ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಂಪೇಟೆಯಲ್ಲಿ ‘ರಿದರಿಂಗಾಸ್’ ಮೋಡಿ!

Last Updated 23 ಆಗಸ್ಟ್ 2014, 9:01 IST
ಅಕ್ಷರ ಗಾತ್ರ

ಮೈಸೂರು: ಶುಕ್ರವಾರ ಸಂಜೆ ನಗರದ ಸಂತೆಪೇಟೆಯ ಗೌಜಿ ಗದ್ದಲ ಮರೆಯಾಗಿತ್ತು. ಅಲ್ಲೇನಿದ್ದರೂ ಸುರಳಿತವಾದ, ಸೌಮ್ಯವಾದ ಸಂಗೀತದ ನಾದ, ಲಯಬದ್ಧ ಚಪ್ಪಾಳೆಯ ಸದ್ದು ತುಂಬಿತ್ತು.

ಹೌದು; ಐತಿಹಾಸಿಕ ಡೆಫರಿನ್ ಗಡಿಯಾರದ (ಚಿಕ್ಕಗಡಿಯಾರ) ಆವರಣದಲ್ಲಿ ಜರ್ಮನಿಯ ಬವೇರಿಯಾದ ‘ರಿದರಿಂಗಾಸ್’ ತಂಡವು ಮೋಡಿ ಮಾಡಿತ್ತು. ತರಕಾರಿ, ಹಣ್ಣು, ಹಂಪಲು, ಸಿಹಿತಿಂಡಿ ಖರೀದಿಸಲು ಬಂದವರು, ಮಾರಾಟ ಮಾಡಲು ಕುಳಿತಿದ್ದವರೆಲ್ಲ ರಿದರಿಂಗಾಸ್ ನಾದ, ಲಯಗಳಲ್ಲಿ ತೇಲಿಹೋದರು.

ಶುಕ್ರವಾರ ಸಂಜೆ 5 ಗಂಟೆಗೆ ಮಳೆ ಮೋಡಗಳು ಆವರಿಸಿದ್ದ ಸಂದರ್ಭದಲ್ಲಿ ಚಿಕ್ಕಗಡಿಯಾರದ ವೇದಿಕೆಗೆ ಹಾಜರಾಗಿದ್ದ ಸುಪ್ರಸಿದ್ಧ ಸಂಗೀತ ನಿರ್ದೇಶಕ, ನೃತ್ಯ ನಿರ್ದೇಶಕ ಮತ್ತು ರಂಗಭೂಮಿ ನಿರ್ದೇಶಕ ಕ್ರಿಶ್ಚಿಯನ್ ಸ್ಟುಕಲ್ ಮತ್ತು ಅವರ ತಂಡ ವಿಶಿಷ್ಟ ಸಂಗೀತ ಕಾರ್ಯಕ್ರಮ ನೀಡಿದರು. ತಮ್ಮ ಸಾಂಪ್ರದಾಯಿಕ ಸಮವಸ್ತ್ರವಾದ ಜೀನ್ಸ್ ಚಡ್ಡಿಗಳು, ಲೆದರ್ ಬೆಲ್ಟ್‌ಗಳ ವಿಶಿಷ್ಟ ಬಟ್ಟೆ  ಧರಿಸಿದ್ದರು. ತಲೆ ಮೇಲೆ ಸಾಂಪ್ರದಾಯಿಕ ಟೋಪಿ ಹಾಕಿಕೊಂಡಿದ್ದರು.

ಕ್ರಿಶ್ಚಿಯನ್ ಸ್ಟುಕಲ್ ಅವರು ಸುಮಾರು ೧೫ ವರ್ಷಗಳ ಹಿಂದೆ ರಂಗಾಯಣದಲ್ಲಿ ‘ಮಿಡ್ ಸಮ್ಮರ್ ನೈಟ್ ಡ್ರೀಮ್ಸ್’ ಎಂಬ ಸೂಪರ್ ಹಿಟ್ ನಾಟಕವನ್ನು ನಿರ್ದೇಶಿಸಿದ್ದರು. ಆಗಿನಿಂದಲೂ ಪ್ರತಿ ವರ್ಷವೂ ಮೈಸೂರಿಗೆ ತಮ್ಮ ರಜೆ ದಿನ ಕಳೆಯಲು ಬರುತ್ತಿರುತ್ತಾರೆ. ಮೈಸೂರಿನ ಬಗ್ಗೆ ಅಗಾಧ ಪ್ರೀತಿ ಇಟ್ಟುಕೊಂಡಿರುವ ಜರ್ಮನಿಯಲ್ಲಿ ಪ್ರತಿ ೧೦ ವರ್ಷಕ್ಕೊಮ್ಮೆ  ನಡೆಯುವ ‘ಪ್ಯಾಷನ್ ಪ್ಲೇ’ ನಿರ್ದೇಶಕರಾಗಿದ್ದಾರೆ. ಅಲ್ಲಿನ ಸರ್ಕಾರವು ಇವರಿಗೆ ‘ಬವೇರಿಯನ್ ಆರ್ಡರ್ ಆಫ್ ಮೆರಿಟ್’ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರತಿ ಬಾರಿ ಮೈಸೂರಿಗೆ ಒಂಟಿಯಾಗಿ ಬರುತ್ತಿದ್ದ ಇವರು ಇದೀಗ ತಮ್ಮೊಂದಿಗೆ ‘ರಿದರಿಂಗಾಸ್’ ಜರ್ಮನ್ ಸಂಗೀತ ತಂಡವನ್ನು ಕರೆ ತಂದಿದ್ದರು.

‘ಇದು ಬವೇರಿಯನ್ (ದಕ್ಷಿಣ ಜರ್ಮನಿ) ಪ್ರಾಂತ್ಯದ ಪಾರಂಪರಿಕ ಸಂಗೀತ ಪ್ರಕಾರವಾಗಿದೆ. ಅಲ್ಲಿಯ ಜನಮಾನಸದಲ್ಲಿ ಅಚ್ಚೊತ್ತಿರುವ ಕಲೆ ಇದು. ಸಂಭ್ರಮ, ಸಮಾರಂಭ, ಖುಷಿ, ದುಃಖ ಮತ್ತಿತರ ಸಂದರ್ಭಗಳಿಗೆ ತಕ್ಕಂತೆ ಸಂಗೀತವನ್ನು ಸಂಯೋಜಿಸಿ ನುಡಿಸುತ್ತಾರೆ. ವಿವಿಧ ಪ್ರಕಾರದ ಟ್ಯೂಬ್‌ಗಳ ಮೂಲಕ ಸಂಗೀತದ ಸುಧೆ ಹರಿಸುತ್ತಾರೆ’ ಎಂದು ರಂಗಕಲಾವಿದ ಪೂರ್ಣಚಂದ್ರ ವಿವರಿಸಿದರು.

ತಂಡದಲ್ಲಿದ್ದ ಕುಕ್ಕಿ, ಸೆಬಾಸ್ಟಿಯನ್, ಜೋಸೆಫ್, ಫ್ಲೋಕಿ, ನಿಕ್ಕಿ, ಸ್ಮಾಷ್, ತಂಡದ ಏಕೈಕ ಮಹಿಳಾ ಕಲಾವಿದೆ ಆಗ್ನೇಸ್ ಮತ್ತು ಸೈಮನ್ ಸಂಗೀತ ಪ್ರಸ್ತುತಪಡಿಸಿದರು. ಜನಪದ ನೃತ್ಯವನ್ನೂ ಪ್ರದರ್ಶಿಸಿದರು. ಈ ನೃತ್ಯದ ಪ್ರತಿ ನಡೆ, ಹೆಜ್ಜೆಯಲ್ಲಿಯೂ ಚಪ್ಪಾಳೆಯ ಸದ್ದು ಮತ್ತು ಅದ್ಬುತವಾದ ಚುರುಕುತನ ಹಾಗೂ ಶಕ್ತಿಯ ಪ್ರದರ್ಶನ ಗಮನ ಸೆಳೆಯಿತು. ಹನಿ ಮಳೆಯಲ್ಲಿಯೂ ಉತ್ಸಾಹದಿಂದ ಅವರು ನೀಡಿದ ಪ್ರದರ್ಶನವನ್ನು ನೂರಾರು ಜನರು ನೋಡಿದರು.

ಪಾಲಿಕೆ ಸದಸ್ಯರಾದ ಎಂ.ಜೆ. ರವಿಕುಮಾರ್, ಕೆ.ವಿ. ಮಲ್ಲೇಶ್ ಅವರು, ಕಲಾವಿದರನ್ನು ಸನ್ಮಾನಿಸಿದರು. ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ–ಸೇನಾನಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT