ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಆದರ್ಶಕ್ಕೆ ಸವಾಲು

Last Updated 6 ಫೆಬ್ರುವರಿ 2016, 5:05 IST
ಅಕ್ಷರ ಗಾತ್ರ

ವಿಶ್ವವಿದ್ಯಾಲಯದ ನನ್ನ ಸುದೀರ್ಘ ಸೇವಾ ಅವಧಿಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ನಾನು ಅನೇಕ ಪದವಿ ಕಾಲೇಜುಗಳಿಗೆಸಂಯೋಜನಾ ಸಮಿತಿಯ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ಭೇಟಿ ಇತ್ತಿದ್ದೇನೆ. ನಮ್ಮ ಈ ಭೇಟಿಗಳು ಆರಂಭವಾದ 10-12 ವರ್ಷಗಳ ಕಾಲ ಕಾಲೇಜುಗಳ ಅಧ್ಯಾಪಕರ ಹಾಜರಾತಿ ದಾಖಲೆಗಳಲ್ಲಿ ನಾವು ಕಾಣುತ್ತಿದ್ದುದು ಹೆಚ್ಚಿನ ಸಂಖ್ಯೆಯಲ್ಲಿ ಕಾಯಂ ಹುದ್ದೆಗಳಲ್ಲಿ ನೇಮಕಾತಿ ಹೊಂದಿದ್ದ ಅಧ್ಯಾಪಕರ ಹೆಸರುಗಳನ್ನು. ಆದರೆ ಕಳೆದ ಎಂಟು ವರ್ಷಗಳಿಂದೀಚೆಗೆ ಅನೇಕ ಕಾಲೇಜುಗಳಲ್ಲಿ (ವಿಶೇಷವಾಗಿ ಖಾಸಗಿ ವಲಯದ ಸಂಸ್ಥೆಗಳಲ್ಲಿ) ಸಂಯೋಜನಾ ಸಮಿತಿಗಳ ಗಮನಕ್ಕೆ ಬರಲಾರಂಭಿಸಿದ್ದು, ಪ್ರಾಂಶುಪಾಲರೂ ಸೇರಿದಂತೆ ಬಹುತೇಕ ಅಧ್ಯಾಪಕರು ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಂಥ ಪರಿಸ್ಥಿತಿ. ಇನ್ನು ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲೂ ಅತಿಥಿ ಉಪನ್ಯಾಸಕರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದುದೂ ಕಂಡು ಬರಲಾರಂಭಿಸಿತು.

ಈ ಪರಿಸ್ಥಿತಿ ಬರಬರುತ್ತಾ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿಭಾಗಗಳಲ್ಲಿಯೂ ಗಂಭೀರ ಸ್ವರೂಪತಾಳುತ್ತಿದ್ದು, ಅನೇಕ ವಿಭಾಗಗಳಲ್ಲಿ ಒಬ್ಬರೇ ಕಾಯಂ ಅಧ್ಯಾಪಕರು, ಇನ್ನುಳಿದವರೆಲ್ಲ ಅತಿಥಿ ಉಪನ್ಯಾಸಕರು ಎಂಬಂಥ ಸಂದರ್ಭಗಳು ಸೃಷ್ಟಿಯಾಗಿವೆ. ಕೆಲವು ವಿಶ್ವವಿದ್ಯಾಲಯಗಳಲ್ಲಂತೂ ಇಡೀ ವಿಭಾಗಗಳೇ ಅತಿಥಿ ಉಪನ್ಯಾಸಕರಿಂದ ನಡೆಯುತ್ತಿರುವುದಿದೆ! ಅತಿಥಿ ಉಪನ್ಯಾಸಕರ ಹೆಚ್ಚುತ್ತಿರುವ ನೇಮಕಾತಿ ಮತ್ತು ಈ ಪ್ರವೃತ್ತಿ ಸೃಷ್ಟಿಸುತ್ತಿರುವ ಗೊಂದಲಗಳು ಹಾಗೂ ಆತಂಕಗಳು ಸಮಕಾಲೀನ ಸಂದರ್ಭದಲ್ಲಿ ಉನ್ನತ ಶಿಕ್ಷಣ ಕಾಣುತ್ತಿರುವ ಗಂಭೀರ ಸ್ವರೂಪದ ವಿಪರ್ಯಾಸಗಳಲ್ಲಿ ಎದ್ದು ಕಾಣುವಂತಹವು ಎಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು.

ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಗುಣಮಟ್ಟದ ಮೌಲ್ಯಮಾಪನಕ್ಕೆ ಭೇಟಿ ನೀಡುವ ಎಲ್ಲ ಸಮಿತಿಗಳೂ ಬಹುದಿನಗಳಿಂದ ತಮ್ಮ ವರದಿಗಳಲ್ಲಿ ಕಾಯಂ ಅಧ್ಯಾಪಕರ ನೇಮಕಾತಿ ಆಗಬೇಕು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಶಿಕ್ಷಣದ ಗುಣಮಟ್ಟ ಇಳಿಮುಖವಾಗುತ್ತದೆ ಎಂದು ಬರೆದು ತೆರಳುತ್ತವೆ. ಆದರೆ ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರ ಪಾಡೇನು? ಎಲ್ಲ ಅತಿಥಿ ಉಪನ್ಯಾಸಕರೂ ಕಾಯಂ ಹುದ್ದೆ ಪಡೆಯಲು ನಿಗದಿತವಾಗಿರುವ ಮಾನದಂಡಗಳನ್ನು ಪೂರೈಸಲು ಸಾಧ್ಯವೇ? ಸ್ವತಃ ಅತಂತ್ರ ಸ್ಥಿತಿಯಲ್ಲಿರುವ ಅತಿಥಿ ಉಪನ್ಯಾಸಕರು ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳಿಗೆ, ಅವರು ಬೋಧಿಸುತ್ತಿರುವ ಅಧ್ಯಯನ ವಿಷಯಗಳಿಗೆ ನ್ಯಾಯ ಒದಗಿಸುತ್ತಿದ್ದಾರೆ ಎಂಬ ಪ್ರಶ್ನೆಗಳೆಲ್ಲ ಇಂದಿಗೂ ಪ್ರಶ್ನೆಗಳಾಗಿಯೇ ಉಳಿದಿವೆ.

ಕಳೆದ ಏಳೆಂಟು ವರ್ಷಗಳಲ್ಲಿ ರಾಜ್ಯದ ನಾನಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸುಗಳು ಪ್ರಾರಂಭವಾಗಿವೆ. ಇಂಥ ಅನೇಕ ವಿಭಾಗಗಳಲ್ಲಿ ಬೋಧನೆಯ ಜವಾಬ್ದಾರಿಯನ್ನು ಹೊತ್ತಿರುವವರು ಅತಿಥಿ ಉಪನ್ಯಾಸಕರೇ. ಕೆಲವು ಕಾಲೇಜುಗಳಲ್ಲಂತೂ ಸ್ನಾತಕೋತ್ತರ ಪದವಿಯನ್ನು ಪಡೆದ ತಕ್ಷಣವೇ ಸ್ನಾತಕೋತ್ತರ ತರಗತಿಗಳ ಬೋಧನೆಗಾಗಿ ಇವರನ್ನು ನಿಯೋಜಿಸಲಾಗಿದೆ. ಇದು ವಿಶ್ವವಿದ್ಯಾಲಯಗಳ ಕೆಲ ವಿಭಾಗಗಳಲ್ಲೂ ಕಂಡು ಬರುತ್ತಿರುವಂಥ ಪರಿಸ್ಥಿತಿ. ಬೋಧನಾನುಭವ, ಸಂಶೋಧನಾನುಭವ, ಸೇವಾ ಹಿರಿಮೆ ಮುಂತಾದ ಮಾನದಂಡಗಳನ್ನು ಪರಿಗಣಿಸದೆ ಹೊಸಬರಿಗೆ ಸ್ನಾತಕೋತ್ತರ ಬೋಧನೆ, ಹಿರಿಯರಿಗೆ ಈ ಅವಕಾಶವಿಲ್ಲ. ಈ ಪರಿಸ್ಥಿತಿ ಏತಕ್ಕೆ ಸೃಷ್ಟಿಯಾಯಿತು? ಇದನ್ನು ಪ್ರಶ್ನಿಸಬೇಕಾದ್ದು ಯಾರ ಜವಾಬ್ದಾರಿ? ಈಗಾಗಲೇ ಶ್ರೇಣೀಕೃತವಾಗಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ‘ಯು.ಜಿ- ಪಿ.ಜಿ’ ಎಂಬ ಮತ್ತೊಂದು ಶ್ರೇಣಿ ಸೃಷ್ಟಿಯಾಗಿದ್ದು ಅನೇಕ ಕಾಲೇಜುಗಳಲ್ಲಿ ಮುಜುಗರದ ವಾತಾವರಣ ನಿರ್ಮಾಣವಾಗಿದೆ.

ಮುಂದಾಲೋಚನೆಯಿಲ್ಲದೆ, ಪೂರ್ವಭಾವಿ ತಯಾರಿ ಇಲ್ಲದೆ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಭವಿಷ್ಯದ ಬಗ್ಗೆ ಆಲೋಚಿಸದೆ, ಮೂಲ ಸೌಕರ್ಯ ಒದಗಿಸದೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಗಂಭೀರ ಸ್ವರೂಪದ ಜಿಜ್ಞಾಸೆ ನಡೆದಿದೆಯೇ? ಕಾಳಜಿಗಳುಳ್ಳವರು ಈ ಜಿಜ್ಞಾಸೆಗಳಲ್ಲಿ ತೊಡಗಿ ಪರಿಹಾರಗಳನ್ನು ಸೂಚಿಸುವ ಪ್ರಯತ್ನಗಳನ್ನು ಮಾಡಿದ್ದರೂ ಅಂಥ ಚಿಂತನೆಗಳಿಗೆ ಈ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿನ ಗೋಚರತೆ ಅಥವಾ ಬೆಲೆ ಸಿಕ್ಕಿದೆ ಎನ್ನುವ ಪ್ರಶ್ನೆಗಳಿಗೆ ಶೈಕ್ಷಣಿಕ ಅಧಿಕಾರ ವಲಯದಲ್ಲಿರುವವರ ಸ್ಪಂದನವಾದರೂ ಏನು?

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹೆಚ್ಚು ಹೆಚ್ಚಿನ ಸಂಖ್ಯೆಯ ಯುವಜನರಿಗೆ ಉನ್ನತ ಶಿಕ್ಷಣಾವಕಾಶಗಳು ದೊರೆಯಬೇಕೆಂಬುದಾಗಲಿ, ದೀರ್ಘಕಾಲ ನಗರ ಕೇಂದ್ರಿತವಾಗಿದ್ದ ಉನ್ನತ ಶಿಕ್ಷಣ ಸಣ್ಣ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳತ್ತ ಸರಿಯಬೇಕೆಂಬುದಾಗಲಿ ನಿರ್ವಿವಾದ. ಕಾಲೇಜುಗಳ ಸಂಖ್ಯಾತ್ಮಕ ಹೆಚ್ಚಳದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಅನೇಕ ಹೆಣ್ಣು ಮಕ್ಕಳಿಗೆ, ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಉನ್ನತ ಶಿಕ್ಷಣದಿಂದ ದೂರ ಉಳಿದಿದ್ದವರಿಗೆ ಅವಕಾಶಗಳು ತೆರೆದುಕೊಂಡಿದ್ದೂ ನಿಜ. ಆದರೆ ಬಹುತೇಕ ಹೊಸ ಕಾಲೇಜುಗಳಲ್ಲಿ ಜ್ಞಾನ ವೃದ್ಧಿಗೆ, ಗುಣಮಟ್ಟದ ಶಿಕ್ಷಣಕ್ಕೆ, ಸಾಮರ್ಥ್ಯ ಬೆಳವಣಿಗೆಗೆ ಪೂರಕವಾದ ಪರಿಸರವಿರಲಿಲ್ಲ ಎಂಬುದು ಕೂಡ ಯಾರಿಗೂ ತಿಳಿಯದ ವಿಷಯವೇನಲ್ಲ. ತಿಂಗಳುಗಟ್ಟಲೆ ಸಂಬಳವನ್ನೇ ಪಡೆಯದ ಅಥವಾ ಅತಿ ಕಡಿಮೆ ಸಂಬಳ ಪಡೆಯುವ ಅತಿಥಿ ಉಪನ್ಯಾಸಕರು, ಅನೇಕ ಸಂದರ್ಭಗಳಲ್ಲಿ ಎರಡು ಅಥವಾ ಮೂರು ಕಾಲೇಜುಗಳಲ್ಲಿ ಬೋಧನೆ ಮಾಡಬೇಕಾದಂಥ ಪರಿಸ್ಥಿತಿಯಲ್ಲಿರುವವರು ಹಾಗೂ ಭವಿಷ್ಯದ ಬಗ್ಗೆ ಯಾವುದೇ ಭದ್ರತೆಯಿಲ್ಲದಿರುವವರು- ಇಂಥವರಿಂದ ನಾವು ಶೈಕ್ಷಣಿಕ ಆದರ್ಶಗಳ ಪರಿಪಾಲನೆಯನ್ನು ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ವಾಸ್ತವದಲ್ಲಿ ಸಾಧಿಸಲು ಸಾಧ್ಯವಾಗುವಂಥ ಗುರಿ ಎಂಬುದನ್ನು ಆಲೋಚಿಸಬೇಕಿತ್ತಲ್ಲವೇ?

ಅತಿಥಿ ಉಪನ್ಯಾಸಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದಕ್ಕೆ ಕಳೆದ ಐದಾರು ವರ್ಷಗಳಿಂದೀಚೆಗೆ ವಿಶ್ವವಿದ್ಯಾಲಯಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳರೆಡರಲ್ಲೂ ಹಿರಿಯ ತಲೆಮಾರಿನ ಅನೇಕ ಅಧ್ಯಾಪಕರು ನಿವೃತ್ತಿ ಹೊಂದುತ್ತಿರುವುದೂ ಪ್ರಮುಖ ಕಾರಣ. ನಾನಾ ಕಾರಣಗಳಿಗಾಗಿ ಇವುಗಳಲ್ಲಿ ಅನೇಕ ಹುದ್ದೆಗಳು ಭರ್ತಿಯಾಗುತ್ತಿಲ್ಲ. ಈ ಖಾಲಿ ಜಾಗಗಳನ್ನು ತುಂಬಲು ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರ ಬೋಧನಾ ಗಂಟೆಗಳು ಸಾಮಾನ್ಯವಾಗಿ 2ರಿಂದ 8ರವರೆಗೂ ಇರುತ್ತವೆ. ಇದಕ್ಕಿಂತ ಹೆಚ್ಚಿರುವಂಥ ಸಂದರ್ಭಗಳೂ ಇವೆ. ಇವರಿಗೆ ನೀಡುವ ವೇತನ ಸಂಸ್ಥೆಯಿಂದ ಸಂಸ್ಥೆಗೆ, ವ್ಯವಸ್ಥೆಯಿಂದ ವ್ಯವಸ್ಥೆಗೆ ಭಿನ್ನವಾಗಿರುತ್ತದೆ. ಗಂಟೆಗಿಷ್ಟು ಎಂಬ ನಿಯಮ ಕೆಲವೆಡೆಯಿದ್ದರೆ, ಮತ್ತೆ ಹಲವೆಡೆ ಏಕೀಕೃತ ವೇತನ ನೀಡುವ ವ್ಯವಸ್ಥೆಯೂ ಇದೆ. ಅವರವರ ವಿದ್ಯಾರ್ಹತೆಗೆ (NET, SET, Ph.D) ಅನುಗುಣವಾಗಿ ವೇತನವನ್ನು ನಿಗದಿ ಮಾಡಿರುವಂಥ ಪ್ರಕರಣಗಳೂ ಇವೆ. ಅತಿಥಿ ಉಪನ್ಯಾಸಕರ ವೇತನವನ್ನು ನಿಗದಿಪಡಿಸಲು ಬಳಸುವ ಮಾನದಂಡ ಯಾವುದೇ ಇರಲಿ ಒಂದಂತೂ ಸತ್ಯ, ಅದೇನೆಂದರೆ ಯು.ಜಿ.ಸಿ. ವೇತನ ಪಡೆಯುವ ಅಧ್ಯಾಪಕರ ಆರ್ಥಿಕ ಸ್ಥಿತಿಗೂ ಅವರಿಗೆ ಒದಗಿ ಬರುವ ಅನುಕೂಲಗಳಿಗೂ ಅತಿಥಿ ಉಪನ್ಯಾಸಕರ ವೇತನಕ್ಕೂ ಅಪಾರ ಅಂತರವಿದೆ. ಈ ಬಗೆಯ ಶ್ರೇಣೀಕೃತ ವ್ಯವಸ್ಥೆ ಶಿಕ್ಷಣ ವ್ಯವಸ್ಥೆಯ ದುರಂತಗಳಲ್ಲಿ ಒಂದಷ್ಟೇ ಅಲ್ಲ, ಅತಿಥಿ ಉಪನ್ಯಾಸಕರ ಅಸಮಾಧಾನಕ್ಕೂ ಕಾರಣವಾಗಿದೆ.

ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುವಾಗ ನಿಗದಿತ ಮಾನದಂಡಗಳ ಅನ್ವಯವೇ ಆಯ್ಕೆ ಪ್ರಕ್ರಿಯೆಯನ್ನು ನಡೆಸಬೇಕೆಂಬ ನಿಯಮವೇನೋ ಇದೆ. ಆದರೆ ಎಲ್ಲ ಸಂಸ್ಥೆಗಳಲ್ಲೂ, ಸಂದರ್ಭಗಳಲ್ಲೂ ಹಾಗೆ ನಡೆಯುತ್ತಿಲ್ಲ. ಕೆಲವೆಡೆಗಳಲ್ಲಿ ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ಇತರ ನಿಯಮಗಳನ್ನು ಪಾಲಿಸುತ್ತಿದ್ದರೆ, ಮತ್ತನೇಕ ಸಂಸ್ಥೆಗಳಲ್ಲಿ ಶೈಕ್ಷಣಿಕ ಮಾನದಂಡಗಳನ್ನು ಬದಿಗಿಟ್ಟು, ಎಲ್ಲ ಅರ್ಹತೆಗಳನ್ನು ಪಡೆದಿದ್ದರೂ ಅಂಥವರಿಗೆ ಅವಕಾಶ ನಿರಾಕರಿಸಿರುವಂಥ ಪ್ರಕರಣಗಳೂ ವರದಿಯಾಗಿವೆ. ‘ಪರಿಶ್ರಮಕ್ಕಿಂತ ಪ್ರಭಾವಕ್ಕೇ ಪ್ರಾಶಸ್ತ್ಯ’ ಎನ್ನುವಂಥ ಸ್ಥಿತಿಯೂ ನಿರ್ಮಾಣವಾಗಿದ್ದು ಅತಿಥಿ ಉಪನ್ಯಾಸಕ ಹುದ್ದೆ ಪಡೆಯಲೆಂದೇ ಬಹು ಪ್ರಯತ್ನಗಳಲ್ಲಿ ಅಭ್ಯರ್ಥಿಗಳು ತೊಡಗಿರುವಂಥ ಉದಾಹರಣೆಗಳೂ ಇವೆ.

ಶೈಕ್ಷಣಿಕ, ಆಡಳಿತಾತ್ಮಕ ಅಧಿಕಾರ ಸ್ಥಾನಗಳಲ್ಲಿರುವಂಥ ಕೆಲ ವ್ಯಕ್ತಿಗಳು ಅತಿಥಿ ಉಪನ್ಯಾಸಕರ ಅಸಹಾಯಕತೆ ಬಳಸಿಕೊಂಡು ಅವರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಕೆಲಸ ಮಾಡಿಸಿಕೊಳ್ಳುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ. ಅಗತ್ಯವಿರಲಿ, ಇಲ್ಲದಿರಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಶಿಘಾರಸನ್ನು ಮಾಡಿ, ತಾವು ತೆಗೆದುಕೊಳ್ಳಬೇಕಾದ ತರಗತಿಗಳಿಂದ ಕೆಲ ಕಾಯಂ ಅಧ್ಯಾಪಕರು ತಪ್ಪಿಸಿಕೊಳ್ಳಲೆತ್ನಿಸುತ್ತಿದ್ದಾರೆ ಎನ್ನುವ ಮಾತೂ ಶೈಕ್ಷಣಿಕ ವಲಯದಲ್ಲಿ ಕೇಳಿ ಬಂದಿದೆ.

ತಾವು ಕೆಲಸ ಮಾಡುತ್ತಿರುವ ಪರಿಸ್ಥಿತಿಗಳು ತಮ್ಮ ಶೈಕ್ಷಣಿಕ ಪ್ರಗತಿಗೆ ಯಾವುದೇ ರೀತಿ ಪೂರಕವಾಗಿಲ್ಲಎಂದು ತಿಳಿದಿದ್ದರೂ ಅದನ್ನು ಪ್ರಶ್ನಿಸಲಾಗಲಿ, ಪ್ರತಿಭಟಿಸಲಾಗಲಿ ಆಗದಂಥ ಪರಿಸ್ಥಿತಿಯಲ್ಲಿ ಅನೇಕ ಅತಿಥಿ ಉಪನ್ಯಾಸಕರಿದ್ದಾರೆ. ಅದರಲ್ಲಿ ಕೆಲವರಿಗೆ ಭವಿಷ್ಯದಲ್ಲಿ ತಮಗೆ ಕಾಯಂ ಹುದ್ದೆ ದೊರೆಯಬಹುದು ಎಂಬ  ಆಸೆಯಿದ್ದರೆ, ಮತ್ತೆ ಕೆಲವರಿಗೆ ಪಿಎಚ್.ಡಿ ಅಥವಾ ಮತ್ಯಾವುದಾದರೂ ಸಂಶೋಧನಾ ಅವಕಾಶ ದೊರೆಯಬಹುದೆಂಬ ಆಶಯವೂ ಇದೆ. ಅನೇಕರು ಹತ್ತಕ್ಕಿಂತ ಹೆಚ್ಚು ವರ್ಷ ಅತಿಥಿ ಉಪನ್ಯಾಸಕರಾಗಿಯೇ ಉಳಿದಿರುವಂಥ ನಿದರ್ಶನಗಳಿದ್ದು (ಇವರಲ್ಲಿ ಪೂರ್ಣ ಅರ್ಹತೆಹೊಂದಿರುವವರೂ ಇದ್ದಾರೆ) ಇವರ ಈ ಅನಿಶ್ಚಿತ ಪರಿಸ್ಥಿತಿ ಬೋಧನಾ- ಕಲಿಕಾ ಪ್ರಕ್ರಿಯೆಯ ಮೇಲೆ, ವಿದ್ಯಾರ್ಥಿಗಳ ಸಾಮರ್ಥ್ಯಾಭಿವೃದ್ಧಿಯ ಮೇಲೆ, ಸಂಸ್ಥೆಗಳ ಶೈಕ್ಷಣಿಕ ಶಿಸ್ತಿನ ಮೇಲೆ, ಒಟ್ಟಾರೆ ಶಿಕ್ಷಣದ ಗುಣಮಟ್ಟದ ಮೇಲೆ ಎಂಥ ಪರಿಣಾಮಗಳನ್ನುಂಟು ಮಾಡಬಹುದು ಎನ್ನುವುದನ್ನು ಕುರಿತ ಗಂಭೀರ ಚರ್ಚೆ ಶೈಕ್ಷಣಿಕ ವಲಯದಲ್ಲಿ ಎಷ್ಟರ ಮಟ್ಟಿಗೆ ಆಗುತ್ತಿದೆ? ಕುಸಿಯುತ್ತಿರುವ ಶೈಕ್ಷಣಿಕ ಗುಣಮಟ್ಟದ ಬಗ್ಗೆ ನಿರಂತರವಾಗಿ ಟೀಕೆ-ಟಿಪ್ಪಣಿಗಳನ್ನು ನೀಡುತ್ತಿರುವವರು ವ್ಯವಸ್ಥೆಗಳನ್ನು ಸರಿಪಡಿಸಲು ಯಾವ್ಯಾವ ಮಾರ್ಗೋಪಾಯಗಳನ್ನು ಹುಡುಕಿದ್ದಾರೆ ಹಾಗೂ ಜಾರಿಗೆ ತಂದಿದ್ದಾರೆ? ಈ ಪ್ರಶ್ನೆಗಳನ್ನು ಕುರಿತ ಚರ್ಚೆ, ಸಂವಾದ ಸಾರ್ವಜನಿಕ ವಲಯದಲ್ಲಿ ಇನ್ನು ಮುಂದಾದರೂ ಬಹು ದೊಡ್ಡ ಪ್ರಮಾಣದಲ್ಲಿ ಆಗಬೇಕಿದೆ. ಇದರಲ್ಲಿ ಸಂಬಂಧಪಟ್ಟವರು ಭಾಗವಹಿಸಿ ಉತ್ತರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ಬಹು ಅವಶ್ಯ.

ಈ ಸಮಸ್ಯೆಯನ್ನು ಎದುರಿಸುವಲ್ಲಿ ಅತಿಥಿ ಉಪನ್ಯಾಸಕರ ಜವಾಬ್ದಾರಿ ಕುರಿತು ಪ್ರಸ್ತಾಪ ಮಾಡದಿದ್ದರೆ ಚರ್ಚೆ ಅಪೂರ್ಣವಾಗುತ್ತದೆ. ಕಾಯಂ ಹುದ್ದೆಗಳು ಗಗನ ಕುಸುಮವಾಗುತ್ತಾ ಹೋದಹಾಗೆ (ಏಕೆಂದರೆ ಲಭ್ಯ ಹುದ್ದೆಗಳ ಸಂಖ್ಯೆಗೂ ಆಕಾಂಕ್ಷಿಗಳ ಸಂಖ್ಯೆಗೂ ಇರುವ ಅಂತರ ಹೆಚ್ಚಾಗುತ್ತಲೇ ಹೋಗುತ್ತಿದೆ) ಅನೇಕ ಪದವೀಧರರಲ್ಲಿ ಅತಿಥಿ ಉಪನ್ಯಾಸಕ ಹುದ್ದೆಯಾದರೂ ಸರಿ, ಏನೋ ಒಂದು ಕೆಲಸವಿದ್ದರೆ ಸಾಕು ಎನ್ನುವ ಮನಃಸ್ಥಿತಿ ಸೃಷ್ಟಿಯಾಗುತ್ತಿದೆ. ಬೋಧನಾ ಗಂಟೆಗಳು ಎಷ್ಟಾದರೂ ಇರಲಿ, ಕಾಲೇಜು ಅಥವಾ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರು ಎಂಬ ಸಾಮಾಜಿಕ ಗುರುತಿಸುವಿಕೆ ಅಥವಾ ಸ್ಥಾನ ಅದಕ್ಕಿಂತ ಮುಖ್ಯ ಎಂಬ ಧೋರಣೆಯೂ ಕೆಲವರಲ್ಲಿ ಮನೆಮಾಡಿದೆ. ಕೇವಲ ಒಂದು ಅಥವಾ ಎರಡು ಗಂಟೆಗಳ ಬೋಧನಾ ಅವಕಾಶಗಳಿಗಾಗಿ ಕೆಲವು ವ್ಯಕ್ತಿಗಳು ಶತಪ್ರಯತ್ನ ಮಾಡಿರುವಂಥ ನಿದರ್ಶನಗಳೂ ಇವೆ. ಕೆಲ ಅತಿಥಿ ಉಪನ್ಯಾಸಕರು ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಬೋಧನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಪ್ರವೃತ್ತಿಗಳು ಶಿಕ್ಷಣದ ವ್ಯವಸ್ಥೆಯ ಆರೋಗ್ಯಕರ ಬೆಳವಣಿಗೆಗೆ ಪೂರಕವಲ್ಲ.

ಅತಿಥಿ ಉಪನ್ಯಾಸಕರು- ಕಾಯಂ ಅಧ್ಯಾಪಕರ ವಿಚಾರ ಇಂದು ಒಂದು ನಿರ್ಣಾಯಕ ಹಂತ ತಲುಪಿದ್ದು, ಇಂದು ನಾಳೆಗಳ ಬಗ್ಗೆಯೇ ಚಿಂತೆ, ಚರ್ಚೆಯಲ್ಲಿ ನಾವು ತೊಡಗಿದ್ದೇವೆ. ಆದರೆ ಈ ಇಡೀ ಚರ್ಚೆಯನ್ನು ಕೇವಲ ಅಧ್ಯಾಪಕರ ಉದ್ಯೋಗ ಭದ್ರತೆ, ವೇತನ ಭದ್ರತೆಯ ಚೌಕಟ್ಟಿಗೆ ಸೀಮಿತಗೊಳಿಸದೆ ಶೈಕ್ಷಣಿಕ ಅರ್ಹತೆಗೆ, ಸೇವಾ ಹಿರಿತನಕ್ಕೆ ಬೆಲೆ ನೀಡಿ, ಎಲ್ಲಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು, ಅವರ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಅಧ್ಯಾಪಕರ ಕಾರ್ಯ ವೈಖರಿಯನ್ನು ಹಾಗೂ ದಕ್ಷತೆಯನ್ನು ಅಳೆಯುವಂತಹ ವ್ಯವಸ್ಥೆ ನಿರ್ಮಾಣವಾಗಬೇಕಾಗಿದೆ.

ಹೋಗುವುದೆಲ್ಲಿಗೆ?
ಇತ್ತೀಚೆಗಷ್ಟೇ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಲಭ್ಯವಿರುವ ಒಟ್ಟು ಹುದ್ದೆಗಳ ಸಂಖ್ಯೆ 2160 ಮಾತ್ರ. ಇದನ್ನು ವಿಷಯವಾರು ವಿಂಗಡಿಸಿದಾಗ ಕೆಲ ಅಧ್ಯಯನ ವಿಷಯಗಳಲ್ಲಂತೂ ಬೆರಳಣಿಕೆಯಷ್ಟು ಹುದ್ದೆಗಳು ಲಭ್ಯವಿವೆಯಷ್ಟೆ. ಆದರೆ ಈ ಹುದ್ದೆಗಳ ಅಕಾಂಕ್ಷಿಗಳ ಸಂಖ್ಯೆ ಐದು ಅಥವಾ ಹತ್ತುಪಟ್ಟು ಇದ್ದು ಅವರಲ್ಲಿ ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರೂ ಸೇರಿದ್ದಾರೆ. ಕಾಯಂ ಹುದ್ದೆಗಳು ಭರ್ತಿಯಾದಾಗ ಇನ್ನುಳಿದವರು ಹೋಗುವುದೆಲ್ಲಿಗೆ?

ಪ್ರಮುಖ ಬೇಡಿಕೆ
* ಎಲ್ಲ ಅತಿಥಿ ಉಪನ್ಯಾಸಕರ ಸೇವೆ ಕಾಯಂ

* ಕಾನೂನು ತೊಡಕುಗಳ ನಿವಾರಣೆಗೆ ತಜ್ಞರ ಸಮಿತಿ ರಚನೆ
* ಮಾಸಿಕ ವೇತನ ₹ 25 ಸಾವಿರಕ್ಕೆ ಹೆಚ್ಚಳ
* ಪ್ರತಿ ತಿಂಗಳ ಮೊದಲ ವಾರದಲ್ಲೇ ವೇತನ ಪಾವತಿ
* ವರ್ಷದ 12 ತಿಂಗಳೂ ವೇತನ
* ಮಹಿಳೆಯರಿಗೆ ವೇತನ ಸಹಿತ 3 ತಿಂಗಳು ಹೆರಿಗೆ ರಜೆ
* ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲಿ ಕಾರ್ಯ ನಿರ್ವಹಿಸಲು ಅಧಿಕೃತ ಅವಕಾಶ
* ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.72 ಲಕ್ಷ ಹುದ್ದೆಗಳ ಶೀಘ್ರ ಭರ್ತಿ
* ಬ್ಯಾಕ್‌ಲಾಗ್‌ ಉಪನ್ಯಾಸಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕ
* ಕಾಯಂ ನೇಮಕಾತಿ ಸಂದರ್ಭದಲ್ಲಿ ವಯೋಮಿತಿ ಮೀರಿದ, ಮೀರುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಹಿರಿತನದ ಆಧಾರದಲ್ಲಿ ಆದ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT