ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50 ಮತದಾನ

ಕೆಲಮಟ್ಟಿಗೆ ಫಲ ನೀಡಿದ ಮತದಾರರ ಜಾಗೃತಿ ಪ್ರಯತ್ನ
Last Updated 23 ಆಗಸ್ಟ್ 2015, 6:34 IST
ಅಕ್ಷರ ಗಾತ್ರ

ಬೆಂಗಳೂರು: ಬೀದಿ ನಾಟಕಗಳಿಂದ ಹಿಡಿದು ಸಾಮಾಜಿಕ ಜಾಲತಾಣದವರೆಗೆ ಮತದಾರರ ಜಾಗೃತಿಗಾಗಿ ನಡೆಸಿದ ಕಸರತ್ತು  ಶನಿವಾರ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಅಲ್ಪ ಫಲ ನೀಡಿದೆ. ಮತದಾನದ ಪ್ರಮಾಣ ತುಸು ಏರಿಕೆ ಕಂಡಿದ್ದು,‌ಶೇ 50ರಷ್ಟು ಜನ ಮತ ಚಲಾಯಿಸಿದ್ದಾರೆ.

ಬೆಳಿಗ್ಗೆ ಮಂದವಾಗಿ ಆರಂಭವಾದ ಮತದಾನ ಸಂಜೆವರೆಗೂ ಚುರುಕು ಪಡೆಯಲಿಲ್ಲ. ಸಾಲದೆಂಬಂತೆ ಸಂಜೆ ಸುರಿದ ಮಳೆ ಇದ್ದ–ಬಿದ್ದ ಉತ್ಸಾಹವನ್ನೂ ಕಳೆಯಿತು.

ನಗರದ ಬಹುತೇಕ ನಿವಾಸಿಗಳಿಗೆ ಪರಮಾಧಿಕಾರದ ಚಲಾವಣೆಗಿಂತ ಎರಡು ದಿನಗಳ ರಜಾ ಪ್ರವಾಸದ ಮೋಜು ಹೆಚ್ಚು ಅಪ್ಯಾಯಮಾನವಾಗಿ ಕಂಡಿತು. ಬಿಬಿಎಂಪಿ ಆಡಳಿತದ ಬಗೆಗಿನ ಭ್ರಮನಿರಸನ, ವಿಭಜನೆ ಬಳಿಕ ಮತ್ತೆ ಚುನಾವಣೆ ನಡೆಯುವುದು ಎನ್ನುವ ನಿರೀಕ್ಷೆ ಲಕ್ಷಾಂತರ ಜನರನ್ನು ಮತಗಟ್ಟೆಯತ್ತ ಹೋಗದಂತೆ ತಡೆಯಿತು.

ವೈಟ್‌ಫೀಲ್ಡ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಟೆಂಪೊ ಟ್ರಾವೆಲರ್‌ ಮೇಲೆ ಕಲ್ಲು ತೂರಿದ ಘಟನೆಯೂ ನಡೆಯಿತು.

ಚೌಡೇಶ್ವರಿನಗರ ವಾರ್ಡ್‌ನಲ್ಲಿ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಬೆಂಬಲಿಗರು ಹಾಗೂ ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು, ಕೈ–ಕೈ ಮಿಲಾಯಿಸುವ ಹಂತ ತಲುಪಿತ್ತು. ಇಲ್ಲಿ ಶಾಸಕರ ಪತ್ನಿಯೇ ಅಭ್ಯರ್ಥಿ.

ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಕುರಿತು ಹಲವು ವಾರ್ಡ್‌ಗಳಲ್ಲಿ ದೂರುಗಳು ಕೇಳಿಬಂದವು. ಕೆಲವು ಮತದಾರರ ಹೆಸರುಗಳು ಅವರು ವಾಸವಾಗಿದ್ದ ವಾರ್ಡ್‌ ಬದಲಿಗೆ ಪಕ್ಕದ ವಾರ್ಡ್‌ ಮತದಾರರ ಪಟ್ಟಿಯಲ್ಲಿ ಪತ್ತೆಯಾದವು. ಎಲೆಕ್ಟ್ರಾನಿಕ್‌ ಮತಯಂತ್ರಗಳ ದೋಷದಿಂದ ಬೇಗೂರು, ಸಿದ್ದಾಪುರ, ತಿಲಕ್‌ನಗರ, ಜೆ.ಸಿ.ನಗರ, ಕುಮಾರಸ್ವಾಮಿ ಲೇಔಟ್‌ ಸೇರಿದಂತೆ ಹಲವೆಡೆ ಮತದಾನ ತಡವಾಗಿ ಶುರುವಾಯಿತು.

ಚುನಾವಣೆ ಎರಡು ಸಾವುಗಳಿಗೂ ಸಾಕ್ಷಿಯಾಯಿತು. ಶಿವಾಜಿನಗರದಲ್ಲಿ ಮತದಾನಕ್ಕೆ ಹೊರಟಿದ್ದ ವ್ಯಕ್ತಿಯೊಬ್ಬರ ಮೇಲೆ ಮರದ ಕೊಂಬೆ ಬಿದ್ದು  ಸಾವನ್ನಪ್ಪಿದರೆ, ವೃಷಭಾವತಿನಗರದಲ್ಲಿ ಮತ್ತೊಬ್ಬರು ಮತದಾನ ಮಾಡಿ ಬರುವಾಗ ಹೃದಯಾಘಾತವಾಗಿ ಮೃತಪಟ್ಟರು.

‘ಸಿ–ವೋಟರ್‌’ ಸಮೀಕ್ಷೆ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ
ಬಿಬಿಎಂಪಿಯಲ್ಲಿ ಯಾವುದೇ ಪಕ್ಷಕ್ಕೂ ಸರಳ ಬಹುಮತ ಸಿಗುವುದಿಲ್ಲ ಎಂದು ‘ಸಿ–ವೋಟರ್‌’  ನಡೆಸಿದ  ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ. 197 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ 90 ರಿಂದ 98, ಬಿಜೆಪಿ 83 ರಿಂದ 91, ಜೆಡಿಎಸ್‌ 9 ರಿಂದ 17 ಸ್ಥಾನಗಳಲ್ಲಿ ಜಯ ಗಳಿಸಬಹುದು. 8 ಕ್ಷೇತ್ರಗಳು ಪಕ್ಷೇತರರ ಪಾಲಾಗಬಹುದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT