ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರದ ಕಡೆಗಣನೆ ಸಲ್ಲ: ಡಾ.ಸಿಎನ್‌ಆರ್‌ ರಾವ್‌

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ಎಲ್ಲ ಕ್ಷೇತ್ರಗಳ ಬೆಳವಣಿಗೆಗಳಿಗೂ ಶಿಕ್ಷಣವೇ ಮೂಲ. ಆದರೆ, ಅದಕ್ಕೆ ಆಂತರಿಕ ನಿವ್ವಳ ಉತ್ಪನ್ನದ (ಜಿಡಿಪಿ) ಶೇ 1ರಷ್ಟು ಹಣ­ವನ್ನೂ ಶಿಕ್ಷಣಕ್ಕಾಗಿ ಖರ್ಚು ಮಾಡ­ಲಾಗುತ್ತಿಲ್ಲ’ ಎಂದು ಹಿರಿಯ ವಿಜ್ಞಾನಿ ಡಾ.ಸಿಎನ್‌ಆರ್‌ ರಾವ್‌ ವಿಷಾದ ವ್ಯಕ್ತಪಡಿಸಿದರು.
ಆಬ್ಸರ್ವರ್‌ ರಿಸರ್ಚ್‌ ಫೌಂಡೇಷನ್‌ (ಒಆರ್‌ಎಫ್‌) ಸಂಘಟನೆಯಿಂದ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ವಿಜ್ಞಾನ ಶಿಕ್ಷಣದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ರಾಜೀವ್‌ ಗಾಂಧಿ ಅವರ ಸಂಪುಟ­ದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವರಾಗಿದ್ದ ಪಿ.ವಿ. ನರಸಿಂಹರಾವ್‌, ಜಿಡಿಪಿಯ ಶೇ 6ರಷ್ಟು ಹಣವನ್ನು ಶಿಕ್ಷಣದ ಮೇಲೆ ಖರ್ಚು ಮಾಡಬೇಕು ಎನ್ನುವ ಶಿಫಾರಸು ಮಾಡಿದ್ದರು. ಆದರೆ, ಮುಂದೆ ಅವರೇ ಪ್ರಧಾನಿ­ಯಾದರೂ ಶಿಕ್ಷಣಕ್ಕೆ ಹೆಚ್ಚಿನ ಹಣ ಕೊಡಲು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.

‘ವಿಜ್ಞಾನ ಶಿಕ್ಷಣಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನೇ ಅವಲಂಬಿಸುವ ಸ್ಥಿತಿ ಇದೆ. ಆದರೆ, ಅವುಗಳಿಗೆ ಬೇಕಾದ ಅನುದಾನ­ವನ್ನು ಸರ್ಕಾರ ಕೊಡುತ್ತಿಲ್ಲ. ಸಂಶೋ­ಧನಾ ಕ್ಷೇತ್ರಕ್ಕೆ ಹೆಚ್ಚೆಂದರೆ ವಾರ್ಷಿಕ ₨ 5,000 ಕೋಟಿ ಬೇಕು. ಯಾವ ಸರ್ಕಾರವೂ ಅಷ್ಟು ಅನುದಾನ ನೀಡಲು ಮನಸ್ಸು ಮಾಡುತ್ತಿಲ್ಲ’ ಎಂದು ತಿಳಿಸಿದರು.

‘ಮುಂದಿನ ಹತ್ತು ವರ್ಷಗಳಲ್ಲಿ 4 ಕೋಟಿ ವಿದ್ಯಾರ್ಥಿಗಳು ಉನ್ನತ ಅಧ್ಯಯ­ನ­ಕ್ಕಾಗಿ ಬರಲಿದ್ದಾರೆ. ಅವರ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯವನ್ನು ಅಭಿವೃದ್ಧಿ ಮಾಡಬೇಕಿದೆ’ ಎಂದು ಹೇಳಿದರು.

ಒಆರ್‌ಎಫ್‌ನ ಸಂಶೋಧಕಿ ಡಾ. ಲೀನಾ ಚಂದ್ರನ್‌ ವಾಡಿಯಾ, ‘ದೇಶದ ಬಹುತೇಕ ಕಾಲೇಜುಗಳ ಪ್ರಯೋಗಾಲ­ಯಗಳು ದುಸ್ಥಿತಿಯಲ್ಲಿವೆ. ಚೀನಾಕ್ಕೆ ಹೋಲಿ­ಸಿ­ದರೆ ವಿಶ್ವವಿದ್ಯಾಲಯಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ’ ಎಂದರು. ಹೆಣ್ಣು ಮಕ್ಕಳಿಗೂ ವಿಜ್ಞಾನ ಶಿಕ್ಷಣದಲ್ಲಿ ಸಮಾನ ಆದ್ಯತೆ ಸಿಗಬೇಕು, ಮಾತೃಭಾಷೆಯಲ್ಲೇ ವಿಜ್ಞಾನವನ್ನು ಕಲಿಸಬೇಕು, ಪದವಿ ಕೋರ್ಸ್‌ಗಳ ಅವಧಿ ಕಡಿಮೆ ಮಾಡಿದರೂ ಗುಣ­ಮಟ್ಟ­ದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬ ಸಲಹೆಗಳು ಕೇಳಿಬಂದವು. ಪ್ರೊ.ಟಿ.ವಿ.ರಾಮಕೃಷ್ಣನ್‌ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT