ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 48ರಷ್ಟು ದಲಿತರಿಗೆ ಮಾರ್ವಾಡಿ ಸಾಲ

ಹಂಪಿ ಕನ್ನಡ ವಿ.ವಿ ಪ್ರಾಧ್ಯಾಪಕ ಚಂದ್ರ ಪೂಜಾರಿ ಹೇಳಿಕೆ
Last Updated 29 ಮೇ 2016, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ದಲಿತರ ಆರ್ಥಿಕ ಸ್ಥಿತಿ ದಯನೀಯವಾಗಿದ್ದು, ಶೇ 48ರಷ್ಟು ದಲಿತರು ಮಾರ್ವಾಡಿಗಳಿಂದ ಸಾಲ ಪಡೆಯುತ್ತಿದ್ದಾರೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಂ. ಚಂದ್ರ ಪೂಜಾರಿ ಹೇಳಿದರು.

ದಲಿತ ಹಕ್ಕುಗಳ ಸಮಿತಿಯ ರಾಜ್ಯ ಘಟಕದ ವತಿಯಿಂದ ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಸಭಾಂಗಣದಲ್ಲಿ ಭಾನುವಾರ ನಡೆದ ‘ದಲಿತ ಮಾನವ ಅಭಿವೃದ್ಧಿ: ಸಮಸ್ಯೆ, ಸವಾಲುಗಳು ಹಾಗೂ ಪರಿಹಾರ ಮಾರ್ಗ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 30 ಲಕ್ಷ ದಲಿತ ಕುಟುಂಬಗಳಿವೆ. 13 ಲಕ್ಷ ಕುಟುಂಬಗಳು ಭೂ ಹಿಡುವಳಿಗಳನ್ನು ಹೊಂದಿವೆ. ಇದರಲ್ಲಿ ಶೇ 82ರಷ್ಟು ಕುಟುಂಬಗಳು ಸಣ್ಣ ಹಿಡುವಳಿಗಳ ಮಾಲೀಕರು. ಈ ಕುಟುಂಬಗಳು ಸರಾಸರಿ ಒಂದೂವರೆ ಎಕರೆ ಜಮೀನಿನ ಒಡೆಯರು. ಈ ಪೈಕಿ ಶೇ 72ರಷ್ಟು ಒಣಭೂಮಿ. ಹೀಗಾಗಿ ದಲಿತರು ದಶಕಗಳಿಂದ ಬಡವರಾಗಿಯೇ ಉಳಿದಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಗಂಗಾ ಕಲ್ಯಾಣ ಯೋಜನೆಯಡಿ 1995ರಿಂದ 2000ರ ಅವಧಿಯಲ್ಲಿ 8,088 ಕೊಳವೆಬಾವಿಗಳನ್ನು ಕೊರೆಸಿ 43,317 ಎಕರೆ ನೀರು ಒದಗಿಸಲಾಯಿತು. ಬಳಿಕದ ಐದು ವರ್ಷಗಳಲ್ಲಿ 1,272 ಕೊಳವೆ ಬಾವಿಗಳನ್ನು ಕೊರೆಸಿ 5,171 ಎಕರೆ ಪ್ರದೇಶಕ್ಕೆ ನೀರು ಉಣಿಸಲಾಯಿತು. 2005–2008ರ ಅವಧಿಯಲ್ಲಿ ನೂರಕ್ಕೂ  ಕಡಿಮೆ ಕೊಳವೆಬಾವಿಗಳನ್ನು ಕೊರೆಸಿ 161 ಎಕರೆಗೆ ನೀರು ಒದಗಿಸಲಾಯಿತು. ಜಾಗತೀಕರಣದಿಂದಾಗಿ ದಲಿತರ ಅಭಿವೃದ್ಧಿಗೆ ಒದಗಿಸುತ್ತಿರುವ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ದೇಶದಲ್ಲಿ ಜಾತಿ ಹಾಗೂ ಅಭಿವೃದ್ಧಿ ನಡುವೆ ನೇರ ಸಂಬಂಧ ಇದೆ. ಅಸ್ಪೃಶ್ಯತೆ ಸಾಮಾಜಿಕ ಅಂಗವೈಕಲ್ಯ. ಆದರೆ, ಜಾತಿ ಹಾಗೂ ಅಸ್ಪೃಶ್ಯತೆಯನ್ನು ಹೊರಗಿಟ್ಟು ಬಲಾಢ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಯ ವ್ಯಾಖ್ಯಾನ ಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಜನರ ತಲಾ ಆದಾಯವನ್ನು ಅಭಿವೃದ್ಧಿಯ ಮಾಪನ ಎಂದು ಪರಿಗಣಿಸುವುದು ಸರಿಯಲ್ಲ. ಬಳ್ಳಾರಿ ಜಿಲ್ಲೆ ತಲಾ ಆದಾಯದಲ್ಲಿ ಏಳನೇ ಸ್ಥಾನದಲ್ಲಿದೆ.  ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 17ನೇ ಸ್ಥಾನದಲ್ಲಿದೆ. ಅಲ್ಲಿ ಸಿರಿವಂತರ ದಂಡೇ ಇದೆ. ಇನ್ನೊಂದೆಡೆ ಸೂರಿಲ್ಲದವರು ಸಾಕಷ್ಟು ಮಂದಿ ಇದ್ದಾರೆ’ ಎಂದು ವ್ಯಾಖ್ಯಾನಿಸಿದರು.

‘ನಮ್ಮ ವಿಭಾಗದ ವತಿಯಿಂದ 29 ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ತಯಾರಿಸಿ ಅಧಿಕಾರಿಗಳಿಗೆ ನೀಡಲಾಯಿತು. ಅದನ್ನು ಅಧಿಕಾರಿಗಳು ಅಡಗಿಸಿ ಇಟ್ಟಿದ್ದಾರೆ. ಅದರ ಪ್ರತಿ ನನಗೂ ಸಿಕ್ಕಿಲ್ಲ. ಇದು ಬಹಿರಂಗಗೊಂಡರೆ ಕಷ್ಟ ಎಂಬುದು ಅಧಿಕಾರಿಗಳ ಆತಂಕಕ್ಕೆ ಕಾರಣ’ ಎಂದರು.


ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಮಾತನಾಡಿ, ‘ದಲಿತರನ್ನು ಕಡೆಗಣಿಸಿ ಅಭಿವೃದ್ಧಿ ಸಾಧ್ಯ ಎಂಬ ಭ್ರಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟು ಹಾಕುತ್ತಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆಯಿಂದ ದೇಶದ ಎಲ್ಲ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಪ್ರಧಾನಿ ನಂಬಿದ್ದಾರೆ. ದಲಿತರ ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಅಸಾಧ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT