ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಣ್ಣನ ಲಂಡನ್‌ ಅನುಭವ

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಮೊದಲು ಲಂಡನ್‌ನಲ್ಲಿ ‘ಕಿಲ್ಲಿಂಗ್ ವೀರಪ್ಪನ್’ ಸಿನಿಮಾ ಪ್ರೀಮಿಯರ್ ಷೋ ಮಾಡಲಾಗಿತ್ತು. ಅದಾದ ನಂತರ ‘ಶಿವಲಿಂಗ’ ಬಿಡುಗಡೆಯಾಯ್ತು. ಚಿತ್ರ ಬಿಡುಗಡೆಯಾದ ಎರಡು ವಾರಗಳ ನಂತರ, ಯಾಕೆ ‘ಶಿವಲಿಂಗ’ವನ್ನೂ ಲಂಡನ್ನಿನ ಕನ್ನಡ ಅಭಿಮಾನಿಗಳಿಗೆ ತೋರಿಸಬಾರದು ಎಂಬ ವಿಚಾರ ಚಿತ್ರತಂಡಕ್ಕೆ ಬಂತು.

ಅದನ್ನು ನಿಜವಾಗಿಸಲು ಎಲ್ಲ ಸಿದ್ಧತೆಗಳೂ ಆದವು. ಲಂಡನ್ನಿನ ಒಂದು ಚಿತ್ರಮಂದಿರದಲ್ಲಿ ಪ್ರೀಮಿಯರ್ ಷೋ ಕೂಡ ಮಾಡಿದೆವು. ಅಲ್ಲಿನವರ ಪ್ರತಿಕ್ರಿಯೆ ಅದ್ಭುತವಾಗಿತ್ತು.

ಒಂದೇ ಪ್ರದರ್ಶನ ಮಾಡುವುದು ಎಂದುಕೊಂಡು ಹೋಗಿದ್ದೆವು. ಜನ ಜಾಸ್ತಿ ಇದ್ದಿದ್ದರಿಂದ ಎರಡು ಪ್ರದರ್ಶನ ಮಾಡಬೇಕಾಯ್ತು. ಪ್ರದರ್ಶನದ ನಂತರ ಅವರೊಂದಿಗೆ ಸಂವಾದವೂ ಇತ್ತು. ನಾನು ಐದೇ ನಿಮಿಷ ಸಿನಿಮಾ ನೋಡಬೇಕೆಂದು ಕೂತವನು ಅರ್ಧ ಗಂಟೆ ನೋಡಿದೆ. ಲಂಡನ್‌ನಲ್ಲಿ ಕನ್ನಡಿಗರೊಂದಿಗೆ ಕೂತು ಕನ್ನಡ ಸಿನಿಮಾ ನೋಡುವ ಅನುಭವವೇ ಬೇರೆ. ಅಮೆರಿಕ ಆದ ನಂತರ ಈಗ ಲಂಡನ್ನಿನಲ್ಲಿ ‘ಶಿವಲಿಂಗ’ ಚಿತ್ರದ ವಿತರಣೆಯ ಹಕ್ಕು ಪಡೆಯುವ ಯತ್ನ ನಡೆಯುತ್ತಿದೆ.

ಪ್ರೀಮಿಯರ್ ಷೋ ಆದ ನಂತರ ಅಲ್ಲಿನ ಸಂಸತ್ತಿಗೆ ಭೇಟಿ ನೀಡಿದೆವು. ಕರ್ನಾಟಕ ಮೂಲದ ಮೇಯರ್ ನೀರಜ್ ಪಾಟೀಲ್ ನೇತೃತ್ವದ ಬಸವೇಶ್ವರ ಫೌಂಡೇಶನ್ ವತಿಯಿಂದ ಬಸವಣ್ಣನ ಮೂರ್ತಿ ಎದುರು ಕನ್ನಡಿಗರೆಲ್ಲ ಸೇರಿ ‘ವಿಷನೇರ್ ಪ್ರಶಸ್ತಿ’ ನೀಡಿ ಸನ್ಮಾನ ಮಾಡಿದರು. ಅಂಥದ್ದೊಂದು ದೊಡ್ಡ ಗೌರವ ಸಿಕ್ಕ ಖುಷಿ ವಿವರಿಸಲು ಮಾತುಗಳಿಲ್ಲ.

ನಾವು ಉಳಿದುಕೊಂಡ ಹೋಟೆಲ್‌ನಿಂದ ಬಸವಣ್ಣನ ಮೂರ್ತಿ ಕಾಣುತ್ತಿತ್ತು. ಅಲ್ಲೊಂದು ‘ತಬಲ’ ಎಂಬ ಹೆಸರಿನ ರೆಸ್ಟೊರೆಂಟ್ ಇದೆ. ಅಲ್ಲಿ ‘ಕೊಹಿನೂರ್ ಆಫ್ ಸೌಥ್’ ಎಂದು ಗೌರವಿಸಿದರು. ಅಷ್ಟೊಂದು ಕನ್ನಡಿಗರ ನಡುವೆ ಇದ್ದಿದ್ದರಿಂದ ನಮಗೆ ಪರದೇಶದಲ್ಲಿ ಓಡಾಡುತ್ತಿದ್ದೇವೆ ಅನ್ನಿಸಲೇ ಇಲ್ಲ. ಕರ್ನಾಟಕದಲ್ಲೇ ಇದ್ದೇವೆ ಎನ್ನುವ ರೀತಿ ಇತ್ತು ನಮ್ಮ ಸುತ್ತಲಿನ ವಾತಾವರಣ.

ಎಲ್ಲರೂ ಅವರ ಮನೆಗೆ ನಮ್ಮನ್ನು ಊಟಕ್ಕೆ ಕರೆಯುತ್ತಿದ್ದರು. ಮತ್ತೊಮ್ಮೆ ಬಂದಾಗ ಬರುತ್ತೇವೆ ಎಂದು ಸಮಾಧಾನ ಮಾಡಿ ಬಂದಿದ್ದೇವೆ. ಹೆಂಡತಿ, ಮಗಳು–ಅಳಿಯ ನನಗೆ ಕಂಪೆನಿಯಾಗಿದ್ದರು. ಅಳಿಯನ ಜೊತೆಗೆ ಹೀಗೆ ಹೊರಗಡೆ ಹೋಗಿದ್ದು ಇದೇ ಮೊದಲು. ನಾವು ಅಲ್ಲಿ ಸುತ್ತಾಡಿದ್ದೆಲ್ಲ ನೆಲದಡಿಯ ಮೆಟ್ರೊಗಳಲ್ಲೇ. ಅದೊಂಥರ ಥ್ರಿಲ್ ಕೊಡುತ್ತದೆ.

ಈ ಬಾರಿ ಬಂಕಿಂಗ್ ಹ್ಯಾಮ್‌ ಅರಮನೆಗೆ ಹೋಗಲು ಆಗಲಿಲ್ಲ. ಮುಂದಿನ ಸಲ ಹೋದಾಗ ಅಲ್ಲಿಗೆ ಭೇಟಿ ನೀಡುವ ಆಸೆ ಇದೆ. ಮೇಡಂ ಟುಸ್ಸಾಡ್ಸ್ ಮ್ಸೂಸಿಯಂನಲ್ಲಿ ಹಲವಾರು ಗಣ್ಯರ ಮೇಣದ ಮೂರ್ತಿ ನೋಡುವಾಗ ನನಗೆ ಅಪ್ಪಾಜಿಯವರ ಮೂರ್ತಿಯನ್ನೂ ಅಲ್ಲಿ ನೋಡಬೇಕು ಎಂಬ ಆಸೆ ಹುಟ್ಟಿದೆ. ಅದಕ್ಕಾಗಿ ಅಲ್ಲಿನ ಜನ ಏನಾದರೂ ಪ್ರಯತ್ನ ಮಾಡಬೇಕು. ಅಪ್ಪಾಜಿ ಒಬ್ಬ ನಟ ಹೌದು. ಆದರೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲೂ ಅವರು ಮುಂಚೂಣಿಯಲ್ಲಿದ್ದವರು. ಅದಕ್ಕೆ ಗೋಕಾಕ್ ಚಳವಳಿಗಿಂತ ದೊಡ್ಡ ಉದಾಹರಣೆ ಬೇಕಾ?                  

‘ಆರೋಗ್ಯದ ಕಾಳಜಿಯೂ ಮುಖ್ಯ’
ಜೂನ್‌ನಲ್ಲಿ ‘ಸಂತೆಯಲ್ಲಿ ನಿಂತ ಕಬೀರ’ ಬಿಡುಗಡೆ ಆಗಲಿದೆ. ‘ಶ್ರೀಕಂಠ’, ‘ಬಂಗಾರ. ‘ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರೀಕರಣ ನಡೆಯುತ್ತಿದೆ. ಇವೆರಡು ಮುಗಿಯುವವರೆಗೆ ಬೇರೆ ಸಿನಿಮಾ ಕೈಗೆತ್ತಿಕೊಳ್ಳುವುದಿಲ್ಲ. ‘ಬಂಗಾರದ ಮನುಷ್ಯ’ ಚಿತ್ರದ ಅಪ್ಪಾಜಿ ಪಾತ್ರವನ್ನು ‘ಬಂಗಾರ...’ ಚಿತ್ರ ನೆನಪಿಸುತ್ತದೆ. ಈ ಚಿತ್ರ ತಂದೆ ಮಗನ ಸಂಬಂಧವನ್ನು ನೆನಪಿಸುತ್ತದಾದರೂ ಅದು ಎಷ್ಟರ ಮಟ್ಟಿಗೆ ಎಂದು ತೆರೆಯ ಮೇಲೆ ನೋಡಬೇಕು.

ಇಷ್ಟು ಸಿನಿಮಾ ಮಾಡ್ತಿದ್ದೀನಲ್ಲ. ನನಗೆ ಯಾವತ್ತೂ ಆಯಾಸ ಅನ್ನಿಸಿಲ್ಲ. ಆಯಾಸ ಎಂದುಕೊಂಡರೆ ಕೆಲಸ ಮುಗಿದಂತೆ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಆರು ಗಂಟೆಯವರೆಗಷ್ಟೇ ಕೆಲಸ. ರಾತ್ರಿ ಹತ್ತಕ್ಕೆಲ್ಲ ಮಲಗಿಬಿಡುತ್ತೇನೆ. ಬೆಳಿಗ್ಗೆ ಐದೂವರೆಗೇ ಎದ್ದು ವಾಕಿಂಗ್ ಹೋಗುತ್ತೇನೆ. ಕೆಲಸದ ನಡುವೆ ಆರೋಗ್ಯವನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT