ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧೀಕರಣಕ್ಕೆ ಅವಕಾಶ

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಭಾ‌ರತದ ಕ್ರಿಕೆಟ್‌ ಆಡಳಿತದಲ್ಲಿ ಹೊಸ ಪರ್ವ ಆರಂಭವಾಗಿದೆ. ಹತ್ತು ಹಲವು ಹಗರಣ, ವಿವಾದಗಳಲ್ಲಿ ಮುಳುಗಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತದ ಕೀಲಿಕೈಯನ್ನು ಸುಪ್ರೀಂ ಕೋರ್ಟ್‌ ತಾತ್ಕಾ­ಲಿಕವಾಗಿ ಇಬ್ಬರು ಹಿರಿಯ ಕ್ರಿಕೆಟಿಗರ ಕೈಗೆ ನೀಡಿದೆ.

ಏಪ್ರಿಲ್‌ 16ರಿಂದ ನಡೆಯ­ಲಿರುವ ಐಪಿಎಲ್‌ ಟೂರ್ನಿಯ ಏಳನೇ ಆವೃತ್ತಿಯ ವ್ಯವಹಾರ­ಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಸುನಿಲ್‌ ಗಾವಸ್ಕರ್‌ ನಿರ್ವಹಿಸ­ಲಿ­ದ್ದಾರೆ. ಬಿಸಿಸಿಐನ ಹಿರಿಯ ಉಪಾಧ್ಯಕ್ಷ ಶಿವಲಾಲ್‌ ಯಾದವ್‌ ಅವರಿಗೆ ಮಂಡಳಿಯ ಆಡಳಿತವನ್ನು ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಇದು ಈ ಇಬ್ಬರಿಗೂ ಸಂದ ಬಲು ದೊಡ್ಡ ಗೌರವ.

ಬಿಸಿಸಿಐ ಈ ದೇಶದ ಜನಪ್ರಿಯ ಕ್ರೀಡೆಯ ಹೃದಯದಂತಿದೆ. ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆ­ಗಳಲ್ಲಿ ಇದೂ ಒಂದು. ಇಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ಸಹಜ. ಇಂತಹ ಸಂಸ್ಥೆಯ ಆಡಳಿತ ಸಂಪೂರ್ಣ ಪಾರದರ್ಶಕ­ವಾಗಿರ­ಬೇಕಿತ್ತು. ಆದರೆ ಹಾಗಾಗಿಲ್ಲ. ಆದುದರಿಂದಲೇ ಮ್ಯಾಚ್‌ಫಿಕ್ಸಿಂಗ್‌ ಸೇರಿದಂತೆ ಹತ್ತು ಹಲವು ಹಗರಣಗಳ ಕಳಂಕ ಈ ಸಂಸ್ಥೆಗೆ ಅಂಟಿಕೊಂಡಿದೆ. ಆ ಕೊಳೆಯ ಬಗ್ಗೆ ದೇಶದಾದ್ಯಂತ ಕ್ರಿಕೆಟ್‌ ಪ್ರಿಯರಲ್ಲಿ ವಿಷಾದವಿದೆ. ಕ್ರಿಕೆಟ್‌ ಆಡಳಿತ ಕಳಂಕ­ರ­ಹಿತವಾಗಿರಲಿ ಎಂಬುದು ಈ ದೇಶದ ಕ್ರೀಡಾಸಕ್ತರ ಒಡಲಾಳದ ಆಶಯ.

ಆದರೆ ಹಗರಣಗಳ ಮಸಿಯನ್ನು ಮೈಗಂಟಿಸಿಕೊಂಡಿರುವವರೇ ಅಧಿಕಾರ ಸ್ಥಾನದಲ್ಲಿದ್ದರು. ಅವರನ್ನು ಕದಲಿಸುವುದು ಸುಲಭ ಸಾಧ್ಯ­ವಾಗಿ­ರ­­ಲಿಲ್ಲ. ಇಂತಹ ಸಂದಿಗ್ಧದಲ್ಲಿ ಸ್ವತಃ ಸುಪ್ರೀಂ ಕೋರ್ಟ್‌ ಒಂದು ಹೆಜ್ಜೆ ಮುಂದಿಟ್ಟು, ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್‌ ತಾತ್ಕಾಲಿಕವಾಗಿ ಅಧಿಕಾರದಿಂದ ದೂರ ಇರಬೇಕೆಂದು ಸೂಚಿಸಿತು.  ಜತೆಗೆ, ಈ ಕ್ರೀಡೆಯಲ್ಲಿ ಜನಮನ್ನಣೆ ಇರುವ ಇಬ್ಬರು ಮಾಜಿ ಆಟಗಾರರಿಗೆ ಆಡಳಿತದ ಜವಾಬ್ದಾರಿಯನ್ನು ನೀಡಿ­ರು­­ವುದು ಕ್ರಿಕೆಟ್‌ ಆಡಳಿತದ ಶುದ್ಧೀಕರಣದ ದಿಸೆಯಲ್ಲಿ ಕೋರ್ಟ್‌ ತೆಗೆದುಕೊಂಡ ದಿಟ್ಟ ನಿರ್ಧಾರ.

ಅಧಿಕಾರ ವಹಿಸಿಕೊಂಡ ಕೂಡಲೇ  ಗಾವಸ್ಕರ್‌ ಮತ್ತು ಯಾದವ್‌ ಉತ್ತಮ ಹೆಜ್ಜೆಗಳನ್ನಿರಿಸಿದ್ದಾರೆ. ಬಿಸಿಸಿಐನಲ್ಲಿದ್ದ ಇಂಡಿಯಾ ಸಿಮೆಂಟ್ಸ್‌ ಕಂಪೆನಿಯ ನೌಕರರನ್ನು ಸೇವೆಯಿಂದ ತೆಗೆದು ಹಾಕಿದ್ದಾರೆ. ಕೋರ್ಟ್‌ ಸೂಚನೆ ಅನ್ವಯ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು  ಅವರು ತಿಳಿಸಿ­ದ್ದಾರೆ. ಇಂಡಿಯಾ ಸಿಮೆಂಟ್ಸ್‌ ಕಂಪೆನಿಯ ಆಡಳಿತ ನಿರ್ದೇಶಕ ಶ್ರೀನಿವಾಸನ್‌  ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಲೀಕರು. ಈ ತಂಡದ ‘ಮುಖ್ಯ ಅಧಿಕಾರಿ’ಯಾಗಿದ್ದ ಗುರುನಾಥ್‌ ಮೇಯಪ್ಪನ್‌ ‘ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌’ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿ.

ಇವರು ಶ್ರೀನಿವಾಸನ್‌ ಅಳಿಯ. ಐಪಿಎಲ್‌ನೊಳಗೆ ಶ್ರೀನಿವಾಸನ್‌ ಯಾವುದೇ ರೀತಿ­ಯ­­ಲ್ಲಿಯೂ ಕೈಯಾಡಿಸ­ದಂತೆ  ನೋಡಿಕೊಳ್ಳಬೇಕು ಎಂದು ಕೋರ್ಟ್‌ ಹೇಳಿದೆ. ಹೀಗಾಗಿ ಐಪಿಎಲ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಇಂಡಿಯಾ ಸಿಮೆಂಟ್ಸ್‌ ನೌಕರ ಕೆ.ಪ್ರಸನ್ನ ಸೇರಿದಂತೆ ಹಲವರನ್ನು ಬಿಸಿಸಿಐ­ನಿಂದ ಕಿತ್ತೊಗೆಯಲಾಗಿದೆ.

ಶುದ್ಧೀಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆಶಯಕ್ಕೆ ತಕ್ಕಂತೆ ನಡೆಯುವ ನಿಟ್ಟಿನಲ್ಲಿ ‘ತಾತ್ಕಾಲಿಕ’ ಆಡಳಿತಗಾರರು ಭರವಸೆ ಮೂಡಿಸಿದ್ದಾರೆ. ಈ ನಾಡಿನ ಕ್ರಿಕೆಟ್‌ ಪ್ರಿಯರ ಆಶಯವೂ ಇದೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT