಹಣ ಸಂಗ್ರಹಿಸಿ ಶಾಲೆಗಳನ್ನು ಪ್ರಾರಂಭಿಸಿದರು. ಅನೇಕರ ಹಣ, ಶ್ರಮ, ಬುದ್ಧಿಯ ದಾನದಿಂದ ಕಟ್ಟಿದವು ಇಂಥ ಶಾಲೆಗಳು.

ಅವುಗಳಲ್ಲಿ ಕೆಲವು ಇಂದು ಶತಮಾನೋತ್ಸವ ಆಚರಿಸಿಕೊಂಡು ಬಹುದೊಡ್ಡ ವಿದ್ಯಾಸಂಸ್ಥೆಗಳಾಗಿ ನಿಂತಿವೆ. ಆ ಕಾಲದಲ್ಲಿ ಶಿಕ್ಷಣವು ಜ್ಞಾನ ನೀಡುವ ಸತ್ರವಾಗಿತ್ತೇ ವಿನಾ ಹಣ ಗಳಿಕೆಯ ಉದ್ಯೋಗವಾಗಿರಲಿಲ್ಲ.

ಮುಂದೆ ಸರ್ಕಾರ ಖಾಸಗಿ ಶಾಲೆಗಳಿಗೆ ಅನುದಾನ ನೀಡಲು ಪ್ರಾರಂಭಿಸಿದಾಗ ಆಗಿನ ಶಾಲೆಯ ಶಿಕ್ಷಕರಿಗೆ ಹಾಗೂ ಆಡಳಿತ ವರ್ಗದವರಿಗೆ ಉಸಿರಾಡಲು ಆಮ್ಲಜನಕ ದೊರೆತಂತಾಯಿತು. ಖಾಸಗಿ ಶಾಲೆಗಳ ಶಿಕ್ಷಕರ ಸಂಬಳ ಅತ್ಯಂತ ನಿಕೃಷ್ಟವಾಗಿತ್ತು ಮತ್ತು ಅದನ್ನು ಕೊಡುವುದೂ ಆಡಳಿತ ವರ್ಗಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಬಹಳಷ್ಟು ಖಾಸಗಿ ಶಾಲೆಗಳು ಸರ್ಕಾರದ ಮಂತ್ರಿಗಳ,

ಶಾಸಕರ, ಅಧಿಕಾರಿಗಳ ಹಿಂದೆ ಬಿದ್ದು ಅನುದಾನ ಪಡೆದುಕೊಂಡವು. ಆ ಹಂತದಲ್ಲೂ ಭ್ರಷ್ಟಾಚಾರ ತಲೆಎತ್ತಿ ನಿಂತಿತು. ತುಂಬ ಉತ್ಸಾಹದಿಂದ ಅನುದಾನ ಪಡೆದ ಆಡಳಿತ ವರ್ಗದವರಿಗೆ ಅದರ ತೊಂದರೆ ಅರ್ಥವಾಗಲು ಬಹಳ ಸಮಯ ಬೇಕಾಗಲಿಲ್ಲ. ಸಂಸ್ಥೆಯ ಶಿಕ್ಷಕರು ಭದ್ರತೆ ಹೊಂದಿ ನಿರಾಳರಾದರೂ ಆಡಳಿತ ವರ್ಗ ತನ್ನ ಲಗಾಮನ್ನು ಕಳೆದುಕೊಂಡಿತು.

ತಾವೇ ನಿಯಮಿಸಿಕೊಂಡ ಶಿಕ್ಷಕ-ಶಿಕ್ಷಕೇತರರು ತಮ್ಮ ವಿಧೇಯತೆಯನ್ನು ಸರ್ಕಾರಕ್ಕೆ ಬದಲಿಸಿಕೊಂಡದ್ದನ್ನು ಕಂಡಾಗ ಅನುದಾನ ತಮಗೆ ವರವಾಗಲಿಲ್ಲವೆಂಬುದು ಬಹಳಷ್ಟು ಜನರಿಗೆ ಅರಿವಾಯಿತು.

ಕಳೆದ ಐದು ವರ್ಷಗಳಲ್ಲಿ ಹಳ್ಳಿ-ಹಳ್ಳಿಗಳಲ್ಲೂ ಖಾಸಗಿ ಶಾಲೆಗಳು ಬಂದಿವೆ. ಆದರೂ ಪಂಚಾಯ್ತಿ, ಮುನಿಸಿಪಾಲಿಟಿ ಹಾಗೂ ಕಾರ್ಪೊರೇಶನ್‌ಗಳು ಪ್ರತಿಶತ 75ರಷ್ಟು ಶಾಲೆಗಳನ್ನು ನಡೆಸುತ್ತವೆ. ಖಾಸಗಿ ಶಾಲೆಗಳು ಪ್ರತಿಶತ 25ರಷ್ಟಿದ್ದರೂ ಅಲ್ಲಿ ಕಲಿಯುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಪ್ರತಿಶತ 40ರಷ್ಟಿದೆ ಎಂಬುದು ಗಮನಾರ್ಹ.

ಕಳೆದ ದಶಕದಲ್ಲಿ ಒಂದು ವಿಪರ್ಯಾಸ ಕಣ್ಣಿಗೆ ಗೋಚರಿಸುತ್ತದೆ. ಬಿ.ಇಡಿ., ಡಿ.ಇಡಿ.  ಪರೀಕ್ಷೆಗಳಲ್ಲಿ, ಪ್ರವೇಶ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದವರನ್ನೇ ಸರ್ಕಾರ ತನ್ನ ಶಾಲೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತದೆ. ಅವರಿಗೆ ದೊರಕುವ ಸಂಬಳ, ಸವಲತ್ತು, ಭದ್ರತೆ ಬಹುಪಾಲು ಖಾಸಗಿ ಶಾಲೆಗಳ ಶಿಕ್ಷಕರಿಗೆ ದೊರಕಲಾರವು. ಹೆಚ್ಚಿನ ಉತ್ತಮ ಶಿಕ್ಷಕರೆಲ್ಲ ಸರ್ಕಾರಿ ಶಾಲೆಗಳಲ್ಲಿದ್ದಾರೆ.

ಆದರೆ ಉತ್ತಮ ಫಲಿತಾಂಶ ಬಯಸುವ, ಹೆಚ್ಚು ಚುರುಕಾದ ಮಕ್ಕಳು ಖಾಸಗಿ ಶಾಲೆಗಳಲ್ಲಿದ್ದಾರೆ. ಇದೊಂದು ರೀತಿಯ ಧ್ರುವೀಕರಣ. ಇದರ ಅರ್ಥ ಸರ್ಕಾರಿ ಶಾಲೆಯ ಎಲ್ಲ ಶಿಕ್ಷಕರು ಶ್ರೇಷ್ಠರು ಮತ್ತು ವಿದ್ಯಾರ್ಥಿಗಳು ದಡ್ಡರೆಂದಲ್ಲ.

ಅಂತೆಯೇ ಖಾಸಗಿ ಶಾಲೆಯ ಎಲ್ಲ ಮಕ್ಕಳೂ ಬುದ್ಧಿವಂತರು ಹಾಗೂ ಶಿಕ್ಷಕರು ದಡ್ಡರು ಎಂತಲ್ಲ. ಆದರೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಳ್ಳೆಯ ಶಿಕ್ಷಕರನ್ನು ಪಡೆದ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಪ್ರಗತಿ ತೃಪ್ತಿದಾಯಕವಾಗಿಲ್ಲ.

ಯಾಕೆ ಹೀಗೆ? ಕೆಲವರ ವಿಶ್ಲೇಷಣೆಯಂತೆ ಸರ್ಕಾರಿ ನೌಕರಿ ನೀಡುವ ಭದ್ರತೆ ಬದುಕಿಗೆ ಅವಶ್ಯ. ಆದರೆ ಅತಿಯಾದ ಭದ್ರತೆ ಆಲಸ್ಯವನ್ನು ತರುತ್ತದೆ, ಹೊಸ ಪ್ರಯತ್ನದ, ಆವಿಷ್ಕಾರದತ್ತ ಸತತ ಪ್ರಯತ್ನದ ಮೊಳಕೆಯನ್ನು ಬೆಳೆಯದಂತೆ ಮಾಡುತ್ತದೆ.

ಹೆಚ್ಚಿನ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರಿ ಶಾಲೆಯ ಶಿಕ್ಷಕರ ಸಂಬಳ, ಭದ್ರತೆ ಇಲ್ಲ. ಆದರೆ ಇದು ತಮ್ಮ ಶಾಲೆ, ಅದನ್ನು ಬೆಳೆಸಲೇಬೇಕು ಎಂದು ಹಟ ತೊಟ್ಟು ಕುಳಿತ ಆಡಳಿತ ವರ್ಗ ಚುರುಕನ್ನು ತರುತ್ತದೆ.

ಇದೇ ವೇಳೆ, ಖಾಸಗಿ ಶಾಲೆಗಳ ಮೇಲೆ ಈಗ ಬರುತ್ತಿರುವ ಆಪಾದನೆಗಳೆಲ್ಲ ಸುಳ್ಳು ಎಂದಲ್ಲ. ಪ್ರತಿ ವ್ಯವಸ್ಥೆಯಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಸೇರಿಕೊಂಡಿರುತ್ತವೆ. ಪ್ರಪಂಚದ ಯಾವುದೇ ದೇಶದ ಉತ್ತಮ ಶಾಲೆಗಳಿಗೆ ಸರಿದೂಗುವಂಥ ಶಾಲೆಗಳೂ ನಮ್ಮಲ್ಲಿವೆ, ಅಂತೆಯೇ ವಿದ್ಯೆಯನ್ನು ಮಾರಾಟಕ್ಕೆ ಇಟ್ಟಿರುವ ಅಂಗಡಿಗಳಂಥ ಶಾಲೆಗಳೂ ಇವೆ.

ಈ ದಿನಗಳಲ್ಲಿ ಶಾಲೆ ಪ್ರಾರಂಭಿಸುವುದು ಸುಲಭದ ವಿಚಾರವಲ್ಲ. ಕಟ್ಟಡ ಚೆನ್ನಾಗಿರದಿದ್ದರೆ ಯಾರೂ ದಾಖಲಾತಿ ಮಾಡುವುದಿಲ್ಲ. ಸಣ್ಣ ಸಣ್ಣ ಹಳ್ಳಿಗಳಲ್ಲೂ ಜಮೀನಿನ ಬೆಲೆ ಆಕಾಶಕ್ಕೇರಿದೆ. ಹತ್ತನೇ ತರಗತಿಯವರೆಗಿನ ಒಂದು ಶಾಲೆ ಕಟ್ಟಲು ಎರಡು ಎಕರೆ ಜಾಗ ಬೇಕು.

ಬೆಂಗಳೂರಿನಂಥ ನಗರಗಳಲ್ಲಂತೂ ಅರ್ಧ ಎಕರೆಗೆ ಅದೆಷ್ಟು ಕೋಟಿ ಬೆಲೆ ಎಂಬುದು ನಮಗೆ ತಿಳಿದಿದೆ. ನಂತರ ಕಟ್ಟಡ ನಿರ್ಮಾಣ, ಪಾಠೋಪಕರಣ, ಪೀಠೋಪಕರಣ, ಪ್ರಯೋಗಶಾಲೆ, ಗ್ರಂಥಾಲಯ ಎಲ್ಲಕ್ಕೂ ಹತ್ತಾರು ಕೋಟಿ ರೂಪಾಯಿ ಹಾಕಿದವರಿಗೆ ಮುಂದೆ ಹತ್ತು ವರ್ಷಗಳವರೆಗೆ ಹಾಕಿದ ಹಣ ಬರಲಾರದು. ಶಾಲೆ ಪ್ರಾರಂಭಿಸಿ, ಅದನ್ನು ನಡೆಸಲು  ಸಾಧ್ಯವಾಗದೆ,

ಮಾರಲೂ ಆಗದೆ ಒದ್ದಾಡುವವರ ಸಂಖ್ಯೆ ಕಡಿಮೆಯೇನಲ್ಲ. ಆದರೆ ವಸೂಲಿ ಮಾಡುವ ಶುಲ್ಕವು ಸಂಸ್ಥೆ ನೀಡುವ ಸವಲತ್ತುಗಳಿಗಿಂತ ತುಂಬ ಹೆಚ್ಚಾಗಿದೆ ಎಂದಾಗ ಆ ಶಾಲೆಯನ್ನು ನಿರಾಕರಿಸಬೇಕು.

ದೇಶದ ಎಲ್ಲ ಮಕ್ಕಳೂ ಒಂದೇ ಪಠ್ಯಕ್ರಮ ಅಭ್ಯಾಸ ಮಾಡಬೇಕೆಂಬ ಶಿಕ್ಷಣ ತಜ್ಞರ ದಶಕಗಳ ಕೂಗು ಅರಣ್ಯರೋದನವಾಗಿದೆ. ಇಂದು ನಮ್ಮಲ್ಲಿರುವುದು ನಾಲ್ಕು ವರ್ಗಗಳ ಶಿಕ್ಷಣ. ಒಂದು ರೀತಿ ಅದು ಮತ್ತೊಂದು ಜಾತಿ ಪದ್ಧತಿಯನ್ನು ಹುಟ್ಟು ಹಾಕಿದೆ.

ಅವೆಂದರೆ ರಾಜ್ಯ ಸರ್ಕಾರದ ಶಿಕ್ಷಣ (State Board), ಕೇಂದ್ರ ಸರ್ಕಾರದ ಅನುಮತಿ ಪಡೆದ ಸಿ.ಬಿ.ಎಸ್.ಇ ಅಥವಾ ಐ.ಸಿ.ಎಸ್.ಇ ಶಿಕ್ಷಣ, ಕೇಂಬ್ರಿಜ್ ಮಾದರಿಯ ಅಂತರ ರಾಷ್ಟ್ರೀಯ ಶಿಕ್ಷಣ (I.G.C.S.E), ಜಿನಿವಾದಲ್ಲಿ ಮೂಲ ಕಚೇರಿ ಹೊಂದಿರುವ ಬ್ಯಾಕೋಲಾರೇಟ್ ಶಿಕ್ಷಣ (I.B). ನಮ್ಮ ರಾಷ್ಟ್ರಪತಿಯ ಮಕ್ಕಳು ಹಾಗೂ ಸಾಮಾನ್ಯ ಜನರ ಮಕ್ಕಳು ಒಂದೇ ಪಠ್ಯಕ್ರಮ ಅಭ್ಯಾಸ ಮಾಡುವಂತಾದಾಗ ಸಮಾನತೆಯ ಪ್ರಜ್ಞೆ ಬೆಳೆದೀತು.

ಅದಕ್ಕೆ ಯಾಕೋ ರಾಜಕೀಯ ಸಂಕಲ್ಪ ಒದಗಿ ಬಂದಿಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ಹೊಸ ಶಿಕ್ಷಣ ಮಂತ್ರಿಗಳು ಬರುತ್ತಾರೆ. ಅವರಿಗೆ ಶಿಕ್ಷಣದ ವ್ಯವಸ್ಥೆ ಅರ್ಥವಾಗಲಿಕ್ಕೇ ಎರಡು-ಮೂರು ವರ್ಷ ಬೇಕು. ಅವರಿಗೆ ಮಾರ್ಗದರ್ಶನ ಮಾಡುವವರು ಐಎಎಸ್ ಅಧಿಕಾರಿಗಳು. ಅವರದೊಂದು ಪ್ರಭುತ್ವ.

ಅವರೆಲ್ಲ ವಲಸೆ ಪಕ್ಷಿಗಳ ಹಾಗೆ. ಎರಡೆರಡು ವರ್ಷಕ್ಕೆ ಒಂದೊಂದು ಇಲಾಖೆ ಸುತ್ತಿ ಯಾವುದರಲ್ಲೂ ತಲಸ್ಪರ್ಶಿ ತಿಳಿವಳಿಕೆ ಪಡೆಯದೆ ಜ್ಞಾನಿಗಳಾಗುತ್ತಾರೆ. 30 ವರ್ಷ ಅದೇ ಇಲಾಖೆಯಲ್ಲಿ ಎಲ್ಲ ಹಂತಗಳಲ್ಲಿ ದುಡಿದ ಅಧಿಕಾರಿಗಳಿಗೆ ಮಂತ್ರಿವರ್ಯರ ಕಿವಿಗಳು ಹತ್ತಿರವಾಗುವುದಿಲ್ಲ.

ಹೀಗೆ ಬದಲಾಗುವ ಮಂತ್ರಿಗಳು, ವಲಸೆ ಹೋಗುವ ಅಧಿಕಾರಿಗಳಿಂದಾಗಿ ಸ್ಥಿರವಾದ ನೀತಿ ನಿರ್ದೇಶನ ಕಷ್ಟವಾಗುತ್ತದೆ. ಆಗ ವ್ಯವಸ್ಥೆ ಗೊಂದಲಮಯವಾಗುತ್ತದೆ, ಭ್ರಷ್ಟತೆ ತಲೆ ಎತ್ತುತ್ತದೆ, ಸಾಮಾನ್ಯರ ಧ್ವನಿ ಅಡಗಿ ಹೋಗುತ್ತದೆ. ಹೇಳಿಕೆ, ಪ್ರತಿ ಹೇಳಿಕೆಗಳಿಂದ ಹೆಚ್ಚು ಸಾಧನೆಯಾಗದು.

ಪರಿಶುದ್ಧ ಶಿಕ್ಷಣ ವ್ಯಕ್ತಿತ್ವವನ್ನು ನಿರ್ಮಿಸುವ ಶಕ್ತಿ ಹೊಂದಿದೆ. ಅದೊಂದು ತೀರ್ಥ. ಆದರೆ ಇಂದು ರಾಜಕೀಯ, ಅಧಿಕಾರದ ಕೆಂಪುಪಟ್ಟಿ, ಭ್ರಷ್ಟಾಚಾರ ಎಂಬ ಅನೇಕ ಒಳಸುಳಿಗಳನ್ನು ಹೊಂದಿ ಚಕ್ರತೀರ್ಥವಾಗಿದೆ. ಅದನ್ನು ಈ ಸುಳಿಗಳಿಂದ ಪಾರುಮಾಡುವ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT