ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಸಂಸ್ಕೃತಿ ಮತ್ತು ಬದಲಾವಣೆ

Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ರೈತನಾಗಿ ಹುಟ್ಟುವುದು ಮತ್ತು ರೈತನಾಗಿಯೇ ಬದುಕುವುದು ಒಂದು ದೌರ್ಭಾಗ್ಯ ಎಂದು ರೈತರೇ ಅಂದುಕೊಳ್ಳುವ ಮಟ್ಟಕ್ಕೆ ಅವರನ್ನು ದೇಶ ತಂದಿಟ್ಟಿದೆ. ಸ್ಮಾರ್ಟ್‌ ಸಿಟಿಗಳನ್ನು ಕಟ್ಟಲು ಹೊರಡುವವರು, ವಿದೇಶಗಳ ಮಾದರಿಯನ್ನು ತಂದು ಮುಂದಿಡುವವರು, ಅನ್ನಭಾಗ್ಯದಂಥ  ಯೋಜನೆಗಳನ್ನು ಘೋಷಿಸುವವರು ಇಲ್ಲಿ ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ, ನಮ್ಮ ರಾಜಕೀಯ ನಾಯಕರಲ್ಲಿ ಬಹುತೇಕ ಮಂದಿಗೆ ಅರ್ಥಶಾಸ್ತ್ರ ಗೊತ್ತಿಲ್ಲ ಅನ್ನುವುದನ್ನು ಅವರು ಜಾರಿಗೆ ತಂದಿರುವ  ಯೋಜನೆಗಳೇ ಹೇಳುತ್ತವೆ.

ಇಪ್ಪತ್ತು ವರ್ಷದ ಒಬ್ಬ ತರುಣ ಮೊನ್ನೆ ತನ್ನ ಬೆನ್ನಿಗೆ ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರ ಹೆಸರಿರುವ ಬ್ಯಾಗ್ ಕಟ್ಟಿಕೊಂಡು  ರಸ್ತೆಗಳಲ್ಲಿ ಅಡ್ಡಾಡುತ್ತಿದ್ದ. ಅದೇ ಸಂಸ್ಥೆಯವರು ಕೊಟ್ಟ ಟಿ–ಷರ್ಟ್, ಪ್ಯಾಂಟು ಹಾಕಿಕೊಂಡಿದ್ದ. ಆ ಹುಡುಗನನ್ನು ಮಾತನಾಡಿಸಿದರೆ, ಅವನು ಮಂಡ್ಯದ ನಾಗಮಂಗಲದ ರೈತರೊಬ್ಬರ ಮಗ ಅನ್ನುವುದು ಗೊತ್ತಾಯಿತು. ಆರೇಳು ಎಕರೆ ಜಮೀನಿದ್ದ ಕಾಲದಲ್ಲಿ ಸಣ್ಣಕ್ಕಿಯನ್ನು ಅವನ ತಾತಂದಿರ ಕಾಲದಲ್ಲಿ ಬೆಳೆಯುತ್ತಿದ್ದರಂತೆ. ಆಮೇಲೆ ರಾಗಿ, ಹುರುಳಿ ಬೆಳೆಯಲು ಶುರುಮಾಡಿದರಂತೆ. ಇವನ ಕಾಲಕ್ಕೆ ಆಸ್ತಿ ಪಾಲಾಗಿ ಒಂದು ಎಕರೆ ಹದಿನೆಂಟು ಗುಂಟೆ ಇವನ ಪಾಲಿಗೆ ಬಂದಿತ್ತಂತೆ.
ಅಷ್ಟು ನೆಲದಲ್ಲಿ ಏನಾದರೂ ಬೆಳೆಯೋದಕ್ಕೆ ಆಗುವುದಿಲ್ಲವೇ, ತರಕಾರಿ ಬೆಳೆಯಬಹುದಲ್ವೇ? ಅಂತ ಕೇಳಿದರೆ,  ‘ಅದು ಮರಳು ಮಿಶ್ರಿತ ಭೂಮಿ. ಮಳೆ ಬಿದ್ದರೆ ಮಾತ್ರ ನೀರು. ಬಾವಿ ತೋಡಿಸಿದರೆ ನೀರು ಸಿಗುತ್ತದೆ ಅಂತ ಖಾತ್ರಿಯಿಲ್ಲ’ ಅಂತೆಲ್ಲಾ ಕಥೆ ಹೇಳತೊಡಗಿದ. ಒಟ್ಟಿನಲ್ಲಿ ಆತನಿಗೆ ಊರಲ್ಲಿರಲು ಇಷ್ಟವಿಲ್ಲ; ನಗರಕ್ಕೆ ಬಂದು ಸೇರಬೇಕು ಅನ್ನುವುದು ಅವನ ಮಾತಿನಲ್ಲಿ ಮತ್ತೆ ಮತ್ತೆ ವ್ಯಕ್ತವಾಗುತ್ತಿತ್ತು. ಸಿಟಿಯಲ್ಲಿ ಕೆಲಸ ಅಂತ ಹೇಳಿಕೊಳ್ಳುವುದು ರೈತ ಎಂದು ಹೇಳಿಕೊಳ್ಳುವುದಕ್ಕಿಂತ ಗೌರವದ್ದು ಎಂದು ಅವನ ಪರಿಸರ ಅವನಿಗೆ ಕಲಿಸಿಕೊಟ್ಟಿತ್ತೇನೋ?

ಇದಕ್ಕೂ ರಾಜಕೀಯಕ್ಕೂ ಏನು ಸಂಬಂಧ? ನಮ್ಮ ದೇಶದಲ್ಲಿ ಸಹಕಾರಿ ಚಳವಳಿಗಳು ಸತ್ತೇ ಹೋದಂತಿವೆ. ಒಂದು ಕಾಲದಲ್ಲಿ ಸಹಕಾರಿ ಸಂಘಗಳು ಮತ್ತು ಸಂಸ್ಥೆಗಳು ಕೃಷಿಕರ ಬೆನ್ನಿಗೆ ನಿಲ್ಲುತ್ತಿದ್ದವು. ಬೆಳೆಗಾರರ ಹಿತರಕ್ಷಣೆ ಮಾಡುತ್ತಿದ್ದವು. ಅಕ್ಕಿ ಮಿಲ್ಲುಗಳು ಕೂಡ ರೈತನ ಆಪತ್ಕಾಲಕ್ಕೆ ನೆರವಾಗುತ್ತಿದ್ದವು. ಇವತ್ತು ಅಂಥ ಯಾವ ವ್ಯವಸ್ಥೆಯೂ ರೈತನ ಹಿತ ಕಾಯುತ್ತಿಲ್ಲ. ಅದಕ್ಕೆ ಕಾರಣ ರೈತನೂ ಅಲ್ಲ, ಸಹಕಾರಿ ಸಂಘಗಳೂ ಅಲ್ಲ. ಮಹಾನಗರಗಳಲ್ಲಿ ತಲೆಯೆತ್ತಿರುವ ಶಾಪಿಂಗ್ ಮಾಲ್‌ಗಳು. ಅವುಗಳ ಕಾರ್ಯವಿಧಾನ, ಅವುಗಳ ನಡುವಿನ ಪೈಪೋಟಿ. ರೈತನಿಗೆ ತನ್ನ ಉತ್ಪನ್ನವನ್ನು ಎಲ್ಲಿಗೆ ತಲುಪಿಸಬೇಕು ಅನ್ನುವುದೇ ಗೊತ್ತಾಗದ ಸ್ಥಿತಿ.

ಕರ್ನಾಟಕ ಹಾಲು ಮಹಾಮಂಡಳದ ಕಾರ್ಯವೈಖರಿಯನ್ನೇ ನೋಡಿ. ಅದು ಎಷ್ಟು ಅಚ್ಚುಕಟ್ಟಾಗಿ ಸಹಕಾರ ತತ್ವವನ್ನು ಪಡಿಮೂಡಿಸಿಕೊಂಡು ನಡೆಯುತ್ತಿದೆ. ಅಲ್ಲೇನಾದರೂ ತೊಂದರೆಗಳಾದರೆ, ಅದು ಅಧಿಕಾರ ಹಿಡಿದವರ ದುರಾಸೆಯಿಂದಲೋ ಅಧಿಕಾರ ಲಾಲಸೆಯಿಂದಲೋ ಆಗಬೇಕೆ ಹೊರತು, ರೈತರಿಂದಲೋ ವ್ಯವಸ್ಥೆಯ ಲೋಪದಿಂದಲೋ ಅಲ್ಲ. ಅಂಥದ್ದೇ ಒಂದು ವ್ಯವಸ್ಥೆಯನ್ನು ಅಕ್ಕಿ, ಬೇಳೆ, ತರಕಾರಿ ಇತ್ಯಾದಿಗಳಿಗೂ ಕಲ್ಪಿಸುವುದು ಕಷ್ಟವೇ? ಒಂದು ದಿನ ಇಟ್ಟರೆ ಹಾಳಾಗಿ ಹೋಗುವಂಥ ಹಾಲನ್ನೇ ಶೇಖರಿಸಿ, ಸರಬರಾಜು ಮಾಡುವುದು ಸಾಧ್ಯವಾಗಿರುವಾಗ ಅಂಥದ್ದೇ ಒಂದು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಬೇರೆ ಬೆಳೆಗಾರರಿಗೂ ಯಾಕೆ ಕಲ್ಪಿಸಿಕೊಡಬಾರದು? ಒಂದು ಅಕ್ಕಿ ಮಹಾಮಂಡಳಿ, ಬೇಳೆ ಮಹಾಮಂಡಳಿ, ತರಕಾರಿ ಮಹಾಮಂಡಳಿ ಆರಂಭವಾಗಿ ಲಾಭದಾಸೆಯಿಲ್ಲದೆ, ನಷ್ಟವೂ ಆಗದಂತೆ ರೈತರಿಂದ ಗ್ರಾಹಕರಿಗೆ ಅಕ್ಕಿ, ಬೇಳೆ, ತರಕಾರಿಗಳನ್ನು ಹಸ್ತಾಂತರ ಮಾಡುವ ಕೆಲಸ ಯಾಕೆ ಮಾಡಬಾರದು? ಅಚ್ಚುಕಟ್ಟಾಗಿ ಪ್ಯಾಕ್ ಆಗಿರುವ ವೈವಿಧ್ಯಮಯ ತರಕಾರಿಗಳು ಬೆಳಿಗ್ಗೆ ಮನೆಗೇ ಬಂದು ಬೀಳುತ್ತವೆ ಅಂದರೆ ಯಾರು ತಾನೇ ಬೇಡ ಅನ್ನುತ್ತಾರೆ!

ರೈತರಿಗೆ ಅಪಾರ ಶಕ್ತಿ ಇದೆ. ಅವರೆಲ್ಲಾ ಸೇರಿ ಒಂದು ಪಕ್ಷ ಕಟ್ಟಿದರೆ, ಜಾತಿ ಮತಗಳ ಭೇದವಿಲ್ಲದೆ ತಾವು ರೈತರ ಜಾತಿ ಅಂದುಕೊಂಡು ಮತಹಾಕಿದರೆ, ಇಲ್ಲಿ ರೈತನೊಬ್ಬ ಪ್ರಧಾನಿಯೋ, ಮುಖ್ಯಮಂತ್ರಿಯೋ ಆಗಬಲ್ಲ. ಸಂಪುಟಕ್ಕೆ ನಿಜ ರೈತರು ತುಂಬಿಕೊಂಡರೆ ಕ್ರಾಂತಿಯೇ ಆಗಿಬಿಡಬಹುದು. ಈ ಪ್ರಚಾರದ ರಾಜಕಾರಣ, ಭಾಗ್ಯದ ರಾಜಕಾರಣಗಳನ್ನೆಲ್ಲ ಮೂಲೆಗೆ ತಳ್ಳಿ ಶ್ರಮಸಂಸ್ಕೃತಿಯ ಗೆಲುವು ಕಣ್ಣಿಗೆ ಕಟ್ಟಬಹುದು.

ಇವತ್ತು ಗ್ರಾಮೀಣ ಭಾರತವನ್ನು ಕೀಳರಿಮೆಗೆ ತಳ್ಳುತ್ತಿರುವುದು ನಮ್ಮ ಮನರಂಜನಾ ಉದ್ಯಮ. ಅದು ಎಲ್ಲಾ ಬದಲಾವಣೆಗಳ ಕೊಂಡಿಯಂತೆ ಕೆಲಸ ಮಾಡುತ್ತಿದೆ. ಬಟ್ಟೆ, ಮಾತಿನ ಶೈಲಿ, ಕೆಲಸ ಮಾಡುವ ಕ್ರಮ, ನಿಲುವು, ಒಲವು, ದೃಷ್ಟಿಕೋನ ಎಲ್ಲವನ್ನೂ ಮನರಂಜನೆ ಹೆಸರಿನಲ್ಲಿ ಬದಲಾಯಿಸಲಾಗುತ್ತಿದೆ. ಅದರಲ್ಲಿ ಜಾಹೀರಾತುಗಳ ಪಾತ್ರವೂ ಉಂಟು. ಬಟ್ಟೆ ಬಿಳುಪಾಗಿರಬೇಕು, ಮುಖ ಬಿಳುಪಾಗಿರಬೇಕು, ಶೌಚಾಲಯ ಲಕಲಕ ಅಂತ ಹೊಳೆಯಬೇಕು,  ಮನೆ ಅರಮನೆಯಂತಿರಬೇಕು ಎಂಬಿತ್ಯಾದಿ ಸಂಗತಿಗಳನ್ನು ಎಷ್ಟು ಸೊಗಸಾಗಿ ಹೇರಲಾಗುತ್ತಿದೆ ಎಂದರೆ, ಹಳ್ಳಿಯ ಹುಡುಗ ಹುಡುಗಿಯರು ಕೂಡ ಬಟ್ಟೆಗಳಲ್ಲಿ ಆಧುನಿಕರಾಗುತ್ತಿದ್ದಾರೆ. ಇವತ್ತು ಕೆಲಸ ಇದೆಯೋ ಇಲ್ಲವೋ ಆದಾಯ ಇದೆಯೋ ಇಲ್ಲವೋ, ಆದರೆ ಚೆಂದದ ಬಟ್ಟೆ ಮತ್ತು ಸ್ಮಾರ್ಟ್‌ಫೋನ್  ಅನಿವಾರ್ಯ ಎಂಬ ಭಾವನೆ ಇದೆ.

ಇದರೊಟ್ಟಿಗೆ ಒಂದು ಮನೆಯಿದ್ದರೂ ಮತ್ತೊಂದು ಮನೆ, ಒಂದು ಸೈಟಿದ್ದರೂ ಮತ್ತೊಂದು ಸೈಟು, ಒಂದಿದ್ದರೂ ಮತ್ತೊಂದು ಕೊಂಡುಕೊಂಡು ಸುಭದ್ರರಾಗುವ ಅನುಭೋಗಿ ಪ್ರವೃತ್ತಿಯಲ್ಲೇ ನಮ್ಮ ದುರಂತದ ಬೀಜ ಇದ್ದಂತಿದೆ. ಅಷ್ಟೇ ಅಲ್ಲದೆ, ಶಿಕ್ಷಣವು ಮೂಲತಃ ವ್ಯಕ್ತಿಯಲ್ಲಿ ವಿಚಾರಶೀಲತೆಯನ್ನು, ಜೊತೆಗೆ ಅದಕ್ಕೆ ಸಂಬಂಧಿಯಾಗಿ ಆಚಾರಶೀಲತೆಯನ್ನು ರೂಢಿಸಬೇಕಿತ್ತು. ವಾಸ್ತವ ಹಾಗಿಲ್ಲ. ಅಕ್ಷರ- ವಿದ್ಯೆ- ಬುದ್ಧಿ- ವಿಚಾರ- ಆಚಾರ ಇವುಗಳ ಮಧ್ಯೆ ಪರಸ್ಪರ ಸಂಬಂಧವೇ ಇಲ್ಲದಂತಾಗಿರುವ ಈ ಸಂದರ್ಭದಲ್ಲಿ, ಅನಾದಿ ಕಾಲದಿಂದಲೂ ನಮ್ಮ ದೇಶದ ಬೆನ್ನೆಲುಬಾಗಿ ಕಾಪಾಡುತ್ತಾ ಬಂದಿದ್ದಂತಹ ಶ್ರಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡಲ್ಲಿ ಮಾತ್ರ ನಮ್ಮತನವನ್ನು ಉಳಿಸಿಕೊಂಡು ಬದಲಾವಣೆಯ ನಿರೀಕ್ಷೆ ಕಾಣಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT