ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರಲ್ಲೂ ಮೋಸ ಸಾಕು

Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಶುದ್ಧ ಕುಡಿಯುವ ನೀರಿನ ಹೆಸರಲ್ಲಿ ಗುಣಮಟ್ಟವಿಲ್ಲದ ನೀರನ್ನು ಮಾರುವ ದಂಧೆ ಎಲ್ಲೆಡೆ ಭರ್ಜರಿಯಾಗಿಯೇ ನಡೆಯುತ್ತಿದೆ. ಬಾಟಲಿ ನೀರಿನ ವ್ಯಾಮೋಹಕ್ಕೆ ಸಿಕ್ಕ ಜನರನ್ನು ನಯವಾಗಿ ವಂಚಿಸ­ಲಾಗುತ್ತಿದೆ. ಇದು ಈಗಲಾದರೂ ‘ಭಾರತೀಯ ಗುಣಮಟ್ಟ ಮಾನಕ ಸಂಸ್ಥೆ’ (ಬಿಐಎಸ್) ಗಮನಕ್ಕೆ ಬಂತಲ್ಲ ಎನ್ನುವುದಕ್ಕೆ ಖುಷಿಪಡಬೇಕು.

ಜೀವಾ­ಧಾರವಾದ ಕುಡಿವ ನೀರು ಸೇರಿದಂತೆ ಪೊಟ್ಟಣಗಳಲ್ಲಿ ಮಾರುವ ಎಲ್ಲ ಬಗೆಯ ಆಹಾರ ಪದಾರ್ಥಗಳು, ವಿವಿಧ ಸಾಮಗ್ರಿಗಳ ಗುಣಮಟ್ಟವನ್ನು ಖಾತ­ರಿಪಡಿಸಿ ಐಎಸ್ಐ ಪ್ರಮಾಣಪತ್ರ ನೀಡಿ ಬಳಕೆದಾರರ ಹಿತ ರಕ್ಷಿಸು­ವುದು ಬಿಐಎಸ್ ಜವಾಬ್ದಾರಿ. ಇಡೀ ದೇಶದಲ್ಲಿಯೇ ಬಾಟಲಿ ನೀರಿನ ತಯಾರಿಕಾ ಘಟಕಗಳ ಸಂಖ್ಯೆ ಹೆಚ್ಚಿರುವ ರಾಜ್ಯ ಕರ್ನಾಟಕ. ನಮ್ಮಲ್ಲಿ 4 ಸಾವಿ­ರಕ್ಕೂ ಅಧಿಕ ಪ್ಯಾಕೇಜ್ಡ್ ನೀರು ತಯಾರಿಕಾ ಘಟಕಗಳಿದ್ದರೂ ಪರ­ವಾನಗಿ ಪಡೆದ ಘಟಕಗಳು ಬರೀ 415.

ಇನ್ನುಳಿದವು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿವೆ. ಇವು ಇಷ್ಟು ದಿನ ಕಾನೂನಿನ ಬಲೆಯಿಂದ ತಪ್ಪಿಸಿ­ಕೊಳ್ಳಲು ಬಾಟಲಿಗೆ ಮೊಹರು ಹಾಕದೆ ‘ಪ್ಯಾಕೇಜ್ಡ್ ಕುಡಿಯುವ ನೀರಲ್ಲ’ ಎಂಬ ಮೊಂಡು ವಾದ ಮಾಡುತ್ತ ಬಂದಿದ್ದವು. ಈಗ ಇವಕ್ಕೆಲ್ಲ ಅಂಕುಶ ಹಾಕಲು ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ ತಿದ್ದುಪಡಿಯ ಅಸ್ತ್ರ ಬಿಐಎಸ್‌ಗೆ  ಸಿಕ್ಕಿದೆ. ಆ ಅಸ್ತ್ರವನ್ನು ಅದು ಸರಿಯಾಗಿ ಪ್ರಯೋಗಿಸಬೇಕು.

ಶುದ್ಧ ನೀರು ಮನುಷ್ಯರಿಗಷ್ಟೇ ಅಲ್ಲ, ಎಲ್ಲ ಜೀವರಾಶಿಗಳಿಗೂ ಅಗತ್ಯ. ಶುದ್ಧ ನೀರು ಪಡೆಯುವುದು ವ್ಯಕ್ತಿಯ ಹಕ್ಕು. ಅದನ್ನು ಒದಗಿಸಿಕೊಡುವುದು ಸಮುದಾಯದ, ಸರ್ಕಾರದ ಹೊಣೆ. ಆದರೆ ಆ ಕರ್ತವ್ಯ ನಿಭಾಯಿಸುವಲ್ಲಿ ಸರ್ಕಾರ ಕೆಲಮಟ್ಟಿಗೆ ಸೋತಿದ್ದರಿಂದಲೇ ಬಾಟಲಿ ನೀರಿಗೆ ಬೇಡಿಕೆ ಬಂದದ್ದು. 80,- 90ರ ದಶಕದಲ್ಲಿ ಕೊಳವೆ ಬಾವಿ ನೀರು ಪರಿಶುದ್ಧ ಎಂದು ಹೇಳಲಾಗು­ತ್ತಿತ್ತು. ಆದರೆ ಆ ನೀರೂ ನಮ್ಮ ದುರಾಸೆಯಿಂದ ಕಲುಷಿತಗೊಂಡಿದೆ.

ಅಶುದ್ಧ ನೀರು ನಾನಾ ಬಗೆಯ ಕಾಯಿಲೆಗಳನ್ನು ತರುತ್ತದೆ ಎಂಬುದರ ಅರಿವು ಪಸರಿಸಿ ಜನ ಜಾಗೃತರಾಗುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಬಾಟಲಿ ನೀರು ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮಾಂತರ ಭಾಗ­ಗ­ಳಲ್ಲೂ ಮನೆಮನೆಗಳನ್ನು ಪ್ರವೇಶಿಸಿದೆ. ಸಾಲದ್ದಕ್ಕೆ ಬಾಟಲಿ ನೀರು ಕುಡಿ­ಯುವುದೇ ಒಂದು ಬಗೆಯ ಪ್ರತಿಷ್ಠೆ ಸಂಗತಿಯಾಗಿದೆ. ಜನರ ಈ ಭಾವನೆ, ಅಸಹಾಯಕತೆಯನ್ನು ಬಾಟಲಿ ನೀರಿನ ಘಟಕಗಳು ದುರ್ಬಳಕೆ ಮಾಡಿ­ಕೊಳ್ಳುತ್ತಿವೆ.

ನೀರು ಮಾರಾಟ ಈಗ ಬಲು ಬೇಡಿಕೆಯ ಗೃಹ ಕೈಗಾರಿಕೆ­ಯಾ­ಗಿದೆ. ಇದನ್ನು ಮುಂದುವರಿಸಲು ಯಾರದೇ ತಕರಾರಿಲ್ಲ. ಆದರೆ ಇವು ಗುಣ­ಮಟ್ಟ ತಪಾಸಣೆಗೆ ಒಳಪಡಬೇಕು. ಸೂಕ್ತ ಪರವಾನಗಿ ಪಡೆಯದೆ ನೀರು ಮಾರುವ ಘಟಕಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ‘ಶುದ್ಧ’ ಎಂಬ ನಂಬಿಕೆಯಿಂದ ಗುಣಮಟ್ಟವಿಲ್ಲದ ನೀರು ಕುಡಿಯುವ ಅನಿ­ವಾ­ರ್ಯಕ್ಕೆ ಒಳಗಾದ ಬಡಪಾಯಿ ಗ್ರಾಹಕರ ಹಿತ ಕಾಪಾಡಬೇಕು. ರಾಜ್ಯ ಸರ್ಕಾರದ ಇಲಾಖೆಗಳೂ ಈ ಕೆಲಸದಲ್ಲಿ ಬಿಐಎಸ್‌ಗೆ ಪೂರ್ಣ ಸಹಕಾರ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT