ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣದ ಸಂಭ್ರಮ

Last Updated 3 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮತ್ತೆ ಹುಟ್ಟುವ ಸಮಯವಿದು...
ಶ್ರಾವಣದ ಮಳೆ ನೆನೆಸುವುದು ಮೈಯನ್ನಷ್ಟೇ ಅಲ್ಲ,ಮನವನ್ನೂ... ನೆಲವನ್ನು ಮಿದುಗೊಳಿಸುವ ಜಡಿಮಳೆ ಎದೆಯೊಳಗೂ ಇಳಿದು ಹಳೆಯ ನೆನಪುಗಳ ಊಟೆಯೊಡೆಸುತ್ತದೆ. ಹಸಿರ ಚಿಗುರಿಸುವ ಶ್ರಾವಣಕ್ಕೆ ಆಷಾಢದ ವಿರಹದ ಕುದಿಯನ್ನು ಆರಿಸುವ ಶೃಂಗಾರ ಶಕ್ತಿಯೂ ಇದೆ. ಪ್ರಕೃತಿಯ ಸಮೃದ್ಧ ಸಂಭ್ರಮದೊಟ್ಟಿಗೆ ಹಬ್ಬಗಳ ಸಂತೋಷಕ್ಕೂ ಈ ಮಾಸದಲ್ಲಿ ಪಾಲಿದೆ.

ಭುವಿರಥಕ್ಕೆ ಮಾಡಿದ ಬಹುವರ್ಣ ಅಲಂಕಾರದಂಥ ಶ್ರಾವಣ ಮಾಸ ಮನಸಲ್ಲಿ ಮೂಡಿಸಿದ ವರ್ಣಮಯ ನೆನಪ ಸಂಚಯವನ್ನು ನಮ್ಮೊಟ್ಟಿಗೆ ಹಂಚಿಕೊಳ್ಳುವಂತೆ ಓದುಗರಿಗೆ ಕೇಳಿಕೊಂಡಿದ್ದೆವು. ನಮ್ಮ ಈ ಕರೆಗೆ ಓದುಗರಿಂದ ಬಂದ ಪತ್ರಗಳೂ ಶ್ರಾವಣದ ಜಡಿಮಳೆಯಷ್ಟೇ ಜೋರಾಗಿದ್ದವು. ಆ ಅನುಭವಸಾಗರದಿಂದ ಆಯ್ದ ಕೆಲವು ಬೊಗಸೆಗಳು ಇಲ್ಲಿವೆ.

‘ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹಗೀತೆ ಇನ್ನಿಲ್ಲ ಪ್ರಣಯಗೀತೆ ಬಾಳೆಲ್ಲ...’ ಶ್ರಾವಣ ಎಂದರೆ ನನಗೆ ಮೊದಲು ನೆನಪಾಗುವುದು ಅಣ್ಣಾವ್ರ ಕಂಠದಲ್ಲಿ ಬಂದ ಈ ಹಾಡು.

ಶ್ರಾವಣ ಎಂದರೆ ಮಳೆ. ಎಲ್ಲೆಡೆ ಹಚ್ಚ ಹಸಿರು. ತಂಪು ವಾತಾವರಣ, ಹಿತವಾದ ಅನುಭವ. ಬೇಸಿಗೆಯಲ್ಲಿ ಒಂದು ರೀತಿ ಸುಸ್ತು ದೇಹವನ್ನು ಆವರಿಸಿರುತ್ತದೆ. ಆದರೆ ಶ್ರಾವಣದಲ್ಲಿ ಉತ್ಸಾಹ ಇರುತ್ತದೆ. ಬೆಳಿಗ್ಗೆ ಎದ್ದಾಗ ನಮ್ಮಲ್ಲಿ ಚೈತನ್ಯದ ಚಿಲುಮೆ ತುಂಬಿರುತ್ತದೆ. ಇದು ನನಗೆ ತುಂಬ ಇಷ್ಟವಾಗುವ ಕಾಲ.

ಮಳೆ ಎಲ್ಲರಿಗೂ ಬೇಕು. ಮಳೆ ಬದುಕಿನ ಸಂಕೇತ. ಮಳೆ ಇಲ್ಲದಿದ್ದರೆ ಬದುಕುವುದಾದರೂ ಹೇಗೆ? ಹಾಗಾಗಿ ಶ್ರಾವಣ ಎಂದರೆ ‘ಮತ್ತೆ ಹುಟ್ಟುವುದು’ ಎಂದು ನನ್ನ ನಂಬಿಕೆ. ಈ ಕಾಲದಲ್ಲೇ ವ್ಯವಸಾಯ ಶುರು ಆಗುತ್ತದೆ, ಮನುಷ್ಯ ಮತ್ತೆ ಬದುಕಲು ಶುರು ಮಾಡುತ್ತಾನೆ. ನಾವು ಚಿಕ್ಕವರಿದ್ದಾಗ ಈ ಮಳೆಯಲ್ಲಿ ಗದ್ದೆ–ಬಯಲು ಎಲ್ಲ ಸುತ್ತಿ, ದನ ಕರುಗಳನ್ನು ಮೇಯಿಸಿಕೊಂಡು ಮೈಯೆಲ್ಲ ನೆಂದು ತೊಪ್ಪೆಯಾಗಿ ಮನೆಗೆ ಬರುತ್ತಿದ್ದೆವು. ಅದು ನಮ್ಮ ರೂಢಿ.

ಈಗ ಸಿನಿಮಾಗಳಲ್ಲಿ ಬ್ಯೂಸಿ ಇರುತ್ತೇವೆ. ಹಳ್ಳಿಯ ಗದ್ದೆ ಬಯಲಿನಲ್ಲಿ ನೆನಯುವುದು ಮಿಸ್ ಆದರೂ ಸಿನಿಮಾಗಳಲ್ಲಿ ಕೃತಕ ಮಳೆಯಲ್ಲಿ ನೆನೆಯುತ್ತೇವೆ. ಮೊನ್ನೆ ‘ಬ್ಯೂಟಿಫುಲ್ ಮನಸುಗಳು’ ಚಿತ್ರಕ್ಕೆ ಒಂದು ಹಾಡಿಗೆ ಮಳೆಯಲ್ಲಿ ಚಿತ್ರೀಕರಣ ಮಾಡಲಾಯಿತು. ಆಗ ಮತ್ತೆ ಹಳೆಯದೆಲ್ಲ ನನ್ನ ನೆನಪಿನ ಪಟಲದಲ್ಲಿ ಮಿಂಚುತ್ತಿತ್ತು.
–ನೀನಾಸಮ್ ಸತೀಶ್, ನಟ

***

ಶ್ರಾವಣ ಸಂವೇದನೆ
ಕೈ ಚಾಚಿ ಆಕಳಿಸುವವರಂತೆ ಟಿಸಿಲೊಡೆದ ಮರಗಳು. ಮುಂಗಾರು ಮಳೆಯ ಮಬ್ಬು ಹಗಲು. ತೆಳು ಮಕಮಲ್ಲಿನ ಬಿಳಿ ಬಟ್ಟೆ ಗಾಳಿಯಲ್ಲಿ ತೊಯ್ದಾಡಿದಂತೆ ಬಿಟ್ಟೂಬಿಡದೆ ಸುರಿವ ಜಿನುಗು ಮಳೆ. ಒಂದೇ ಸಮನೆ ಸಹ್ಯಾದ್ರಿಯನ್ನು ದಾಟಿ ಬರುವ ಮೋಡಗಳ ದಂಡು, ಕಣ್ಣು ಮುಚ್ಚಿ ನೀರೆರೆದುಕೊಳ್ಳುವ ಪ್ರಕೃತಿ.

ಎತ್ತ ನೋಡಿದರತ್ತ ಹುಲುಸಾಗಿ ಬೆಳೆದ ಹಸಿರು ಹುಲ್ಲು ಗದ್ದೆಗಳು. ಹಸಿರು ಹೊದ್ದ ಬೆಟ್ಟ ಸಾಲುಗಳು. ಚಿಗುರಿದ ಸುಂಕೇಸರಗಳ ಕೆಂಪು ಸಾಲು. ಮನೆಯ ಹೂದೋಟಕ್ಕೆ ಜೀವ ಬಂದಿದೆ. ಇದೆಲ್ಲ ಶ್ರಾವಣದ ಜಾದೂಗಾರಿಕೆ. ಆಗೊಮ್ಮೆ ಈಗೊಮ್ಮೆ ಧಾರೆ ಧಾರೆಯಾಗಿ ಸುರಿವ ವರ್ಷ ಋತುವಿನ ಕಣ್ಣಾಮುಚ್ಚಾಲೆ ಆಟದಲ್ಲಿ ಶ್ರಾವಣವು ಬಂದದ್ದೇ ಗೊತ್ತಾಗುವುದಿಲ್ಲ.

ಹೀಗೆ ಇಡೀ ಪ್ರಕೃತಿಯ ಕಣಕಣದಲ್ಲೂ ತುಂಬಿಕೊಳ್ಳುತ್ತದೆ ಶ್ರಾವಣ. ಜಡಕೆ ಜೀವವಾಗಿ, ಜೀವಕ್ಕೆ ಚೇತನವಾಗಿ, ಕವಿತೆಯಾಗಿ ಹೊರಹೊಮ್ಮುತ್ತ, ಭಕ್ತಿಯಾಗಿ ಬೆಳಗುತ್ತ ಜೀವನ ಹಾಗು ಕಲೆಯ ರೂಪವಾಗಿ ತೋರುತ್ತದೆ ಶ್ರಾವಣ.

ಕಾರ್ಗಾಲದ ವೈಭವವನ್ನು ನೆಚ್ಚಿ ಕುಣಿವ ನವಿಲುಗಳಂತೆ ಕಲ್ಪನೆಗಳು ಗರಿಗೆದರುತ್ತವೆ. ಒಂದಿಷ್ಟೂ ಪುರುಸೊತ್ತಿಲ್ಲದೆ ಸುರಿವ ಶ್ರಾವಣದ ಮಳೆಯನ್ನು ಶಪಿಸುವವರಿಗೆ ಕೊರತೆಯಿಲ್ಲ. ಇಂಥವರ ಗೊಣಗಾಟ, ತಾತ್ಸಾರಗಳ ಬಗ್ಗೆ ಅದು ತಲೆ ಕೆಡಿಸಿಕೊಳ್ಳುವುದಿಲ್ಲ. ಏನೇ ಹೇಳಿ, ಮಳೆಯ ಬಗ್ಗೆ ಬೇಸರಿಸುವವರನ್ನು ಕಂಡರೆ ನನಗೆ ತುಂಬ ಬೇಸರವಾಗುತ್ತದೆ.

ಈಗಂತೂ ಹೊರಗೆ ಕಾಲಿಡುವಂತಿಲ್ಲ. ರೇನ್‌ಕೋಟ್ ಧರಿಸಿ, ಜೇಮ್ಸ್‌ಬಾಂಡ್‌ನಂತೆ ಕಾಣುವ ಒಂದೆರಡು ವ್ಯಕ್ತಿಗಳನ್ನು ಹೊರತುಪಡಿಸಿದರೆ ಬಹುತೇಕ ರಸ್ತೆಗಳು ನಿರ್ಜನವಾಗಿರುತ್ತವೆ. ಮಳೆ, ಚಳಿ, ಗಾಳಿಗೆ ಅಲ್ಲಲ್ಲಿ ಉಸಿರು ಬಿಗಿ ಹಿಡಿದು ಕುಳಿತ ಜೀವ ಸಂಕುಲದ ಸದ್ದು ಕೇಳುವುದೇ ಇಲ್ಲ. ಮಳೆಯ ತುಂತುರು ನಾದವನ್ನುಳಿದರೆ ಎಲ್ಲೆಲ್ಲೂ ನಿಶ್ಶಬ್ದ.

ಕೋಣೆಯಲ್ಲಿ ಬೆಚ್ಚಗೆ ಕುಳಿತು ಯೋಚಿಸುತ್ತಿರುವಾಗ, ಗುಬ್ಬಚ್ಚಿಯ ನೆನಪಾಗುತ್ತದೆ. ಎರಡು ತಿಂಗಳ ಹಿಂದೆ ಮನೆಯ ಹೂದೋಟದ ಒಂದು ಮೂಲೆಯಲ್ಲಿ ಗೂಡು ಹೆಣೆಯುತ್ತಿದ್ದ ಆ ಪುಟ್ಟ ಜೀವ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಒಂದೊಂದೇ ಕಡ್ಡಿಗಳನ್ನು ಹೆಕ್ಕಿ ತಂದು, ಒಂದರಲ್ಲೊಂದು ಪೋಣಿಸಿ, ಗೂಡು ಹೆಣೆವ ಅದರ ಕಲೆಗಾರಿಕೆಯನ್ನು ಕಂಡು ಅಚ್ಚರಿ ಪಡದವರಾರು?

ಆ ಗುಬ್ಬಚ್ಚಿ ಈಗ ಏನು ಮಾಡುತ್ತಿರಬಹುದು? ಕೊಡೆ ಹಿಡಿದು ಹೊರಗೆ ಬಂದು ಮಲ್ಲಿಗೆಯ ಕಂಟಿಯನ್ನು ಓರೆ ಮಾಡಿ ನೋಡಿದರೆ ಅದು ತನ್ನ ಎರಡೂ ಪುಟ್ಟ ಮರಿಗಳೊಂದಿಗೆ ಪಿಳಿ ಪಿಳಿ ಕಣ್ಣು ಬಿಡುತ್ತ ಕುಳಿತಿತ್ತು. ಅದರ ಮರಿಗಳು ಮುದ್ದೆಯಾಗಿ ಮಲಗಿ ನಿದ್ರಿಸುತ್ತಿದ್ದವು. ಅದು ಭಯಮಿಶ್ರಿತ ವಿನಯ ತುಂಬಿದ ಕಣ್ಣುಗಳಿಂದ ನನ್ನತ್ತ ನೋಡಿತು.

ಜೀವನಾಸಕ್ತಿ ಇದ್ದರೆ ಹೀಗಿರಬೇಕು! ಬದುಕುವ ಕಲೆ ಎಂದರೆ ಬೇರಿನ್ನೇನು! ಗೂಡಿನ ಒಳಗೆಲ್ಲೋ ಒಂದೆರಡು ಹನಿ ನೀರು ಸೋರಿರಬೇಕು. ಅದಕ್ಕಾಗಿ ಹಸಿರು ಎಲೆಗಳನ್ನು ಗೂಡಿನ ಮೇಲು ಹೊದಿಕೆಯಾಗುವಂತೆ ಇರಿಸಿ, ಯಂತ್ರದಿಂದ ಹೊಲಿದಂತೆ ಹೆಣೆದಿತ್ತು. ಜನ್ಮಜಾತ ಕಲೆಯೆಂದರೆ ಅದು! ನಿಸರ್ಗ ಬದುಕಲು ಕಲಿಸುತ್ತದೆ. ಈ ಮಧ್ಯೆ, ಬಿಳಿ ಹಾಳೆಯ ಮೇಲೆ ಲಂಬವಾಗಿ ಕೊರೆದ ಗೆರೆಗಳಂತೆ ಮಳೆ ಸುರಿಯುತ್ತಲೇ ಇದೆ.

ಶ್ರಾವಣ ಪವಿತ್ರವಾದ ತಿಂಗಳು ಎಂಬ ಮಾತು ಧಾರ್ಮಿಕವಾಗಿರುವಂತೆ ಭಾವನಾತ್ಮಕವೂ ಆಗಿದೆ. ಸೊಬಗು ತುಂಬಿದ ಶ್ರಾವಣದ ಬೆಳಗು ಕಣ್ಣು ತುಂಬಿಕೊಳ್ಳುತ್ತದೆ. ನಸುಕಿನಲ್ಲಿ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆಯುಟ್ಟು ಮಂದಿರಗಳಿಗೆ ಹೊರಟ ಭಕ್ತರ ಸಾಲು, ಅವರ ಗುಜುಗುಜು ದನಿ, ದೂರದ ಮಂದಿರಗಳಿಂದ ತೇಲಿ ಬರುವ ಗಂಟೆಗಳ ನಿನಾದ, ಮಂತ್ರಘೋಷಗಳು, ಮಹಿಳೆಯರು ಕೈಗೊಳ್ಳುವ ಕಠಿಣ ವೃತಗಳು, ಪೂಜಾ ವಿಶೇಷಗಳು ಶ್ರಾವಣ ಮಾಸಕ್ಕೆ ಒಂದು ಬಗೆಯ ದಿವ್ಯತೆ ಒದಗಿಸುತ್ತವೆ.

ಶ್ರಾವಣದ ಜಾತ್ರೆಗಳ ರಂಗುರಂಗಿನ ದೃಶ್ಯ, ಎಲ್ಲೆಲ್ಲೂ ಹಬ್ಬದ ವಾತಾವರಣ, ದೇವದೇವತೆಗಳ ಹೆಸರಿನಲ್ಲಿ ಎಳೆಯುವ ಅಲಂಕೃತ ತೇರುಗಳು, ಪಲ್ಲಕ್ಕಿ ಉತ್ಸವ, ಮೆರವಣಿಗೆ, ಹೆಜ್ಜೆ ಕುಣಿತ, ಜಾನಪದ ನೃತ್ಯ, ಹಾಡು, ವಾದ್ಯ, ಮೇಳಗಳು, ತುಂಬಿ ಹರಿವ ನದಿಗಳ ಪೂಜೆ ಇತ್ಯಾದಿಯಾಗಿ ವಿವಿಧ ಆಚರಣೆಗಳಿಂದ ಶ್ರಾವಣ ಎಲ್ಲರಿಗೂ ಪ್ರಿಯ. ಹೀಗೆ ಶ್ರಾವಣದ ತುಂಬ ನಮ್ಮ ಸಂಸ್ಕೃತಿ ಪರಂಪರೆಯ ಹೆಗ್ಗುರುತುಗಳು ನಿಚ್ಚಳವಾಗಿ ಮೂಡುತ್ತವೆ.

ಒಟ್ಟಿನಲ್ಲಿ ಶ್ರಾವಣ ಶೃಂಗಾರದ ಪರಮ ಸ್ಥಿತಿ. ಸೃಷ್ಟಿಕರ್ತನು ಬರೆದ ಮಧುರ ಕಾವ್ಯದಂತೆ, ವಿನ್ಯಾಸಗೊಳಿಸಿದ ಸುಂದರ ಚಿತ್ರದಂತೆ, ಸ್ವರಬದ್ಧಗೊಳಿಸಿದ ಸುಶ್ರಾವ್ಯ ಸಂಗೀತದಂತೆ ಮನಸೂರೆಗೊಳ್ಳುವ ಶ್ರಾವಣ ನಮ್ಮ ಹೃದಯ ತಟ್ಟುತ್ತದೆ. ಶ್ರಾವಣದ ಸಂದೇಶಗಳು, ಉದ್ದೇಶಗಳು ಹಲವಾರು. ಅವುಗಳನ್ನು ಗ್ರಹಿಸಲು ಸೂಕ್ಷ್ಮ ದೃಷ್ಟಿ ಬೇಕು. ನಮ್ಮನ್ನು ಪುಳಕಗೊಳಿಸುವ ಪ್ರಕೃತಿಯ ರೂಪರಾಶಿಯನ್ನು ಉಳಿಸಿ, ಪೋಷಿಸದಿದ್ದರೆ ಶ್ರಾವಣದ ಸೊಬಗು ಮತ್ತೆಂದೂ ಬಳಿ ಸುಳಿಯಲಿಕ್ಕಿಲ್ಲ. 
–ಸಿದ್ಧರಾಜ ಪೂಜಾರಿ ಬಾಗಲಕೋಟೆ

***
‘ಡಯೆಟಿಂಗ್’ ಕಾಲ
ಶ್ರಾವಣ ಮಾಸವನ್ನು ನಾನು ‘ಡಯೆಟಿಂಗ್’ ಮಾಸ ಎಂದು ಕರೆಯುತ್ತೇನೆ. ಏಕೆಂದರೆ ನಮ್ಮಲ್ಲಿ ಶ್ರಾವಣ ಮಾಸದಲ್ಲಿ ಒಂದೇ ಊಟ (ಒಪ್ಪೊತ್ತು) ಮಾಡುವ ಪರಿಪಾಠವಿದೆ. ಶ್ರಾವಣ ಮಾಸವು ಹಬ್ಬಗಳ ಮಾಸವಾಗಿ ಎಲ್ಲರ ಮನದಲ್ಲೂ ಉತ್ಸಾಹವನ್ನು ತುಂಬಿದರೆ, ನನಗೇಕೋ ಈ ಮಾಸವು ಖುಷಿಯನ್ನು ತರದು. ಅದಕ್ಕೆ ಕಾರಣ, ಬಾಲ್ಯದಿಂದಲೂ ಶ್ರಾವಣ ನನ್ನ ಮೇಲೆ ಬೀರಿರುವ ಪ್ರಭಾವ. ಕರಾವಳಿಯವರಾದ ನಮ್ಮ ಕುಲಕಸುಬು ಮೀನುಗಾರಿಕೆ. ಇದರಿಂದ ಸಹಜವಾಗಿಯೇ ಮೀನಿಗೆ ನಮ್ಮ ಆಹಾರ ಪಟ್ಟಿಯಲ್ಲಿ ಮೊದಲ ಸ್ಥಾನ.

ಈ ಶ್ರಾವಣ ಮಾಸ ಮಾಂಸಾಹಾರವನ್ನು ನಿಷೇಧಿಸುವುದರಿಂದ ನನಗೆ ಈ ಮಾಸವೆಂದರೆ ಪರಕೀಯ ಭಾವನೆ. ನಮ್ಮಲ್ಲಿಯ ಆಚರಣೆಯೆಂದರೆ ಈ ತಿಂಗಳಿನಲ್ಲಿ ಕೆಲವು ವಾರಗಳು ಅಂದರೆ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಒಪ್ಪೊತ್ತು ಮಾಡಲಾಗುವುದು. ಕೆಲವರಿಗೆ ಈ ದಿನಗಳ ಸಂಖ್ಯೆ ಮೂರಕ್ಕಿಳಿದರೆ ಇನ್ನೂ ಕೆಲವರದು ಏಳೂ ಇರುತ್ತದೆ. ಅದೆಲ್ಲವೂ ಅವರವರ ಭಾವ ಭಕುತಿಗೆ ಸಂಬಂಧಿಸಿದ್ದು.

ಈ ದಿನಗಳಂದು ಮೀನು ನಿಷಿದ್ಧ. ಈ ವಾರಗಳನ್ನು ಹೊರತುಪಡಿಸಿ ಇತರ ವಾರಗಳಲ್ಲಿ ಮೀನು ತಿನ್ನುವ ಅವಕಾಶ ಮನೆಯಲ್ಲಿನ ಮಕ್ಕಳು ಹಾಗೂ ಯಜಮಾನನಿಗೆ ದೊರೆತರೂ ಇತರ ಮಾಂಸಾಹಾರ, ಅಂದರೆ ಕೋಳಿ, ಕುರಿ, ಮೊಟ್ಟೆ ಈ ತಿಂಗಳುಪೂರ್ತಿ ಎಲ್ಲರಿಗೂ ನಿಷಿದ್ಧ. ಇದರಲ್ಲಿ ಮಾತ್ರ ಯಾವ ಬದಲಾವಣೆಯಿಲ್ಲ.

ಗೆಳೆಯರೊಡನೆ ಸಂಜೆ ಹೊತ್ತು ಮಿರ್ಚಿ ಭಜೆ ಅಂಗಡಿಯಲ್ಲಿ ಮೊಟ್ಟೆಬೋಂಡಾ ಬಾಯಲ್ಲಿ ಕಚ್ಚಿದಾಗ, ಥಟ್ಟನೆ ಇದು ಶ್ರಾವಣ ಮಾಸವೆಂಬ ಅರಿವಾಗಿ ಬಾಯಲ್ಲಿರುವ ಚೂರನ್ನು ತುಪಕ್ಕನೆ ಉಗಿದ ದಿನಗಳು ಎಲ್ಲರ ಬಾಲ್ಯದಲ್ಲೂ ಇದ್ದೇ ಇರುತ್ತದೆ. ಅರಿಯದೇ ಮೊಟ್ಟೆಯನ್ನು ತಿಂದರೆ ಅಂತಹ ಪ್ರಮಾದವೇನೂ ಆಗದು. ಅದರೆ ತಿಂದಿರುವ ವಿಷಯ ಅಪ್ಪಿತಪ್ಪಿ ಅಮ್ಮನಿಗೆ ತಿಳಿದರೆ ಆ ದಿನ ಮನೆಯಲ್ಲಿ ಮೂರನೇ ಮಹಾಯುದ್ಧ.

ಕರಾವಳಿಯ ಮಕ್ಕಳಾದ ನಮಗೆ ‘ಮೀನಿಲ್ಲದ ಊಟ ಬ್ರಾಹ್ಮಣರಿಗೆ ಮಜ್ಜಿಗೆಯಿಲ್ಲದ ಊಟ’ದಂತಿರುತ್ತಿತ್ತು. ಮೀನಿಲ್ಲದ ಊಟ ಒಂದೆಡೆಯಾದರೆ, ಈ ಡಯೆಟಿಂಗ್, ಅಂದರೆ ಒಪ್ಪೊತ್ತು ಕೂಡ ದೊಡ್ಡ ಸಮಸ್ಯೆಯಾಗಿತ್ತು. ಊಟದ ಬದಲಿಗೆ ರವೆ ರೊಟ್ಟಿ, ಮೈದಾ ಚಪಾತಿಯಂತಹ ಇತರ ಆಹಾರ ದೊರೆತರೂ ಅನ್ನ ಉಣ್ಣುವ ತೃಪ್ತಿ ದೊರೆಯುತ್ತಿರಲಿಲ್ಲ. ಇದು ಮಕ್ಕಳಾದ ನಮ್ಮ ಮೇಲೆ ಬೀರಿರುವ ಪ್ರಭಾವ ಬಹು ಕಠೋರವಾದದ್ದು.

ಮನೆಯ ಹಿರಿಯರಿಗೆ ಶ್ರಾವಣವೆನ್ನುವುದು ದೈವಿಕ ಭಾವನೆಯನ್ನುಂಟುಮಾಡಿದ್ದರೆ, ನನಗೆ ‘ಡಯೆಟಿಂಗ್ ಮಂತ್ ವಿತೌಟ್ ನಾನ್‌ವೆಜ್’ ಎಂಬ ಭಾವನೆಯನ್ನು ಉಳಿಸಿ ಹೋಗಿದೆ. ಈಗ ದೊಡ್ಡವರಾದ ಮೇಲೆ ಇದರ ಬಗ್ಗೆ ಯಾವುದೇ ಕಟ್ಟುಪಾಡುಗಳಿಲ್ಲದಿದ್ದರೂ ಶ್ರಾವಣವೆಂದ ಕೂಡಲೇ ಕಳೆದ ಬಾಲ್ಯವೇ ನೆನಪಾಗಿ ನಗು ತರಿಸುತ್ತದೆ.
–ಸಂತೋಷ್ ಖಾರ್ವಿ ಹೊನ್ನಾವರ

***
ಮತ್ತೆ ಸಿಗುವುದೇ ಆ ಶ್ರಾವಣದ ಸವಿ?
ಶ್ರಾವಣ ಎಂದರೆ ಹಬ್ಬಗಳ ಸಾಲು. ಹಿಂದೂ ಸಂಸ್ಕೃತಿಯಲ್ಲಿ ಆಷಾಢದ ನಂತರ ಶ್ರಾವಣ ಬಂತೆಂದರೆ ಪ್ರತಿ ದಿವಸವೂ ಹಬ್ಬದ ಸಡಗರ. ಭೀಮನ ಅಮವಾಸ್ಯೆ, ನಾಗರ ಪಂಚಮಿ, ವರಮಹಾಲಕ್ಷ್ಮೀ, ಮಂಗಳಗೌರಿ ವ್ರತ, ಗೌರಿ–ಗಣೇಶ ಹೀಗೆ ಸಾಲು ಸಾಲು.

ಹತ್ತು ವರ್ಷದ ಹಿಂದೆ ನಾನು ಕಂಡ ಶ್ರಾವಣ ಮಾಸ, ಸಂಪ್ರದಾಯಕ್ಕೆ ತಕ್ಕಂತೆ ಆಚಾರ–ವಿಚಾರಗಳಿಗೆ ಧಕ್ಕೆ ಬಾರದಂತೆ ರೂಪಿಸಲಾಗಿತ್ತು. ಆರ್ಥಿಕ ಪರಿಸ್ಥಿತಿಯನ್ನು ನೆನಪಿನಲ್ಲಿಟ್ಟುಕೊಂಡು ಸುಮಂಗಲಿಯರು ಕಳಸ ಹೂಡಿ, ಸೀರೆ, ರವಿಕೆ, ಗೌರಿ ಸಾಮಾನನ್ನು ಇಟ್ಟು ಭಕ್ತಿ ಭಾವದಿಂದ ಪೂಜಿಸಿ ನಂತರ ಊಟ ಮಾಡುತ್ತಿದ್ದರು.

ಮನೆ ಸ್ವಚ್ಛಗೊಳಿಸಿ, ಮಡಿಯಿಂದ ಮಾಡಿದ ಚಕ್ಕುಲಿ, ಕೋಡುಬಳೆ, ಹೋಳಿಗೆ, ಪಾಯಸ, ಸಜ್ಜಿಗೆ ಹೀಗೆ ವಿಧವಿಧವಾದ ಭಕ್ಷ್ಯಗಳನ್ನು ದೇವರಿಗೆ ನೈವೇದ್ಯ ಕೊಟ್ಟರೆ ಹಬ್ಬದ ಆಚರಣೆ ಪರಿಪೂರ್ಣತೆಯನ್ನು ಪಡೆಯುತ್ತಿತ್ತು. ಮನೆಯಲ್ಲಿ ಅತ್ತೆ, ಸೊಸೆ, ನಾದಿನಿ, ಅಕ್ಕ, ಭಾವ, ಅಣ್ಣ, ಅಪ್ಪ ಹೀಗೆ ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಕೂತು ಊಟ ಮಾಡಿದರೆ ಹಬ್ಬಕ್ಕೆ ಇನ್ನಷ್ಟು ಮೆರುಗು ಕೊಡುವುದರ ಜೊತೆ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತಿತ್ತು.

ಕಾಲ ಬದಲಾಗಿದೆ, ಹೆಣ್ಣು–ಗಂಡು ಸರಿಸಮಾನರಾಗಿ ದುಡಿವ ಕಾಲವಿದು. ಒಂದು ರಜೆ ಸಿಕ್ಕರೆ ಲೇಟಾಗಿ ಎದ್ದು, ಸ್ನಾನ ಮಾಡದೆ, ಹೋಟೆಲ್‌ ತಿಂಡಿ ತಿಂದು, ಟೈಂ ಪಾಸ್ ಹೇಗೆಲ್ಲಾ ಮಾಡಬಹುದೋ ಹಾಗೆಲ್ಲಾ ಮಾಡಲು ಮನಸ್ಸು ಹಾತೊರೆಯುತ್ತಿರುತ್ತದೆ.

ಇಂಥ ಆಲಸ್ಯದ ನಡುವೆಯೂ, ಹಬ್ಬದ ಹಿನ್ನೆಲೆಯನ್ನು ಅರ್ಧಂಬರ್ಧ ತಿಳಿದು ಗೃಹಿಣಿಯರು ವರಮಹಾಲಕ್ಷ್ಮೀ, ಗೌರಿ ವ್ರತಗಳನ್ನು ಆಡಂಬರದಿಂದಲೇ ಆಚರಿಸುತ್ತಾ ಬರುತ್ತಿದ್ದಾರೆ. ಹೆಣ್ಣು ಮಕ್ಕಳೂ ಕೆಲಸಕ್ಕೆ ಹೋಗುವುದರಿಂದ ಹಣದ ಕೊರತೆ ವಿಷಯ ಸದ್ಯಕ್ಕೆ ದೂರದ ಮಾತು.

ಬೇರೆಯವರಿಗಿಂತ ನಾವೇನೂ ಕಡಿಮೆ ಇಲ್ಲ ಎಂಬ ಭಾವಕ್ಕೆ ಪ್ರತಿ ವರ್ಷ ಅಂಗಡಿಯಲ್ಲಿ ಸಿಗುವ ರೆಡಿಮೇಡ್‌ ವರಮಹಾಲಕ್ಷ್ಮೀ, ಗೌರಮ್ಮನನ್ನು ತಂದು ಮನೆಯಲ್ಲಿ ಕೂರಿಸಿ ಅಲಂಕರಿಸಿ, ಬೇಕರಿ ತಿಂಡಿಗಳನ್ನು ಸಾಲು ಸಾಲು ಜೋಡಿಸಿ, ನೋಟಿನಲ್ಲಿ ಹಾರ ಮಾಡಿ ಹಾಕಿ, ರೇಷ್ಮೆ ಸೀರೆ ಉಡಿಸಿ, ಮೈ ಮೇಲೆ ಬಂಗಾರ ತೊಟ್ಟು ಡಿಸೈನರ್‌ ಸೀರೆ ತೊಟ್ಟು, ಸಂಜೆ ವೇಳೆ ಕುಂಕುಮಕ್ಕೆ ಹೋಗುವ ನೆಪದಲ್ಲಿ ಪ್ರತಿ ಮನೆಯನ್ನು ಸರ್ವೇ ಮಾಡಿ ಬಂದು, ಮುಂದಿನ ವರ್ಷ ನಮ್ಮ ಮನೆ ಹಬ್ಬ ಹೇಗಿರಬೇಕು ಎಂದು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿ ಮಲಗುವುದೇ ಈಗಿನ ಪೀಳಿಗೆಯ ಶ್ರಾವಣ ಮಾಸದ ಹಬ್ಬ. ಕಾಲ ಸರಿದಂತೆ ಶ್ರಾವಣದ ನಿಜ ಅರ್ಥ, ಅದರ ಸವಿಯೂ ಸವೆಯುತ್ತಿರುವಂತಿದೆ.
–ಮಮತಾ ಬಿ.

***
ಸ್ವರ್ಗಕ್ಕೆ ಕಿಚ್ಚು ಹತ್ತಿಸುವ ಕಾಲ...
ಮೂರು  ತಿಂಗಳ  ಮಳೆಗಾಲದ ಜಿಟಿ ಜಿಟಿ ಹನಿಗಳ ಮಧ್ಯೆ ಕೆಸರಿನಲ್ಲಿ ಪಟ ಪಟ ಹವಾಯಿ ಚಪ್ಪಲುಗಳ ಸದ್ದಿನಲ್ಲಿ, ಮುಂಜಾನೆ ಯಾವುದೋ ಮುಸ್ಸಂಜೆ ಯಾವುದೋ, ಮಗ್ಗರು ಹಾಕಿರುವ ಮೋಡಗಳ ನಡುವಿಂದ ಆಗೊಮ್ಮೆ ಈಗೊಮ್ಮೆ ಇಣುಕುವ ಸೂರ್ಯ ಕಿರಣ ಕಂಡಾಗ ಆಗ ತಾನೇ ಪ್ರಾರಂಭವಾಗಿರುವ ಶಾಲೆಯ ಕಿಟಕಿಯಿಂದಾಚೆ ಇಣುಕಿ ಬೇಸಿಗೆಯ ಉರಿ ಉರಿ ಸೂರ್ಯನ ನೆನೆಯುತ್ತ...

ಮಳೆ ನೀರ ಸಿಂಚನದಿಂದ ಉಂಟಾಗಿರುವ ಶೀತ ಇನ್ನೇನು ವಾಸಿಯಾಗುತಿದೆ ಎಂದುಕೊಳ್ಳುತ್ತಿರುವಾಗ ಆಷಾಢದ ಕೊನೆಯ ಗಾಳಿಯ ಹೊಡೆತಕ್ಕೆ ಮತ್ತೆ ಮೂಗು ಕಟ್ಟುವ ಹೊತ್ತಿಗೆ ಧುಪ್ಪೆಂದು ಬಂದು ನಿಂತಿತ್ತು ‘ಶ್ರಾವಣ’.

ಚೈತ್ರ, ವೈಶಾಖ ಹೇಳುತ್ತಿರುವಾಗ ಶ್ರಾವಣದ ಸರದಿ ಬಂದಾಗ ಥಟ್ಟನೆ ನೆನಪಾಗುವುದು ಪಂಚಮಿ ಉಂಡಿ, ಜೋಕಾಲಿ, ಮಠದಲ್ಲಿ ಪುರಾಣ ಮತ್ತು ಕಡೇ ಸೋಮವಾರದ ಜಾತ್ರೆ. ಈ ಎಲ್ಲಾ ನೆನಪುಗಳ ಹೊತ್ತ ಶ್ರಾವಣ ಬರಲು ಮನಸ್ಸು ಕುಣಿ ಕುಣಿದು ಸ್ವಾಗತಿಸುತ್ತಿತ್ತು.

ಶ್ರಾವಣದಲ್ಲೆಲ್ಲಾ ಮರಗಳು ಹೂ ಅರಳಿಸುತ, ನೆಲವು ಹಸಿಯಿಂದ ಸುವಾಸನೆಯ ಸೂಸುತ ಮನವ ತಣಿಸುತ್ತಿರುತ್ತವೆ. ಹುಣಸೆ ಮರದ ಹಸಿ ಕಾಯಿಗಳನ್ನು ಜೇಬು ತುಂಬಿಸಿಕೊಂಡು ತುಂಬಿದ ಹಳ್ಳದ ಸೇತುವೆ ಮೇಲೆ ಮೇಯುತ್ತಾ ನಡೆದು ಹೊರಟರೆ ಸ್ವರ್ಗಕ್ಕೆ ಮೂರೇ ಗೇಣು.

ಶ್ರಾವಣದ ತಿಂಗಳಿಡೀ ಮಠದಲ್ಲಿ ನಡೆಯುತ್ತಿದ್ದ ಪುರಾಣ ಪ್ರವಚನ ಕಾರ್ಯಕ್ರಮದ ಪ್ರಥಮ ಸಾಲಿನಲ್ಲಿ ಹಾಜರಿದ್ದು ರಾತ್ರಿ ತೇಲುಗಣ್ಣಿನಲಿ ಮನೆಗೆ ಬಂದು ಊಟ ಮಾಡುವಾಗಲೂ ಪುರಾಣದಲ್ಲಿ ಕೇಳಿದ ಹಾಡು ಕಥೆಗಳನು ಗುನುಗುತ್ತಾ ಹಾಗೇ ನಿದ್ರೆಗೆ ಜಾರಿದರೆ ಸುಖ. ಈ  ನಡುವೆ ಬರುವ ನಾಗರ ಪಂಚಮಿ ತನ್ನೊಟ್ಟಿಗೆ ತಿಂಗಳು ಪೂರ್ತಿ ಸಿಹಿ ತಿಂಡಿಗಳನ್ನು ಹೊತ್ತು ತರುತ್ತಿತ್ತು.

ಶೇಂಗಾ ಉಂಡಿ, ಎಳ್ಳು ಉಂಡಿ ಇವೇ ಮೊದಲಾದ ಸಿಹಿ ತಿನಿಸುಗಳು ಕೈಯಲ್ಲಿ ಯಾವಾಗಲೂ ಇದ್ದೇ ಇರುತ್ತಿದ್ದವು. ಶ್ರಾವಣದ ಕಡೆಯ ಸೋಮವಾರ ನಾವೆಲ್ಲ ಕಾತರದಿಂದ ಕಾಯುತ್ತಿದ್ದ ದಿನ. ಕಾರಣ, ನಮ್ಮೂರ ಜಾತ್ರೆ. ರಥೋತ್ಸವದ ಗದ್ದಲಿನಲಿ ಉತ್ತತ್ತಿ ಆರಿಸಲು ಯುದ್ಧವೇ ನಡೆಯುತ್ತಿತ್ತು.

ಜಾತ್ರೆ ಮುಗಿಯಲು ಒಂದು ವಾರವೇ ಹಿಡಿಯುತ್ತಿದ್ದರಿಂದ ಆ ವಾರ ಶಾಲೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ಶ್ರಾವಣವನ್ನು ಬಹುವಾಗಿ ಇಷ್ಟಪಡಲು ಇದೂ ಒಂದು ಕಾರಣ. ಶ್ರಾವಣ ತಿಂಗಳು ನೀಡಿದ ಆ ನೆನಪುಗಳ ಮೆಲುಕು ಹಾಕುತ್ತ ‘ಶ್ರಾವಣ ಬರಲಿ ನಾಡಿಗೆ, ಕಾಡಿಗೆ ಮತ್ತು  ಕಾಂಕ್ರೀಟ್ ಕಾಡಿಗೂ...’ ಎಂದು ಹಾಡಿಕೊಳ್ಳುತರತಿರು
-ಶಿವಕುಮಾರ ಅರಹುಣಶಿ ಗದಗ

***
ನನ್ನೊಳಗಿನ ಶ್ರಾವಣ ನೀನು
ಆಷಾಢ ಮಾಸದ ಪೂಜೆಗೆಂದು ಈಗ ತಾನೆ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ಬಂದೆ... ನಡೆದು ಬರುವಾಗ ನಿನ್ನದೇ ಗುನುಗು... ತಮ್ಮ ತಮ್ಮ ಗೂಡುಗಳಿಗೆ ಮರಳುತ್ತಿರುವ ಹಕ್ಕಿಗಳ ಕಲರವದಲ್ಲಿ  ನಿನ್ನದೇ ಗುಂಗು! ಸುತ್ತಲೂ ಬೀಸುತ್ತಿರುವ ಗಾಳಿ ‘ಸುಯ್‌’ ಎಂದು ಶಬ್ದ ಮಾಡುತ್ತಿದೆ... ಮೇಘ ಸಂದೇಶ ಕಳಿಸಲು ನಾನು ಕಾಳಿದಾಸನ ಅವತರಣಿಕೆಯಂತೂ ಅಲ್ಲ...

ನನ್ನ ಎದೆಬಡಿತ ನಿನಗೆ ಕೇಳಿಸದೆ?! ಎಂಬ ಕುರುಡು ನಂಬಿಕೆ ನನಗೆ...! ಮೊಬೈಲ್‌ನ ಹಾವಳಿಯಿಂದ ನನ್ನ ನಿನ್ನ ಸಂಬಂಧ ವಾಟ್ಸಪ್‌ಗೆ ಸೀಮಿತವಾಗಿಬಿಟ್ಟಿದೆ... ನಿನ್ನ ತೋಳು... ನಿನ್ನ ಮಡಿಲು... ನಿನ್ನ ಹೆಗಲು... ನನ್ನ ಪಾಲಿಗೆ ಬರೀ ಕನವರಿಕೆ... ‘ಆಷಾಢ...’ ಪ್ರೇಮಿಗಳ ಪಾಲಿಗೆ ಅತಿ ಘೋರ... ನಿನ್ನ ಮೇಲಿನ ನನ್ನ ಪ್ರೀತಿ ಮಾತ್ರ ಅತಿ ಮಧುರ...! ಶ್ರಾವಣ ಬರುತ್ತಿದೆ...

ಹಬ್ಬಗಳ ಸಾಲು ಸಾಲು...! ನನ್ನ ಪಾಲಿಗೆ ನಿನ್ನ ಸಾಂಗತ್ಯವೇ ಒಂದು ದೊಡ್ಡ ಹಬ್ಬ...! ಹಬ್ಬವೆಂದರೆ ಸಂಭ್ರಮ, ಸಡಗರ ತಾನೆ!? ನಿನಗೆ... ನೀನೆಂದರೇನೇ ದೊಡ್ಡ ಸಂಭ್ರಮ! ಆಷಾಢದ ಮೋಡಗಳಲ್ಲಿ ಮಡುಗಟ್ಟಿದ್ದ ಆಕಾಂಕ್ಷೆಗಳು ಶ್ರಾವಣದಲ್ಲಿ ಕೆರೆಕಟ್ಟೆ ತುಂಬುವ ಮಳೆಯಂತೆ ಸುರಿದುಬಿಡಲಿ ಎನ್ನುವ ಅಭೀಪ್ಸೆ!

ಚಿಗುರಿದ ಬನಬನಗಳಲ್ಲೂ ನಿನ್ನ ಚಿತ್ತಾರವ ಕಾಣುವ ತವಕ! ಮನೆಯ ಮುಂದೆ ನಾ ಬಿಡಿಸಿರುವ ರಂಗವಲ್ಲಿಯಲ್ಲಿ ಕುಣಿಯುವ ನೀನು... ನನ್ನ ಮನದ ಅಂಗಳದಲ್ಲಿ ಓಕುಳಿಯಾಟ ಆಡಬೇಕೆಂಬ ಉತ್ಸಾಹ! ನಾ ಉಡುವ ರೇಷಿಮೆ ಸೀರೆಯ ನೆರಿಗೆಯನ್ನು ನೀ ಸರಿಮಾಡಬೇಕೆನ್ನುವ ಬಯಕೆ! ನೀ ತರುವ ಮಲ್ಲಿಗೆಗಾಗಿ ಕಾದಿದ್ದೇನೆ...! ನಿನ್ನ ಪಕ್ಕದಲ್ಲೇ ಕುಳಿತು... ನಿನ್ನ ಬೆರಳುಗಳಿಗೆ ನನ್ನ ಬೆರಳುಗಳ ಸೇರಿಸಿ ಮಾತುಗಳ ಮುತ್ತುಗಳನ್ನು ಪೋಣಿಸಬೇಕೆಂಬ ಆಸೆ ಹೆಚ್ಚಾಗಿದೆ! ಅದೇಕೋ ಗೊತ್ತಿಲ್ಲ...

ಆಷಾಢದ ಗಾಳಿ ನನ್ನೆಲ್ಲ ಭಾವನೆಗಳನ್ನು ಹೊತ್ತುಕೊಂಡು ಹೋಗಿ ನಾಶಮಾಡುತ್ತಿವೆಯೆಂಬ ಭಯ! ಆದರೂ, ಶ್ರಾವಣ ಬರುತ್ತಿದೆಯೆಂಬ ತುಸು ಸಮಾಧಾನ! ಏಕೆಂದರೆ, ನೀನು ನನಗೆ ಮರೀಚಿಕೆಯಲ್ಲ... ನನ್ನಿಂದ ನೀ ಎಷ್ಟೇ ದೂರ ಇದ್ದರೂ... ನೀ ನನ್ನೊಳಗೇ ಅವಿತಿರುವೆ... ಸೂರ್ಯ ಅದೆಷ್ಟು ದೂರವಿದ್ದರೂ... ಬೆಳಕು ನೀಡುವುದಿಲ್ಲವೆ...? ಹಾಗೆ! ನನ್ನ ಸೂರ್ಯ, ಚಂದ್ರ, ಬಾನು, ಮಳೆ, ಇಳೆ ಎಲ್ಲವೂ ನೀನೇ...! ಕಾಯುತಿರುವೆ... ಬೇಗ ಬಂದುಬಿಡು... ಕೃಷ್ಣನ ರಾಧೆ ನಾನಾಗಲಾರೆ...

ಚೆನ್ನಮಲ್ಲಿಕಾರ್ಜುನನನ್ನು ಕಾಯುವ ಲಿಂಗಸತಿ ಅಕ್ಕನೂ ನಾನಾಗಲಾರೆ... ಕಾಯುವಿಕೆಯಲ್ಲಿ, ನೆನಪುಗಳಲ್ಲಿ ಸುಖವಿದೆ ಎಂದು ನೀ ಹೇಳಿದರೂ... ನಾ ಅದನ್ನು ಒಪ್ಪಲಾರೆ... ನನಗೆ ನಿನ್ನ ಸನಿಹ ಬೇಕಿದೆ... ನೀ ಶ್ರಾವಣವಾಗಬೇಕಿದೆ... ಅಷ್ಟೇ!
–ಡಾ. ಸುಮಾರಾಣಿ.ಪಿ. ಮಂಡ್ಯ

***
ಹೊರಟಿದೆ ನೆನಪುಗಳ ಮೆರವಣಿಗೆ

ಶ್ರಾವಣ ಮಾಸ ಬಂದೊಡನೆ ನನ್ನ ಬಾಲ್ಯ ನೆನಪಾಗುತ್ತದೆ. ನಾಗರ ಪಂಚಮಿ ಹಬ್ಬ ಬರುವುದು ಇದೇ ಮಾಸದಲ್ಲಿ. ಮನೆಯಲ್ಲಿ ಅವ್ವ ಬೆಲ್ಲದ ಉಂಡಿಗಳನ್ನು, ಕರದಂಟು, ಕರಚಿಕಾಯಿ, ತಂಬಿಟ್ಟು, ಜೋಳದ ಅರಳು ತಯಾರಿಸುವ ಕೆಲಸದಲ್ಲಿ ನಾನು ಸಂಭ್ರಮದಿಂದ, ಉತ್ಸಾಹದಿಂದ ಕೈ ಜೋಡಿಸುತ್ತಿದ್ದೆ.

ಬೆಲ್ಲ ಜಜ್ಜಿ ಹದಮಾಡುವುದು, ಉಂಡೆ ಮಾಡುವುದು, ನಡು–ನಡುವೆ ಅವ್ವನ ಕಣ್ಣು ತಪ್ಪಿಸಿ ಬಾಯಿ ಚಪಲ ತೀರಿಸಿಕೊಳ್ಳುವ ಕಳ್ಳಾಟ... ನಾನು ಮರೆತಿಲ್ಲ! ‘ನಾಗಪ್ಪನಿಗೆ’ ಹಾಲು ಎರೆಯುವ ತನಕ ಯಾರೂ ಏನನ್ನೂ ತಿನ್ನಬಾರದೆಂಬುದು ಅವ್ವನ ಕಟ್ಟಪ್ಪಣೆ! ಎಲ್ಲಾ ಸಿಹಿ ತಿನಿಸುಗಳನ್ನು ಮಾಡಿ ಮುಗಿಸುವಾಗ ಸಂಜೆಯಾಗುತ್ತಿತ್ತು. ಮುಸ್ಸಂಜೆಯ ಸಮಯದಲ್ಲಿ, ಊರಾಚೆ ದೂರದಲ್ಲಿರುವ ನಮ್ಮ ಹೊಲದ ಬದುವಿನಲ್ಲಿದ್ದ ಕಲ್ಲಿನ ‘ನಾಗಪ್ಪ’ನಿಗೆ ಹಾಲೆರೆದು, ನೈವೇದ್ಯ ಮಾಡಿ ಬರಲು ಅಣ್ಣನೊಂದಿಗೆ ಜೊತೆಯಾಗುತ್ತಿದ್ದೆ.

ಆರಡಿ ಎತ್ತರದ ಜೋಳದ ಬೆಳೆಯನ್ನು ಸೀಳಿಕೊಂಡು, ಕಾಲು ದಾರಿ ತುಳಿಯುವಾಗ, ಎದೆಯಲ್ಲಿ ಕೊಂಚ ಭಯ ಸುಳಿಯುತ್ತಿತ್ತು! ಆ ದಿವಸ ಮಾತ್ರ ಎಷ್ಟು ಬೇಕಾದರೂ ಸಿಹಿ ತಿನ್ನಬಹುದು. ಬೆಳಗಾದರೆ, ಎಲ್ಲ ಉಂಡೆ, ಅಂಟು, ಕರಚಿಕಾಯಿಗಳನ್ನು ಕಟ್ಟಿಗೆಯ ಸಂದೂಕಿನಲ್ಲಿಟ್ಟು, ಅವ್ವ ಬೀಗ ಜಡಿಯುತ್ತಿದ್ದಳು. ಅವ್ವ ಹೊಲಕ್ಕೆ ಹೋದಾಗ, ಅಣ್ಣ ತಂತಿಯ ತುಂಡನ್ನು ತಿರುವಿ, ಬೀಗ ತೆಗೆದು, ‘ಅವ್ವನಿಗೆ ಹೇಳಬೇಡ!’ ಎಂದು ಎಚ್ಚರಿಕೆ ಕೊಡುತ್ತಾ, ನನಗೊಂದಿಷ್ಟು ಭಾಗ ಕೊಡುತ್ತಿದ್ದ! 

ಬಿರುಬಿಸಿಲಿನ ಬೆವರು, ಶಕೆಯಿಂದ ಬಳಲುತ್ತಿದ್ದ ಸಂಕಷ್ಟವನ್ನು, ಶ್ರಾವಣ ಮಾಸವು ನಿವಾರಿಸುವ ಪರಿ ನನಗೆ ತುಂಬಾ ಸಮಾಧಾನ! ಹಗಲಿರುಳು ಕರಿ ಮೋಡಗಳು, ಉರಿವ ಸೂರ್ಯನ ಮೇಲೆ ಮುಸುಕೆಳೆದು, ಆಗಾಗ ರಭಸದಿಂದ, ನಡು–ನಡುವೆ ತುಂತುರಾಗಿ ಮಳೆಹನಿಗಳನ್ನು ಸುರಿಸುವ ನೋಟ ತುಂಬಾ ಹಿತಕರ! ಬಾಯಾರಿದ ಭೂಮಿ, ಮಳೆಯಿಂದ ಹಸಿರಾಗಿ, ಮದುವಣಗಿತ್ತಿಯ ಹಾಗೆ ಕಂಗೊಳಿಸುತ್ತದೆ! ಕೆರೆ, ಬಾವಿಗಳು ನೀರಿನಿಂದ ತುಂಬಿಕೊಳ್ಳುತ್ತವೆ.

ರಸ್ತೆಗಳ ಮೇಲಿನ ದೂಳು ಕರಗುತ್ತದೆ. ಹಗಲಿರುಳು ತಂಪಾದ ಸುಳಿಗಾಳಿ ಕಚಗುಳಿಯಿಡುತ್ತದೆ! ಇದರ ಉದ್ಧಟತನ ಹೆಚ್ಚಾದರೆ, ಉಲನ್‌ ಸ್ವೆಟರ್‌–ಮಫ್ಲರ್‌ಗಳ ಆಶ್ರಯವೂ ಜೊತೆಗಿರುತ್ತದೆ. ಒಟ್ಟಿನಲ್ಲಿ ಶ್ರಾವಣ ಮಾಸ ಕಾಡಿಗೆ–ನಾಡಿಗೆ, ಭುವಿಗೆ–ಬಾನಿಗೆ ಉಲ್ಲಾಸ ನೀಡುವ ಕಾಲ!
–ಕೆ.ಜಿ. ಭದ್ರಣ್ಣವರ ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT