ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಂಧಕಾವಲು ಕೆರೆ: ಕಲರವದ ಜಾಗದಲ್ಲಿ ಕಳವಳದ ಧ್ವನಿ!

ಕೆರೆಯಂಗಳದಿಂದ.... ಸರಣಿ-22: ತ್ಯಾಜ್ಯದ ಮಡುವಾಗುತ್ತಿರುವ ಸಂಪದ್ಭರಿತ ಜಲಮೂಲ * ಬೇಕಿದೆ ತುರ್ತು ಕಾವಲು *ತಂತಿಬೇಲಿ ಕದ್ದು ಮಾರಾಟ
Last Updated 26 ಮೇ 2016, 19:41 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಕ್ರಿಟ್‌ ಕಾಡಿನ ನಡುವಿರುವ ಹಚ್ಚ ಹಸಿರ ಪರಿಸರ ನಿರ್ಮಿಸಿದ್ದ ಆ ಕೆರೆಯಲ್ಲಿ ಹಿಂದೆ ಸಮೃದ್ಧ ನೀರಿತ್ತು. ಪಕ್ಷಿಗಳ ಕಲರವವಿತ್ತು. ಆದರೆ, ಇವತ್ತು ಅದರಲ್ಲಿ ಅಗಾಧ ಪ್ರಮಾಣದ ಕಟ್ಟಡ ಅವಶೇಷ, ತ್ಯಾಜ್ಯ ತುಂಬಿದ್ದು ಧ್ಯಾನ ಮಂದಿರವೂ ಎದ್ದಿದೆ! ಕಲರವದ ಜಾಗದಲ್ಲಿ ಇಂದು ಕಳವಳದ ಧ್ವನಿಗಳು ಕೇಳಿಬರುತ್ತಿವೆ.

ಮಾಗಡಿ ರಸ್ತೆ ಸುಂಕದಕಟ್ಟೆ ಸಮೀಪದ ಚನ್ನಪ್ಪ ಲೇಔಟ್‌ ಬಳಿ ಇರುವ ಶ್ರೀಗಂಧಕಾವಲು ಕೆರೆಯ ಕಥೆಯಿದು.

ಶ್ರೀಗಂಧಕಾವಲು ಪ್ರದೇಶದ ಹಸಿರು ಹೊದಿಕೆಯ ಅಂಚಿನಲ್ಲಿ 6 ಎಕರೆ 32 ಗುಂಟೆ ವಿಸ್ತೀರ್ಣದಲ್ಲಿರುವ ಈ ಕೆರೆಗೆ ಸದ್ಯ ಬಂದು ಒದಗಿರುವ ದುರ್ಗತಿ ಸುತ್ತಲಿನ ಬಡಾವಣೆಗಳ ನಾಗರಿಕರನ್ನು ಆತಂಕಕ್ಕೆ ನೂಕಿದೆ.

ಕೆರೆ ಒಡಲಲ್ಲಿ ಸುಮಾರು ಎರಡು ವರ್ಷಗಳಿಂದ ದಿನೇ ದಿನೇ ತ್ಯಾಜ್ಯ ತಂದು ಸುರಿಯುವ ವಾಹನಗಳ ಸದ್ದಿನ ಆರ್ಭಟ ಹೆಚ್ಚಾಗುತ್ತಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ.

ಐದಾರು ವರ್ಷಗಳ ಹಿಂದಷ್ಟೇ ಸುತ್ತಲಿನ ಪ್ರದೇಶದ ಹಿರಿಯ ನಾಗರಿಕರಿಗೆ  ವಾಯುವಿಹಾರ ಮಾಡುವ ನೆಚ್ಚಿನ ತಾಣವಾಗಿದ್ದ ಈ ಕೆರೆ, ಪ್ರಸ್ತುತ ಪಾಲಿಕೆಯ  ಪೌರಕಾರ್ಮಿಕರಿಗೆ ಮತ್ತು ಕೆಲ ಗುತ್ತಿಗೆದಾರರಿಗೆ ರಾಜಾರೋಷವಾಗಿ ತ್ಯಾಜ್ಯ, ಅಳಿದುಳಿದ ಅವಶೇಷ ಸುರಿಯುವ ಸ್ಥಳವಾಗಿದೆ.

‘ಇಲ್ಲಿ ತ್ಯಾಜ್ಯ ತಂದು ಸುರಿಯುವ ಪ್ರತಿಯೊಬ್ಬರೂ ಪಾಲಿಕೆ ಸದಸ್ಯರು, ಅಧಿಕಾರಿಗಳ ಪರಿಚಯ ಹೇಳುತ್ತಾರೆ. ಈ ಕುರಿತು ಸ್ಥಳೀಯ ಪಾಲಿಕೆ ಸದಸ್ಯೆ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ’ ಎಂದು ಚನ್ನಪ್ಪ ಲೇಔಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.

‘ಹಸಿ ಕಸ ಸಂಗ್ರಹಿಸುವ ಆಟೊ, ಟಿಪ್ಪರ್‌ಗಳು ಕೆರೆಯತ್ತ ಸಾಗುವ ಮಾರ್ಗದಲ್ಲಿ ಎಲ್ಲೆಂದರಲ್ಲಿ  ಕಸ ಚೆಲ್ಲಾಡುತ್ತವೆ. ಇದರಿಂದ ದುರ್ವಾಸನೆ ಸೂಸುತ್ತದೆ. ಒಂದು ಕಾಲದಲ್ಲಿ ಪ್ರಶಾಂತವಾಗಿದ್ದ ಪ್ರದೇಶದಲ್ಲೀಗ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ’ ಎಂದು ತಿಳಿಸಿದರು.

‘ಅಮ್ಮ ಭಗವಾನ್‌ ಸೇವಾ ಸಮಿತಿಯವರು ಇಲ್ಲಿ ಧ್ಯಾನ ಮಂದಿರ ಕಟ್ಟಿದ ಬಳಿಕ ಕೆರೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಬಿಡಿಎ ಈ ಪ್ರದೇಶವನ್ನು ಸರ್ವೇ ಮಾಡಿಸಿ, ತಂತಿ ಬೇಲಿ ಹಾಕಿಸಿತು. ಆಟೊಗಳಲ್ಲಿ ಕಸ ಸುರಿಯಲು ಬರುವವರು ಇದೀಗ ಆ ಬೇಲಿಯನ್ನು  ಕತ್ತರಿಸಿ ಕದ್ದು ಒಯ್ದು ಮಾರಾಟ ಮಾಡುತ್ತಿದ್ದಾರೆ’ ಎಂದು ದೂರಿದರು.

ಈ ಹಿಂದೆ ಬಡಾವಣೆ ಸಮೀಪದಲ್ಲಿಯೇ ಪೌರಕಾರ್ಮಿಕರು ತ್ಯಾಜ್ಯ ಸುರಿಯುತ್ತಿದ್ದರು. ಅದರ ದುರ್ವಾಸನೆ ಸಹಿಸಲು ಅಸಾಧ್ಯವಾದ ಕಾರಣ ಆರು ತಿಂಗಳ ಹಿಂದೆ ಸ್ಥಳೀಯರೆಲ್ಲರೂ ಸೇರಿ ಗಲಾಟೆ ಮಾಡಿದ್ದರು.

ಆಗ 15 ದಿನಗಳಲ್ಲಿ ತ್ಯಾಜ್ಯ ಸುರಿಯುವ ತಾಣವನ್ನು ಕೆರೆಯ ಪರಿಸರದಿಂದ ಸ್ಥಳಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದ ಪಾಲಿಕೆ ಅಧಿಕಾರಿಗಳು ಆ ತಾಣವನ್ನು ಇನ್ನೊಂದು ಮೂಲೆಗೆ ಬದಲಾಯಿಸಿದರೆ ವಿನಾ ಈ ಅಂಗಳವನ್ನಂತೂ ಬಿಡಲಿಲ್ಲ.

ಹಸಿರು ಉಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ‘ಉಸಿರು’ ಫೌಂಡೇಷನ್‌ ಮುಖ್ಯಸ್ಥೆ ಶೋಭಾ ಭಟ್‌ ಅವರು ಸಹ ಈ ಕೆರೆಯ ಉಳಿಸಲು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಲೇ ಬಂದಿದ್ದಾರೆ.

‘ಈ ಅವ್ಯವಸ್ಥೆ ಕುರಿತು ಪತ್ರ ಬರೆಯುವ ಮೂಲಕ ಪಾಲಿಕೆ ಸದಸ್ಯರು, ಜಂಟಿ ಆಯುಕ್ತರು, ಶಾಸಕರಾದಿಯಾಗಿ ಸಂಬಂಧಪಟ್ಟ ಎಲ್ಲರ ಗಮನಕ್ಕೆ ತಂದೆ. ಆದರೆ ಪ್ರತಿಯೊಬ್ಬರೂ ಬಾಯಲ್ಲೇ ಭರವಸೆ ನೀಡಿದರೆ ವಿನಾ ಅದನ್ನು ಕಾರ್ಯರೂಪದಲ್ಲಿ ತರುವ ಉತ್ಸಾಹ  ತೋರಲಿಲ್ಲ’ ಎಂದು ಶೋಭಾ ವಿಷಾದಿಸಿದರು.

‘ಇನ್ನಾದರೂ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ವಿಚಾರದಲ್ಲಿ ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕಿದೆ. ಕೂಡಲೇ ಇಲ್ಲಿರುವ ತ್ಯಾಜ್ಯವನ್ನು ತೆಗೆಸಿ ಹಾಕಿ, ಕೆರೆ ಅಭಿವೃದ್ಧಿಪಡಿಸುವ ಕಾರ್ಯವನ್ನು ಆರಂಭಿಸಬೇಕು’ ಎಂದು ಆಗ್ರಹಿಸಿದರು.

‘ಸ್ಯಾಂಕಿ ಕೆರೆ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಅಂರ್ತಜಲ ಮಟ್ಟ ವೃದ್ಧಿಯಾಗುತ್ತದೆ. ಪ್ರಾಣಿ, ಪಕ್ಷಿ, ಸ್ಥಳೀಯರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗುತ್ತದೆ’ ಎಂದರು.

ವಿನಾಶ ಹೊಂದುತ್ತಿರುವ ಕೆರೆಯನ್ನು ಉಳಿಸಿಕೊಳ್ಳುವ ಭಾಗವಾಗಿ ಸ್ಥಳೀಯರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ‘ಸೃಷ್ಟಿ’ ಇಂಟರ್‌ನ್ಯಾಷನಲ್‌ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮಿಕಾಂತ್ ಹರ್ತಿಕೋಟಿ ಅವರು ಜೂನ್‌ ತಿಂಗಳಲ್ಲಿ ಕೆರೆ ಪರಿಸರದಲ್ಲಿಯೇ ‘ವಿಶ್ವ ಪರಿಸರ ದಿನ’ ಆಚರಿಸಲು ನಿರ್ಧರಿಸಿದ್ದಾರೆ.

********
ಕೆರೆಯ ಜಾಗದೊಳಗೆ ತ್ಯಾಜ್ಯ ಸುರಿಯುವುದೇ ಮಹಾ ಅಪರಾಧ. ಅದರಲ್ಲೂ ಪಾಲಿಕೆಯವರೇ ಈ ಕಾರ್ಯ ಮಾಡುತ್ತಿರುವುದು ಘೋರ ಅಪರಾಧ. ಇದಕ್ಕೆ ಯಾರು ಹೊಣೆ?
-ಶೋಭಾ ಭಟ್‌

ಕೆರೆ ಅಂಗಳದಲ್ಲಿ ತ್ಯಾಜ್ಯದ ರಾಶಿಗೆ ಬೆಂಕಿ ಹಾಕಿದಾಗ, ಸತ್ತ ನಾಯಿ ತಂದು ಎಸೆದಾಗಲೆಲ್ಲಾ ಸುತ್ತಲಿನ ಮನೆಯವರಿಗೆ ನೆಮ್ಮದಿಯೇ ಮಾಯವಾಗುತ್ತದೆ. ಯಾರಿಗೆ ಹೇಳೋಣ ನಮ್ಮ ಕಷ್ಟವನ್ನು.
-ಶಿವಲಿಂಗೇಗೌಡ

ಕೆರೆಯಂಗಳದಿಂದ...
ನೀವೂ ಮಾಹಿತಿ ನೀಡಿ
ನಗರದ ಕೆರೆಗಳ ಹಾಗೂ ರಾಜಕಾಲುವೆ ಸುತ್ತ ತಲೆ ಎತ್ತಿರುವ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಬೇಕು ಎಂದು ಹಸಿರು ನ್ಯಾಯಮಂಡಳಿ ಆದೇಶ ಹೊರಡಿಸಿದೆ. ನಗರದ ಹತ್ತಾರು ಕೆರೆಗಳ ಮೇಲೆ ಭೂಮಾಫಿಯಾಗಳು, ಬಿಲ್ಡರ್‌ಗಳ ಕಣ್ಣು ಬಿದ್ದು ಕೆರೆಗಳು ಮಾಯವಾಗಿವೆ. ಕೆರೆ, ರಾಜಕಾಲುವೆ  ಒತ್ತುವರಿ ಮಾಡಿರುವವರ ಬಗ್ಗೆ ಸಾರ್ವಜನಿಕರು ಪೂರಕ ದಾಖಲೆಗಳೊಂದಿಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಬಹುದು. ಅವುಗಳನ್ನು ಪ್ರಕಟಿಸುತ್ತೇವೆ. ಮಾಹಿತಿ ನೀಡಲು 080–25880607, 25880643, 9916240432, 9740231381 ಸಂಪರ್ಕಿಸಬಹುದು. ವಾಟ್ಸ್ ಆ್ಯಪ್‌ ಮೂಲಕವೂ ದಾಖಲೆ ಕಳಿಹಿಸಬಹುದು ಇಮೇಲ್‌ ವಿಳಾಸ: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT