ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಾತಿ ಹುಡುಕಾಟಕ್ಕೆ ಆ್ಯಪ್‌ ನೆರವು

Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ಹಿಂದೆಲ್ಲಾ ಹುಡುಗರು ಮನಮೆಚ್ಚಿದ ಹುಡುಗಿಯನ್ನು ಒಲಿಸಿಕೊಳ್ಳಲು ನೂರು ರೀತಿಯಲ್ಲಿ ಸರ್ಕಸ್‌ ಮಾಡುತ್ತಿದ್ದರು. ಕೆಲವರು ಗ್ರೀಟಿಂಗ್‌ ಕಾರ್ಡ್‌, ಚಾಕಲೇಟ್‌, ರೆಡ್‌ ಹಾರ್ಟ್‌ ಗಿಫ್ಟ್‌ಗಳಿಗೆ ಮೊರೆ ಹೋದರೆ; ಇನ್ನೂ ಕೆಲವರು ತಮ್ಮ ಮನದ ತುಮುಲಗಳನ್ನೆಲ್ಲಾ ಅಕ್ಷರ ರೂಪಕ್ಕಿಳಿಸಿ, ಒಂದು ಚೆಂದದ ಕವನ ಬರೆದು ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳುತ್ತಿದ್ದರು. ಇದು ತಂತ್ರಜ್ಞಾನದ ಯುಗ. ಇಷ್ಟದ ಸಂಗಾತಿಯನ್ನು ಆಯ್ದುಕೊಳ್ಳಲು ಈಗ ಅಂತರ್ಜಾಲ ನೆರವಿಗೆ ನಿಂತಿದೆ.  ಡೇಟಿಂಗ್‌ ಬೇಕಿರುವ ಸಂಗಾತಿ ಹುಡುಕಿಕೊಡಲು ಸಾಕಷ್ಟು ಆ್ಯಪ್‌ಗಳೂ ಇವೆ.  

ಹೆಚ್ಚು ಯುವ ಸಮೂಹವನ್ನು ಹೊಂದಿರುವ ದೇಶ ನಮ್ಮದು. ಹೀಗಾಗಿ, ಭಾರತವು ಆನ್‌ಲೈನ್‌ ಡೇಟಿಂಗ್‌ ಉದ್ಯಮಗಳಿಗೆ ನೆಚ್ಚಿನ ತಾಣವಾಗಿಯೂ ಗುರ್ತಿಸಿಕೊಂಡಿದೆ. ಕೆಲವೇ ವರ್ಷಗಳ ಹಿಂದಕ್ಕೆ ಕತ್ತು ಹೊರಳಿಸಿ ನೋಡಿದರೆ ಆನ್‌ಲೈನ್‌ನಲ್ಲಿ ಡೇಟಿಂಗ್‌ ನಡೆಸುತ್ತಿದ್ದವರ ಸಂಖ್ಯೆ ತುಂಬ ಕಡಿಮೆ ಇತ್ತು. ಅಲ್ಲದೇ, ಇದನ್ನು ಬಳಸುತ್ತಿದ್ದ ವರ್ಗವೇ ಬೇರೆಯಾಗಿತ್ತು. ಆದರೆ, ಈಗ ಆನ್‌ಲೈನ್‌ನಲ್ಲಿ ಡೇಟಿಂಗ್‌ ಮಾಡುವವರ ಸಂಖ್ಯೆ ಗಣನೀಯವಾಗಿ ಹಿಗ್ಗಿದೆ. ಅಲ್ಲದೇ, ಜನಸಾಮಾನ್ಯರು ಕೂಡ ಆನ್‌ಲೈನ್‌ ಡೇಟಿಂಗ್‌ಗೆ ಮನಸೋತಿದ್ದಾರೆ. 

ಆನ್‌ಲೈನ್‌, ಪ್ರಣಯ ಪಕ್ಷಿಗಳಿಗೆ ವಿಪುಲ ಆಯ್ಕೆ ಒದಗಿಸಿಕೊಡುವಂತಹ ಆ್ಯಪ್‌ಗಳಲ್ಲಿ  ಟಿಂಡರ್‌, ಬಂಬಲ್‌, ಓಕೆಕ್ಯುಪಿಡ್‌ ಡೇಟಿಂಗ್‌ ಪ್ರಮುಖವಾದವು. ಈ ಒಂದೊಂದು ಆ್ಯಪ್‌ ಕೂಡ ಹಲವು ವಿಶಿಷ್ಟ ಲಕ್ಷಣಗಳಿಂದ ಕೂಡಿದ್ದು ಆನ್‌ಲೈನ್‌ ಡೇಟಿಂಗ್‌ ಪ್ರಿಯರ ಮನಸ್ಸು ಗೆದ್ದಿವೆ. ಟಿಂಡರ್‌ ವಿಶ್ವದ ಅತ್ಯಂತ ಜನಪ್ರಿಯ ಡೇಟಿಂಗ್‌ ( Tinder) ಅಪ್ಲಿಕೇಷನ್‌ ಇದು. ಟಿಂಡರ್‌ ಆ್ಯಪ್‌ ಮೂಲಕ ಈವರೆಗೆ ಕೋಟ್ಯಂತರ ಜನರು ಸಂಬಂಧ ಕುದುರಿಸಿಕೊಂಡಿದ್ದಾರೆ. ಹಾಗಾಗಿ, ಟಿಂಡರ್‌ ‘ವರ್ಲ್ಡ್‌ ಹಾಟೆಸ್ಟ್‌ ಅಪ್ಲಿಕೇಷನ್‌’ ಎಂಬ ಅಗ್ಗಳಿಕೆಗೂ ಪಾತ್ರವಾಗಿದೆ. 

ಟಿಂಡರ್‌ : ವಿಶ್ವದ ಅತ್ಯಂತ ಜನಪ್ರಿಯ ಡೇಟಿಂಗ್‌ ( Tinder) ಅಪ್ಲಿಕೇಷನ್‌ ಇದು. ಟಿಂಡರ್‌ ಆ್ಯಪ್‌ ಮೂಲಕ ಈವರೆಗೆ ಕೋಟ್ಯಂತರ ಜನರು ಸಂಬಂಧ ಕುದುರಿಸಿಕೊಂಡಿದ್ದಾರೆ. ಹಾಗಾಗಿ, ಟಿಂಡರ್‌ ‘ವರ್ಲ್ಡ್‌ ಹಾಟೆಸ್ಟ್‌ ಅಪ್ಲಿಕೇಷನ್‌’ ಎಂಬ ಅಗ್ಗಳಿಕೆಗೂ ಪಾತ್ರವಾಗಿದೆ.

ಟಿಂಡರ್‌ ಎಂಬುದು ಸೋಷಿಯಲ್‌ ಡಿಸ್ಕವರಿ ಮತ್ತು ಡೇಟಿಂಗ್‌ ಅಪ್ಲಿಕೇಷನ್‌ ಆಗಿದೆ. ಇದು ಪರಸ್ಪರ ಆಸಕ್ತಿ ಇರುವ ಬಳಕೆದಾರರ ನಡುವೆ ಸಂವಹನ ಅವಕಾಶವನ್ನು ಸುಗುಮಗೊಳಿಸುತ್ತದೆ. ಟಿಂಡರ್‌ ಬಳಸುವವರಲ್ಲಿ  ಪುರುಷರಿಗಿಂತ ಮಹಿಳೆಯರೇ ಅಧಿಕವಾಗಿದ್ದಾರೆ ಎಂಬುದು ಮತ್ತೊಂದು ಕುತೂಹಲಕಾರಿ ಅಂಶ. ನಮ್ಮ ದೇಶದಲ್ಲಿ 35ಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಜಾಸ್ತಿ ಇದ್ದು  ಅವರೆಲ್ಲರೂ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಒತ್ತಡದ ಜೀವನಶೈಲಿ, ಸಂಬಂಧಗಳಲ್ಲಿ ಎದುರಾಗುವ ಬಿರುಕು, ವಯೋಸಹಜ ಕುತೂಹಲ ಹೀಗೆ ಬೇರೆ ಬೇರೆ ಕಾರಣಗಳಿಂದ ಜನರು ಟಿಂಡರ್‌ನಂತಹ ಅಪ್ಲಿಕೇಷನ್‌ಗಳನ್ನು ಬಳಸುತ್ತಿದ್ದಾರೆ.

ಅಂದಹಾಗೆ, ಟಿಂಡರ್‌ ಅಪ್ಲಿಕೇಷನ್‌ ಬಳಸುವ 5 ಕೋಟಿ ಜನರು ವಿಶ್ವದಾದ್ಯಂತ ಇದ್ದಾರೆ. ಈವರೆಗೂ ಟಿಂಡರ್‌ ಹೆಸರು ಕೇಳದವರು ಅಥವಾ ಬಳಕೆ ಮಾಡದವರು ಟಿಂಡರ್‌ ಆ್ಯಪ್‌ನತ್ತ ಚಿತ್ತ ಹರಿಸಬಹುದು. ಐಫೋನ್‌ ಮತ್ತು ಆ್ಯಂಡ್ರಾಯ್ಡ್‌ ಫೋನ್‌ ಬಳಕೆದಾರರು ಈ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ  ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಟಿಂಡರ್‌ ಅಪ್ಲಿಕೇಷನ್‌ ಬಳಸುವುದು ತುಂಬ ಸುಲಭ. ಮೊದಲು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಸೈನ್‌ ಅಪ್‌ ಆಗಬೇಕು. ತದನಂತರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ  ಆಕರ್ಷಕ ಫೋಟೊಗಳನ್ನು  ಅಪ್‌ಲೋಡ್‌ ಮಾಡಬೇಕು. ಟಿಂಡರ್‌ ಬಳಕೆ ಮಾಡುವವರು ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಫೋಟೊಗಳನ್ನು ಸೇರ್ಪಡೆ ಮಾಡುವಾಗ  ಎಚ್ಚರಿಕೆ ವಹಿಸುವುದು. ಏಕೆಂದರೆ, ಕಡಿಮೆ ಗುಣಮಟ್ಟ ಅಥವಾ ಚೆಂದವಿರದ ಫೋಟೊಗಳನ್ನು ಸೇರ್ಪಡೆ ಮಾಡಿದರೆ, ಈ ಆ್ಯಪ್‌ನಿಂದ  ಏನೇನೂ ಉಪಯೋಗವಿಲ್ಲ. ಟಿಂಡರ್‌ನಲ್ಲಿ ಲೈಕ್‌ಗಳು ಬರುವುದು ಅಥವಾ ಸಂಪರ್ಕ ಕುದುರುವುದು  ಅಪ್‌ಲೋಡ್‌ ಮಾಡುವ ಪೋಟೊಗಳ ಖದರ್‌ನಿಂದಲೇ ಎಂಬುದನ್ನು ಮರೆಯಬಾರದು.  ಹಾಗಾಗಿ, ಟಿಂಡರ್‌ನಲ್ಲಿ ಪೋಟೊಗಳೇ ನಿರ್ಣಾಯಕ ಎಂದು ಹೇಳಬಹುದು.

ಟಿಂಡರ್‌ ಬಳಕೆದಾರರು ತಾವು ಎಂತಹ ಅಭಿರುಚಿ ಇರುವ ವ್ಯಕ್ತಿಯ ಹುಡುಕಾಟದಲ್ಲಿದ್ದೇವೆ ಎಂಬುದನ್ನು ವ್ಯಾಖ್ಯಾನಿಸಬಹುದು. ಅದೇರೀತಿ ವಯಸ್ಸು, ಹೆಣ್ಣು/ಗಂಡು ಇವುಗಳ ಆದ್ಯತೆಯನ್ನು ಸೂಚಿಸುವ ಅವಕಾಶ ಕೂಡ ಇಲ್ಲಿ ಲಭ್ಯವಿದೆ. ಇವಿಷ್ಟು ಕ್ರಮಗಳನ್ನು ಪೂರೈಸಿದ ನಂತರ ಟಿಂಡರ್‌, ಅಭಿರುಚಿಗೆ ಹೊಂದುವಂತಹ ಸಂಗಾತಿಗಳ ಪ್ರೊಫೈಲ್‌ ಅನ್ನು ತೋರಿಸುತ್ತದೆ; ಅದೂ ಫೋಟೊ ಸಹಿತವಾಗಿ. ಮೊಬೈಲ್‌ ಪರದೆ ಮೇಲೆ   ಅವರ ಫೋಟೊ ಜೊತೆಗೆ  ಹೆಸರು, ಉದ್ಯೋಗ, ಅವರು ನೀವಿರುವ ಜಾಗದಿಂದ ಎಷ್ಟು ದೂರದಲ್ಲಿದ್ದಾರೆ ಎಂಬೆಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

ಟಿಂಡರ್‌ ತೋರಿಸುವ ಚಿತ್ರಗಳನ್ನು ನೀವು ಎಡಕ್ಕೆ ಸರಿಸಿದರೆ ನಿಮಗೆ ಅವರ ಬಗ್ಗೆ ಆಸಕ್ತಿ ಇಲ್ಲವೆಂತಲೂ, ಬಲಕ್ಕೆ ಸರಿಸಿದರೆ ಅವರನ್ನು ನೀವು ಇಷ್ಟಪಟ್ಟಿದ್ದೀರಿ   ಎಂದರ್ಥ. ಒಂದು ವೇಳೆ ನೀವು ಲೈಕ್‌ ಮಾಡಿದ ವ್ಯಕ್ತಿ ಕೂಡ ನಿಮ್ಮನ್ನು ಲೈಕ್‌ ಮಾಡಿದರೆ ಆಗ ನೀವಿಬ್ಬರೂ ಸಂಪರ್ಕಕ್ಕೆ ಬರುತ್ತೀರಿ. ಅಲ್ಲಿಂದ ಮುಂದಕ್ಕೆ ನಿಮಗೆ ಬಿಟ್ಟಿದ್ದು! ಟಿಂಡರ್‌ ಬಳಕೆ ಸರಳವಾಗಿದೆ. ಅಲ್ಲದೆ ಇದರಲ್ಲಿ ಸ್ವಯಂಚಾಲಿತ ನಿಯಮಾವಳಿಗಳು ಅಸ್ತಿತ್ವದಲ್ಲಿದ್ದು ಬಳಕೆದಾರರು ಇತರರೊಂದಿಗೆ ಚಾಟ್‌ ಮಾಡಿದರೂ ಕೂಡ ಅದು ಯಾವುದೇ ರೀತಿಯಲ್ಲಿ ದುರುಪಯೋಗ ಆಗದಂತೆ ನೋಡಿಕೊಳ್ಳುತ್ತದೆ. ಫೋಟೊ ನೋಡಿ ಇಷ್ಟಪಟ್ಟ ಇಬ್ಬರ ನಡುವೆ ಸಂಪರ್ಕ ಗಟ್ಟಿಗೊಳಿಸಲು ಟಿಂಡರ್‌ ಮುಂದಿನ ಸೇವೆ ಪಡೆದುಕೊಳ್ಳುವುದು ಅನಿವಾರ್ಯ. 

ಬಂಬಲ್‌ : ಬಂಬಲ್‌ ಎಂಬುದು ಮತ್ತೊಂದು ಜನಪ್ರಿಯ ಡೇಟಿಂಗ್‌ ಆ್ಯಪ್‌.  ಇದು ಬಳಕೆ ಸ್ನೇಹಿ ಆ್ಯಪ್‌ ಆಗಿಯೂ ಜನಪ್ರಿಯತೆ ಗಳಿಸಿದೆ. ಈ ಆ್ಯಪ್‌ ಅನ್ನು ಬಳಸುತ್ತಿರುವ ಒಬ್ಬ ಹುಡುಗ ಒಬ್ಬಳು ಹುಡುಗಿಯನ್ನು ಇಷ್ಟಪಟ್ಟರೇ ಆತ ಅವಳನ್ನು ನೇರವಾಗಿ ಸಂಪರ್ಕಿಸುವ ಅವಕಾಶ ಇಲ್ಲಿ ಇರುವುದಿಲ್ಲ. ಇಲ್ಲೇನಿದ್ದರೂ ಹುಡುಗಿಯರದ್ದೇ ಮೊದಲ ನಡೆ. ಅಂದರೆ, ನೀವು ಇಷ್ಟಪಟ್ಟು ಲೈಕ್‌ ಮಾಡಿದ ಹುಡುಗಿ ನಿಮ್ಮನ್ನು ಲೈಕ್‌ ಮಾಡಿದರಷ್ಟೇ ನಿಮ್ಮಬ್ಬರ ನಡುವೆ ಸಂಪರ್ಕ ಏರ್ಪಡುವುದು. 

ಇಬ್ಬರು ಬಂಬಲ್‌ ಬಳಕೆದಾರರು ಸಂಪರ್ಕಕ್ಕೆ ಬಂದ 24 ಗಂಟೆಯ ಒಳಗಾಗಿ ಚಾಟ್‌ ಮೆಸೇಜ್‌ ಕಳುಹಿಸಬೇಕು. ತಪ್ಪಿದ್ದೇ ಆದಲ್ಲಿ ಇಬ್ಬರ ನಡುವೆ ಏರ್ಪಡಬೇಕಿದ್ದ ಸಂಪರ್ಕ ಸಂಪೂರ್ಣ ಬಂದ್‌ ಆಗುತ್ತದೆ. ಹಾಗಾಗಿ, ಇದು ಇತರೆ ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ಗಳಿಂತ ಭಿನ್ನವಾದುದು. ಈ ಆ್ಯಪ್‌ ಕೂಡ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಓಕೆಕ್ಯುಪಿಡ್‌ ಡೇಟಿಂಗ್‌ : ಟಿಂಡರ್‌ಗೆ ಭಯಂಕರ ಸ್ಪರ್ಧೆ ನೀಡುತ್ತಿರುವ ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ ಓಕೆಕ್ಯುಪಿಡ್‌. ಈ ಆ್ಯಪ್‌ ಅನ್ನು ಕೂಡ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಉಪಯೋಗಿಸುತ್ತಿದ್ದಾರೆ. ಪರಸ್ಪರ ಇಷ್ಟಪಟ್ಟವರ ನಡುವೆ ಚಾಟಿಂಗ್‌ ಮಾಡಲು ಓಕೆಕ್ಯುಪಿಡ್‌ ಸಾಧ್ಯ ಮಾಡಿಕೊಡುತ್ತದೆ. ಈ ಆ್ಯಪ್‌ನ ಬಳಕೆದಾರರು ಮೊದಲಿಗೆ ತಮ್ಮ ವೈಯಕ್ತಿಕ ವಿವರ ಮತ್ತು ಅಭಿರುಚಿಗಳನ್ನು ಅದು ಕೇಳುವ ಪ್ರಶ್ನಾವಳಿಗೆ ಅನುಗುಣವಾಗಿ ಭರ್ತಿ ಮಾಡಬೇಕು. ಉಳಿದಂತೆ ಇಷ್ಟಪಟ್ಟವರ ಜೊತೆಗೆ ತಮ್ಮ ಮಾಹಿತಿ ಹಂಚಿಕೊಳ್ಳುವ ಚಾಟ್‌ ಮಾಡುವ ಅವಕಾಶವನ್ನು ಈ ಆ್ಯಪ್‌ ಕಲ್ಪಿಸಿಕೊಡುತ್ತದೆ.

ಹೀಗಾಗಿ, ಆನ್‌ಲೈನ್‌ ಆ್ಯಪ್‌ಗಳ ಪೈಕ್‌ ಇದನ್ನು ಡೈನಮಿಕ್‌ ಡೇಟಿಂಗ್‌ ಆ್ಯಪ್‌ ಎಂದೇ ಕರೆಯಲಾಗುತ್ತದೆ. ಪ್ರೇಮಿಗಳ ದಿನಕ್ಕೆ ಈಗ ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಹೊಸ ಸಂಗಾತಿಯನ್ನು ಆಯ್ದುಕೊಳ್ಳಲು ನೆರವಾಗುವ ಡೇಟಿಂಗ್‌ ಆ್ಯಪ್‌ಗಳ ಬಳಕೆದಾರರಲ್ಲಿ ಅನೇಕರು ತಮ್ಮ ಪ್ರೇಮವನ್ನು ಆನ್‌ಲೈನ್‌ನಲ್ಲೇ  ನಿವೇದಿಸಿಕೊಳ್ಳುವ ತವಕದಲ್ಲಿರಬಹುದು.  ಈ ವರ್ಷ ಪ್ರೀತಿಯ ಸುರೆಯನ್ನು ಕುಡಿದೇ ತೀರಬೇಕು ಎಂದು ಸಂಕಲ್ಪ ತೊಟ್ಟವರು ಕುಳಿತಲ್ಲೇ ಭ್ರಮಾಲೋಕ ಸೃಷ್ಟಿಸುವ ಇಂತಹ ಆ್ಯಪ್‌ಗಳನ್ನು ಸಂಪೂರ್ಣವಾಗಿ ನಂಬುವ ಮೊದಲು ನಿಮ್ಮ ವಿವೇಚನೆ ಬಳಸಿದರೆ ಸೂಕ್ತ. 

(ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT