ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗಾರ ಸಮೀಕ್ಷೆ

ಅಂಕುರ 47
Last Updated 29 ಮೇ 2015, 19:30 IST
ಅಕ್ಷರ ಗಾತ್ರ

ಲೈಂಗಿಕ ಸ್ವಾಸ್ಥ್ಯ ಮತ್ತು ಸಮಗ್ರ ಆರೋಗ್ಯಕ್ಕೆ ಸಂಬಂಧಿಸಿದಂತೆ  ಭಾರತದಲ್ಲಿ ಮತ್ತು ಏಷ್ಯಾದ ಇತರ ದೇಶಗಳಲ್ಲಿ ಏಷಿಯಾ ಪೆಸಿಫಿಕ್‌ ಸಮೀಕ್ಷೆಯನ್ನು ಹಮ್ಮಿಕೊಂಡಿತ್ತು. ಈ ಪ್ರಕಾರ ಶೇ 50ರಷ್ಟು ಪುರುಷರು ಹಾಗೂ ಶೇ 60ರಷ್ಟು ಮಹಿಳೆಯರು ತಮ್ಮ ಲೈಂಗಿಕ ಸ್ವಾಸ್ಥ್ಯದ ಬಗ್ಗೆ ಸಂತೃಪ್ತರಾಗಿಲ್ಲ ಎಂದು ಈ ಸಮೀಕ್ಷೆ ತಿಳಿಸುತ್ತದೆ.

ಭಾರತವನ್ನೂ ಒಳಗೊಂಡಂತೆ 13 ದೇಶಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಆಸ್ಟ್ರೇಲಿಯಾ, ಚೀನಾ, ಹಾಂಗ್‌ಕಾಂಗ್‌, ಭಾರತ, ಇಂಡೋನೇಷಿಯಾ, ಜಪಾನ್‌, ಮಲೇಷಿಯಾ, ಫಿಲಿಪ್ಪೀನ್ಸ್‌, ಸಿಂಗಪುರ, ದಕ್ಷಿಣ ಕೋರಿಯಾ, ತೈವಾನ್‌, ಥೈಲ್ಯಾಂಡ್‌, ನ್ಯೂಜಿಲ್ಯಾಂಡ್‌ಗಳಲ್ಲಿ ಈ ಸಮೀಕ್ಷೆಯನ್ನು ಕೈಗೊಳ್ಳಲಾಯಿತು. ಕೆಲವರಿಗೆ ಪ್ರಶ್ನಾವಳಿಯ ಮೂಲಕ, ಚೀನಾ, ಭಾರತ ಹಾಗೂ ಥೈಲ್ಯಾಂಡ್‌ನಲ್ಲಿ ಮುಖಾಮುಖಿಯಾಗಿ ಸಂದರ್ಶಿಸಿ, ಮಾಹಿತಿ ಸಂಗ್ರಹಿಸಲಾಯಿತು.


ಪ್ರತಿ ಇಬ್ಬರಲ್ಲಿ ಒಬ್ಬ ಪುರುಷನಿಗೆ ಮಿಲನಕ್ಕೆ ಸಾಕಾಗುವಷ್ಟು ಗಡಸುತನ ಅಥವಾ ನಿಮಿರುವಿಕೆ ಇಲ್ಲ. ಇದರಿಂದ ಅವರ ಸಮಗ್ರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎನ್ನವುದು ಮಹತ್ವದ ಫಲಿತಾಂಶವಾಗಿದೆ.

ಭಾರತ ಮತ್ತಿತರ 12 ದೇಶಗಳು ಸಮೀಕ್ಷೆಯ ಫಲಿತಾಂಶವು ಆಸಕ್ತಿಕರವಾಗಿವೆ. ಲೈಂಗಿಕ ಜೀವನದಲ್ಲಿ ಚಟುವಟಿಕೆಯಿಂದಿರುವ 3957ಜನರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. (2016 ಪುರುಷರು, 1941 ಮಹಿಳೆಯರು) ಇವರಲ್ಲಿ 25ರಿಂದ 74 ವಯೋಮಾನದವರಿದ್ದರು.  ಅವರಲ್ಲಿ ಶೇ 57ರಷ್ಟು ಪುರುಷರು, ಶೇ 64ರಷ್ಟು ಜನ ಮಹಿಳೆಯರು ತಮ್ಮ ಲೈಂಗಿಕ ಜೀವನದಿಂದ ಸಂತೃಪ್ತರಾಗಿಲ್ಲ. ಏಷ್ಯಾ ಪೆಸಿಫಿಕ್‌ನಲ್ಲಿ ವಿಭಿನ್ನ ಸಂಸ್ಕೃತಿ ಆಚಾರ ವಿಚಾರ ಇರುವ ಪ್ರದೇಶಗಳಲ್ಲಿ ಲೈಂಗಿಕ ಜೀವನದ ಬಗ್ಗೆ ಅವರ ವಿಚಾರಗಳನ್ನು ಅರಿಯುವ ಯತ್ನ ಈ ಸಮೀಕ್ಷೆಯದ್ದಾಗಿತ್ತು. 

ಸಮೀಕ್ಷೆಯ ಫಲಿತಾಂಶಗಳು (ಭಾರತೀಯರ ಕುರಿತು)
* ಪ್ರತಿ ಇಬ್ಬರು ಪುರುಷರಲ್ಲಿ ಒಬ್ಬರಿಗೆ ನಿಮಿರುವಿಕೆಯಲ್ಲಿ ಗಡಸುತನದ ಕೊರತೆ ಇದೆ.
* ಗಡಸುತನ ಇರುವ ಪುರುಷರು ತಮ್ಮ ಲೈಂಗಿಕ ಜೀವನದಿಂದ ಸಂತೃಪ್ತರಾಗಿದ್ದಾರೆ.
* ಗಡಸುತನ ಹೊಂದಿರುವ ಪುರುಷರು ತಮ್ಮ ಜೀವನದಲ್ಲಿ ಆತ್ಮವಿಶ್ವಾಸದಿಂದಿರುತ್ತಾರೆ.
* ಗಡಸುತನ ಇರುವ ಪುರುಷರು ತಮ್ಮ ಪ್ರೀತಿ, ಪ್ರೇಮ ಪ್ರಣಯಗಳಲ್ಲಿ ಸಂತೃಪ್ತರಾಗಿರುತ್ತಾರೆ ಹಾಗೂ ಅತಿ ಹೆಚ್ಚು ಮಹತ್ವ ನೀಡುತ್ತಾರೆ. ಜೊತೆಗೆ ಅವರ ಕೌಟುಂಬಿಕ ಜೀವನಕ್ಕೂ ಹೆಚ್ಚು ಮಹತ್ವ ನೀಡುತ್ತಾರೆ. ತಮ್ಮ ಸಂಗಾತಿಯನ್ನು ಹೆಚ್ಚು ನೆಚ್ಚಿಕೊಂಡಿರುತ್ತಾರೆ.

ಏಷಿಯಾ ಪೆಸಿಫಿಕ್‌ನ ಫಲಿತಾಂಶಗಳು
ಶೇ 57ರಷ್ಟು ಪುರುಷರು ಹಾಗೂ ಶೇ 64ರಷ್ಟು ಮಹಿಳೆಯರು ತಮ್ಮ ಲೈಂಗಿಕ ಜೀವನದಿಂದ ಸಂಪೂರ್ಣವಾಗಿ ಸಂತೃಪ್ತರಾಗಿಲ್ಲ. ಲೈಂಗಿಕ ಜೀವನದಲ್ಲಿ ಸಂತೃಪ್ತರಾಗಿರುವವರು ತಮ್ಮ ಬದುಕಿನ ಬಗ್ಗೆಯೂ ಸಂತೃಪ್ತಿಯನ್ನು ವ್ಯಕ್ತ ಪಡಿಸುತ್ತಾರೆ.

ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರಿಬ್ಬರ ಲೈಂಗಿಕ ಸಂತೃಪ್ತಿಯು ಗಡಸುತನ ವನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ. ಲೈಂಗಿಕ ಜೀವನದಲ್ಲಿ ಸಂತೃಪ್ತರಾದವರು ತಮ್ಮ ಬದುಕಿನ ಬಗ್ಗೆಯೂ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂತೃಪ್ತಿಯು ಅವರ ಪ್ರೀತಿ, ಪ್ರೇಮ, ಪ್ರಣಯ ಹಾಗೂ ಮುನ್ನಲಿವಿನಲ್ಲಿಯೂ ವ್ಯಕ್ತ ವಾಗುತ್ತದೆ. ಜೊತೆಗೆ ಕೌಟುಂಬಿಕ ಪ್ರೀತಿಯಲ್ಲಿಯೂ ಈ ಸಂತೃಪ್ತಿಯು ಪ್ರತಿಫಲಿಸುತ್ತದೆ ಎನ್ನಲಾಗಿದೆ. ಕಡಿಮೆ ಗಡಸುತನ ಹೊಂದಿರುವ ಪುರುಷರು ವಿರಳವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಕೇಳಿಯ ಮುನ್ನ ಮತ್ತು ನಂತರ ಸಂಗಾತಿಯೊಡನೆ ಇರಲು ಇಷ್ಟ ಪಡುವುದಿಲ್ಲ. ಬದುಕಿನ ಬಗ್ಗೆಯೂ ಸಮಗ್ರವಾಗಿ ನಕಾರಾತ್ಮಕ ಧೋರಣೆ ಹೊಂದಿರುತ್ತಾರೆ.

ಭಾರತೀಯರ ಅಭಿಪ್ರಾಯ
ಭಾರತೀಯರ ಬದುಕಿನಲ್ಲಿ ಲೈಂಗಿಕತೆ ಅತಿ ಹೆಚ್ಚು ಮಹತ್ವವನ್ನು ನೀಡಿಲ್ಲ. ಬದುಕಿನ 17 ಆದ್ಯತೆಗಳ ಪಟ್ಟಿ ನೀಡಿದಾಗ ಪುರುಷರಲ್ಲಿ ಲೈಂಗಿಕತೆಯು 7ನೆಯ ಆಯ್ಕೆಯಾಗಿದೆ. ಮಹಿಳೆಯರಲ್ಲಿ 14ನೆಯ ಕ್ರಮಾಂಕವನ್ನು ಪಡೆದಿದೆ. ಭಾರತೀಯರಲ್ಲಿ ಈಗಲೂ ಲೈಂಗಿಕ ಕ್ರಿಯೆಯ ಬಗ್ಗೆ ಮಾತು, ಚರ್ಚೆ ಅಥವಾ ಮುಕ್ತ ಸಂವಾದವಾಗಲಿ ಇಲ್ಲ. ಆದರೆ ಮಹಿಳೆ ಮತ್ತು ಪುರುಷರಿಬ್ಬರಿಗೂ ಕೌಟುಂಬಿಕ ಜೀವನಕ್ಕೆ ಹೆಚ್ಚು ಆದ್ಯತೆಯನ್ನು ನೀಡಿದ್ದಾರೆ. ಈ ಆದ್ಯತೆಯ ಪಟ್ಟಿಯಲ್ಲಿ ಸಂಗಾತಿಯ ವೃತ್ತಿ, ವೃತ್ತಿ ಭವಿಷ್ಯ, ಪಾಲಕತ್ವ, ಆರ್ಥಿಕ ಸುರಕ್ಷೆ, ಸುಸ್ಥಿರತೆ, ದೈಹಿಕ ಆರೋಗ್ಯ ಮುಂತಾದವಕ್ಕೆ ಮೊದಲ ಆದ್ಯತೆಯನ್ನು ನೀಡಿದ್ದಾರೆ. ಮಹಿಳೆಯರ ಪಟ್ಟಿಯಲ್ಲಿಯೂ ಇವೇ ಅಂಶಗಳು ಮೊದಲ ಆದ್ಯತೆಗಳನ್ನು ಪಡೆದಿವೆ.
  
ಲೈಂಗಿಕ ತೃಪ್ತಿಯು ದೈಹಿಕ ಆರೋಗ್ಯ, ಪ್ರೀತಿ ಹಾಗೂ ಪ್ರಣಯದೊಂದಿಗೆ  ನೇರ ಸಂಪರ್ಕ ಹೊಂದಿದೆ ಎಂದು ಸಮೀಕ್ಷೆಯು ಹೇಳಿದೆ. ಭಾರತೀಯರಲ್ಲಿ ಲೈಂಗಿಕ ಸಂತೃಪ್ತಿಯು ಅವರ ಬದುಕಿನ ಬಗೆಗಿರುವ ದೃಷ್ಟಿಕೋನವನ್ನು ಸ್ಪಷ್ಟ ಪಡಿಸುತ್ತಿದೆ ಎಂದು ಮನಃಶಾಸ್ತ್ರಜ್ಞ, ಮನೋಚಿಕಿತ್ಸಕ, ಹಾಗೂ ಲೈಂಗಿಕ ಸಮಾಲೋಚಕ ಡಾ. ಕಾರ್ತಿಕ್‌ ಅಭಿಪ್ರಾಯಪಡುತ್ತಾರೆ.

ಲೈಂಗಿಕ ತೃಪ್ತಿಯು ನಿಮಿರುವಿಕೆ ಹಾಗೂ ಗಡಸುತನವನ್ನು ಅವಲಂಬಿಸಿರುವುದೂ ಸ್ಪಷ್ಟವಾಗಿದೆ. ಹಾಗಾಗಿ ಭಾರತೀಯ ಕುಟುಂಬ ವೈದ್ಯರು ತಮ್ಮ ಬಳಿ ಬರುವವರ ಹತ್ತಿರ ಅವರ ಲೈಂಗಿಕ ಜೀವನದ ಬಗ್ಗೆಯೂ ಸಮಾಲೋಚಿಸುವುದು ಸೂಕ್ತವಾಗಿದೆ. ಮನುಷ್ಯನ ಸಮಗ್ರ ಆರೋಗ್ಯಕ್ಕೆ ಹಾಗೂ ಆರೋಗ್ಯವಂತ ಜೀವನ ಶೈಲಿಗೆ ಕ್ರಮಬದ್ಧವಾದ ಲೈಂಗಿಕ ಜೀವನವೂ ಅತ್ಯಗತ್ಯವಾಗಿದೆ. ಹಾಗಾಗಿ ಭಾರತೀಯ ಸಾಂಪ್ರದಾಯಿಕ ಹಾಗೂ ಮಡಿವಂತಿಕೆಯ ಮನಃಸ್ಥಿತಿಯನ್ನು ಬದಿಗಿಟ್ಟು, ಪುರುಷರ ಮತ್ತು ಮಹಿಳೆಯರ ಲೈಂಗಿಕ ಜೀವನದ ಬಗ್ಗೆಯೂ ಸಮಾಲೋಚಿಸುವುದು ಅತ್ಯಗತ್ಯವಾಗಿದೆ.

ಏಷ್ಯಾ ಪೆಸಿಫಿಕ್‌ ಸಮೀಕ್ಷೆಯು ಲೈಂಗಿಕಜೀವನ ಹಾಗೂ ಸ್ವಾಸ್ಥ್ಯಮಯ ಬದುಕಿನ ನಡುವೆ ನೇರ ಕೊಂಡಿ ಇದೆಯೆನ್ನವುದು ಸ್ಪಷ್ಟ ಪಡಿಸಿದೆ. ಜೊತೆಗೆ ಅತಿಹೆಚ್ಚು ಪುರುಷರು ಹಾಗೂ ಮಹಿಳೆಯರಲ್ಲಿ ಲೈಂಗಿಕ ಅತೃಪ್ತಿ ಇರುವ ಸತ್ಯವನ್ನೂ ಅದು ಹೊರಗೆಡಹುವಿದೆ ಎಂದು ಸಿಡ್ನಿಯ ಲೈಂಗಿಕ ಮತ್ತು ಸಂಬಂಧಗಳ ಸಮಾಲೋಚನಾ ಕೇಂದ್ರದ ತಜ್ಞೆ  ರೋಸಿ ಕಿಂಗ್‌ ಹೇಳುತ್ತಾರೆ.

ಏಷ್ಯಾ ಪೆಸಿಫಿಕ್‌ನ ಪುರುಷರು ಹಾಗೂ ಸ್ತ್ರೀಯರಿಬ್ಬರೂ ತಮ್ಮ ಕೌಟುಂಬಿಕ ವೈದ್ಯರ ಬಗ್ಗೆ ಲೈಂಗಿಕ ಜೀವನದ ಬಗ್ಗೆ ಸಮಾಲೋಚಿಸಲು ಮುಕ್ತಮನಸನ್ನು ಹೊಂದಿರಬೇಕು.  ನಿಮಿರುವಿಕೆ ಯಲ್ಲಿ ಗಡಸುತನ ಇಲ್ಲದೇ ಇರುವುದರ ಬಗ್ಗೆಯೂ ಚರ್ಚಿಸಬೇಕು. ಇದರಿಂದ ಲೈಂಗಿಕ ಜೀವನದಲ್ಲಿ ಸಂತೃಪ್ತರಾಗಬಹುದು. ಸಂಗಾತಿಯೊಡನೆ ಸಾಮರಸ್ಯ ಕಾಣಬಹುದು. ಸಮಗ್ರ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಕಾಣಬಹುದು.

ಹೃದಯದ ಆರೋಗ್ಯ  ಮಾಪಕವಾಗಿದೆ ಶಿಶ್ನ
ಶಿಶ್ನವು ಧಮನಿಗಳ ಆರೋಗ್ಯ ಸೂಚಕವಾಗಿದೆ ಎಂದು ಹೊಸ ಅಧ್ಯಯನ ಹೇಳುತ್ತದೆ. ಕಳೆದ ವರ್ಷಆಗಸ್ಟ್‌ ಮಾಸದ  ಲೈಂಗಿಕ ವೈದ್ಯಕೀಯ ಜರ್ನಲ್‌ನಲ್ಲಿ ಈ ಬಗ್ಗೆ ಒಂದು ಅಧ್ಯಯನವನ್ನು ಪ್ರಕಟಿಸಲಾಯಿತು. ನಿಮಿರು ದೌರ್ಬಲ್ಯ ಇರುವ ಪುರುಷರಲ್ಲಿ ನಿಮಿರು ದೌರ್ಬಲ್ಯ ಇರದ ಪುರುಷರಿಗಿಂತ ವೇಗವಾಗಿ ಹೃದ್ರೋಗಕ್ಕೆ ತುತ್ತಾಗುತ್ತಾರೆ ಎಂದು ಹೆಳಿದೆ.

ಇಟಲಿಯ ಸಂಶೋಧಕರ ತಂಡವೊಂದು 1687 ರೋಗಿಗಳನ್ನು ತಪಾಸಣೆಗೆ ಒಳಪಡಿಸಿದ್ದರು. ಇವರಲ್ಲಿ ನಿಮಿರು ದೌರ್ಬಲ್ಯ ಇರುವ ಪುರುಷರಲ್ಲಿ ಬಹುತೇಕ ಜನರಿಗೆ ಹೃದಯಾಘಾತದ ಎಲ್ಲ ಸಂಭವ ಇರುವ ಲಕ್ಷಣಗಳೂ ಕಾಣಿಸಿಕೊಂಡಿದ್ದವು. ಖಿನ್ನತೆಗೊಳಗಾಗಿದ್ದರು. ಭಾವನಾತ್ಮಕ ಹಾಗೂ ದೈಹಿಕ ರೋಗಗಳಿಂದ ಬಳಲುತ್ತಿದ್ದರು.

ಶಿಶ್ನದ ನಿಮಿರುವಿಕೆಗೆ ರಕ್ತ ಸರಬರಾಜು ಮಾಡುವ ಧಮನಿಯು ಉಳಿದೆಲ್ಲ ಧಮನಿಯ ವ್ಯವಸ್ಥೆ ಸಮರ್ಪಕವಾಗಿದ್ದಾಗ ಮಾತ್ರ ಸಾಕಷ್ಟು ರಕ್ತವನ್ನು ಸರಬರಾಜು ಮಾಡಬಹುದು. ಆಗ ನಿಮಿರುವಿಕೆಯಲ್ಲಿ ಗಡಸುತನ ಕಂಡು ಬರುತ್ತದೆ.  ಹಾಗಾಗಿ ಹೃದಯಾಘಾತ ಅಥವಾ ಹೃದ್ರೋಗಗಳು ಕಂಡು ಬರುವ ಮುನ್ನವೇ ನಿಮಿರು ದೌರ್ಬಲ್ಯ ಕಂಡು ಬರುತ್ತದೆ. ಹಾಗಾಗಿ ನಿಮಿರುವಿಕೆಯಲ್ಲಿ ಗಡಸುತನವಿರದಿದ್ದಲ್ಲಿ ಅದು ಧಮನಿಗಳ ಆರೋಗ್ಯ ಸೂಚಕದ ಮಾಪಕವೂ ಆಗಿದೆ ಎನ್ನುವುದು ಮರೆಯದಿರಿ.
ಮಾಹಿತಿಗೆ: 9611394477  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT