ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 80ರಷ್ಟು ಬಜೆಟ್‌ ಘೋಷಣೆ ಅನುಷ್ಠಾನ

ರೈಲ್ವೆ ಸಚಿವ ಸದಾನಂದ ಗೌಡ ಹೇಳಿಕೆ
Last Updated 25 ಅಕ್ಟೋಬರ್ 2014, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಸಾಲಿನ ರೈಲ್ವೆ ಬಜೆಟ್‌ ಘೋಷಣೆಗಳ ಪೈಕಿ ಶೇ 80ರಷ್ಟು ಕಾರ್ಯಕ್ರಮಗಳಿಗೆ ಈಗಾ­ಗಲೇ ಚಾಲನೆ ನೀಡಲಾಗಿದೆ. ಇನ್ನುಳಿದ ಶೇ 20 ರಷ್ಟು ಘೋಷಣೆಗಳನ್ನು ಶೀಘ್ರ­ದಲ್ಲಿಯೇ ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸಿದ್ದೇವೆ’ ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ಶನಿವಾರ ಅವರು ವೈಫೈ ಸೌಲಭ್ಯ ಮತ್ತು ಯಶವಂತಪುರ –ಪಂಡರಾಪುರ – ಹಂಪಿ ‘ಸುಖಮಂಗಲಂ ಯಾತ್ರ’ ವಿಶೇಷ ಪ್ರವಾಸಿ ರೈಲಿಗೆ ಚಾಲನೆ ನೀಡಿ ಮಾತನಾಡಿದರು.

‘ದೇಶದಲ್ಲಿ ಪ್ರತಿನಿತ್ಯ ಸುಮಾರು 2.30 ಕೋಟಿ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸೇವೆ ಒದಗಿಸುತ್ತಿದೆ. 150ವರ್ಷಕ್ಕೂ ಹೆಚ್ಚು ಕಾಲದಿಂದ ನಿರತವಾಗಿರುವ ಈ ಸೇವೆಯಲ್ಲಿ ಹೊಸತನ ತರಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ, ಈ ಬಾರಿಯ ಬಜೆಟ್‌ನಲ್ಲಿ ಮಾಹಿತಿ ತಂತ್ರಜ್ಞಾನದ ಉಪಕ್ರಮಗಳಿಗೆ ವಿಶೇಷ ಆದ್ಯತೆ ನೀಡಿದ್ದೇವೆ’ ಎಂದರು.

‘ಬಜೆಟ್‌ನಲ್ಲಿ ಸುರಕ್ಷತೆ, ಭದ್ರತೆ ಮತ್ತು ಸೇವೆ ಈ ಮೂರು ವಿಚಾರಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಸುರಕ್ಷತೆ­ಗಾಗಿ ಹಲವಾರು ತಂತ್ರಜ್ಞಾನಗಳ ಅಳವಡಿಕೆ ಕಾರ್ಯ ನಡೆದಿದೆ. ಭದ್ರತೆ­ಗಾಗಿ 17 ಸಾವಿರ ಪುರುಷ ಮತ್ತು 4 ಸಾವಿರ ಮಹಿಳಾ ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಸೇವೆ ನೀಡುವ ದಿಸೆಯಲ್ಲಿ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆ ಉನ್ನತೀಕರಿಸಿದ್ದೇವೆ. ಇದೀಗ ಒಂದು ನಿಮಿಷಕ್ಕೆ ಆನ್‌ಲೈನ್‌ನಲ್ಲಿ 7200 ಟಿಕೆಟ್‌ ಬುಕ್‌ ಮಾಡುವುದರೊಂದಿಗೆ 2 ಲಕ್ಷ ಜನರು ಈ ಸೇವೆಯನ್ನು ಬಳಸಿಕೊಳ್ಳಬಹುದು. ಇದರಿಂದ ಟಿಕೆಟ್‌ ಕೌಂಟರ್‌ ಎದುರಿನ ದಟ್ಟಣೆ ಅರ್ಧದಷ್ಟು ಕಡಿಮೆಯಾಗಿದೆ’ ಎಂದು ಹೇಳಿದರು.

‘ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ತಾವು ಪ್ರಯಾಣಿಸುವ ರೈಲು ಎಲ್ಲಿದೆ ಎಂದು ಪತ್ತೆ ಮಾಡುವ ವ್ಯವಸ್ಥೆ ಒಳಗೊಂಡಂತೆ ಮುಂದಿನ ತಲೆಮಾರಿನ ಇ–ಟಿಕೆಟ್‌, ಸ್ಮಾರ್ಟ್‌ಕಾರ್ಡ್‌, ಪ್ರಮುಖ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ, ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ಸೇವೆ ಒದಗಿಸುವ ಹಲವಾರು ಸೇವೆಗಳಿಗೆ ಶೀಘ್ರದಲ್ಲಿಯೇ ಚಾಲನೆ ದೊರೆಯಲಿವೆ’ ಎಂದು ತಿಳಿಸಿದರು.

‘ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ದೀಸೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಈಶಾನ್ಯ ರಾಜ್ಯಗಳಿಗೆ ಪ್ರವಾಸಕ್ಕೆ ಹೊರಡುವುದಾದರೆ ರಿಯಾಯಿತಿ ದರದಲ್ಲಿ ವಿಶೇಷ ರೈಲು ಬಿಡುವ ವ್ಯವಸ್ಥೆ ಮಾಡಿದ್ದೇವೆ. ಈಗಾಗಲೇ ಸ್ವಚ್ಛತೆ ದೃಷ್ಟಿಯಿಂದ 1300 ಬೋಗಿಗಳಲ್ಲಿ ಜೈವಿಕ ಶೌಚಾಲಯ ಅಳವಡಿಸಲಾಗಿದೆ. ಗುಣಮಟ್ಟದ ಸಿದ್ಧಪಡಿಸಿದ ಆಹಾರ ಪೂರೈಕೆಗೆ ಕೂಡ ಕ್ರಮತೆಗೆದುಕೊಳ್ಳಲಾಗಿದೆ’ ಎಂದರು.

ಶೀಘ್ರದಲ್ಲಿಯೇ ಕೋಚಿಂಗ್‌ ಟರ್ಮಿನಲ್‌: ‘ಬೈಯಪ್ಪನಹಳ್ಳಿಯಲ್ಲಿ ಕೋಚಿಂಗ್‌ ಟರ್ಮಿನಲ್‌ ನಿರ್ಮಾಣ ಯೋಜನೆ ಈಗಾಗಲೇ ಸಿದ್ಧಪಡಿಸ­ಲಾಗಿದೆ. ಅಂತರರಾಷ್ಟ್ರೀಯ ಗುಣ­ಮಟ್ಟದ ಈ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳ­ಲಾಗುತ್ತಿದೆ. ಇದು ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ’ ಎಂದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್ ಮಾತನಾಡಿ, ‘ನಗರದ ಕೇಂದ್ರ ರೈಲು ನಿಲ್ದಾಣದೊಂದಿಗೆ ಸಂಪರ್ಕಿಸುವ ಕೆಂಗೇರಿ, ಯಶವಂತಪುರ, ಯಲಹಂಕ ಮತ್ತು ಕೃಷ್ಣರಾಜಪುರದ ನಿಲ್ದಾಣ­ಗಳಿಂದ ಮುಂಬೈ ಮಾದರಿಯಲ್ಲಿ ಲೋಕಲ್‌ ರೈಲು ಸೇವೆ ಆರಂಭಿಸಬೇಕು ಎನ್ನುವ ಬೇಡಿಕೆಯನ್ನು ಈ ಹಿಂದಿನ ರೈಲ್ವೆ ಸಚಿವರ ಗಮನಕ್ಕೆ ತಂದಿದ್ದೆ. ಆ ಅಂಶವನ್ನು ಅವರು ಮುಂಗಡ ಪತ್ರದಲ್ಲಿ ಘೋಷಣೆ ಮಾಡಿದ್ದಾರೆ. ಈ ಯೋಜನೆಯಿಂದ ಜನರಿಗೆ ತುಂಬ ಅನುಕೂಲವಾಗುತ್ತದೆ. ಈ ಯೋಜನೆಗೆ ರೂ1700 ಕೋಟಿ ಮುಂಗಡ ಹಣ ಬೇಕಿದೆ. ಅದರಲ್ಲಿ ಶೇ 50ರಷ್ಟು ವೆಚ್ಚ­ವನ್ನು ರಾಜ್ಯ ಸರ್ಕಾರ ಕೊಡು­ವುದಾಗಿ ಭರವಸೆ ನೀಡಿತ್ತು. ಈ ಯೋಜನೆಯತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನಹರಿಸಿ, ಶೀಘ್ರದಲ್ಲಿ ಲೋಕಲ್‌ ರೈಲು ಸೇವೆ ಪ್ರಾರಂಭಿಸಲು ಕ್ರಮ­ಕೈಗೊಳ್ಳಬೇಕು’ ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮ­ಲಿಂಗಾರೆಡ್ಡಿ,  ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಎಂ.ವಿ.ರಾಜೀವ್‌ ಗೌಡ, ಶಾಸಕರಾದ ಮುನಿರಾಜು, ಮುನಿರತ್ನ, ಉಪ ಮೇಯರ್ ಕೆ.ರಂಗಣ್ಣ, ನೈಋತ್ಯ ರೈಲ್ವೆ   ಮುಖ್ಯ ವ್ಯವಸ್ಥಾಪಕ ಪಿ.ಕೆ.­ಸಕ್ಸೆನಾ ಮತ್ತಿತರರು ಉಪಸ್ಥಿತರಿದ್ದರು.

ಹೊಸ ರೈಲು ಸಂಚಾರ
‘ಬಜೆಟ್‌ನಲ್ಲಿ ಘೋಷಿಸಿರುವ ಬೆಂಗಳೂರು – ತುಮಕೂರು (ಪ್ರತಿ­ದಿನ), ಹುಬ್ಬಳ್ಳಿ –ಬೆಳಗಾವಿ ಫಾಸ್ಟ್ ಪ್ಯಾಸೆಂಜರ್‌, ಬೆಂಗಳೂರು –ಚಾಮರಾಜನಗರ ಮತ್ತು ಯಶ­ವಂತ­ಪುರ –ಹೊಸೂರು ನೂತನ ರೈಲುಗಳಿಗೆ ನವೆಂಬರ್‌ 1ರಂದು ಚಾಲನೆ ನೀಡಲಾಗುತ್ತದೆ. ‘ಯಶ­ವಂತ­ಪುರ – ಕಟ್ರಾ ಎಕ್ಸ್‌ಪ್ರೆಸ್‌ ಮತ್ತು  ವಾರಾಣಸಿ ಎಕ್ಸ್‌ಪ್ರೆಸ್‌ (ವಾರಕ್ಕೊಮ್ಮೆ) ರೈಲುಗಳಿಗೆ ನ.11ರಂದು ಮತ್ತು ಡಿಸೆಂಬರ್ 4 ರಂದು ಯಶವಂತಪುರ –ಜೋಧ­ಪುರ ಎಕ್ಸ್‌ಪ್ರೆಸ್‌ ಹಸಿರು ನಿಶಾನೆ ತೋರಿಸಲಾಗುವುದು’ ಎಂದರು.

ಆಸ್ತಿ ದುಪ್ಪಟ್ಟಾಗಿಲ್ಲ
ಆಸ್ತಿ ದುಪ್ಪಟ್ಟು  ಕುರಿತಂತೆ  ಕೇಳಲಾದ ಪ್ರಶ್ನೆಗೆ ಸದಾನಂದ ಗೌಡ ಅವರು, ‘ಚುನಾವಣೆಗೆ ಮುಂಚಿತವಾಗಿ  ಅನೇಕ ವ್ಯವಹಾರಗಳು ಮಾತುಕತೆ ಹಂತದಲ್ಲಿದ್ದವು. ನಾಮಪತ್ರ ಸಲ್ಲಿಸಿದ ಮೇಲೆ ಆ ವ್ಯವಹಾರಗಳನ್ನು ಮಾಡಿದ್ದೇನೆ. ರೂ 8.5 ಕೋಟಿ ಸಾಲವನ್ನು ಫೆಡರಲ್‌ ಬ್ಯಾಂಕಿನಿಂದ ಪಡೆದಿದ್ದೆನೆ. ನಯಾ ಪೈಸೆ ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಟ್ಟಿಲ್ಲ. ಪಾರದರ್ಶಕವಾದ ಮಾಹಿತಿ ಸಲ್ಲಿಸಿರುವೆ’ ಎಂದು ಉತ್ತರಿಸಿದರು.

ಸರ್ಕಾರದಿಂದ ರೂ120 ಕೋಟಿ ಬಾಕಿ
ಸಮಾರಂಭದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಾನಂದಗೌಡ ಅವರು ‘ಒಪ್ಪಂದದ ಪ್ರಕಾರ ರಾಜ್ಯ ಸರ್ಕಾರ ರೈಲು ಯೋಜನೆಗಳಿಗೆ ಉಚಿತ ಭೂಮಿ ಮತ್ತು ಯೋಜನಾ ವೆಚ್ಚದ ಶೇ 50ರಷ್ಟು ಪಾಲು ಕೊಡಬೇಕು. ಆದರೆ, ಸರ್ಕಾರ ಈವರೆಗಿನ ಯೋಜನೆಗಳಿಗೆ ಸಂಬಂಧಿಸಿದಂತೆ ಸುಮಾರು ರೂ120 ಕೋಟಿ ಬಾಕಿ ಹಣ ಕೊಡಬೇಕು. ಈ ಕುರಿತಂತೆ ಬಿಬಿಎಂಪಿ ಮತ್ತು ಮುಖ್ಯ ಕಾರ್ಯದರ್ಶಿಗಳ ಜತೆ 2–3 ಸುತ್ತಿನ ಮಾತುಕತೆ ನಡೆಸಿದರೂ ನಮಗೆ ಹಣ ದೊರೆತಿಲ್ಲ. ಚೆಕ್‌ ನೀಡಿದರೆ ಖಾತೆಯಲ್ಲಿ ಹಣ ಇಲ್ಲ ಎನ್ನುವ ಪರಿಸ್ಥಿತಿ ಸರ್ಕಾರಕ್ಕೆ ಬಂದಿದೆ. ಬಾಕಿ ಹಣದಲ್ಲಿ ಶೇ 50ರಷ್ಟು ಕೊಟ್ಟರೂ ನಮಗೆ ಅನುಕೂಲವಾಗುತ್ತೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT